CONNECT WITH US  

ಹುಲಿಯೂರು ದುರ್ಗದಿಂದ ಕಾವೇರಿಗೆ ಬಂದ ಚಿರತೆ

ಚಿರತೆ ಹೇಗಿದೆಯೆಂದು ನೋಡೋಣವೆಂದು ಮೆಲ್ಲಗೆ ಅದಿದ್ದ 407 ಗಾಡಿಯ ಹತ್ತಿರ ಹೋದರೆ ಸಾಕು, ಅದಕ್ಕೆ ಕಂಡಿಲ್ಲದಿದ್ದರೂ ಸಹ ಗೊರ್ರ, ಗೊರ್ರ ಎಂದು ಗರ್ಜಿಸಲು ಪ್ರಾರಂಭಿಸುತ್ತಿತ್ತು. ಬೋನನ್ನು ಟಾರ್ಪಾಲ್‌ ಹಾಕಿ ಮುಚ್ಚಿದ್ದರಿಂದ, ಮೆಲ್ಲಗೆ ಟಾರ್ಪಾಲ್‌ ಸರಿಸಿ ಒಳಗೆ ಇಣುಕಿದೆ.

"ನೋಡಪ್ಪ ನಿಮ್ಮ ಕುರಿ, ಮೇಕೆಗಳನ್ನು ಕೊಟ್ಟಿಗೆಯೊಳಗೆ ರಾತ್ರಿಯ ವೇಳೆ ಭದ್ರಪಡಿಸಿಕೊಳ್ಳಿ' ಎಂಬ ನನ್ನ ಮಾತಿಗೆ, "ಸಾ ರಾತ್ರಿ ಆದ್ರೆ ಪರ್ವಾಗಿಲ್ಲ, ಬೆಳಗಿನ ವತ್ತೆ ಮನೆ ಹತ್ರ ಬತ್ತದೆ ಸಾ' ಎಂದು ಮದ್ದೂರಿನಿಂದ ತುಮಕೂರಿಗೆ ಹೋಗುವ ರಸ್ತೆಯಲ್ಲಿರುವ ತೊರೆಶೆಟ್ಟ ಹಳ್ಳಿಯ ರೈತನೊಬ್ಬ ಹೇಳಿದ. "ಬೆಳಗ್ಗೆ ಚಿರತೆ ಏನೂ ಮಾಡಲಪ್ಪಾ, ಧೈರ್ಯವಾಗಿರಿ' ಎಂದೆ. ಅಷ್ಟರೊಳಗೆ ಮನೆಯ ಒಳಗಿಂದ ಬಿರ್ರನೆ ಬಂದ ಹೆಂಗಸೊಬ್ಬಳು ತನ್ನ ಸುಮಾರು ನಾಲ್ಕು ವರ್ಷದ ಮಗುವನ್ನು ನನ್ನ ಮುಂದೆ ನಿಲ್ಲಿಸಿ "ಸಾ, ನೀವೇನೋ ಯೋಳ್ತೀರಾ, ಈ ಮಗಿಗೆ ಏನಾದ್ರು ಎಚ್ಚುಕಮ್ಮಿ ಆದ್ರೆ ನೀವ್‌ ಬತ್ತೀರಾ?' ಎಂದು ಕೇಳಿದಳು. ನನಗೆ ಮಾತೇ ಹೊರಡಲಿಲ್ಲ. ಹೌದು ನಾವು ವನ್ಯಜೀವಿ ವಿಜ್ಞಾನಿಗಳು ಇದರ ಬಗ್ಗೆ ಯಾವುದೇ ಖಾತರಿ ಕೊಡುವುದಕ್ಕೆ ಆಗುವುದಿಲ್ಲ. 

ಮದ್ದೂರು ತಾಲೂಕಿನ ತೊಪ್ಪನಹಳ್ಳಿ, ಹೊಲಗೆರೆಹಳ್ಳಿ, ಸೊಳ್ಳೇಪುರ, ಹೆಮ್ಮನಹಳ್ಳಿ, ಹನುಮಂತಪುರ, ಯೆರಗನಹಳ್ಳಿ ಹೀಗೆ ಕೆಲ ಹಳ್ಳಿಗಳಲ್ಲಿ ಹಾಡು ಹಗಲಿನಲ್ಲೇ ಮೇಕೆ, ಕುರಿಗಳನ್ನು ಮನೆ ಮುಂದೆಯಿಂದಲೇ ಚಿರತೆಗಳು ಹಿಡಿಯುತ್ತಿವೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯವರು ಹಳ್ಳಿಯವರ ಒತ್ತಡಕ್ಕೆ ಮಣಿದು, ಚಿರತೆ ಹಿಡಿಯಲು ಬೋನುಗಳನ್ನು ಇಟ್ಟಿದ್ದರು. ಆದರೆ ಎಷ್ಟು ದಿನವಾದರೂ ಬೋನಿಗೆ ಚಿರತೆ ಬೀಳದಿದ್ದ ಕಾರಣ ಹಳ್ಳಿಯವರಿಗೆ ಸ್ವಲ್ಪ ಸಮಾಧಾನಪಡಿಸಲು ಸ್ಥಳೀಯ ಅರಣ್ಯಾಧಿಕಾರಿಗಳು ನನ್ನನ್ನು ಬರಮಾಡಿಕೊಂಡಿದ್ದರು. 

ಹಳ್ಳಿಗಳ ಸುತ್ತಮುತ್ತ ತಿರುಗಾಡುತ್ತಾ ಸ್ವಲ್ಪ ಹಳ್ಳಿಯಾಚೆಯಿರುವ ಮನೆಯೊಂದಕ್ಕೆ ಭೇಟಿ ನೀಡಿದಾಗ ನಡೆದ ಘಟನೆ. ಮನೆಯ ಪಕ್ಕದಲ್ಲೇ ಇದ್ದ ರೇಷ್ಮೆ ತೋಟದಲ್ಲೆಲ್ಲಾ ಚಿರತೆ ಹೆಜ್ಜೆ ಗುರುತುಗಳು. ಆ ಹೆಂಗಸಿನ ಪ್ರಶ್ನೆಗೆ ಸಮಂಜಸವಾದ ಉತ್ತರ ನನ್ನ ಬಳಿಯಿರಲಿಲ್ಲ. ಮಾನವ-ವನ್ಯಜೀವಿ ಸಂಘರ್ಷವೆಂದರೆ ಹೀಗೆಯೇ. ಯಾರ ಬಳಿಯೂ ನಿಖರವಾದ ಉತ್ತರವಿರುವುದಿಲ್ಲ. ಆದರೆ ಚಿರತೆಗಳು ಗ್ರಾಮಗಳ ಬಳಿ ಕಂಡರೆ ಅಥವಾ ಹಳ್ಳಿಗಳ ಬಳಿಯಿರುವ ಬೆಟ್ಟಗುಡ್ಡಗಳಲ್ಲಿ ಕಾಣಿಸಿಕೊಂಡರೆ ಅವುಗಳನ್ನು ಹಿಡಿದು ಸ್ಥಳಾಂತರಿಸಿ ಎಂಬುದು ಜನರ ಬೇಡಿಕೆಯಾಗುತ್ತದೆ ಹಾಗೂ ಕೆಲವೊಮ್ಮೆ ಅದು ಅವರ ತಗಾದೆಯಾಗುತ್ತದೆ. ಕೆಲ ವೇಳೆ ಅವರ ಒತ್ತಡಕ್ಕೆ ಮಣಿದು ಅರಣ್ಯ ಇಲಾಖೆಯವರು ಅಲ್ಲಿ ಬೋನು ಇಟ್ಟು ಚಿರತೆ ಹಿಡಿಯುವ ಪ್ರಯತ್ನ ಮಾಡುತ್ತಾರೆ. ಸಾಮಾನ್ಯವಾಗಿ ಇಂತಹ ಬೋನಿಗೆ ಚಿರತೆಗಳು ಬಂದು ಸೆರೆಯಾಗುತ್ತವೆ. ಆದರೆ ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ಟರೂ ಅರಣ್ಯ ಇಲಾಖೆಯವರಿಗೆ ಯಶಸ್ಸು ಸಿಗುವುದಿಲ್ಲ. 

ಸಿಕ್ಕ ಚಿರತೆಗಳನ್ನು ಯಾವುದಾದರೂ ದೊಡ್ಡ ಕಾಡಿಗೆ ಬಿಟ್ಟು ಬರುವುದು ವಾಡಿಕೆ. ನಾಗರಹೊಳೆಯೋ, ಕೆಂಪುಹೊಳೆಯೋ, ಬಂಡೀಪುರವೋ, ಕಾವೇರಿ ವನ್ಯಜೀವಿಧಾಮವೋ ಹೀಗೆ ಕೆಲ ಮೆಚ್ಚಿನ ಸ್ಥಳಗಳಿವೆ. ಆದರೆ ಸ್ಥಳಾಂತರಿಸಿದ ಚಿರತೆ ಏನಾಯಿತು, ಹೊಸ ಸ್ಥಳದಲ್ಲಿ ಹೊಂದಿಕೊಂಡಿತೇ, ಉಳಿಯಿತೇ ಅದ್ಯಾವುದನ್ನೂ ಅಧ್ಯಯನಿಸುತ್ತಿರಲಿಲ್ಲ. ಹಾಗಾಗಿ ಚಿರತೆಗಳ ಮೇಲಿನ ವೈಜ್ಞಾನಿಕ ಅಧ್ಯಯನದಲ್ಲಿ ಈ ವಿಚಾರವನ್ನು ಕೈಗೆತ್ತಿಕೊಂಡೆ.  

2014ರ ಜನವರಿ ತಿಂಗಳು. ಕಾವೇರಿ ವನ್ಯಜೀವಿಧಾಮದ ಮುಖ್ಯಸ್ಥರಾದ ವಸಂತರೆಡ್ಡಿಯವರಿಂದ ಬೆಳ ಬೆಳಗ್ಗೆಯೇ ದೂರವಾಣಿ ಕರೆಬಂದಿತು. "ಗುಬ್ಬಿಯವರೇ ತುಮಕೂರಿನಿಂದ ಚಿರತೆಯೊಂದನ್ನು ಕಾವೇರಿ ವನ್ಯಜೀವಿಧಾಮದಲ್ಲಿ ಬಿಡಲು ತರುತ್ತಿದ್ದಾರೆ, ಪಿ.ಸಿ.ಸಿ.ಫ್.ರವರು ನಿಮಗೆ ತಿಳಿಸಿ ರೇಡಿಯೋ ಕಾಲರ್‌ ಅಳವಡಿಸಲು ಹೇಳಿದ್ದಾರೆ, ನೀವು ತುಮಕೂರು ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ವ್ಯವಸ್ಥೆ ಮಾಡಿಕೊಂಡು ಬನ್ನಿ' ಎಂದರು. ತಕ್ಷಣ ವಿಚಾರಿಸಿದೆ. ತುಮಕೂರು ಮತ್ತು ಮಂಡ್ಯ ಜಿಲ್ಲೆಗಳ ಗಡಿಯಲ್ಲಿರುವ ಹುಲಿಯೂರು ದುರ್ಗದ ಹತ್ತಿರದ ಚಲಮಸಂದ್ರ ಎಂಬ ಗ್ರಾಮದ ಹತ್ತಿರ ಚಿರತೆಯೊಂದನ್ನು ಗ್ರಾಮಸ್ಥರ ಒತ್ತಾಯದ ಮೇರೆಗೆ ಸೆರೆಹಿಡಿಯಲಾಗಿದೆ ಎಂದು ಅಲ್ಲಿನ ವಲಯ ಅರಣ್ಯಾಧಿಕಾರಿ ಚಿನ್ನಪ್ಪನವರಿಂದ ಮಾಹಿತಿ ತಿಳಿಯಿತು. ನಾವು ಕಾವೇರಿ ವನ್ಯಜೀವಿಧಾಮದ ಉತ್ತರ ಭಾಗದಲ್ಲಿರುವ ಹಲಗೂರು ಎಂಬ ಸ್ಥಳದಲ್ಲಿ ಭೇಟಿಯಾಗುವುದು ಅಲ್ಲಿಂದ ಒಟ್ಟಿಗೆ ಚಿರತೆಯಿರುವ ವಾಹನದೊಡನೆ ಸ್ಥಳೀಯ ಅಧಿಕಾರಿಗಳು ಎಲ್ಲಿಗೆ ಹೋಗುವುದೆಂದು ನಿರ್ಧರಿಸುತ್ತಾರೋ ಅವರ ಆದೇಶದ ಮೇರೆಗೆ ಕೆಲಸ ನಿರ್ವಹಿಸುವುದೆಂದು ತೀರ್ಮಾನಿಸಲಾಯಿತು.      

ಅದೇನು ಕಾಕತಾಳೀಯವೊ ಚಿನ್ನಪ್ಪನವರು ಹಲಗೂರು ಊರಿನಾಚೆಯಿದ್ದ ಸಂಜಯ… ಢಾಬಾದಲ್ಲಿ ನಮಗಾಗಿ ಕಾಯುತ್ತಾ ಕುಳಿತಿದ್ದರು. "ಹೊರಡನಾ, ಸಾರ್‌' ಅಂದರೆ, "ಮೊದಲು ಊಟ ಮಾಡಿಬಿಡೋಣ. ಇನ್ನು ಕಾಡಿಗೆ ಹೋದರೆ ಎಷ್ಟೊತ್ತೋ' ಅಂದರು. ಅವರು ಹೇಳಿದ್ದು ಸರಿಯೆನಿಸಿತು. ಅವಸರದಲ್ಲಿ ಊಟದ ಶಾಸ್ತ್ರ ಮುಗಿಸಿ ಹೊರಟೆವು. ವನ್ಯಜೀವಿಧಾಮದ ತಾಳವಾಡಿ ಚೆಕ್‌ ಪೋಸ್ಟ್‌ ಹತ್ತಿರ ನೆರಳಲ್ಲಿ ಚಿರತೆಯಿದ್ದ ಗಾಡಿ ನಿಲ್ಲಿಸಿ ಇಲಾಖೆಯವರು ಕಾನೂನು ರೀತ್ಯಾ ಮಾಡಬೇಕಾದ ಔಚಿತ್ಯಗಳನ್ನು ಮುಗಿಸುತ್ತಿದ್ದರು. ಚಿರತೆ ಹೇಗಿದೆಯೆಂದು ನೋಡೋಣವೆಂದು ಮೆಲ್ಲಗೆ ಅದಿದ್ದ 407 ಗಾಡಿಯ ಹತ್ತಿರ ಹೋದರೆ ಸಾಕು, ಅದಕ್ಕೆ ಕಂಡಿಲ್ಲದಿದ್ದರೂ ಸಹ ಗೊರ್ರ, ಗೊರ್ರ ಎಂದು ಗರ್ಜಿಸಲು ಪ್ರಾರಂಭಿಸುತ್ತಿತ್ತು. ಬೋನನ್ನು ಟಾರ್ಪಾಲ್‌ ಹಾಕಿ ಮುಚ್ಚಿದ್ದರಿಂದ, ಮೆಲ್ಲಗೆ ಟಾರ್ಪಾಲ್‌ ಸರಿಸಿ ಒಳಗೆ ಇಣುಕಿದೆ. ಅಗಾಧವಾದ ಪ್ರಾಣಿ. ಸುಮಾರು ಐದಾರು ವರ್ಷದ ಗಂಡು ಚಿರತೆ. ಮೂತಿಯ ಮೇಲೆ ಸ್ವಲ್ಪ ತರಚಿದ್ದ ಗುರುತುಗಳು ಬಿಟ್ಟರೆ ಸದೃಢವಾದ ಜೀವಿ. 

ಈ ಪ್ರದೇಶದಲ್ಲಿ ಹೆಚ್ಚು ಕಡಿಮೆ ವರ್ಷವಿಡೀ ಪ್ರಖರವಾದ ಬಿಸಿಲು, ಹಾಗಾಗಿ ಪ್ರಾಣಿಗೆ ಹೆಚ್ಚು ಆಯಾಸವಾಗದ ಹಾಗೆ ಕಾನೂನು ರೀತ್ಯಾ ಎಲ್ಲಾ ಸಂಪ್ರದಾಯಗಳನ್ನು ಬೇಗ ಮುಗಿಸಲು ವಸಂತರೆಡ್ಡಿಯವರು ತಾಕೀತು ಮಾಡಿದ್ದರು. ಇದು ಮುಗಿದ ಕೂಡಲೇ ಪ್ರಾಣಿಯೊಡನೆ ನಾವೆಲ್ಲರೂ, ಪಶು ವೈದ್ಯರನ್ನು ಕೂಡಿ, ಕಾವೇರಿ ನದಿ ತಟದಲ್ಲಿ ಇಲಾಖೆಯವರು ನಿಗದಿಪಡಿಸಿದ್ದ ಕಿರುಮಾಡ ಎಂಬ ಸ್ಥಳ ತಲುಪಿದೆವು. ಇಲ್ಲಿ ಕಾವೇರಿಯಲ್ಲಿ ಸಣ್ಣದಾದ ಆದರೆ ಆಳವಾದ ಮಡು ಒಂದಿದ್ದರಿಂದ ಈ ಪ್ರದೇಶಕ್ಕೆ ಕಿರುಮಾಡವೆಂದು ಹೆಸರಿಡಲಾಗಿತ್ತು. ಒಂದು ಬದಿಯಲ್ಲಿ ಹೆಚ್ಚಾಗಿ ಚುಜ್ಜುಲು ಮರಗಳು ಹುಲ್ಲುಗಾವಲಿದ್ದ ಕಡಿದಾದ ಬೆಟ್ಟ. ಇನ್ನೊಂದೆಡೆ, ನದಿ ಬದಿಯಲ್ಲಿ ದಟ್ಟವಾಗಿ ಸದಾ ಹಸಿರಾಗಿದ್ದ ಹೊಳೆಮತ್ತಿ, ಹುಣಿಸೆ, ಬೆಪ್ಪಾಲೆ, ಚಂಬಳಿಕೆ ಮರಗಿಡಗಳು. ಕಾಡಿನ ನಿಶ್ಶಬ್ದ ವಾತಾವರಣ, ಪಕ್ಕದಲ್ಲಿ ನದಿ ಹರಿಯುವ ಝುಳು, ಝುಳು ಸದ್ದು. ನದಿಯ ಆಚೆ ಬದಿಯಲ್ಲಿ ಕಡಿದಾದ, ಹೆಚ್ಚಾಗಿ ಕಾರಚ್ಚಿ ಮರಗಳಿದ್ದ ಹುಲ್ಲುಗಾವಲು ಮಿಶ್ರಿತ ತೆರೆದ ಕಾಡು. ಒಟ್ಟಿನಲ್ಲಿ ವನ್ಯಜೀವಿಗಳಿಗೆ ಸೂಕ್ತವಾದ ಪ್ರದೇಶ. 

ನಮ್ಮ ರೇಡಿಯೋ ಕಾಲರ್‌ ಅಳವಡಿಸುವ ಪ್ರಕ್ರಿಯೆಗೆ ನದಿಬದಿಯ ಹುಣಸೆ ಮರದಡಿಯಲ್ಲಿ ಪ್ರಶಸ್ತವಾದ ಸ್ಥಳ ಹುಡುಕಿ ಅಲ್ಲಿದ್ದ ಚಿಕ್ಕಪುಟ್ಟ ಮುಳ್ಳಿರುವ ಗಿಡಗಂಟೆಗಳು, ಕಲ್ಲು ಮುಳ್ಳುಗಳನ್ನೆಲ್ಲ, ಚಿರತೆಯನ್ನು ಮಲಗಿಸಿದರೆ ಅದರ ರಕ್ತನಾಳಗಳ ಮೇಲೆ ಒತ್ತಡ ಬೀಳದ ಹಾಗೆ ಸವರಿದೆವು. ರೇಡಿಯೋ ಕಾಲರ್‌ ಅಳವಡಿಸಲು ಬೇಕಾದ ಎಲ್ಲಾ ಸಲಕರಣೆಗಳನ್ನು ಸಿದ್ಧ ಪಡಿಸಿಕೊಂಡೆವು. ನಮ್ಮ ರೇಡಿಯೋ ಕಾಲರ್‌ ಕಿಟ್‌ನಲ್ಲಿ 74 ಸಲಕರಣೆ ಮತ್ತು ಉಪಕರಣಗಳಿದ್ದವು. ಇವುಗಳನ್ನು ಪ್ರತೀ ವಾರವೂ ಸೂಕ್ಷ್ಮವಾಗಿ ಪರೀಕ್ಷಿಸಿ, ಅವುಗಳ ಸ್ವತ್ಛತೆ, ಕಾರ್ಯಶೀಲತೆ ಎಲ್ಲವನ್ನೂ ತನಿಖೆ ಮಾಡಿ ಇಡುತ್ತಿದ್ದೆವು. ಅದರೊಡನೆ ನಾವು ಉಪಯೋಗಿಸುವ ಉಪಕರಣಗಳಿಂದ ಪ್ರಾಣಿಗೆ ಯಾವುದೇ ಸೋಂಕು ತಗುಲದಂತೆ ಎಚ್ಚರಿಕೆಯಿಂದ ಶುದ್ಧಿಗೊಳಿಸಿ ಇಡಬೇಕಾಗಿತ್ತು. 

ಕಾಡಿನ ಮಧ್ಯದಲ್ಲಿ, ಪ್ರಾಣಿಗೆ ರೇಡಿಯೋ ಕಾಲರ್‌ ಅಳವಡಿಸುವಾಗ ಒಂದು ಚಿಕ್ಕ ಸೂð ಕೆಲಸ ಮಾಡದಿದ್ದರೂ ಅವಾಂತರವೇ ಆಗಿಬಿಡುತ್ತದೆ. ಹಾಗಾಗಿ ಎಲ್ಲವನ್ನೂ ಚೊಕ್ಕವಾಗಿ, ದೋಷರಹಿತವಾಗಿ ಇಡುತ್ತಿದ್ದೆವು. ಚಿರತೆಯ ಕಣ್ಣಿಗೆ ಮುಚ್ಚಬೇಕಾದ ಬಟ್ಟೆ, ಅದನ್ನು ತೂಕ ಮಾಡಲು ಬೇಕಾದ ತಕ್ಕಡಿ, ತಕ್ಕಡಿಗೆ ತೂಗುಹಾಕಲು ಬೇಕಾದ ಬಲೆ, ಚಿರತೆಯ ಉದ್ದಳತೆಗಳನ್ನು ಮಾಪನ ಮಾಡಲು ಬೇಕಾದ ಅಳತೆ ಪಟ್ಟಿ, ಅದರ ಹಲ್ಲುಗಳನ್ನು ಅಳತೆ ಮಾಡಲು ಬೇಕಾದ ಸ್ಲೆ„ಡ್‌ ಕ್ಯಾಲಿಪರ್ಸ್‌, ಚಿರತೆಯ ಕುತ್ತಿಗೆಗೆ ಹೊಂದಿಕೊಳ್ಳುವಂತೆ ಕಾಲರ್‌ನ ಚರ್ಮದ ಪಟ್ಟಿಯ ಉದ್ದ ಸರಿ ಮಾಡಲು ಬೇಕಾದ ಕತ್ತರಿ, ಹೀಗೆ ಹತ್ತಾರು ಸಣ್ಣ, ದೊಡ್ಡ ಸಲಕರಣೆಗಳು. ಕೆಲವು ಸಲಕರಣೆಗಳನ್ನು ಎರಡೆರಡು ಇಟ್ಟಿ ರುತ್ತಿದ್ದೆವು, ಅಕಸ್ಮಾತ್‌ ಒಂದು ಕೆಲಸ ಮಾಡದಿದ್ದರೆ ಇನ್ನೊಂದು ಇರಲೆಂದು. ಇದರೊಡನೆ, ಪಶುವೈದ್ಯರು ಅವರಿಗೆ ಬೇಕಾದ ಎಲ್ಲಾ ಔಷಧಿ, ಅರಿವಳಿಕೆ ಮದ್ದು ಕೊಡಲು ಬೇಕಾದ ಬಂದೂಕು ಮತ್ತು ಇತರ ಎಲ್ಲಾ ಸಾಧನ ಸಾಮಾಗ್ರಿಗಳನ್ನು ತರುತ್ತಿದ್ದರು.   

ಆದಾಗಲೇ ಮಧ್ಯಾಹ್ನದ ನಾಲ್ಕೂವರೆ ಸಮಯ. ಸರ್ಕಾರಿ ಪಶುವೈದ್ಯಾಧಿಕಾರಿ ಸುಜಯ… ವಯಸ್ಸಿನಲ್ಲಿ ಯುವಕರಾದರೂ ದೇಶದ ಪ್ರಖ್ಯಾತ, ನುರಿತ ವನ್ಯಜೀವಿ ಪಶು ವೈದ್ಯರಾದ ಚಿಟ್ಟಿಯಪ್ಪರವರ ಅಡಿಯಲ್ಲಿ ತರಬೇತಿ ಹೊಂದಿದವರು. ಕೆಲಸದಲ್ಲಿ ನುರಿತವರು. ಚಿರತೆಗೆ ಅರಿವಳಿಕೆ ಮದ್ದು ಕೊಡಲು ಸುಜಯ… ತಮ್ಮ ಜ್ಯಾಬ್‌ ಸ್ಟಿಕ್‌ ಸಿದ್ಧಪಡಿಸಿಕೊಳ್ಳುತ್ತಿದ್ದರು. ಪ್ರಾಣಿ ಬೋನಿನಲ್ಲಿದ್ದರೆ ಸುಲಭವಾಗಿ ಅರಿವಳಿಕೆ ಕೊಡಲು ಜ್ಯಾಬ್‌ ಸ್ಟಿಕ್‌ ಉಪಯೋಗಿಸುತ್ತಾರೆ. ಒಂದು ಅಲ್ಯೂಮಿನಿಯಂ ಕೋಲಿನ ತುದಿಗೆ ಅರವಳಿಕೆ ಮದ್ದಿರುವ ಸಿರಿಂಜ್‌ ಜೋಡಿಸಿಕೊಂಡು, ಪ್ರಾಣಿಗೆ ಚುಚ್ಚುವುದು ಜ್ಯಾಬ್‌ ಸ್ಟಿಕ್‌ನ ಉಪಯೋಗ. ಇದರಿಂದ ನೇರವಾಗಿ ಪ್ರಾಣಿಗೆ ಅರಿವಳಿಕೆ ಮದ್ದು ಕೊಡಬಹುದು. ಬಂದೂಕಿನಿಂದ ಅರಿವಳಿಕೆ ಮದ್ದು ಕೊಡುವ ವೇಳೆ ಗುರಿ ತಪ್ಪುವುದು ಬಹು ಸಾಮಾನ್ಯ, ಆದರೆ ಜ್ಯಾಬ್‌ ಸ್ಟಿಕ್‌ನಲ್ಲಿ ಗುರಿ ತಪ್ಪುವುದು ಕಡಿಮೆ.  

ಹುಣಸೆ ಮರದ ಕೆಳಗೆ ಕೂತು ನಾನು ಮತ್ತು ನನ್ನ ಸಹೋದ್ಯೋಗಿ ರಶ್ಮಿ ರೇಡಿಯೋ ಕಾಲರ್‌ ಸರಿಯಾಗಿದೆಯೇ ಎಂದು ಪರಿಶೀಲಿಸುತ್ತಿದ್ದೆವು. ಕಾಲರ್‌ ಸರಿಯಿದೆಯೇ ಎಂದು ನೋಡಲು ಅದರ ರಿಸೀವರ್‌ನಲ್ಲಿ ಕಾಲರ್‌ನ ಫ್ರೀಕ್ವೆನ್ಸಿ ಆಯ್ದು, ಕಿವಿಗೆ ಇಯರ್‌ ಫೋನ್‌ ಹಾಕಿಕೊಂಡೆ. ಬಿಪ್‌, ಬಿಪ್‌, ಬಿಪ್‌, ಬಿಪ್‌ ಎಂದು ಶಬ್ದ ಕೇಳಿಸುತಿತ್ತು. ರಿಸೀವರ್‌, ಕಾಲರ್‌ ಮತ್ತು ಆಂಟೆನಾ ಎಲ್ಲವೂ ಸರಿಯಾಗಿವೆಯೆಂದು ಮತ್ತು ಕಾಲರ್‌ನಿಂದ ಮಾಹಿತಿ ಬರುತ್ತಿದೆಯೆಂದು ಖಾತ್ರಿಯಾಯಿತು. ಅದರೊಡನೆ ರೇಡಿಯೋ ಕಾಲರ್‌ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಬೇಕಾದ ಇತರ ಅಳವಡಿಕೆಗಳನ್ನು ಮಾಡಿ ಮುಗಿಸಿದೆವು. ನಾವು ತಯಾರಾಗಿದ್ದೇವೆ ಎಂದು ಸುಜಯ್‌ಗೆ ತಿಳಿಸಿದೆವು.    

ಬೋನಿನ ಮೂಲೆಯಲ್ಲಿ ಕುಳಿತಿದ್ದ ಚಿರತೆಗೆ ಜ್ಯಾಬ್‌ ಸ್ಟಿಕ್‌ ಮೂಲಕ ಅರಿವಳಿಕೆ ಕೊಡಲು 407 ಗಾಡಿಯ ಮುಂದಿನ ಭಾಗದಲ್ಲಿ ಗಾಡಿ ಮೇಲೆ ಹತ್ತಿ ಪ್ರಾಣಿಗೆ ತಿಳಿಯದೆ ಅದರ ತೊಡೆಗೆ ಮದ್ದು ಕೊಡಲು ಸುಜಯರ ಪ್ರಯತ್ನ ಫ‌ಲಕಾರಿಯಾಗಲಿಲ್ಲ. ನಾಲ್ಕಾರು ಬಾರಿ ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಈ ಚಿರತೆ ಬಹು ಸೂಕ್ಷ್ಮವಾಗಿತ್ತು. ಗಾಳಿ ಅಲ್ಲಾಡಿದರೂ ಅದಕ್ಕೆ ತಿಳಿಯುತ್ತಿತ್ತೇನೋ ಎಂದೆನಿಸಿತು. ಕೊನೆಗೆ ಜ್ಯಾಬ್‌ ಸ್ಟಿಕ್‌ ಬೇಡವೆಂದು ನಿರ್ಧರಿಸಿ ಊದುಕೊಳವೆ ಉಪಯೋಗಿಸು ವುದೆಂದು ನಿರ್ಧರಿಸಲಾಯಿತು. 

(ಮುಂದುವರಿಯುವುದು)

ಲೇಖನ ಕುರಿತ ವಿಡಿಯೋ ನೋಡಲುಈ ಲಿಂಕ್‌ ಟೈಪ್‌ ಮಾಡಿ:  bit.ly/2JKldtX


Trending videos

Back to Top