CONNECT WITH US  

ಅರಮನೆಯ ಚಿರತೆಗಳು: ಚಿಕ್ಕ ಕಾಡಿನಲ್ಲೂ ಅಚ್ಚರಿಯ ಲೋಕ

ಮೈಸೂರುನಗರ ಚಾಮುಂಡಿಬೆಟ್ಟವನ್ನು ಎÇÉಾ ಕಡೆಯಿಂದಲೂ ವ್ಯಾಪಿಸಿಕೊಳ್ಳುತ್ತಿದೆ, ಹಾಗೆಯೇ ಬೆಟ್ಟದ ಮೇಲೆ ನಡೆಯುತ್ತಿರುವ ಕಾಂಕ್ರಿಟೀಕರಣದಿಂದ ಮುಂದೊಂದು ದಿನ ಅಲ್ಲಿ ಚಿರತೆಗಳು ಉಳಿಯುತ್ತವೆಯೇ  ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಮೈಸೂರಿನಲ್ಲಿ ವನ್ಯಜೀವಿ, ಪರಿಸರದ ಬಗ್ಗೆ ಕಾಳಜಿಯಿರುವ ಸಾಕಷ್ಟು ನಾಗರಿಕರಿ¨ªಾರೆ ಅವರು ಚಾಮುಂಡಿಬೆಟ್ಟದ ಕಾಡು ಮತ್ತು ಅದರ ವನ್ಯಜೀವಿಗಳನ್ನು ಉಳಿಸಿಕೊಳ್ಳುತ್ತಾರೆಂಬ ಭರವಸೆಯಿದೆ.  

ಬೆಟ್ಟದ ಮೇಲೆ ಹೋದರೆ ಅÇÉೊಂದು ಹಳೆಯದಾದ ಅರಮನೆ. ಅರಮನೆಯ ಹೆಬ್ಟಾಗಿಲಿಗೆ ದೊಡ್ಡ ಬೀಗ ಹಾಕಲಾಗಿದೆ. ಸಂದಿಗೊಂದಿಗಳಿಂದ ಇಣುಕಿ ನೋಡಿದರೆ ಒಳಗೆ ಅರ್ಧಂಬರ್ಧ ಕಾಣುತ್ತಿತ್ತು. ಕೆಲ ಕಡೆ ಪಾಳು ಬಿದ್ದಿದೆ, ಇನ್ನೂ ಕೆಲವು ಕಡೆ ನವೀಕರಣದ ಕಾರ್ಯ ಕೈಗೆತ್ತಿಕೊಂಡು ಹಾಗೆಯೇ ಅರ್ಧದಲ್ಲಿ ಬಿಟ್ಟಂತೆ ಕಾಣುತ್ತದೆ. ಮೊಗಸಾಲೆಯಲ್ಲಿ ಸುಂದರವಾದ ಬೀಟೆ ಮರದಿಂದ ಮಾಡಿದ ಮೆಟ್ಟಿಲುಗಳು. ಅದರ ಬದಿಯಲ್ಲಿಯೇ ದೊಡ್ಡ ದಂತಗಳಿರುವ ಆನೆ ತಲೆಯ ಸ್ಮಾರಕ. 

ಅರಮನೆಯ ತಾರಸಿಯಲ್ಲಿ ಗಾರೆಯಲ್ಲಿ ಮಾಡಿರುವ ಸುಂದರವಾದ, ಗುಮ್ಮಟಗಳಾಕಾರದ ದೊಡ್ಡಗಾತ್ರದ ರಾಜಸ್ಥಾನಿ ಶೈಲಿಯ ಛತ್ರಿಗಳು. ಅರಮನೆಯ ಮುಂದೆ ಗತಕಾಲದ ತೋಟ. ತೋಟದ ಮಧ್ಯೆ ಚುರ್ಕಿಯಲ್ಲಿ ಮಾಡಿದ, ದೊಡ್ಡ ಬೋಗುಣಿಯಾಕಾರದ ಎರಡು ಹಂತದ ಸುಂದರ ಕಾರಂಜಿ. ಅರ್ಧ ಬಾಗಿ ತುಕ್ಕು ಹಿಡಿದಿರುವ, ಯಾವುದೋ ಬಳ್ಳಿ ಬೆಳೆಸಲು ಮಾಡಿದ್ದ ಕಬ್ಬಿಣದ ಕಮಾನು ಗತಕಾಲದ ವೈಭವವನ್ನು ಎತ್ತಿ ತೋರುವಂತಿತ್ತು.

ಚಿಕ್ಕ ತೋಟವಾದರೂ ಒಂದು ಕಾಲದಲ್ಲಿ ಸದಭಿರುಚಿಯಿಂದ ವಿನ್ಯಾಸಗೊಳಿಸಿದ ಕುರುಹುಗಳಿವೆ. ಅದರ ಉತ್ಕೃಷ್ಟ ಕಾಲದಲ್ಲಿ ಮಹಾರಾಜರು ಮತ್ತು ಅವರ ಕುಟುಂಬದವರು ತೋಟದಲ್ಲಿ ವಿಹರಿಸುತ್ತಿದ್ದರು ಎಂದು ಕಲ್ಪಿಸಿಕೊಳ್ಳುವುದು ಅರಮನೆಯ ಇತಿಹಾಸವನ್ನು, ವೈಭವವನ್ನು ಮನಸ್ಸಿನಲ್ಲಿ ತರುತ್ತದೆ. ಸುಮಾರು 1820ರಲ್ಲಿ ಕಟ್ಟಿದ ಅರಮನೆಯೆಂದು ಹೇಳಲಾದರೂ, ಈಗಿರುವ ಕಟ್ಟಡವನ್ನು 1938ರಲ್ಲಿ ಸಂಪೂರ್ಣಗೊಳಿಸಲಾಗಿದೆ. 

ಅರಮನೆಯ ಪ್ರವೇಶದಲ್ಲಿ "ರಾಜೇಂದ್ರ ವಿಲಾಸ್‌ ಪ್ಯಾಲೆಸ್‌' ಎಂದು ಎಪ್ಪತ್ತರ ದಶಕದ ಮಾದರಿಯ ನಿಯಾನ್‌ ದೀಪದ ದೊಡ್ಡ ನಾಮಫ‌ಲಕವೊಂದಿದೆ. ಸುಮಾರು ಒಂದು ಸಾವಿರ ಮೀಟರ್‌ ಎತ್ತರದಲ್ಲಿರುವ ಚಾಮುಂಡಿಬೆಟ್ಟದಲ್ಲಿ ರಾತ್ರಿಯ ವೇಳೆ ಮೋಡ ಮುಚ್ಚಿಕೊಳ್ಳುತ್ತದೆ, ಹಾಗಾಗಿ ಕತ್ತಲಾದ ಬಳಿಕ ಅರಮನೆಗೆ ತನ್ನದೇ ಆದ ನಿಗೂಢ ಚೆಲುವು ಬರುತ್ತದೆ. ಅದರೊಡನೆ ಅರಮನೆಯ ಆವರಣದಿಂದ ಮೈಸೂರು ನಗರದ ರಮಣೀಯ ನೋಟ ಕಾಣುತ್ತದೆ. 

ಚಿರತೆಗಳ ಮೇಲಿನ ನಮ್ಮ ವೈಜ್ಞಾನಿಕ ಅಧ್ಯಯನದ ಅಂಗವಾಗಿ ಮೈಸೂರಿನ ಬದಿಯಲ್ಲಿರುವ ಚಾಮುಂಡಿ ಬೆಟ್ಟದಲ್ಲೂ ಕೆಲಸ ಮಾಡುವುದೆಂದು ನಿರ್ಧರಿಸಿ ಇಲ್ಲಿಗೆ ಬಂದಿ¨ªೆವು. ನಮ್ಮ ಅನ್ವೇಷಿಕ ಸಮಯದಲ್ಲಿ ಕ್ಯಾಮೆರಾ ಟ್ರಾಪ್‌ ಅಳವಡಿಸಲು ಸೂಕ್ತ ಜಾಗಗಳನ್ನು ಹುಡುಕುವುದಕ್ಕಾಗಿ ಅಧ್ಯಯನದ ಜಾಗವನ್ನೆಲ್ಲ ಸುತ್ತುವುದು ವಾಡಿಕೆ. ಅದರ ಭಾಗವಾಗಿ ಕೊನೆಗೆ ಅರಮನೆಯ ಹತ್ತಿರ ಬಂದಿ¨ªೆ. ಅರಮನೆಯ ಸುತ್ತ ದಟ್ಟವಾದ ಹೂ-ಗಿಡದ ಪೊದೆಗಳು, ಅವುಗಳ ಪಕ್ಕದಲ್ಲಿ ಕಡಿದಾದ ಬೆಟ್ಟ, ಇನ್ನೊಂದು ಕಡೆ ಅರಮನೆಯ ತೋಟ. ಅವುಗಳ ಮಧ್ಯೆ ವಾಹನಗಳು ಓಡಾಡುವಷ್ಟು ಅಗಲದ ರಸ್ತೆ. ಅರಮನೆಯ ಸುತ್ತ ಕಾಡಿರುವುದರಿಂದ ಈ ರಸ್ತೆಯಲ್ಲಿ ಚಿರತೆಗಳು ಓಡಾಡುವ ಸಂಭವ ಹೆಚ್ಚಿದೆಯೆಂದು ನನ್ನ ಅನಿಸಿಕೆಯಾಗಿತ್ತು. 

ಮೈಸೂರು ನಗರದ ಅಂಚಿನಲ್ಲಿರುವ ಗೌರೀಶಂಕರನಗರ, ಚಾಮುಂಡಿಪುರ, ಲಲಿತಾದ್ರಿಪುರ ಇನ್ನಿತರ ಪ್ರದೇಶಗಳಲ್ಲಿ ಕೆಲ ಬಾರಿ ಚಿರತೆಗಳು ಬಂದು ಸಂಘರ್ಷಕ್ಕೀಡು ಮಾಡಿಕೊಟ್ಟ ಸಂದರ್ಭಗಳಿದ್ದವು. ಹಾಗಾಗಿ ನಗರದ ಪಕ್ಕದÇÉೇ ಇರುವ ಚಿರತೆಗಳ ಆವಾಸಸ್ಥಾನದ ಸಮೀಕ್ಷೆ ಮಾಡುವುದು ಮತ್ತು ಅಲ್ಲಿ ಎಷ್ಟು ಚಿರತೆಗಳಿವೆ ಎಂದು ಅಂದಾಜಿಸುವುದು ನಮ್ಮ ಅಧ್ಯಯನದ ಮುಖ್ಯ ಉದ್ದೇಶವಾಗಿತ್ತು. 

ಮಾರನೇ ದಿನ ನಮ್ಮ ಅನ್ವೇಷಣೆ ಮುಂದುವರಿಸಿದೆವು ಮಧ್ಯಾಹ್ನ ನಂದಿ ಪ್ರತಿಮೆಯಿಂದ ನಂಜನಗೂಡು ರಸ್ತೆಯ ಹತ್ತಿರವಿರುವ ಗೌರೀಶಂಕರನಗರದ ಕಡೆಗೆ ಕಡಿದಾದ ಹಾದಿಯೊಂದಿದೆ, ಅದರ ಮೂಲಕ ಕೆಳಗಿಳಿಯುವುದೆಂದು ಮತ್ತು ಆ ಹಾದಿಯಲ್ಲಿ ಕ್ಯಾಮೆರಾ ಟ್ರಾಪ್‌ ಅಳವಡಿಸಲು ಸೂಕ್ತ ಸ್ಥಳಗಳನ್ನು ಗುರುತಿಸುವುದು ನನ್ನ ಕೆಲಸವಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರೊಡನೆ ಕಡಿದಾದ ಇಳಿಜಾರು ಪ್ರದೇಶ ಇಳಿಯಲು ಪ್ರಾರಂಭಿಸಿದೆ. ಹಾದಿ ಕೇವಲ ಎರಡು ಕಿಲೋಮೀಟರ್‌ ಇದ್ದರೂ ಅದನ್ನು ಸಂಪೂರ್ಣಗೊಳಿಸಲು ನಮಗೆ ಎರಡು ತಾಸಾದರೂ ಬೇಕೆಂದು ಅಂದಾಜಿಸಿ¨ªೆ. ಕೆಳಗೆ ಗೌರೀಶಂಕರನಗರದಲ್ಲಿ ನನ್ನನ್ನು ಕರೆದೊಯ್ಯಲು ಸಹದ್ಯೋಗಿ ಸಂದೇಶ ಬರುವುದೆಂದು ನಿಶ್ಚಯಿಸಲಾಗಿತ್ತು. ಇನ್ನೊಬ್ಬ ಸಹೋದ್ಯೋಗಿ ಹರೀಶ ಬೆಟ್ಟದ ಇನ್ನೊಂದು ಹಾದಿಯಲ್ಲಿ ಇದೇ ಕೆಲಸದಲ್ಲಿ ತೊಡಗಿದ್ದರು. 

ಎರಡು ಸ್ಥಳಗಳನ್ನು ಗುರುತಿಸಿ ಇಳಿಯುತ್ತಿ¨ªೆ, ದಟ್ಟವಾಗಿ ಮರಗಳಿಂದ ಆವೃತವಾಗಿದ್ದ ಬಂಡೆಗಳಿದ್ದ ಸ್ಥಳಕ್ಕೆ ಬಂದು ತಲುಪಿ¨ªೆ. ಬಂಡೆಗಳ ಮೇಲೆÇÉಾ ಒಣಗಿದ ಎಲೆಗಳಿದ್ದವು. ಸಾವಧಾನದಿಂದ ಬಂಡೆಯ ಮೇಲೆ ಬಲಗಾಲಿಟ್ಟೆ, ಜೋರಾಗಿ ಜಾರಿಬಿಟ್ಟೆ. ಎರಡು ಬಾರಿ ದೊಡ್ಡ ಚೆಂಡಿನಂತೆ ಉರುಳಿ, ಎದುರಿಗಿದ್ದ ಸುಮಾರು ಎರಡು ಅಡಿ ಎತ್ತರದ ಬಂಡೆಗೆ ಧಡಾರ್‌ ಎಂದು ತಲೆ ಹೊಡೆದುಕೊಂಡಿತು. ತಲೆ ತಿರುಗಿತು. ನಂತರ ಎಲ್ಲವೂ ಶೂನ್ಯ.

ಸ್ವಲ್ಪ ಹೊತ್ತಿನಲ್ಲಿ ಎದ್ದು ಕುಳಿತಿ¨ªೆ. ಏನೂ ತಿಳಿಯುತ್ತಿಲ್ಲ, ಮೂಗಿನ ಮೇಲೆ ತಣ್ಣಗಾದ ಅನುಭವ. ಕೈಯಿಟ್ಟು ನೋಡಿದರೆ ರಕ್ತ. ಮೂಗು, ತಲೆಯ ಹಿಂಬದಿ, ಹಣೆಯ ಮೇಲೆ ಹರಿಯುತ್ತಿದೆ. ಯಾರೋ ಏನೋ ಹೇಳುತ್ತಿ¨ªಾರೆ ಎಂದೆನಿಸಿತು. ಕೆಲ ಕ್ಷಣಗಳ ನಂತರ "ಸಾರ್‌ ತಲೆಗೆ ಚೌಕ ಕಟ್ಕಳಿ, ರಕ್ತ ಹರೀತೈತೆ' ಎಂದು ಹೇಳಿದ್ದು ಕೇಳಿಸಿತು. ಚೀಲದಲ್ಲಿದ್ದ ನೀರು ತೆಗೆದು ಚೌಕವನ್ನು ಒ¨ªೆ ಮಾಡಿಕೊಂಡು ತಲೆಗೆ ಗಟ್ಟಿಯಾಗಿ ಹಿಡಿದುಕೊಂಡೆ.

ಅದೃಷ್ಟವಶಾತ್‌ ಹೆಚ್ಚಿನ ಹಾನಿಯಾಗಿರಲಿಲ್ಲ. ಸುಧಾರಿಸಿಕೊಂಡು ಎದ್ದು ನಿಂತೆ. ತಲೆ ತಿರುಗಿದಂತಾಯಿತು ಮತ್ತೆ ಕುಳಿತುಬಿಟ್ಟೆ. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಗುಡ್ಡ ಇಳಿಯಲು ಪ್ರಾರಂಭಿಸಿದೆವು. "ಅದೃಷ್ಟ ಸಾರ್‌ ನಿಮುª, ಏನಾಯೊ¤à ಅಂತ ಗಾಬ್ರಿಯಾಯ್ತು, ಗಟ್ಟಿ ತಲೆ ನಿಮುª' ಅಂದ ಅರಣ್ಯ ಇಲಾಖೆಯ ಸಿಬ್ಬಂದಿ. 

ನಿಧಾನವಾಗಿ ನಡೆದು ಕ್ಯಾಮೆರಾ ಟ್ರಾಪ್‌ ಸ್ಥಳಗಳನ್ನು ಗುರುತುಹಾಕಿಕೊಂಡು ಗೌರೀಶಂಕರನಗರದ ದಿಕ್ಕಿನಲ್ಲಿ ಇಳಿದೆ. ಮಧ್ಯದಲ್ಲಿ ಚಿಕ್ಕದಾಗಿ ನೀರು ನಿಂತಿತ್ತು. ಅಕ್ಟೋಬರ್‌ ತಿಂಗಳಾದರೂ ನೀರು ಉಳಿದಿದ್ದ ಅಲ್ಲಿನ ಮರಗಳ ನೆರಳಿನಿಂದ ಕೆಳಗಿಳಿದವನೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡೆ. ನಂತರದ ದಿನಗಳಲ್ಲಿ ನಾವು ಗುರುತಿಸಿದ ಒಟ್ಟು ಐವತ್ತನಾಲ್ಕು ಸ್ಥಳಗಳಲ್ಲಿ ಮೂವತ್ತೆರಡು ಜಾಗಗಳಲ್ಲಿ ಕ್ಯಾಮೆರಾ ಟ್ರಾಪ್‌ ಅಳವಡಿಸಲು ನಿಶ್ಚಯಿಸಿದೆವು. ಹದಿನಾರು ದಿನಗಳ ಟ್ರಾಪ್‌ ಕೆಲಸ ಮುಗಿದು ನಮ್ಮ ದತ್ತಾಂಶವನ್ನು ಪರಿಶೀಲಿಸಿದಾಗ ಚಾಮುಂಡಿಬೆಟ್ಟದಲ್ಲಿ 5-6 ಚಿರತೆಗಳಿರುವುದು ಬೆಳಕಿಗೆ ಬಂದಿತು. 

ಮೈಸೂರು ನಂಜನಗೂಡು ಹೆ¨ªಾರಿಗೆ ಅಂಟಿಕೊಂಡೇ ಇರುವ ಕಾಡಿನೊಳಗೆ ಹೆ¨ªಾರಿಯಿಂದ ಐದುನೂರು ಮೀಟರ್‌ ಒಳಗೆ ಹೆಣ್ಣು ಚಿರತೆಯೊಂದು ಪ್ರತಿದಿನ ನಮ್ಮ ಕ್ಯಾಮೆರಾ ಟ್ರಾಪ್‌ ಮುಂದೆ ಬರುತಿತ್ತು. ಉತ್ತನಹಳ್ಳಿ ಕಡೆಯ ಕೆಲ ಹಾದಿಗಳಲ್ಲಿ  ಚಿರತೆಯೊಂದು ಸಾಕು ಹಂದಿಮರಿಗಳನ್ನು ಹಿಡಿದು ಹೋಗುವ ಕೆಲ ಚಿತ್ರಗಳು ತಮಾಷೆಯಾಗಿ ಕಂಡರೆ, ಹಿಂಬದಿಯಲ್ಲಿ ಲಲಿತಾದ್ರಿಪುರದ ಕಡೆಯಲ್ಲಿ ದೂರದಲ್ಲಿದ್ದ ಮನೆಗಳ ವಿದ್ಯುತ್‌ ದೀಪಗಳ ಮುಂಬದಿಯಲ್ಲಿ ನಡೆಯುತ್ತಿರುವ ಗಂಡು ಚಿರತೆಯ ಚಿತ್ರಗಳು ಮಾನವ-ವನ್ಯಜೀವಿಗಳ ಸಹಬಾಳ್ವೆಯನ್ನು ಸಂಕೇತಿಸುವಂತಿತ್ತು. 

ಕಾಡು ಹಂದಿ, ನವಿಲು, ಪ್ರಪಂಚದ ಅತಿಚಿಕ್ಕ ಕಾಡು ಮಾರ್ಜಾಲ, ಕಂದು ಚುಕ್ಕೆ ಬೆಕ್ಕು, ಪುನುಗು ಬೆಕ್ಕು, ಕಬ್ಬೆಕ್ಕು, ಮುಳ್ಳು ಹಂದಿ ಹೀಗೆ ಹಲವು ವನ್ಯಜೀವಿಗಳು ಕ್ಯಾಮೆರಾ ಟ್ರಾಪ್‌ನಲ್ಲಿ ಕಂಡವು. ಹೆಚ್ಚಾಗಿ ಹುಲ್ಲುಗಾವಲುಗಳಲ್ಲಿ ಕಂಡುಬರುವ ಕಪ್ಪಲು ನರಿ ಚಾಮುಂಡಿಬೆಟ್ಟದಲ್ಲಿ ಸಿಕ್ಕಿದ್ದು ಆಶ್ಚರ್ಯವಾಯಿತು. ಸಾಮಾನ್ಯವಾಗಿ ಬೂದು ಬಣ್ಣದ ಮೇಲೆ ಕಪ್ಪು ಪಟ್ಟೆ, ಚುಕ್ಕೆಗಳಿರುವ ಪುನುಗುಬೆಕ್ಕು, ಚಾಮುಂಡಿಬೆಟ್ಟದಲ್ಲಿ ತಿಳಿ ಹಳದಿ ಮೈಬಣ್ಣದ ಮೇಲೆ ಹಗುರವಾದ ಬೂದು ಬಣ್ಣದ ಚುಕ್ಕೆ ಪಟ್ಟಿಗಳಲಿರುವ ಪ್ರಾಣಿಯೊಂದು ಸಿಕ್ಕಿದ್ದು ಆಶ್ಚರ್ಯಕರವಾಗಿತ್ತು. ಹೀಗೆ ಈ ಚಿಕ್ಕ ಕಾಡಿನಲ್ಲಿ ಕೂಡ ಕೆಲ ಅಚ್ಚರಿಯ ಸಂಗತಿಗಳು ಅಡಗಿದ್ದವು. ಅರಮನೆಯ ಸುತ್ತಮುತ್ತಲೂ ನಾವು ಹಾಕಿದ್ದ ಕ್ಯಾಮೆರಾ ಟ್ರಾಪ್‌ನಲ್ಲೂ ಚಿರತೆಗಳು ಹಾಜರಾಗಿ ಇತಿಹಾಸಕ್ಕೆ ವನ್ಯಜೀವಿ ಸಂರಕ್ಷಣೆಯ ಲೇಪನ ಹಾಕಿದವು. 

2017ರಲ್ಲಿ ಮತ್ತೆ ಚಾಮುಂಡಿಬೆಟ್ಟ ಹಿಂದಿರುಗಿ ನಮ್ಮ ಕೆಲಸವನ್ನು ಪುನರಾವರ್ತಿಸಿದೆವು. ಚಿರತೆಗಳ ಸಂಖ್ಯೆಯಲ್ಲಿ ವ್ಯತ್ಯಾಸವೇನೂ ಇರಲಿಲ್ಲ. ನಾವು ಮಾಡಿದ ಎರಡೂ ವರ್ಷದ ಕೆಲಸದಲ್ಲಿ ಗಂಡು ಚಿರತೆಯೊಂದು ಬೆಟ್ಟದ ಎÇÉಾ ಭಾಗಗಳಲ್ಲೂ ಕಾಣಿಸಿಕೊಳ್ಳುತ್ತಿತ್ತು. ಅದಕ್ಕೆ ಸಿ.ಎಂ.05 ಎಂದು ಹೆಸರಿಟ್ಟಿದ್ದೆವು. ದಷ್ಟಪುಷ್ಟವಾಗಿದ್ದ ಸುಮಾರು ಆರು ವರ್ಷದ ಈ ಚಿರತೆ ನೋಡಲು ಬಹು ಸುಂದರವಾಗಿತ್ತು. ಬೆಟ್ಟದ ಎÇÉಾ ಪ್ರದೇಶಗಳಲ್ಲೂ ಓಡಾಡಿಕೊಂಡಿದ್ದ ಚಿರತೆ ಇದ್ದಕ್ಕಿದ್ದ ಹಾಗೆ 2018ರ ಫೆಬ್ರವರಿಯಲ್ಲಿ ದೊಡ್ಡ ಸುದ್ದಿ ಮಾಡಿತು. 

ಚಾಮುಂಡಿಬೆಟ್ಟಕ್ಕೆ ಹೋಗುತ್ತಿದ್ದ ಯಾರೋ ರಸ್ತೆಯಲ್ಲಿ ಚಿರತೆಯೊಂದು ನಡೆದು ಹೋಗುತ್ತಿದ್ದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹಾಕಿದೊಡನೆ ಆ ಚಿರತೆಯನ್ನು ಹಿಡಿಯಬೇಕೆಂದು ಕೆಲ ಜನರಿಂದ ಒತ್ತಡ ಬರಲು ಪ್ರಾರಂಭವಾಯಿತು. ಕುತೂಹಲದಿಂದ ಆ ಚಿರತೆಯ ವಿಡಿಯೋ ನಮ್ಮ ಕ್ಯಾಮೆರಾ ಟ್ರಾಪ್‌ನ ಚಿರತೆಗಳೊಡನೆ ಹೋಲಿಸಿ ನೋಡಿದರೆ ಆ ಚಿರತೆ ಸಿ.ಎಂ.05 ಆಗಿತ್ತು. ಯಾರಿಗೂ ತೊಂದರೆ ಕೊಡದಿದ್ದ ಚಿರತೆಯನ್ನು ಹಿಡಿಯುವುದು ಅಸಂಬದ್ಧವಾಗಿತ್ತು. ತಕ್ಷಣ ಚಿರತೆಯ ಬಗ್ಗೆ ಮಾಹಿತಿ ಮತ್ತು ಅದರ ಸಂಕ್ಷಿಪ್ತ ಇತಿಹಾಸವನ್ನು ಅರಣ್ಯ ಇಲಾಖೆಗೆ ಮತ್ತು ಮಾಧ್ಯಮದವರ ಮೂಲಕ ಸಾರ್ವಜನಿಕರಿಗೆ ನೀಡಿ ಸಿ.ಎಂ.05 ಹಿಡಿಯುವುದು ಸಮಂಜಸವಲ್ಲ ಎಂದು ಮನವಿ ಮಾಡಿದೆವು. 

ಆದರೆ ನಮ್ಮ ದುರಾದೃಷ್ಟವೋ, ಸಿ.ಎಂ.05ರ ಹಣೆ ಬರಹವೋ...ನಾವು ಮನವಿ ಮಾಡಿದ ನಾಲ್ಕೇ ದಿನಗಳಲ್ಲಿ ಅದು ನಗರದ ಉತ್ತನಹಳ್ಳಿಯ ಬಾಳೆಹಣ್ಣು ಮಂಡಿಯೊಳಗೆ ರಾತ್ರಿ ವೇಳೆ ಸೇರಿಬಿಟ್ಟಿತು. ಮಂಡಿಯಲ್ಲಿದ್ದ ನಾಯಿಯನ್ನು ತಿನ್ನಲು ಬಂದಿದ್ದ ಸಿ.ಎಂ.05 ಅಂಗಡಿಯೊಳಗೆ ಮಲಗಿದ್ದ ಮಾಲೀಕರಿಗೆ ಕಾಣಿಸಿ ಕೊಂಡಿತು. ಅವರು ಗಾಬರಿಯಾಗಿ ಆ ಕೋಣೆಯ ಬಾಗಿಲು ಹಾಕಿ, ಅರಣ್ಯ ಇಲಾಖೆಗೆ ತಿಳಿಸಿದಾಗ ಮಂಡಿಯ ಒಳಗೆ ಅಡಗಿದ್ದ ಚಿರತೆಯನ್ನು ಹಿಡಿಯಲಾಯಿತು. 

ಅಲ್ಲಿಗೆ ನಾವು ಸುಮಾರು ನಾಲ್ಕು ವರ್ಷಗಳಿಂದ ಚಾಮುಂ ಡಿಬೆಟ್ಟದಲ್ಲಿ ನೋಡುತ್ತಿದ್ದ ಅಗ್ರ ಚಿರತೆಯೊಂದು ಅದರ ನೈಸರ್ಗಿಕ ಆಯಸ್ಸು ಮುಗಿಯುವ ಮುನ್ನವೇ ಸಂಘರ್ಷಕ್ಕೆ ಒಳಗಾಗಿ ತನ್ನ ಇನ್ನುಳಿದ ಜೀವಿತಾವಧಿಯನ್ನು ಬಂದೀಖಾನೆಯಲ್ಲಿ ಕಳೆಯುವ ಹಾಗಾಯಿತು. ಅಂದು ರಾತ್ರಿ ಮಂಡಿಯ ಮಾಲೀಕರಿಗೆ ಸಿ.ಎಂ.05 ಕಂಡಿಲ್ಲದಿದ್ದರೆ ಚಾಮುಂಡಿಬೆಟ್ಟದ ಮೇಲೆ ತನ್ನ ಅಧಿಪತ್ಯವನ್ನು ಮುಂದುವರೆಸುತಿತ್ತು. ಕಾಡಿನೊಳಗೆ ಮಾನವನ ಹಸ್ತಕ್ಷೇಪದಿಂದ ಆಗಿರುವ ನೈಸರ್ಗಿಕ ಆಹಾರದ ಪ್ರಮಾಣ ಕಡಿಮೆಯಾಗಿ ರುವುದರಿಂದ ಗ್ರಾಮಸಿಂಹದ ಆಸೆಗೆ ಬಂದ ಸಿ.ಎಂ.05ನ ತಪ್ಪು ಏನೆಂದು ಇಂದಿಗೂ ನನಗೆ ಅರ್ಥವಾಗಿಲ್ಲ. ಅಂಗಡಿಯ ಮಾಲೀಕರ ಆತಂಕ ಕೂಡ ನ್ಯಾಯಸಮ್ಮತವೇ. 

ಮುಂದಿನ ದಿನಗಳಲ್ಲಿ ಚಾಮುಂಡಿಬೆಟ್ಟದ ಚಿರತೆಗಳ ಭವಿಷ್ಯ ದೊಂಬರಾಟದಲ್ಲಿ ಹಗ್ಗದ ಮೇಲೆ ನಡೆಯುವವರ ಪರಿಸ್ಥಿತಿ ಯಂತಾಗಬಹುದು. ಮೈಸೂರುನಗರ ಚಾಮುಂಡಿ ಬೆಟ್ಟವನ್ನು ಎÇÉಾ ಕಡೆಯಿಂದಲೂ ವ್ಯಾಪಿಸಿಕೊಳ್ಳುತ್ತಿದೆ, ಹಾಗೆಯೇ ಬೆಟ್ಟದ ಮೇಲೆ ನಡೆಯುತ್ತಿರುವ ಕಾಂಕ್ರಿಟೀಕರಣದಿಂದ ಮುಂದೊಂದು ದಿನ ಅಲ್ಲಿ ಚಿರತೆಗಳು ಉಳಿಯುತ್ತವಾ ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಮೈಸೂರಿನಲ್ಲಿ ವನ್ಯಜೀವಿ, ಪರಿಸರದ ಬಗ್ಗೆ ಕಾಳಜಿಯಿರುವ ಸಾಕಷ್ಟು ನಾಗರಿಕರಿ¨ªಾರೆ ಅವರು ಚಾಮುಂಡಿಬೆಟ್ಟದ ಕಾಡು ಮತ್ತು ಅದರ ವನ್ಯಜೀವಿಗಳನ್ನು ಉಳಿಸಿಕೊಳ್ಳುತ್ತಾರೆಂಬ ಭರವಸೆಯಿದೆ.   

- ಸಂಜಯ್‌ ಗುಬ್ಬಿ


Trending videos

Back to Top