CONNECT WITH US  

ಸುರಿಯುವ ಮಳೆಗೆ ಗರಿಗರಿ ವಡೆ

ಬೇಸಿಗೆ ಮರೆಯಾಗಿ, ಮಳೆಗಾಲ ಕದ ತಟ್ಟುತ್ತಿದೆ. ಮಳೆಗೆ, ಆ ಸಂದರ್ಭದಲ್ಲೇ ಜೊತೆಯಾಗುವ ಚಳಿಗೆ, ಸಂಜೆಯ ಕಾಫಿಯ ಜೊತೆ, ಗರಿಗ‌ರಿಯಾದ ವಡೆಗಳು ಜೊತೆಯಾದರೆ ನಾಲಗೆಗೂ, ಮನಸ್ಸಿಗೂ ಎಂಥ ಹಿತವಲ್ಲವೆ? ಅನೇಕ ಬಗೆಯ ವಡೆ ತಯಾರಿಸುವ ವಿಧಾನ ಇಲ್ಲಿದೆ.  

ಮದ್ದೂರು ವಡೆ
ಬೇಕಾಗುವ ಸಾಮಗ್ರಿಗಳು: 

ಅಕ್ಕಿ ಹಿಟ್ಟು 2 ಕಪ್‌, ಮೈದಾ ಹಿಟ್ಟು 1 ಕಪ್‌, ಕಡಲೆಕಾಯಿ ಬೀಜ 1/2 ಕಪ್‌, ಮೊಸರು 1 ಕಪ್‌, ಕತ್ತರಿಸಿದ ಈರುಳ್ಳಿ 1 ಕಪ್‌, ಕತ್ತರಿಸಿದ ಹಸಿಮೆಣಸಿನಕಾಯಿ 7- 8 ತುಂಡುಗಳು, ಕತ್ತರಿಸಿದ ಪುದಿನಾ ಸೊಪ್ಪು 2 ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು 2 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು 3 ಚಮಚ, ಶುಂಠಿ ತುರಿ 1 ಚಮಚ ಜೀರಿಗೆ 3 ಚಮಚ, ಬಿಳಿ ಎಳ್ಳು 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಅಡುಗೆ ಸೋಡಾ 1/2 ಚಮಚ, ಎಣ್ಣೆ ಕರಿಯಲು.

ಮಾಡುವ ವಿಧಾನ: 
ಕಡಲೆಕಾಯಿ ಬೀಜವನ್ನು ತರಿತರಿಯಾಗಿ ಪುಡಿ ಮಾಡಿ, ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ಈ ಮಿಶ್ರಣಕ್ಕೆ, ಮೊಸರು, ಈರುಳ್ಳಿ, ಹಸಿಮೆಣಸಿನಕಾಯಿ, ಪುದಿನಾ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಶುಂಠಿ ತುರಿ, ಜೀರಿಗೆ, ಎಳ್ಳು, ಉಪ್ಪು, ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಕಲಕಿ. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಡಿ. ಕಲಸಿಟ್ಟ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ ವಡೆಯಾಕಾರದಲ್ಲಿ ತಟ್ಟಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ, ಗರಿಗರಿಯಾದ ಮದ್ದೂರು ವಡೆ ತಯಾರು. ಮದ್ದೂರು ವಡೆಯನ್ನು ಕಾಯಿ ಚಟ್ನಿಯೊಂದಿಗೆ ತಿಂದರೆ ಬಲು ರುಚಿ.

ಹೆಸರುಬೇಳೆ ವಡೆ 
ಬೇಕಾಗುವ ಸಾಮಗ್ರಿಗಳು:

ಹೆಸರುಬೇಳೆ 2 ಕಪ್‌, ಅಕ್ಕಿ ಹಿಟ್ಟು 1/2 ಕಪ್‌, ಬೇಯಿಸಿ ಮಸೆದ ಆಲೂಗಡ್ಡೆ 1/2 ಕಪ್‌, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ 5-6, ಕತ್ತರಿಸಿದ ಕೊತ್ತಂಬರಿ ಸೊಪ್ಪು 3 ಚಮಚ, ತುರಿದ ಶುಂಠಿ 1/2 ಚಮಚ, ಜೀರಿಗೆ ಪುಡಿ 2 ಚಮಚ, ಅಡುಗೆ ಸೋಡಾ 1/4 ಚಮಚ, ಉಪ್ಪು: ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು

ಮಾಡುವ ವಿಧಾನ
ಹೆಸರುಬೇಳೆಯನ್ನು 2 ಗಂಟೆ ನೀರಿನಲ್ಲಿ ನೆನೆಸಿ, ಬಸಿದು ನೀರು ಹಾಕದೆ ತರಿತರಿಯಾಗಿ ಅರೆದಿಡಿ. ಅದಕ್ಕೆ ಅಕ್ಕಿ ಹಿಟ್ಟು, ಬೇಯಿಸಿ ಮಸೆದ ಆಲೂಗಡ್ಡೆ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ತುರಿ, ಜೀರಿಗೆ ಪುಡಿ, ಸೋಡಾ, ಉಪ್ಪು ಸೇರಿಸಿ ನೀರಿನೊಂದಿಗೆ ವಡೆಯ ಹದಕ್ಕೆ ಕಲಸಿ ಇರಿಸಿ. ನಂತರ ಹಿಟ್ಟಿನಿಂದ, ಚಿಕ್ಕ ವಡೆಗಳನ್ನು  ತಟ್ಟಿ, ಎಣ್ಣೆಯಲ್ಲಿ ಕರಿದರೆ, ರುಚಿರುಚಿಯಾದ ಹೆಸರುಬೇಳೆ ವಡೆ ಸವಿಯಲು ಸಿಧœ. ಸಂಜೆಯ ಕಾಫಿಯೊಂದಿಗೆ ತಿನ್ನಲು ಬಲು ರುಚಿ. 

ಅಲಸಂದೆ ಕಾಳಿನ ವಡೆ
ಬೇಕಾಗುವ ಸಾಮಗ್ರಿಗಳು: ಅಲಸಂದೆ ಕಾಳು 1 ಕಪ್‌, ಚಿರೋಟಿ ರವೆ 1/2 ಕಪ್‌, ಅಕ್ಕಿ ಹಿಟ್ಟು 1/2 ಕಪ್‌, ಕತ್ತರಿಸಿದ ಈರುಳ್ಳಿ 1/2 ಕಪ್‌, ಇಂಗು 1/4 ಚಮಚ, ಕತ್ತರಿಸಿದ ಹಸಿಮೆಣಸಿನಕಾಯಿ 3-4, ಕತ್ತರಿಸಿದ ಕರಿಬೇವಿನ ಸೊಪ್ಪು 2 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.

ಮಾಡುವ ವಿಧಾನ: 
ಅಲಸಂದೆ ಕಾಳುಗಳನ್ನು 8 ಗಂಟೆಗಳ ಕಾಲ ನೆನೆಸಿ, ಬಸಿದು ತರಿತರಿಯಾಗಿ ಅರೆದಿರಿಸಿ. ಅರೆದ ಕಾಳುಗಳಿಗೆ, ಚಿರೋಟಿ ರವೆ, ಅಕ್ಕಿ ಹಿಟ್ಟು, ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಉಪ್ಪು, ಇಂಗುಗಳನ್ನು ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ನೀರು ಸೇರಿಸಿ ಗಟ್ಟಿಯಾಗಿ ವಡೆಯ ಹದಕ್ಕೆ ಕಲಸಿ.
ಕಲಸಿಟ್ಟ ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದುಕೊಂಡು, ವಡೆಯಾಕಾರದಲ್ಲಿ ತಟ್ಟಿ, ಕಾಯಿಸಿದ ಎಣ್ಣೆಯಲ್ಲಿ ಕರಿದು ತೆಗೆದರೆ, ಗರಿಗರಿಯಾದ ಅಲಸಂದೆ ವಡೆ ಸವಿಯಲು ಸಿಧœ. 

ಅವಲಕ್ಕಿ ವಡೆ
ಬೇಕಾಗುವ ಸಾಮಗ್ರಿಗಳು:

ದಪ್ಪ ಅವಲಕ್ಕಿ 2 ಕಪ್‌, ಕತ್ತರಿಸಿದ ಈರುಳ್ಳಿ 1/2 ಕಪ್‌, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ 1 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು 2 ಚಮಚ, ಕತ್ತರಿಸಿದ ಪುದಿನಾ ಸೊಪ್ಪು 1 ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕಡಲೆ ಹಿಟ್ಟು 1/2 ಕಪ್‌, ಅಡುಗೆ ಸೋಡಾ 1/2 ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ:
ಅವಲಕ್ಕಿಯನ್ನು ತೊಳೆದು ಬಸಿದು ಮಸೆದಿಡಿ. ನೆನೆಸಿದ ಅವಲಕ್ಕಿಗೆ, ಸ್ವಲ್ಪ ನೀರು, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು, ಕರಿಬೇವಿನಸೊಪ್ಪು, ಉಪ್ಪು, ಕಡಲೆಹಿಟ್ಟು ಹಾಗೂ ಅಡುಗೆ ಸೋಡಾ ಬೆರೆಸಿ, ವಡೆಯ ಹದಕ್ಕೆ ಕಲಸಿ. ಚಿಕ್ಕ ಉಂಡೆ ಗಾತ್ರದ ಅವಲಕ್ಕಿ ಮಿಶ್ರಣವನ್ನು ತೆಗೆದುಕೊಂಡು ವಡೆಯ ಆಕಾರದಲ್ಲಿ ತಟ್ಟಿ ಕಾಯಿಸಿದ ಎಣ್ಣೆಯಲ್ಲಿ ಕರಿಯಿರಿ. ಅವಲಕ್ಕಿ ವಡೆಯನ್ನು ಕಾಯಿ ಚಟ್ನಿಯೊಂದಿಗೆ ಸವಿಯಿರಿ. 

ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

Trending videos

Back to Top