CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮುಗುಳುನಗೆಯ ಮಹಾರಾಣಿ ನಿಖೀತಾ

"ಮುಗುಳು ನಗೆ'ಯಲ್ಲಿ ಈಕೆಯ ಗುಲಾಬಿ ನಗೆಯನ್ನು ನೋಡಲೆಂದೇ ಪಡ್ಡೆಗಳು ಥಿಯೇಟರ್‌ಗೆ ನುಗ್ಗುತ್ತಿದ್ದಾರೆ. ಆ ಚಿತ್ರದಲ್ಲಿ ಈಕೆ ನುಡಿಸಿದ ಗಿಟಾರ್‌ನ ಮಾಧುರ್ಯದ ಸದ್ದು ಅದೆಷ್ಟೋ ಹುಡುಗರ ಹೃದಯ ತಾಳ ತಪ್ಪಿಸಿದೆ. ಚಿತ್ರದಲ್ಲಿ ಪಾಂಡಿಚೆರಿಯ ಕ್ಲಾಸ್‌ ಹುಡುಗಿಯ ಪಾತ್ರ. ಆದ್ರೆ ನಿಜಜೀವನದಲ್ಲಿ ನಿಖೀತಾ ಬಡಬಡಾ ಮಾತಾಡೋ ಹುಡುಗಿ. "ಮಿಸ್‌ ಹೈದರಾಬಾದ್‌' ಆಗಿ ಮಿಂಚಿದ ಇವರು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸಂಗೀತದಲ್ಲಿ ಅಪಾರ ಆಸಕ್ತಿ ಇರೋ ನಿಖೀತಾ, ಆರೇಳು ಭಾಷೆಗಳಲ್ಲಿ ಪಟಪಟ ಅಂತ ಮಾತಾಡಬಲ್ಲರು. ಸಿನಿಮಾ ಯಶಸ್ಸಿನ ಖುಷಿಯಲ್ಲಿ ನಿಖೀತಾ ಮಾತಿಗೆ ಸಿಕ್ಕಿದ್ದಾರೆ. 

- ಚಪ್ಪಲಿ ಕೊಳ್ಳಲೂ ದುಡ್ಡಿರಲಿಲ್ಲ
 17ನೇ ವಯಸ್ಸಿಗೇ ನಾನು ಮಿಸ್‌ ಹೈದರಾಬಾದ್‌ ಆಗಿದ್ದೆ. ನನ್ನ ಜೀವನದ ಅತ್ಯಂತ ಖುಷಿಯ ಕ್ಷಣ ಅದು. ಅದೇ ನನ್ನನ್ನು ಸಿನಿಮಾ ರಂಗಕ್ಕೂ ಕರೆತಂದಿದ್ದು. ನಾನು ಇಲ್ಲಿಗೆ ಬರುತ್ತೇನೆ ಅಂತ ಯೋಚೆ°àನೂ ಮಾಡಿರಲಿಲ್ಲ. ಈಗ ಇಲ್ಲಿದ್ದೇನೆ. ಮಿಸ್‌ ಹೈದರಾಬಾದ್‌ ಸ್ಪರ್ಧೆಯಲ್ಲಿ ಭಾಗವಹಿಸುವ ವೇಳೆ ನನ್ನ ಬಳಿ ಸ್ಪರ್ಧೆಗೆ ಬೇಕಾದ ಚಪ್ಪಲಿ ಕೊಳ್ಳಲೂ ದುಡ್ಡಿರಲಿಲ್ಲ. ಆದರೆ ಇವತ್ತು ಹೀಗಿದ್ದೇನೆ. ಆದರೆ ಎಷ್ಟೇ ಎತ್ತರಕ್ಕೆ ಹೋದರೂ ನಾವು ಬಂದ ಹಾದಿಯನ್ನು ಮರೆಯಬಾರದು ಎಂಬ ಅರಿವು ನನಗಿದೆ. 

- ಬಹುಭಾಷಾ ಪಂಡಿತೆ!
ನಮ್ಮ ಕುಟುಂಬ ದೇಶದ ನಾನಾ ಭಾಗಗಳಲ್ಲಿ ವಾಸಿಸಿತ್ತು. ಹಾಗಾಗಿ ನನಗೆ ಕನ್ನಡ, ತೆಲುಗು, ಹಿಂದಿ, ತಮಿಳು ಸೇರಿ 5-6 ಭಾರತೀಯ ಭಾಷೆಗಳು ಬರುತ್ತವೆ. ಜೊತೆಗೆ ಫ್ರೆಂಚ್‌, ಸ್ಪ್ಯಾನಿಷ್‌ ಕೂಡ ಕಲಿತಿದ್ದೇನೆ. 

- ನಿಮ್ಮ ಪ್ರಕಾರ "ಮುಗುಳು ನಗೆ' ಅಂದ್ರೆ ಏನು?
"ಮುಗುಳು ನಗೆ' ಅಂದ್ರೆ ಸಾರ್ಥಕತೆ, "ಮುಗುಳು ನಗೆ' ಅಂದ್ರೆ ಮನವರಿಕೆ. ನೀವು ನಿಮ್ಮನ್ನೇ ಗಮನಿಸಿಕೊಳ್ಳಿ. ಸಾರ್ಥಕತೆ, ತೃಪ್ತಿ ನಿಮ್ಮ ಮನಸ್ಸು ತುಂಬಿದ್ದರೆ ನಿಮಗೆ ಗೊತ್ತಿಲ್ಲದಂತೆ ಮುಗುಳು ನಗೆ ಮುಖದ ಮೇಲೆ ಮೂಡುತ್ತದೆ. ನಿಮ್ಮ ತಪ್ಪಿನ ಮನವರಿಕೆಯಾದಾಗಲೂ ಮುಖದಲ್ಲಿ "ಮುಗುಳು ನಗೆ' ಮೂಡುತ್ತದೆ. 

-ಭಟ್ಟರ ಸಿನಿಮಾದಲ್ಲಿ ನಟಿಸಿದ ಅನುಭವ ಹೇಗಿತ್ತು?
ಈ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟ. ಎಲ್ಲವೂ ಕನಸಿನ ಹಾಗೇ ಇತ್ತು. ಇಷ್ಟದ ನಿರ್ದೇಶಕ, ಇಷ್ಟದ ನಟನ ಜೊತೆಗೆ ಸತ್ವಯುತ ಪಾತ್ರ. ಕನ್ನಡಿಗರಿಗೆ ನಾನು ಪರಿಚಯವಾಗಲು ಇಂಥ ಚಿತ್ರ ಮತ್ತು ಚಿತ್ರತಂಡ ಬೇಕಿತ್ತು. ಅಷ್ಟು ಒಳ್ಳೆಯ ಟೀಂ ಇದು. ಈ ಪಾತ್ರ ನಿರ್ವಹಿಸಲು ನನಗೆ ನನ್ನ ಸಾಮರ್ಥ್ಯದ ಮೇಲೇ ಅನುಮಾನ ಇತ್ತು. ಯೋಗರಾಜ್‌ ಭಟ್‌ ಸರ್‌ ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ನಾನು ಯಾವತ್ತೂ ಡಬ್ಬಿಂಗ್‌ ಮಾಡಿರಲಿಲ್ಲ. ಈ ಚಿತ್ರದಲ್ಲಿ ಆ ಅವಕಾಶವನ್ನೂ ನೀಡಿದರು. 

-ಅಭಿನಯದ ಮಟ್ಟಿಗೆ ಚಾಲೆಂಜಿಂಗ್‌ ಅನ್ನಿಸಿದ ಅಂಶಗಳು ಯಾವುವು?
ಹೈ ಪ್ರೊಫೈಲ್ಡ್‌ ಮೇಲ್ವರ್ಗದ ಹುಡುಗಿ ರೀತಿ ನಟಿಸಬೇಕಿತ್ತು. ಹೆಚ್ಚು ಮಾತಿಲ್ಲ, ಕಣ್ಣಿನಲ್ಲೇ ಎಲ್ಲಾ ಹೇಳಬೇಕು. ಹಾವ ಭಾವದಲ್ಲೇ ನಾನು ಕ್ಲಾಸ್‌ ಹುಡುಗಿ ಅಂತ ಜನರಿಗೆ ತಿಳಿಸಬೇಕು. ಅದೇ ನನಗೆ ದೊಡ್ಡ ಸವಾಲಾಗಿತ್ತು. ಯಾಕಂದ್ರೆ ನಾನು ಮಧ್ಯಮ ವರ್ಗದ ಹುಡುಗಿ. ಬಡಬಡಾ ಅಂತ ಮಾತಾಡಿಕೊಂಡು ಎಲ್ಲರ ಜೊತೆ ಸಲೀಸಾಗಿ ಬೆರೆಯುವಂಥವಳು. ನಾನು ಕಳಪೆಯಾಗಿ ನಟಿಸಿ ಪಾತ್ರ ಎಲ್ಲಿ ಬಿದ್ದು ಹೋಗುತ್ತದೋ ಅಂಥ ತುಂಬಾ ಹೆದರಿದ್ದೆ.

-ಮದುವೆ, ಸಂಸಾರ ಅಂದ್ರೆ "ಮುಗುಳು ನಗೆ'ಯ ಸಿರಿಗೆ ನಂಬಿಕೆ ಇಲ್ಲ. ನಿಖೀತಾಗೆ? 
ಈ ವಿಚಾರದಲ್ಲಿ ನಾನು ಸಿರಿಯನ್ನು ತುಂಬಾ ಇಷ್ಟ ಪಡ್ತೀನಿ. ಆಕೆ ಹೇಳೊದು ನಿಜ. ಪ್ರೀತಿಯ ಅಂತಿಮ ಗುರಿ ಮದುವೆಯೇ ಅಲ್ಲ. ಮದುವೆ ಅನ್ನೋದು ನಾವು ಮಾಡಿಕೊಂಡಿರುವ ವ್ಯವಸ್ಥೆ. ಆದರೆ ಪ್ರೀತಿ ನಿಸರ್ಗ ಸಹಜ. ನಿಸರ್ಗ ಸಹಜವಾಗಿರುವ ಎಲ್ಲದಕ್ಕೂ ಅದರದ್ದೇ ಆದ ಶಕ್ತಿ ಇರುತ್ತದೆ. ಪ್ರೀತಿಗೆ ಆ ಶಕ್ತಿ ಇದೆ. ಮದುವೆಯಾದ ಎಷ್ಟೋ ಜೋಡಿಗಳು ಬೇರೆಯಾಗೋದನ್ನು ನೋಡ್ತೀವಿ. ಸರಿದೂಗಿಸಲಾಗದ ಬಂಧನಕ್ಕೆ ಬೀಳುವುದಕ್ಕಿಂತ ಜೀವನಪರ್ಯಂತ ಪ್ರೀತಿಸುವುದು ಮುಖ್ಯ ಅಲ್ವಾ? ಸರಿಯಾದ ಸಂಗಾತಿ ಸಿಕ್ಕರೆ ಮಾತ್ರ ಮದುವೆ ಅರ್ಥಪೂರ್ಣ ಅನಿಸುತ್ತೆ.

- ಚಿತ್ರರಂಗದಿಂದ ಏನೇನು ಕಲಿತುಕೊಂಡಿರಿ? 
ಮುಖ್ಯವಾಗಿ "ಡಿಪ್ಲೊಮ್ಯಾಟಿಕ್‌' ಆಗಿ ಇರೋದನ್ನು ಕಲಿತಿದ್ದೀನಿ. ಮನಸ್ಸಲ್ಲಿರೋದನ್ನ ನೇರವಾಗಿ ಹೇಳಿ ನಿರಾಳವಾಗೋ ಗುಣ ನನ್ನದು. ಇಲ್ಲಿಗೆ ಬಂದ ಮೇಲೆ ಸ್ವಲ್ಪ ಯೋಚಿಸಿ ಮಾತಾಡೋದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಜೊತೆಗೆ ತಾಳ್ಮೆ, ಗಟ್ಟಿತನ ರೂಢಿಸಿಕೊಂಡಿದ್ದೇನೆ. 

- ಚಿತ್ರರಂಗದ ಯಾವೆಲ್ಲ ವಿಷಯಗಳಿಗೆ ನಿಮಗೆ ಆಶ್ಚರ್ಯವಾಗಿದೆ?
ಟೈಂ ವಿಚಾರದಲ್ಲಿ ನಾನು ಮೊದಲಿನಿಂದ ತುಂಬಾ ಕಟ್ಟುನಿಟ್ಟು. ಆದರೆ ಚಿತ್ರರಂಗ ಸಮಯ ಪಾಲನೆಯಲ್ಲಿ ಸ್ವಲ್ಪ ಹಿಂದೆ. ನಾನು ನನಗೆ ಹೇಳಿದ ಟೈಮಿಗೆ ಕರೆಕ್ಟಾಗಿ ಶೂಟಿಂಗ್‌ ಜಾಗಕ್ಕೆ ಹೋಗ್ತಿದ್ದೆ. ಆದರೆ ಅಲ್ಲಿ ಯಾರೂ ಇರಿ¤ರಲಿಲ್ಲ. ಅಪರೂಪಕ್ಕೊಮ್ಮೆ ಲೇಟಾಗಿ ಹೋದಾಗ "ಯಾಕಮ್ಮಾ ಲೇಟು?' ಅಂತ ಕೇಳ್ಳೋರು. ಅಪರೂಪಕ್ಕೆ ತಪ್ಪು ಮಾಡಿದ್ರೆ ಸಿಕ್ಕಿ ಬೀಳೆ¤àವೆ. ದಿನಾ ಮಾಡಿದರೆ ಯಾರೂ ಕೇಳಲ್ಲ. 

- ನಟನೆಗೆ ಬಂದು ಏನನ್ನಾದರೂ ಮಿಸ್‌ ಮಾಡಿಕೊಳ್ತಿದ್ದೀರಾ? 
ನನಗೆ ಮೊದಲಿನಿದಲೂ ಜನರಲ್‌ ನಾಲೆಡ್ಜ್ ಬಗ್ಗೆ ತುಂಬಾ ಆಸಕ್ತಿ. ಈಗ ಪತ್ರಿಕೆ ಓದೋಕೆ, ಟಿ.ವಿ ನೋಡೋಕೆ ಟೈಂ ಸಿಗ್ತಾ ಇಲ್ಲ. ನನ್ನ ಜ್ಞಾನದ ಪರಿಧಿ ವಿಸ್ತಾರ ಆಗ್ತಿಲ್ಲ ಅನ್ನೋ ಬೇಜಾರಿದೆ. ಆದರೆ ಇಲ್ಲಿಗೆ ಬಂದ ಮೇಲೆ ನಟನೆ ಜೊತೆಗೆ, ಗಿಟಾರ್‌, ಕಾರ್‌ ಟ್ರೈವಿಂಗ್‌, ಡ್ಯಾನ್ಸ್‌.. ಹೀಗೆ ತುಂಬಾ ವಿಷಯಗಳನ್ನ ಕಲಿತ ಖುಷಿಯೂ ಇದೆ. 

-ನೀವು ತುಂಬಾ ಚೆನ್ನಾಗಿ ಹಾಡ್ತೀರಂತೆ?
ಹೌದು. ನನಗೆ ಹಾಡೋದು ಅಂದ್ರೆ ತುಂಬಾ ಇಷ್ಟ. ನನ್ನ ತಾತ ಕನ್ನಡ ಚಿತ್ರರಂಗದಲ್ಲಿ ಖ್ಯಾತ ವೀಣಾ ವಾದಕರಾಗಿದ್ದರು. ಬಹುಶಃ ಸಂಗೀತ ನನ್ನ ರಕ್ತದಲ್ಲೇ ಇದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಆಸೆ ಕೂಡ ಇದೆ. ಶಾಸ್ತ್ರೀಯವಾಗಿ ಸಂಗೀತ ಕಲಿಯಬೇಕು ಅಂತ ನಿರ್ಧರಿಸಿದ್ದೇನೆ.  

-"ಮಿಸ್‌ ಹೈದರಾಬಾದ್‌' ಆದಮೇಲೆ "ಮಿಸ್‌ ಇಂಡಿಯಾ'ಗೆ ಯಾಕೆ ಟ್ರೈ ಮಾಡ್ಲಿಲ್ಲ? 
ಮಿಸ್‌ ಹೈದರಾಬಾದ್‌ ಗೆದ್ದ ಕೂಡಲೇ ಮಿಸ್‌ ಇಂಡಿಯಾ ಸ್ಪರ್ಧೆಗೆ ನೇರವಾಗಿ ಆಯ್ಕೆ ಆಗಿದ್ದೆ. ಆದರೆ ಬಿಕಿನಿ ಹಾಕಲೇಬೇಕು ಅನ್ನೋ ಒಂದೇ ಒಂದು ಕಾರಣಕ್ಕೆ ಬೇಡ ಅಂದೆ. ಅದಾದ್ಮೇಲೆ ಸಾಕಷ್ಟು ಸೌಂದರ್ಯ ಸ್ಪರ್ಧೆಗಳಿಗೆ ಆಹ್ವಾನ ಸಿಕ್ಕಿತ್ತು. ಆದರೆ ನಾನು ಆಗ ಬಿಕಿನಿ ಹಾಕೋಕೆ ರೆಡಿ ಇರಲಿಲ್ಲ. ಜೊತೆಗೆ ಸ್ಪರ್ಧೆಗಳಿಗಾಗಿ ಬಿಕಿನಿ ತೊಡುವ ಅಗತ್ಯವಿಲ್ಲ ಅನ್ನೋದು ನನ್ನ ಅನಿಸಿಕೆ. 

-ನಿಮ್ಮ ಫ್ಯಾಷನ್‌ ಸೆನ್ಸ್‌ ಬಗ್ಗೆ ಹೇಳಿ.
ನನಗೆ ಬಟ್ಟೆ , ಚಪ್ಪಲಿ ಸಂಗ್ರಹಿಸೋ ಹುಚ್ಚು ಜಾಸ್ತಿ. ನನ್ನ ವಾರ್ಡ್‌ರೋಬ್‌ನಲ್ಲಿ ಎಲ್ಲಾ ಬಗೆಯ ಬಟ್ಟೆಗಳಿವೆ. ಫ್ರಾಕ್‌ ಮತ್ತು ಸೀರೆಗಳೇ ಜಾಸ್ತಿ ಇರೋದು. ನನಗೆ ಟ್ರೆಂಡಿ ಮತ್ತು ಫ್ಯಾಷನೆಬಲ್‌ ಬಟ್ಟೆ ಅಂದ್ರೆ ತುಂಬಾ ಇಷ್ಟ. ಚಿತ್ರವಿಚಿತ್ರವಾಗಿ ಕಾಣುವ ಬಟ್ಟೆಗಳ ಮೇಲೇನೇ ನನ್ನ ಕಣ್ಣು ಮೊದಲು ಹೋಗೋದು. ವಿದೇಶಗಳಿಗೆ ಹೋದಾಗ ರಾಶಿಗಟ್ಟಲೆ ಶಾಪಿಂಗ್‌ ಮಾಡ್ತೀನಿ. ಯಾಕಂದ್ರೆ ಅಲ್ಲಿನ ಫ್ಯಾಷನ್‌ ಟ್ರೆಂಡ್‌ ಭಾರತಕ್ಕಿಂತ ಸಾಕಷ್ಟು ಮುಂದೆ ಇರುತ್ತೆ. ಹಾಗಂತ ಎರ್ರಾಬಿರ್ರಿ ಖರ್ಚು ಮಾಡೋದಿಲ್ಲ. ನಂದೂ ಬಜೆಟ್‌ ಶಾಪಿಂಗ್‌. ನನ್ನ ಬಜೆಟ್‌ನಲ್ಲೇ ಚಂದದ ವಸ್ತುಗಳನ್ನು ಖರೀದಿಸ್ತೇನೆ. 

-ನೀವು ತುಂಬಾ ಫ‌ುಡ್ಡೀನಾ? 
ಹೌದು, ನಾನು ತುಂಬಾ ಫ‌ುಡ್ಡೀ. ಚೀಸ್‌ ಅಂದ್ರೆ ಪ್ರಾಣ. ಬರೀದೇ ಚೀಸ್‌ ತಿಂದು ಬಿಡ್ತೀನಿ. ಉಳಿದಂತೆ ಅನ್ನ, ಮೊಸರು ಇಷ್ಟ. ಬೇರೆ ಬೇರೆ ದೇಶಗಳ ಅಡುಗೆ ರುಚಿ ನೋಡೋಕೆ ತುಂಬಾ ಇಷ್ಟ. ಬೆಂಗಳೂರಿನ ಬಹುತೇಕ ಕಾಂಟಿನೆಂಟಲ್‌ ರೆಸ್ಟೋರೆಂಟ್‌ಗಳಿಗೆ ಹೋಗಿ ರುಚಿ ನೋಡಿದ್ದೇನೆ. ವಿದ್ಯಾರ್ಥಿ ಭವನದ ಬೆಣ್ಣೆ ದೋಸೆ ಕೂಡ ನಂಗೆ ಭಾರೀ ಇಷ್ಟ.

-ಸೌಂದರ್ಯದ ಬಗ್ಗೆ ಟಿಪ್ಸ್‌ ಕೊಡೋದಾದರೆ? 
ಯೋಗ, ಧ್ಯಾನ ಮಾಡಿ. ಅದರಿಂದ ಮನಸ್ಸು ಪ್ರಶಾಂತವಾಗುತ್ತದೆ. ಆಗ ಮುಖದಲ್ಲಿ ಆರೋಗ್ಯಕರ ಕಳೆ ಬರುತ್ತದೆ. ತುಂಬಾ ನೀರು ಕುಡಿಯಿರಿ. ಸಾಕಷ್ಟು ಬೆವರುವಂತೆ ವ್ಯಾಯಾಮ ಮಾಡಿ. ಆಗ ದೇಹದ ಕಲ್ಮಶವೆಲ್ಲಾ ಹೋಗಿ, ಸೌಂದರ್ಯ ಹೆಚ್ಚಾಗುತ್ತೆ. ಹಾಂ, ಇನ್ನೊಂದು ಮುಖ್ಯವಾದ ಟಿಪ್‌, "ಕಮ್ಮಿ ಮೇಕಪ್‌ ಬಳಸಿ'.

-ಸಿನಿಮಾ ಬಿಡುಗಡೆಯಾದಾಗಿಂದ ತುಂಬಾ ಸಂದರ್ಶನಗಳನ್ನು ಎದುರಿಸುತ್ತಾ ಇದ್ದೀರಿ. ತುಂಬಾ ಕಿರಿಕಿರಿ ಅನ್ನಿಸಿದ ಪ್ರಶ್ನೆ ಯಾವುದು? 
"ಹೇಗನ್ನಿಸ್ತಿದೆ? ಹೇಗನ್ನಿಸ್ತಿದೆ?'  ಈ ಪ್ರಶ್ನೆಗೆ ಏನು ಉತ್ತರ ಕೊಡಬೇಕು ಅಂತ ಗೊತ್ತೇ ಆಗಲ್ಲ.

-ನಿಮ್ಮನ್ನು ತುಂಬಾ ಪ್ರಭಾವಿಸಿದ ಮಹಿಳೆಯರು ಯಾರು?
ಚಿಕ್ಕವಳಿದ್ದಾಗ ಬರ್ಕಾ ದತ್‌, ಆಮೇಲೆ ಇಂದಿರಾ ನೂಯಿ, ಸುಧಾ ಮೂರ್ತಿ. ಈಗ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕ ಚೋಪ್ರಾರಲ್ಲಿ ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸ ಕಾಣಿಸುತ್ತೆ. ಆಕೆ ಅತ್ಯಂತ ಸುಂದರಿ ಅಲ್ಲ. ಆದರೆ ಜಗತ್ತು ಗೆಲ್ಲಲು ಸೌಂದರ್ಯವೇ ಮುಖ್ಯ ಅಲ್ಲ ಅಂತ ನಮ್ಮೆಲ್ಲರಿಗೂ ತೋರಿಸಿ ಕೊಡುತ್ತಿದ್ದಾರೆ.

Back to Top