CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅದ್ಭುತ, ಅನನ್ಯ, ಅವಂತಿಕಾ!

ಮುಂಬೈ ಬೆಡಗಿಯ ಕನ್ನಡ ಮೀಡಿಯಂ ಕತೆ

"ರಂಗಿತರಂಗ' ನೋಡಿದ ಯಾರೂ ಸಂಧ್ಯಾಳನ್ನು ಮರೆತಿರುವುದಿಲ್ಲ. ಆ ಚಿತ್ರದಲ್ಲಿ ಟಾಮ್‌ ಬಾಯ್‌ ರೀತಿಯ ಪಾತ್ರ ನಿರ್ವಹಿಸಿ ಜನರ ಮನ ಗೆದ್ದಿದ್ದ ಹುಡುಗಿ ಅವಂತಿಕಾ ಶೆಟ್ಟಿ, "ಆ ಚಿತ್ರದಲ್ಲಷ್ಟೇ ಅಲ್ಲ, ನಾನು ನಿಜಕ್ಕೂ ಟಾಮ್‌ ಬಾಯ್‌ನೇ' ಅಂತ ನಗುತ್ತಾರೆ. "ರಂಗಿತರಂಗ' ಬಳಿಕ ಉಪೇಂದ್ರ ಜೊತೆ "ಕಲ್ಪನಾ-2'ನಲ್ಲಿ ನಟಿಸಿದ್ದರು. ಅನೂಪ್‌ ಭಂಡಾರಿಯವರ "ರಾಜರಥ' ಮತ್ತು ಗುರುನಂದನ್‌ ಜೊತೆ ನಟಿಸಿರುವ "ರಾಜು ಕನ್ನಡ ಮೀಡಿಯಂ' ಚಿತ್ರಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ. ಮಂಗಳೂರು ಮೂಲದ ಇವರು ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಹಿಂದಿ ಕಿರುತೆರೆಯಲ್ಲಿ, ಜಾಹೀರಾತುಗಳಲ್ಲಿ ನಟಿಸಿದ ಅನುಭವ ಇದೆ. ಕಿರುತೆರೆ ವೀಕ್ಷಕರಿಗೆ ಪರಿಚಿತ ಮುಖ ಇವರದು. "ನಟನೆಯೇ ನನ್ನ ದೇವರು' ಎನ್ನುವಷ್ಟರ ಮಟ್ಟಿಗೆ ಇವರಿಗೆ ನಟನಾ ಕ್ಷೇತ್ರದ ಬಗ್ಗೆ ಒಲವು...

ಮುಂಬೈ ಅಥವಾ ಬೆಂಗಳೂರು. ಎರಡರಲ್ಲಿ ನಿಮಗೆ ಯಾವ ಸಿಟಿ ಇಷ್ಟ? 
ಮೂಲ ಯಾವುದೇ ಇರಲಿ, ನಮ್ಮ ಬೇರು ಎಲ್ಲೇ ಇರಲಿ, ನಾವು ಹುಟ್ಟಿ ಬೆಳೆದ ಊರಿನ ಜೊತೆಗೆ ನಮಗೆ ಹೆಚ್ಚೇ ಅಟ್ಯಾಚ್‌ಮೆಂಟ್‌ ಇರುತ್ತದೆ. ಇನ್ನೂ ಹೇಳಬೇಕೆಂದರೆ ನಾವು ಬೆಳೆದ ಊರು ನಮಗೆ ಕೊಡುವಷ್ಟು ಸುರಕ್ಷಾ ಭಾವವನ್ನು ಬೇರಾವುದೇ ಊರು ಕೂಡ ಕೊಡುವುದಿಲ್ಲ. ಮುಂಬೈನಲ್ಲಿ ನಾನು ಎಲ್ಲಿ ಬೇಕೆಂದರಲ್ಲಿ ಅಡ್ಡಾಡುತ್ತೀನಿ. ಎಲ್ಲೇ ಹೋದರೂ ಮನೆಗೆ ಕ್ಷೇಮವಾಗಿ ವಾಪಸಾಗುತ್ತೇನೆ ಎಂಬ ಧೈರ್ಯ ಇರುತ್ತದೆ. ಯಾಕಂದ್ರೆ, ಅಲ್ಲಿಯ ಜನ-ಜೀವನ ನನಗೆ ಪರಿಚಿತ. ಅಲ್ಲಿಯ ಜನರ ಜೊತೆ ಹೇಗೆ ವ್ಯವಹರಿಸಬೇಕು ಅಂತ ನನಗೆ ಗೊತ್ತು. ಆದರೆ ಬೆಂಗಳೂರಿನಲ್ಲಿ ನನಗೆ ಅಷ್ಟು ಕಂಫ‌ರ್ಟ್‌ ಇಲ್ಲ. ಇಲ್ಲಿ ಎಲ್ಲದಕ್ಕೂ ನಾನು ಯಾರನ್ನಾದರೂ ಅವಲಂಬಿಸುತ್ತೇನೆ. 

ಶೂಟಿಂಗ್‌ಗೋಸ್ಕರ ಬೆಂಗಳೂರಿಗೆ ಬಂದಾಗ ಮುಂಬೈನ ಎಷ್ಟು ಮಿಸ್‌ ಮಾಡ್ಕೊàತೀರಾ?
ಮುಂಬೈನ ನನ್ನ ಮನೆಯನ್ನು ತುಂಬಾ ಮಿಸ್‌ ಮಾಡ್ಕೊàತೀನಿ. ಮನೆಯಲ್ಲಿದ್ದಾಗ ಅಪ್ಪ ಅಮ್ಮನ ಪ್ರೀತಿಯ ಬೆಲೆ ನಮಗೆ ಗೊತ್ತಿರುವುದಿಲ್ಲ. ಹೊರಬಂದಾಗಲೇ ಅದರ ಬೆಲೆ ಗೊತ್ತಾಗುವುದು. ಅಮ್ಮನ ಕೈ ಅಡುಗೆಯನ್ನು ಎಲ್ಲದಕ್ಕಿಂತ ಹೆಚ್ಚು ಮಿಸ್‌ ಮಾಡ್ಕೊàತೀನಿ. ಮಂಗಳೂರು ಶೈಲಿಯ ಆಹಾರ ಬೆಂಗಳೂರಿನಲ್ಲೂ ಸಿಗುತ್ತದೆ. ಆದರೆ, ಅದು ನನ್ನ ಅಮ್ಮ ಮಾಡುವಷ್ಟು ರುಚಿಯಾಗಿ ಇರಲ್ಲ.

"ರಂಗಿತರಂಗ'ಕ್ಕೂ ಮುನ್ನ ನಿಮಗೆ ಕನ್ನಡ ಬರುತ್ತಿತ್ತಾ? ಕನ್ನಡ ಮತ್ತು ಕರ್ನಾಟಕದ ಜೊತೆಗಿನ ನಿಮ್ಮ ನಂಟಿನ ಬಗ್ಗೆ ಹೇಳಿ.
ನಾನು ಹುಟ್ಟಿದ್ದು  ಮಂಗಳೂರಿನಲ್ಲಿ. ಮನೆಯಲ್ಲಿ ತುಳುವನ್ನೇ ಮಾತಾಡೋದು. ಅಜ್ಜಿ ಮನೆಗೆ ಬಂದಾಗ ಆಗಾಗ ಕನ್ನಡವೂ ಕಿವಿ ಮೇಲೆ ಬೀಳ್ತಾ ಇತ್ತು. ಆದರೆ, ನಾನು ಮಾತಾಡುವ ಪ್ರಯತ್ನ ಮಾಡಿರಲಿಲ್ಲ. ಅನೂಪ್‌ ಭಂಡಾರಿ "ರಂಗಿತರಂಗ'ದ ಸ್ಕ್ರಿಪ್ಟ್ ಕೊಟ್ಟರು. ಆಗ ಕನ್ನಡ ಕಲಿಯಲೇಬೇಕಾಯ್ತು. ನನ್ನ ಅಪ್ಪ, ಅಮ್ಮನಿಗೆ ಕನ್ನಡ ಬರುತ್ತದೆ. ಅವರು ನನಗೆ ಕನ್ನಡ ಹೇಳಿಕೊಟ್ಟರು. ನಾನು ಭಾಷೆ ಕಲಿತು ಡೈಲಾಗ್‌ ಒಪ್ಪಿಸಲು ಆರಂಭಿಸಿದಾಗ, ಎಲ್ಲರೂ ನಕ್ಕು ಬಿಟ್ಟಿದ್ದರು. ಯಾಕಂದ್ರೆ ನನ್ನ ಅಪ್ಪ ಅಮ್ಮ ನನಗೆ ಮಂಗಳೂರು ಕನ್ನಡ ಕಲಿಸಿದ್ದರು. ಆದರೆ ಚಿತ್ರದಲ್ಲಿ ನಾನು ಬೆಂಗಳೂರು ಕನ್ನಡ ಮಾತಾಡಬೇಕಿತ್ತು. ಆಮೇಲೆ ಅನೂಪ್‌ ನನ್ನ ಕನ್ನಡ ಟೀಚರ್‌ ಆದರು.

ಚಿತ್ರರಂಗಕ್ಕೆ "ಬೈ ಚಾನ್ಸ್‌' ಬಂದೆ ಎಂದು ಹೇಳುವವರು ತುಂಬಾ ಮಂದಿ ಇದ್ದಾರೆ. ನೀವೂ ಅದೇ ಪೈಕಿನಾ? 
ನಾನು ಬಯಸಿ ಬಯಸಿ ಈ ಕ್ಷೇತ್ರಕ್ಕೆ ಬಂದಿರುವವಳು. ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಕಷ್ಟಪಟ್ಟಿದ್ದೇನೆ. ಸಾಕಷ್ಟು ಶ್ರಮ ವಹಿಸಿದ್ದೇನೆ. ನನಗೆ "ಬೈ ಆ್ಯಕ್ಸಿಡೆಂಟ್‌' ಸಿನಿಮಾಗೆ ಬಂದೆ ಅಂತ ಹೇಳುವವರನ್ನು ಕಂಡರೆ ಕೋಪ ಬರುತ್ತದೆ. ಚಿತ್ರರಂಗ ಪ್ರವೇಶ, ನಟನೆ ಯಾವುದೂ ಸುಲಭವಲ್ಲ. ನಾನು ಸ್ಟುಡಿಯೋಗಳ ಮುಂದೆ ಆಡಿಷನ್‌ಗಾಗಿ ಇಡೀ ದಿನ ನಿಂತಿದ್ದೇನೆ. ನನ್ನ ಜೊತೆ ನೂರಾರು ಹುಡುಗಿಯರು ನಿಂತಿರುವುದನ್ನು ನೋಡಿದ್ದೇನೆ. ಎಷ್ಟೋ ಜನರು ಎಷ್ಟೇ ಪ್ರಯತ್ನಿಸಿದರೂ ಅವಕಾಶ ಸಿಗದೇ ಕಂಗಾಲಾಗುವುದನ್ನೂ ನೋಡಿದ್ದೇನೆ. ಹೀಗಿರುವಾಗ "ಬೈ ಚಾನ್ಸ್‌ ಇಂಡಸ್ಟ್ರಿಗೆ ಬಂದೆ' ಎಂದು ಹೇಳಿದರೆ ಕಷ್ಟಪಟ್ಟು ಬಂದವರಿಗೆ ಅವಮಾನ ಮಾಡಿದಂತಲ್ಲವೇ? 

ಮೊದಲ ಚಿತ್ರವಾಗಿ ಕನ್ನಡವನ್ನೇ ಆಯ್ದುಕೊಂಡಿದ್ದು ಏಕೆ?
ನನಗೆ ನನ್ನ ಮೊದಲ ಚಿತ್ರ ಕನ್ನಡವೇ ಆಗಬೇಕೆಂಬ ಕನಸಿತ್ತು. ನಮ್ಮ ಜನ, ನಮ್ಮ ರಾಜ್ಯದಲ್ಲಿ ನಾವು ಏನಾದರೂ ಸಾಧಿಸಿದರೆ ಅದಕ್ಕೆ ಹೆಚ್ಚು ಬೆಲೆ. "ರಂಗಿತರಂಗ'ಕ್ಕೂ ಮೊದಲು ಒಂದೆರಡು ನಿರ್ಮಾಪಕರನ್ನು ಭೇಟಿಯಾಗಿದ್ದೆ. ಆದರೆ, ಅವ್ಯಾವುದೂ ಕೈಗೂಡಲಿಲ್ಲ. ಆಗಿದ್ದೆಲ್ಲಾ ಒಳ್ಳೆಯದಕ್ಕೇ, "ರಂಗಿತರಂಗ'ದಂಥ ಒಳ್ಳೆಯ ಚಿತ್ರದಿಂದ ನಾನು ಲಾಂಚ್‌ ಆದೆ. ಅನೂಪ್‌ ಭಂಡಾರಿ ನನಗೆ ಚಿತ್ರರಂಗದಲ್ಲಿ ಲೈಫ್ ನೀಡಿದ ನಿರ್ದೇಶಕ.

ಇದಕ್ಕೂ ಮೊದಲು ಏನು ಮಾಡ್ತಾ ಇದ್ರಿ?
ನಾನು ಮಾಸ್‌ ಕಮ್ಯುನಿಕೇಷನ್‌ ಡಿಗ್ರಿ ಮುಗಿಸಿ ಪ್ರೊಡಕ್ಷನ್‌ ಹೌಸ್‌ ಒಂದರಲ್ಲಿ ಇಂಟರ್ನ್ಶಿಪ್‌ ಮಾಡಿದೆ. ಇದೇ ಕ್ಷೇತ್ರವನ್ನು ಆಯ್ದುಕೊಂಡಿದ್ದು ನಟನೆ ಮೇಲಿನ ಪ್ರೀತಿಯಿಂದಲೇ. ಮುಂದೆ ಎಲ್ಲಾದರೂ ಅವಕಾಶ ಗಿಟ್ಟಿಸಿಕೊಳ್ಳವ ಆಸೆ ಇತ್ತು. ಬಳಿಕ ರೇಡಿಯೊ, ಆ್ಯಡ್‌ ಏಜನ್ಸಿಯಲ್ಲೂ ಕೆಲಸ ಮಾಡಿದ್ದೇನೆ. ನಟ ವಿವೇಕ್‌ ಒಬೆರಾಯ್‌ರ ಆ್ಯಡ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆಫೀಸ್‌ಗೆ ರಜಾ ಹಾಕಿ ಆಡಿಷನ್ಸ್‌ಗೆ ಹೋಗುತ್ತಿದ್ದೆ. ಅವರ ಅಣ್ಣನಿಗೆ ಈ ವಿಷಯ ತಿಳಿಯಿತು. ಅವರು ಕೆಲಸಕ್ಕೆ ರಾಜೀನಾಮೆ ನೀಡಿ, ನಟಿಯಾಗುವ ಕಡೆಗೆ ಸಂಪೂರ್ಣ ಗಮನ ಕೊಡು ಎಂದು ಹೇಳಿದರು. ಅವರ ಮಾತಿನಂತೆ ಕೆಲಸ ಬಿಟ್ಟೆ. ಧಾರಾವಾಹಿ, ಜಾಹೀರಾತುಗಳಲ್ಲಿ ಅವಕಾಶಗಳು ಸಿಕ್ಕವು. 

ಮುಂಬೈನ ತುಂಬಾ ಮಿಸ್‌ ಮಾಡ್ಕೊಳ್ಳೋದು ಯಾವಾಗ? 
ಚಾಟ್ಸ್‌ ತಿನ್ನುವಾಗ. ಮುಂಬೈನಲ್ಲಿ ಸಿಗುವ ಚಾಟ್ಸ್‌ ಪಕ್ಕಾ ಉತ್ತರ ಭಾರತೀಯ ಚಾಟ್ಸ್‌. ಅದನ್ನು ತಿಂದು ಅಭ್ಯಾಸವಾದ ನಾಲಿಗೆಗೆ ಬೆಂಗಳೂರಿನ ಚಾಟ್ಸ್‌ ಅಷ್ಟಾಗಿ ರುಚಿ ಕೊಡುವುದಿಲ್ಲ.

ಹಾಗಾದರೆ ನಿಮಗೆ ಬೆಂಗಳೂರಿನ ಆಹಾರ ಒಗ್ಗಿಲ್ಲ ಅಂತ ಆಯ್ತು?
ನಾನೆಲ್ಲಿ ಹಾಗೆ ಹೇಳಿದೆ? ಕರ್ನಾಟಕ ಶೈಲಿಯಷ್ಟು ರುಚಿಯಾದ ಮತ್ತು ಆರೋಗ್ಯಕರ ಆಹಾರ ಬೇರೆ ಇಲ್ಲ. ನಾನು ರಾಗಿ ಮುದ್ದೆಯನ್ನು ಯಾವತ್ತೂ ನೋಡಿಯೂ ಇರಲಿಲ್ಲ. ಈಗ ರಾಗಿ ಮುದ್ದೆ ನನ್ನ ಫೇವರಿಟ್‌. ಜೊತೆಗೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ , ಥರಹೇವಾರಿ ಚಟ್ನಿಪುಡಿಗಳೂ ನನಗೆ ಇಷ್ಟ. ಇವೆಲ್ಲಾ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ಬೇರೆ ಡಯಟ್ಟೇ ಬೇಡ. ಮತ್ತೂಂದು ವಿಷ್ಯಾ ಗೊತ್ತಾ? ಮೊದಲ ಬಾರಿ ನನ್ನೆದುರು ಮುದ್ದೆ ತಂದಿಟ್ಟಾಗ ಹೇಗೆ ತಿನ್ನುವುದು ಎಂದು ತಿಳಿಯದೇ ಸ್ಪೂನು, ಫೋರ್ಕ್‌ ಬಳಸಿ ತಿನ್ನಲು ಶುರು ಮಾಡಿದ್ದೆ!  

 ಮುಂಚೆ ಕನ್ನಡ ಚಿತ್ರಗಳನ್ನು ನೋಡ್ತಾ ಇದ್ರಾ?
 ಮನೆಯಲ್ಲಿ ರಾಜ್‌ಕುಮಾರ್‌, ವಿಷ್ಣುವರ್ಧನ್‌ ಚಿತ್ರಗಳನ್ನು ನೋಡ್ತಾ ಇದ್ರು. ನಾನೂ ಅವರ ಜೊತೆ ಕೂತು ನೋಡ್ತಾ ಇದ್ದೆ. ಹಳೆಯ ಕ್ನನಡ ಚಿತ್ರಗಳನ್ನು ತುಂಬಾ ನೋಡಿದ್ದೇನೆ. "ಕರುಳಿನ ಕರೆ' ಚಿತ್ರ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದು ಇನ್ನೂ ನೆನಪಿದೆ. ಹೊಸ ಚಿತ್ರಗಳಲ್ಲಿ "ಮುಂಗಾರು ಮಳೆ', "ಆಪ್ತಮಿತ್ರ' ಇಷ್ಟ. ನನಗೆ ಬಾಲಿವುಡ್‌ ಚಿತ್ರಗಳಿಗಿಂತ ದಕ್ಷಿಣ ಭಾರತೀಯ ಚಿತ್ರಗಳೇ ಇಷ್ಟ. ಇವುಗಳಲ್ಲಿ ಭಾವನೆಗಳು ಢಾಳಾಗಿ ಇರುತ್ತವೆ. ನನಗೆ ಭಾವನಾತ್ಮಕವಾದ ಚಿತ್ರಗಳೇ ಹೆಚ್ಚು ಇಷ್ಟ. 

ನಿಮ್ಮ ಪ್ರಕಾರ ಈಗಿನ ನಟಿಯರಲ್ಲಿ ಯಾರು ಬೆಸ್ಟ್‌?
ರಾಧಿಕಾ ಪಂಡಿತ್‌. ನಾನು ನೋಡಿದ ನಟಿಯರಲ್ಲಿ ಅವರೇ ಬೆಸ್ಟ್‌. ಅವರಷ್ಟು ಸಹಜವಾಗಿ ನಟಿಸುವವರು ಬಹಳ ಕಡಿಮೆ. ಶೃತಿ ಹರಿಹರನ್‌, ಶ್ರದ್ಧಾ ಶ್ರೀನಾಥ್‌ ಕೂಡ ಬೆಸ್ಟ್‌ . 

ಯಾವ ನಟರ ಜೊತೆ ನಟಿಸುವ ಆಸೆ ಇದೆ?
ಗಣೇಶ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಜೊತೆ ನಟಿಸಲು ತುಂಬಾ ಆಸೆ ಇದೆ. ಅವರು ಸ್ಟಾರ್ ಎನ್ನುವ ಕಾರಣಕ್ಕಲ್ಲ, ಅವರು ತುಂಬಾ ಒಳ್ಳೆಯ ವ್ಯಕ್ತಿಗಳು ಎಂದು ನಾನು ಕೇಳಿರುವುದರಿಂದ. ಯಶ್‌ ನಿಜಕ್ಕೂ ರಾಕಿಂಗ್‌ ಸ್ಟಾರ್‌. ಅವರ ಜೊತೆಯೂ ನಟಿಸಬೇಕು. ಉಪೇಂದ್ರ ಜೊತೆ ಮತ್ತೂಮ್ಮೆ ನಟಿಸುವ ಅವಕಾಶ ಸಿಕ್ಕರೆ ನಾನು ಧನ್ಯೆ. 

ಕುಟುಂಬದಲ್ಲಿ ನಿಮಗೆ ತುಂಬಾ ಫೇವರಿಟ್‌ ಯಾರು?
ನನ್ನ ಅಜ್ಜ, ಅಜ್ಜಿ. ಅವರಷ್ಟು ನಮ್ಮನ್ನು ಪ್ರೀತಿಸುವವರು ಯಾರೂ ಇಲ್ಲ. ನೀವು ಅವರಿಗೆ ಸ್ವಲ್ಪ ಪ್ರೀತಿ ತೋರಿಸಿದರೂ ಅವರು ಮಗುವಿನಂತಾಗುತ್ತಾರೆ. ನನ್ನ ಅದೃಷ್ಟ. ನಾನು ನನ್ನ ಇಬ್ಬರು ಅಜ್ಜಿ ಮತ್ತು ಅಜ್ಜಂದಿರ ಜೊತೆ ಸಾಕಷ್ಟು ಸಮಯ ಕಳೆದಿದ್ದೇನೆ. ಅವರಿಗೆ ಅನಾರೋಗ್ಯವಾದಾಗ ಅವರ ಆರೈಕೆ ಮಾಡಿದ್ದೇನೆ.

ಬಿಡುವಿನ ವೇಳೆ ಏನು ಮಾಡ್ತೀರಿ?
ನಾನು ಭರತನಾಟ್ಯ ಕಲಾವಿದೆ. ವಿಶಾರದೆ ಮುಗಿಸಿದ್ದೀನಿ. ಬಿಡುವಿದ್ದಾಗ ಅಭ್ಯಾಸ ಮಾಡುತ್ತೇನೆ. ಈಗ ಕರಾಟೆ ಕಲಿಯುತ್ತಿದ್ದೇನೆ. ಸೆಲ್ಫ್ ಡಿಫೆನ್ಸ್‌ಗೆಂದೇ ಅದನ್ನು ಕಲಿಯುತ್ತಿರುವುದಾದರೂ, ಅದರಿಂದ ಫಿಟ್‌ನೆಸ್‌ ಕೂಡ ವೃದ್ಧಿ ಆಗುತ್ತಿದೆ.

ಇನ್ನು 10 ವರ್ಷಗಳ ಬಳಿಕ ನೀವು ಏನಾಗಬೇಕೆಂದು ಬಯಸುತ್ತೀರಿ?
10 ವರ್ಷಗಳ ಬಳಿಕ ಅಲ್ಲ. ಸಾಯುವವರೆಗೂ ನಾನು ನಟಿಯಾಗಿಯೇ ಇರುತ್ತೇನೆ. ಇನ್ನೂ ಉತ್ತಮ ನಟಿ ಆಗಲು ಬಯಸುತ್ತೇನೆ.  

ಉಪೇಂದ್ರ ಅವರ ಸಿಂಪ್ಲಿಸಿಟಿ ಇಷ್ಟ ಆಯ್ತು...
"ಕಲ್ಪನಾ-2' ಚಿತ್ರೀಕರಣದ ವೇಳೆ ಹೀಗೊಂದು ಘಟನೆ ನಡೆದಿತ್ತು. ಹಳ್ಳಿಯೊಂದರಲ್ಲಿ  ಶೂಟಿಂಗ್‌ ಇತ್ತು. ನನಗೆ ಬಟ್ಟೆ ಬದಲಿಸಲು ಜಾಗವೇ ಇರಲಿಲ್ಲ. ಉಪೇಂದ್ರ ಅವರ ವ್ಯಾನಿಟಿ ವ್ಯಾನ್‌ ಇತ್ತು. ಅದರಲ್ಲಿ ಡ್ರೆಸ್‌ ಅಪ್‌ ಆಗಲು ಅವಕಾಶ ಕೊಡಿ ಅಂತ ನಾನು ಉಪೇಂದ್ರ ಅವರಿಗೆ ಕೇಳಿಕೊಂಡೆ. ಅವರು ಕೂಡಲೇ ಒಪ್ಪಿದರು. ನಾನು ಡ್ರೆಸ್‌ ಬದಲಾಯಿಸಿ, ಮೇಕಪ್‌ ಮುಗಿಸಿ ಹೊರಬರಲು 1 ಗಂಟೆ ತೆಗೆದುಕೊಂಡೆ. ಅಷ್ಟು ಹೊತ್ತೂ ಉಪೇಂದ್ರ ಹೊರಗೇ ಕೂತು ಕಾಲ ಕಳೆದಿದ್ದರು. ಮರುದಿನ ನಾನು ಅವರಿಗೆ "ನೀವು ಅಷ್ಟು ದೊಡ್ಡ ನಟ. ಆದರೂ ನಾನು ಮೇಕಪ್‌ ಮುಗಿಸಿ ಬರುವವರೆಗೆ ತಾಳ್ಮೆಯಿಂದ ಕಾದಿದ್ದೀರಿ' ಎಂದೆ. ಅವರು "ನೀವು ಒಳ್ಳೆಯವರು. ಅದಕ್ಕೇ ನಿಮಗೆ ನನ್ನಲ್ಲಿ ಒಳ್ಳೆಯತನ ಕಂಡಿದೆ' ಎಂದರು. ಅವರೊಟ್ಟಿಗೆ ಇಂಥ ಸಾಕಷ್ಟು ಅನುಭವಗಳು "ಕಲ್ಪನಾ-2' ಸಿನಿಮಾ ಸಮಯದಲ್ಲಿ ನನಗೆ ಆಗಿವೆ. 

"ಫೋಟೊ ತೆಕ್ಕೊಡಿ ಮೇಡಂ' ಅಂತ ಕೇಳ್ತಾರೆ!
ನನ್ನ 2 ಸಿನಿಮಾಗಳು ತೆರೆಕಂಡಿವೆ. ಇನ್ನೆರಡು ಬಿಡುಗಡೆಗೆ ಸಿದ್ಧವಾಗಿವೆ. ಆದರೆ, ನಾನೆಲ್ಲಿ ಹೋದರೂ ಜನ ನನ್ನನ್ನು ಗುರುತು ಹಿಡಿದು ಮಾತಾಡಿಸಲ್ಲ. ಬಹುತೇಕ ನಟಿಯರು ಹೊರಗಡೆ ಹೋದರೆ ಜನರು ಗುರುತು ಹಿಡಿದು ಮಾತಾಸ್ತಾರೆ. ಆದರೆ, ನನ್ನ ವಿಷಯದಲ್ಲಿ ಅಂಥವೆಲ್ಲಾ ನಡೆದೇ ಇಲ್ಲ. ನಾನು ತೆರೆಯ ಮೇಲೆ ಕಾಣುವುದಕ್ಕೂ ಹೊರಗೆ ಕಾಣುವುದಕ್ಕೂ ಹೋಲಿಕೆಯೇ ಇಲ್ಲ. ಇನ್ನೊಂದು ತಮಾಷೆ ಎಂದರೆ, ರಂಗಿತರಂಗ ಪ್ರಮೋಷನ್ಸ್‌ಗೆ ಹೋದಾಗ ಅನೂಪ್‌, ನಿರೂಪ್‌, ರಾಧಿಕಾ ಜೊತೆ ನಾನಿದ್ದರೂ ಜನ ನನನ್ನು ಗುರುತು ಹಿಡಿಯುತ್ತಿರಲಿಲ್ಲ. "ಮೇಡಂ, ಒಂದು ಫೋಟೊ ತೆಗೆದುಕೊಡ್ತೀರಾ' ಎಂದು ಫೋನನ್ನು ನನ್ನ ಕೈಗೇ ಕೊಟ್ಟು ಅವರೆಲ್ಲರ ಪಕ್ಕ ನಿಂತು ಪೋಸ್‌ ಕೊಡ್ತಾ ಇದ್ರು!

 ಎಕ್ಸ್‌ಪೋಸ್‌ ಆಗಲಾರೆ...
ಮುಂದೆಯೂ ಮಾಡ್‌ ಆಗಿ ಕಾಣಿಸಿಕೊಳ್ಳುತ್ತೇನೆ. ಆದರೆ, ಎಕ್ಸ್‌ಪೋಸ್‌ ಮಾಡುವುದಿಲ್ಲ. ನನ್ನ ಯೋಚನೆಗಳು ಮಾಡರ್ನ್ ನಿಜ, ಆದರೆ ಕೆಲವೊಂದು ವಿಚಾರದಲ್ಲಿ ನಾನು ಪಕ್ಕಾ ಭಾರತೀಯ ಹುಡುಗಿ. ನನ್ನ ಮನೆಯವರಿಗೆ ನಾನು ಸಿನಿಮಾಕ್ಕೆ ಬರುವುದೇ ಇಷ್ಟ ಇರಲಿಲ್ಲ. ಆದರೂ ನನಗೆ ಆಸಕ್ತಿ ಇದೆ ಎಂದು ಪ್ರೋತ್ಸಾಹ ನೀಡುತ್ತಿದ್ದಾರೆ. ಹಾಗಾಗಿ ಎಕ್ಸ್‌ಪೋಸ್‌ ಮಾಡಿ ಅವರಿಗೆ ಮುಜುಗರ ಮಾಡಲು ನನಗೆ ಇಷ್ಟ ಇಲ್ಲ. ನಾನು ಮಾಡುವ ಚಿತ್ರಗಳು ನಾನು ನನ್ನ ಕುಟುಂಬದ ಜೊತೆ ಕೂತು ನೋಡುವಂತಿಬೇಕು.

ಚೇತನ ಜೆ.ಕೆ. 

Back to Top