CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಚೆಲುವೆಯ ಚಿಟ್ಟಾಣಿ

ನೀಲ ಗಗನ ತಾರೆ, ನೀರೆಯರನು ಸೆಳೆದ ಪರಿ

ಒಬ್ಬ ನಾಯಕ ಅಥವಾ ತಾರೆ ಭೂಮಿ ಮೇಲಿಂದ ಮರೆಯಾದಾಗ, ನಾಲ್ಕು ಜನರನ್ನು ಪ್ರಭಾವಿಸಿ ಹೋಗಿರುತ್ತಾನೆ. ಅವನ ಸೆಳೆತದಿಂದಲೇ ಹತ್ತಾರು ಮಂದಿ ತಮ್ಮ ಬದುಕಿನಲ್ಲಿ ವಿಶೇಷ ಮೈಲುಗಲ್ಲನ್ನು ರೂಪಿಸಿಕೊಂಡಿರುತ್ತಾರೆ. ಇತ್ತೀಚೆಗಷ್ಟೇ ಕಣ್ಮರೆಯಾದ "ಪದ್ಮಶ್ರೀ' ಚಿಟ್ಟಾಣಿ ರಾಮಚಂದ್ರ ಹೆಗಡೆ ಕೂಡ ನಾಡಿನುದ್ದಗಲ ಅಂಥ ಪ್ರಭಾವವನ್ನು ಬೀರಿದವರು. ದಣಿವರಿಯದೆ ಯಕ್ಷಸೇವೆಗೈದ ಚಿಟ್ಟಾಣಿಯವರು ಒಂದರ್ಥದಲ್ಲಿ ಯಕ್ಷರಂಗದ ಬಾಕ್ಸ್‌ಆಪಿಸಿನ ಹೀರೋ. ಚಿಟ್ಟಾಣಿಯವರನ್ನು ನೋಡುತ್ತಲೇ, ಅವರ ಪಾತ್ರ- ವ್ಯಕ್ತಿತ್ವದಿಂದ ಪ್ರಭಾವಿತರಾಗಿ, ಹಲವರು ಯಕ್ಷಗಾನಕ್ಕೆ ಕಾಲಿಟ್ಟಿದ್ದಾರೆ. ಆ ಪಟ್ಟಿಯನ್ನು ಜಾಲಾಡುತ್ತಾ ಹೋದರೆ, ಅಲ್ಲಿ ಸ್ತ್ರೀ ಕಲಾವಿದರೂ ಕಾಣಿಸುತ್ತಾರೆ. ಅಭಿಮಾನಿನಿಯರೂ ಸಿಗುತ್ತಾರೆ. ಸ್ತ್ರೀಯರು ಯಕ್ಷಗಾನದಲ್ಲಿ ಬಣ್ಣ ಹಚ್ಚಿದಾಗ ಆಕ್ಷೇಪಗಳು ಕೇಳಿಬಂದಾಗ, ಚಿಟ್ಟಾಣಿಯವರು "ಸ್ತ್ರೀ, ವೇಷ ಧರಿಸಿದರೆ ತಪ್ಪೇನು?' ಎಂದು ಪ್ರಶ್ನಿಸಿದ್ದರು. ಚಿಟ್ಟಾಣಿಯವರಿಂದ ಪ್ರಭಾವಿತರಾದ ಕೆಲವು ಸ್ತ್ರೀ ಕಲಾವಿದರು, ಅವರೊಂದಿಗೆ ರಂಗಸ್ಥಳ ಹಂಚಿಕೊಂಡವರು, ಅವರ ಅಭಿಮಾನಿನಿಯರು ಇಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ...

ಹೆಣ್ಣು, ವೇಷ ಹಾಕಿದರೆ ತಪ್ಪೇನು?: „ ಅರ್ಪಿತಾ ಹೆಗ್ಡೆ

"ಭಸ್ಮಾಸುರ' ಪಾತ್ರಧಾರಿ ಚಿಟ್ಟಾಣಿ ಜತೆ "ಮೋಹಿನಿ'ಯಾಗಿ ಅರ್ಪಿತಾ...

ಚೆನ್ನಾಗಿ ನೆನಪಿದೆ. ಅದು 2007ರ ಸಂದರ್ಭ. ನಾನಾಗ ಹೈಸ್ಕೂಲ್‌ ಓದುತ್ತಿದ್ದೆ. ಅವರ ಜತೆ "ಭಸ್ಮಾಸುರ- ಮೋಹಿನಿ' ಪ್ರಸಂಗದಲ್ಲಿ, ಮೋಹಿನಿಯ ಪಾತ್ರ ಮಾಡಿದ್ದೆ. ಮುಖದಲ್ಲಿನ ಬಣ್ಣವನ್ನು ಇನ್ನೂ ತೆಗೆದಿರಲಿಲ್ಲ. ಯಾರೋ ಒಬ್ಬರು ಹಿರಿಯರು ಹುಡುಕಿಕೊಂಡು ಬಂದರು. "ಮೋಹಿನಿಯ ಆ ಪಾತ್ರವನ್ನು ಹುಡುಗ ಮಾಡಿದ್ದಿರಬಹುದೇ?' ಎಂಬ ಅನುಮಾನ ಅವರದ್ದು. ಆಗ ಚಿಟ್ಟಾಣಿಯವರು, "ಆ ಪಾತ್ರ ಮಾಡಿದ್ದು ಹುಡುಗನಲ್ಲ. ನೋಡಿ, ಇದೇ ಮಾಣಿ. ಮೋಹಿನಿ ಪಾತ್ರವನ್ನು ತುಂಬಾ ಚೊಲೋ ಮಾಡುತ್ತೆ' ಎಂದು ನನ್ನತ್ತ ಕೈತೋರಿಸಿದ್ದರು. ನನ್ನ ಬದುಕಿನಲ್ಲಿ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇರೊಂದಿಲ್ಲ. ಚಿಟ್ಟಾಣಿ ಅವರನ್ನು ತುಂಬಾ ಚಿಕ್ಕ ವಯಸ್ಸಿನಿಂದ ನೋಡಿದ್ದೇನೆ. ಶಾಲೆಗೆ ರಜೆ ಬಂತು ಅಂದಕೂಡಲೇ ನಾನು ಅವರ ಮನೆಗೆ ಹೋಗಿ ಕೂರುತ್ತಿದ್ದೆ. ಆಗ ಅವರೊಂದಿಗೆ ನಿತ್ಯ ವಾಕಿಂಗ್‌ಗೆ ಹೋಗುವುದೇ ಒಂದು ಸೊಗಸು. ಅವರು ರೋಚಕವಾಗಿ ಕಥೆಗಳನ್ನು ಹೇಳುತ್ತಿದ್ದರು. ಕಾಲೇಜಿಗೆ ಸೇರಿಕೊಂಡಾಗ ನನಗೆ ಪೆನ್ನು, ನೋಟ್‌ ಬುಕ್ಕುಗಳನ್ನು ಅವರೇ ತೆಗೆದುಕೊಟ್ಟಿದ್ದರು. ಅವರೊಂದಿಗೆ ಅಭಿನಯಿಸಿದ್ದ ಪಾತ್ರಗಳೆಲ್ಲ ಅವಿಸ್ಮರಣೀಯ. ರಂಗಸ್ಥಳದಲ್ಲಿ ಅವರ ಜತೆ ನಿಲ್ಲುವುದೆಂದರೆ, ಅದಕ್ಕಿಂತ ದೊಡ್ಡ ಸಂಭ್ರಮ ಬೇರೊಂದಿಲ್ಲ. ರಂಗದಲ್ಲಿ ಚಿಟ್ಟಾಣಿಯವರು ಭೀಷ್ಮನಾಗಿ, ನಾನು ಅಭಿಮನ್ಯುವಾಗಿ ನಟಿಸಿದ್ದೇನೆ. ಅಭಿಮನ್ಯು ಸೋತಾಗ, ಅವರು ನನ್ನನ್ನು ಎತ್ತಿಕೊಂಡು ತಿರುಗುತ್ತಿದ್ದರು. ನಾನು ಹೆದರಿಕೊಂಡು, "ಅಜ್ಜ, ನನ್ನನ್ನು ಇಳಿಸು' ಎಂದು ಹೇಳುತ್ತಿದ್ದೆ. ಅವರ ಕೈಯಲ್ಲೊಂದು ಬೀಡಿ ಪ್ಯಾಕೆಟ್‌ ಇರಲೇಬೇಕಿತ್ತು. ರಂಗದಲ್ಲಿ ಯಾರನ್ನೂ ಸಣ್ಣವರನ್ನಾಗಿಸುವ ಮನಃಸ್ಥಿತಿ ಅವರಿಗಿರಲಿಲ್ಲ. 

ಚಿಟ್ಟಾಣಿಯವರಿಗೆ ಸಿನಿಮಾ, ಧಾರಾವಾಹಿಗಳೆಂದರೆ ತುಂಬಾ ಇಷ್ಟ. ಬೇರೆ ಯಾವುದೇ ಮಹಿಳೆಯರಿಗಿಂತ, ಧಾರಾವಾಹಿಗಳ ಕತೆಗಳನ್ನು ನೆನಪಿಟ್ಟು ಹೇಳುತ್ತಿದ್ದರು. ಕಣ್ಣಲ್ಲೇ ಭಾವಗಳನ್ನು ಚಿಮ್ಮಿಸುತ್ತಿದ್ದರು ಚಿಟ್ಟಾಣಿ. ಕಾಳಿಂಗ ನಾವಡರ "ನೀಲ ಗಗನದೊಳು...' ಹಾಡಿಗೆ ಅವರಂತೆ ಭಾವ ತುಂಬುವ ಇನ್ನೊಬ್ಬ ಕಲಾವಿದ ಬಹುಶಃ ಸಿಗಲಿಕ್ಕಿಲ್ಲ. ಯಕ್ಷಗಾನದ "ಭಸ್ಮಾಸುರ- ಮೋಹಿನಿ' ಪ್ರಸಂಗಕ್ಕೆ ಅವರದ್ದೇ ಆದ ಟ್ರೇಡ್‌ಮಾರ್ಕ್‌ ತಂದವರೂ ಅವರೇ. "ಹೆಣ್ಮಕ್ಕಳು ವೇಷ ಹಾಕ್ಬಾರ್ಧು' ಎಂಬ ಮಾತು ಬಂದಾಗ, ಅದನ್ನು ಚಿಟ್ಟಾಣಿಯವರು ಒಪ್ಪಲಿಲ್ಲ. "ಕಲೆ ಎಲ್ಲರ ಸ್ವತ್ತು.ನಾನು ಭಸ್ಮಾಸುರ ಮಾಡಿದಾಗ, ನೀನು ಮೋಹಿನಿಯ ಪಾತ್ರ ಮಾಡಬೇಕು' ಎಂದು ನನ್ನ ಬಳಿ ಹೇಳಿದ್ದರು.

ಈಗ್ಲೆ ಹಿಂಗೆ ಕುಣೀತಾರೆ, ಪ್ರಾಯದಲ್ಲಿ ಇನ್ಹೆಂಗೋ?: ಸುಮಾ ವಿ. ಭಟ್‌
ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಯಕ್ಷಗಾನದ ಪ್ರಸಂಗ ಅದು. ಶೃಂಗಾರ ಪಾತ್ರದ ಮೂಲಕ, ಎಲ್ಲರ ಹೃದಯವನ್ನು ಚಿಟ್ಟಾಣಿ ಕದ್ದಿದ್ದರು. "ಈಗಲೇ ಹೀಗೆ ಕುಣಿಯುತ್ತಾರೆ. ಇನ್ನು ವಯಸ್ಸಿರುವಾಗ, ಇನ್ನೆಷ್ಟು ಚೆನ್ನಾಗಿ ಪಾತ್ರ ಮಾಡುತ್ತಿದ್ದರೋ' ಎಂದು ಅಲ್ಲೇ ವೇದಿಕೆ ಮುಂದೆ ಕುಳಿತ ಹೆಂಗಸರು ಮಾತಾಡುತ್ತಿದ್ದರು. ಇದನ್ನು ಕೇಳಿಸಿಕೊಂಡ ನಾನು ಚಿಟ್ಟಾಣಿಯವರ ಬಳಿ ಅವರ ಮಾತುಗಳನ್ನು ಹೇಳಿದೆ. "ಯಾರೇ ಅದು? ನನಗೆ ಪರಿಚಯ ಮಾಡಿಕೊಡೇ' ಎಂದು ಚಟಾಕಿ ಹಾರಿಸಿದ್ದರು. ಬೆಂಗಳೂರಿನಲ್ಲಿ ಯಕ್ಷಗಾನ ಮಾಡಿಸಿದವರು ಕೆಲವೊಮ್ಮೆ ದುಡ್ಡು ಕೊಡುತ್ತಿರಲಿಲ್ಲ. ಇವರು, ಇರಲಿ ಬಿಡು ಎಂದುಕೊಂಡು, ಅವರ ಬಳಿ ಕೇಳುತ್ತಲೂ ಇರಲಿಲ್ಲ.

ಕಿರುತೆರೆ ಮೇಲೆ ರಾಮಾಯಣ, ಮಹಾಭಾರತ- ಏನೇನೋ ಬಂದುಹೋಗಿದೆ. ಆದರೆ, ಇವತ್ತಿಗೂ ಕೌರವ, ಕೀಚಕ, ಭಸ್ಮಾಸುರ ಎಂಬ ಹೆಸರು ಕಿವಿಗೆ ಬಿದ್ದರೆ ಟಿವಿಯಲ್ಲಿ ಮೂಡಿಬಂದಿದ್ದ ಆ ಪಾತ್ರಗಳು ನನ್ನ ನೆನಪಿಗೆ ಬರುವುದಿಲ್ಲ. ನನ್ನ ಕಣ್ಮುಂದೆ ಬರುವುದು ಚಿಟ್ಟಾಣಿ ಒಬ್ಬರೇ! ಅವರ ಯಕ್ಷಗಾನವನ್ನು ನೋಡುತ್ತಲೇ ಬೆಳೆದವಳು ನಾನು. ಈಗ ಚಿತ್ರರಂಗದಲ್ಲಿ ಸಿನಿಮಾ ಗೆದ್ದರೆ, ಆ ಹೀರೋನನ್ನು ಮಾತಾಡಿಸುವುದು ಕಷ್ಟದ ಮಾತಾಗಿರುತ್ತದೆ. ಆದರೆ, ಯಕ್ಷರಂಗಕ್ಕೆ ಚಿಟ್ಟಾಣಿ ಅವರೇ ಬಾಕ್ಸ್‌ ಆಪಿಸ್‌ ಕಲಾವಿದ, ಹೀರೋ. ಅವರು ನಟಿಸಿದ ಪ್ರಸಂಗಗಳೆಲ್ಲ ಸೂಪರ್‌ ಹಿಟ್ಟೇ ಆಗಿವೆ. ಆದರೆ, ಸಿನಿಮಾ ಹೀರೋನಂತೆ ಅವರು ಅಹಂಕಾರದಿಂದ ಇರುತ್ತಿರಲಿಲ್ಲ. ಒಬ್ಬ ಶ್ರೀಸಾಮಾನ್ಯ ಕೂಡ ಅವರನ್ನು ಅತಿಸುಲಭದಲ್ಲಿ ಮಾತಾಡಿಸಬಹುದಿತ್ತು. 

"ಯಕ್ಷಗಾನ ಬಿಟ್ಟರೆ ನನಗೇನೂ ಗೊತ್ತಿಲ್ಲ. ನನಗೆ ಶಂಭು ಹೆಗಡೆಯವರಿಗೆ ಬಂದಂಥ ಮರಣ ಬರಬೇಕು' ಎನ್ನುತ್ತಿದ್ದರು, ಚಿಟ್ಟಾಣಿ. ಆ ರೀತಿ ಆಗದಿದ್ದರೂ, ಬದುಕಿನ ಕೊನೆಯವರೆಗೆ ಬಣ್ಣ ಹಚ್ಚಿದ ಮೇರು ಕಲಾವಿದ ಅವರು. ಸಿನಿಮಾ- ಧಾರಾವಾಹಿಗಳಲ್ಲಿ ರೀಟೇಕ್‌ಗಳಿರುತ್ತವೆ. ಆದರೆ, ಇವರದ್ದು ನೈಜ ಅಭಿನಯ. ಭಸ್ಮಾಸುರ- ಮೋಹಿನಿ ಪ್ರಸಂಗದಲ್ಲಿ "ಕಂಡನಾ ಭಸ್ಮಾಸುರ ಮೋಹಿನಿಯಾ...' ಎಂಬ ಹಾಡಿನ ನರ್ತನವನ್ನು ನೋಡಿದಾಗ ಅವರ ಪಾತ್ರದಲ್ಲಿನ ತಲ್ಲೀನತೆ ನಮ್ಮನ್ನು ಚಕಿತಗೊಳಿಸುತ್ತದೆ. ಗದಾಯುದ್ಧದ ಪ್ರಸಂಗದಲ್ಲಿ ದುರ್ಯೋದನನ ಪಾತ್ರದಲ್ಲಿ ಹೆಣವನ್ನು ಮೆಟ್ಟಿಕೊಂಡು ಸಾಗುವ ಆ ಸನ್ನಿವೇಶವನ್ನು ಅವರಂತೆ ಇನ್ನಾರೂ ಮಾಡಲು ಸಾಧ್ಯವಿಲ್ಲ. 

ಮೋಹಿನಿಯಮ್ಮಾ, ಬನ್ನಿ...: ನಾಗಶ್ರೀ ಜಿ.ಎಸ್‌.

ಚಿಟ್ಟಾಣಿ ಜತೆ ನಾಗಶ್ರೀ ಅಭಿನಯ

ಶಿರಸಿ ಜಾತ್ರೆಯಲ್ಲಿ ಒಮ್ಮೆ ಮಧ್ಯಾಹ್ನ ಯಕ್ಷಗಾನವಿತ್ತು. ಅಲ್ಲಿ ನನ್ನದು ಮೋಹಿನಿಯ ಪಾತ್ರ. ವಾಡಿಕೆಯಂತೆ ಮೋಹಿನಿ ವೇಷ ಹಾಕುವುದು ಕೊನೆಗೆ. 2 ಗಂಟೆಗೆ ಯಕ್ಷಗಾನ ಆರಂಭವಾಗುವುದಿತ್ತು. ನಾನು ಸುಮಾರು ಒಂದು ಮುಕ್ಕಾಲಿಗೆ ಶಿರಸಿಯನ್ನು ತಲುಪಿದ್ದೆ. ಯಕ್ಷಗಾನದ ನಿರ್ದೇಶಕರಿಗೆ (ಭಾಗವತರಿಗೆ) ನಾನು ಸಮಯ ತಪ್ಪಿ ಬಂದಿರುವ ಸಿಟ್ಟು. ಅವರು ಬೈದುಬಿಟ್ಟರೆಂದು ವೇಷ ಹಾಕುವ ಕನ್ನಡಿ ಮುಂದೆ ಕುಳಿತು ಅಳುತ್ತಿದ್ದೆ. ಚಿಟ್ಟಾಣಿಯವರು ಅಲ್ಲಿಗೆ ಬಂದು, "ಎಂಥದೇ' ಎಂದು ಕೇಳಿದರು. ನಾನು ಅಳುತ್ತಲೇ ಇದ್ದೆ. ಆಗ ಅವರು ಇಂಥವನ್ನೆಲ್ಲಾ ತಮಾಷೆಯಾಗಿ ತೆಗೆದುಕೊಳ್ಳಬೇಕೆಂದು ಹೇಳಿದರು. ರಂಗಪ್ರವೇಶ ಮಾಡುವವರೆಗೂ ನನ್ನನ್ನು  ಸಮಾಧಾನಿಸುತ್ತಲೇ ಇದ್ದರು.

ಮೋಹಿನಿಯಕ್ಕಾ...'!, ಚಿಟ್ಟಾಣಿ ಅವರು ನನ್ನನ್ನು ಕರೆಯುತ್ತಿದ್ದುದ್ದೇ ಹೀಗೆ. ಆ ಹೆಸರು ಈಗಲೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ. ಅವರ ಭಾವಾಭಿನಯಗಳು ನನ್ನ ದೃಷ್ಟಿಪಟಲದಲ್ಲಿ ಈಗಲೂ ತೆರೆಯಾಗುತ್ತಿವೆ. ಶಿರಸಿ ಜಾತ್ರೆಯಲ್ಲಿ ಒಂದೇ ರಂಗಸ್ಥಳದಲ್ಲಿ 4-5 ಸಲ "ಭಸ್ಮಾಸುರ- ಮೋಹಿನಿ' ಪ್ರಸಂಗದಲ್ಲಿ ನಾನು ಮೋಹಿನಿಯಾಗಿ ಅವರ ಜೊತೆ ಪಾತ್ರ ಮಾಡಿದ್ದೆ. ಬೆಂಗಳೂರಿನಲ್ಲಿ ಒಂದೆರಡು ಬಾರಿ ಅವರ ಜೊತೆಗೆ ಮೋಹಿನಿ ಪಾತ್ರ ಮಾಡುವ ಅವಕಾಶವೂ ಸಿಕ್ಕಿತ್ತು. "ನಾನು ನಿಮ್ಮಂಥ ದೊಡ್ಡ ಕಲಾವಿದರ ಜೊತೆ ಇಷ್ಟು ದೊಡ್ಡ ವೇದಿಕೆಯಲ್ಲಿ ಅಭಿನಯಿಸುವುದು ಕಷ್ಟ' ಎಂದು ಹಿಂಜರಿದಿದ್ದೆ. ಆಗ ಅವರು, "ಹಾಗೆಲ್ಲ ಅಂದುಕೊಂಡರೆ ಯಕ್ಷಗಾನ ರುಚಿಕಟ್ಟಾಗುವುದಿಲ್ಲ. ಕಲಾವಿದರಲ್ಲಿ ದೊಡ್ಡವರು, ಚಿಕ್ಕವರೆಂಬ ಬೇಧ ಇರಬಾರದು. ನಟಿಸು, ಏನೂ ಆಗುವುದಿಲ್ಲ' ಎಂದು ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಅವರದ್ದು ದುಷ್ಟಬುದ್ಧಿಯ ಪಾತ್ರ. ನನ್ನದು ವಿಷಯೆ. ಅಪ್ಪ- ಮಗಳ ಸನ್ನಿವೇಶ. ನಾನು "ಅಪ್ಪಯ್ನಾ...' ಎಂದು ಕರೆದಾಗ ಅವರು ಪ್ರೀತಿಯಿಂದ "ಮಗಳೇ...' ಎನ್ನುವುದು, ಎಲ್ಲರನ್ನೂ ಆಕರ್ಷಿಸಿತ್ತು.

ಇನ್ನೊಂದು ಪ್ರಸಂಗದಲ್ಲಿ ಅವರು ರಾಮನ ಪಾತ್ರ ಮಾಡಿದರೆ, ನಾನು ಕುಶನ ಪಾತ್ರದಲ್ಲಿ ಅಭಿನಯಿಸುತ್ತಿದ್ದೆ. ಆಗ ನನಗೆ ಸಾಕ್ಷಾತ್‌ ರಾಮನನ್ನೇ ನೋಡಿದಂತೆ ಭಾಸವಾಗುತ್ತಿತ್ತು. ಪ್ರತೀ ಪಾತ್ರಕ್ಕೂ ಅವರು ನೀಡುವ ಭಾವಾಭಿನಯ ಅದ್ಭುತವಾಗಿರುತ್ತಿತ್ತು.

ಸಾಗರದಲ್ಲಿ ನಡೆದ "ಕಲ್ಲುಮನೆ ಗಣಪತಿ ಭಟ್‌' ಶ್ರದ್ಧಾಂಜಲಿ ಸಭೆಯಲ್ಲಿ ನಡೆದ ಯಕ್ಷಗಾನದಲ್ಲಿ ನಾನು ಕುಶನ ಪಾತ್ರ ನಿರ್ವಹಿಸುತ್ತಿದ್ದೆ. ಚಿಟ್ಟಾಣಿಯವರು ಅಲ್ಲಿಗೆ ಅತಿಥಿಯಾಗಿ ಆಗಮಿಸಿದ್ದರು. ನಾನು ಕುಶನ ವೇಷ ಹಾಕುತ್ತಿರುವಾಗ ಅಲ್ಲಿಗೆ ಬಂದು, "ನನಗೆ ಬೇಗ ಹೋಗ್ಬೇಕಾಗಿತ್ತು. ಇಲ್ಲದಿದ್ದರೆ ರಾಮನ ಪಾತ್ರವನ್ನು ನಾನೇ ಮಾಡ್ತಿದ್ದೆ. ಆದರೆ, ನಾನು ಪಯಣಿಸುವಾಗ ಆ ರಾಮನ ಪಾತ್ರವೇ ನನ್ನನ್ನು ಕಾಡುತ್ತಿರುತ್ತದೆ' ಎಂದಿದ್ದರು. ಯಾವುದೇ ಕಾರ್ಯಕ್ರಮಕ್ಕೆ ಅವರು ಅತಿಥಿಯಾಗಿ ಹೋಗಿದ್ದಾಗ ನಾನು ಕೂಡ ಕಾರ್ಯಕ್ರಮಕ್ಕೆ ಹೋಗಿದ್ದರೆ, ನನ್ನನ್ನು "ಮೋಹಿನಿಯಮ್ಮಾ, ಬನ್ನಿ...' ಎಂದು ಕರೆದು ಟೀ ತರಿಸಿ ಕೊಡುತ್ತಿದ್ದರು. ಅವರಿಂದ ನಾನು ಪಾತ್ರದಿಂದ
ಪಾತ್ರಕ್ಕೆ ಮುಖದ ಭಾವಾಭಿನಯದ ಬದಲಾವಣೆಯನ್ನು ತುಂಬಾ ಕಲಿತುಕೊಂಡಿದ್ದೇನೆ.

ಚಿಟ್ಟಾಣಿಯವರಿಗೆ ಪದ್ಮಶ್ರೀ ಬಂದ ಸಂದರ್ಭ. "ಅಜ್ಜಾ, ಪದ್ಮಶ್ರೀ ಬಂತಲ್ಲ..?' ಎಂದಾಗೆಲ್ಲಾ, "ಏ ಅದರಲ್ಲೆಂತಿದೆ' ಅನ್ನುತ್ತಿದ್ದರು. ಪ್ರಶಸ್ತಿ ದೊರಕಿತೆಂಬ ಕಿಂಚಿತ್‌ ಅಹಂಕಾರವೂ ಅವರಿಗಿರಲಿಲ್ಲ. ಚಿಟ್ಟಾಣಿಯವರ "ರಂಗಸ್ಥಳದ 600 ಅನುಭವ ಕಾರ್ಯಕ್ರಮ'ದಲ್ಲಿ "ಕೃಷ್ಣ ಸಂಧಾನ' ಪ್ರಸಂಗವಿತ್ತು. ಅದರಲ್ಲಿ ಅವರು ಕೃಷ್ಣನ ಪಾತ್ರ ಮಾಡಿದ್ದರು. ನಾನು ರಾಜನರ್ತಕಿ. ಅಷ್ಟು ವಯಸ್ಸಾಗಿದ್ದರೂ ಅವರು ಕೃಷ್ಣನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಸಾಕ್ಷಾತ್‌ ಕೃಷ್ಣನೇ ನನ್ನ ಕಣ್ಮುಂದೆ ಇದ್ದಾನೆಂಬಂತೆ ಅವರ ಅಭಿನಯ ನನ್ನ ಕಂಗಳನ್ನು ಮೋಸಗೊಳಿಸಿತ್ತು. „

ಭಸ್ಮಾಸುರ ನನ್ನನ್ನು ಎಬ್ಬಿಸುತ್ತಿದ್ದ!: ಮಯೂರಿ ಉಪಾಧ್ಯಾಯ

ಮಯೂರಿ ಅವರ ಅಭಿನಯ

ಆಗ ನಾನು ಚಿಕ್ಕವಳು. ಹತ್ತಿರದಲ್ಲಿ ಎಲ್ಲೇ ಚಂಡೆಯ ಶಬ್ದ ಕೇಳಿದರೂ, ಅಜ್ಜಿ ನನ್ನನ್ನು ಆ ಯಕ್ಷಗಾನ ನಡೆಯುವ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು. ಯಕ್ಷಗಾನ ನಡೆಯುವಾಗ ನಮಗೆ ಜೋರು ನಿದ್ರೆ. ಚಿಟ್ಟಾಣಿಯವರ ಭಸ್ಮಾಸುರ - ಮೋಹಿನಿ ಪ್ರಸಂಗವಾದರೆ, ಭಸ್ಮಾಸುರ ಪಾತ್ರ ಬರುವಾಗ ಅಜ್ಜಿಗೆ ಎಚ್ಚರಿಸಲು ಹೇಳುತ್ತಿದ್ದೆ. ಆದರೆ, ಭಸ್ಮಾಸುರ ಬರುವಾಗ ಅಜ್ಜಿಗೆ ಎಚ್ಚರಿಸುವ ಅಗತ್ಯ ಬೀಳುತ್ತಿರಲಿಲ್ಲ. ಭಸ್ಮಾಸುರನ ಪ್ರವೇಶ, ಆರ್ಭಟಕ್ಕೆ ಎಚ್ಚರವಾಗುತ್ತಿತ್ತು. ಚಿಟ್ಟಾಣಿಯವರ ಪಾತ್ರದ ಅಬ್ಬರ ಹಾಗಿರುತ್ತಿತ್ತು. ಈಗ ಅವರಷ್ಟು ಸಮರ್ಥವಾಗಿ "ಭಸ್ಮಾಸುರ'ನ ಪಾತ್ರ ಮಾಡುವವರು ಯಾರೂ ಇಲ್ಲ. 

ಚಿಕ್ಕಂದಿನಿಂದಲೂ ಅವರ ಯಕ್ಷಗಾನ ನೋಡುತ್ತಿದ್ದೆ. ಭಸ್ಮಾಸುರ, ದುಷ್ಟಬುದ್ಧಿಯಂಥ ಖಳ ಪಾತ್ರಗಳನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದೆ. ಮಾಡಿದರೆ ಆ ರೀತಿಯ ಪಾತ್ರಗಳನ್ನೇ ಮಾಡಬೇಕು ಅನ್ನಿಸುತ್ತಿತ್ತು. ಕಳೆದ ವರ್ಷ ಕಡತೋಕ ಮಂಜುನಾಥ ಭಾಗವತರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಚಿಟ್ಟಾಣಿಯವರ ಕೈಯಿಂದಲೇ ಸನ್ಮಾನ ಪಡೆದುಕೊಂಡಿದ್ದೆ. ಅವರ ಪಾತ್ರಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ.

ಚಿಟ್ಟಾಣಿಯವರು ತಮ್ಮ ಕೊನೆಯ ದಿನದವರೆಗೂ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ಚಲನಚಿತ್ರಗಳನ್ನು ನೋಡಿ ಕಲಾವಿದರ ಮುಖಭಾವ, ತನ್ಮಯತೆಯನ್ನು ಮೆಚ್ಚುತ್ತಿದ್ದರು. ಯಕ್ಷಗಾನದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರು. ಭಸ್ಮಾಸುರ, ಕಂಸ, ದುಷ್ಟಬುದ್ಧಿ ಈ ಎಲ್ಲ ಖಳ ಪಾತ್ರಗಳನ್ನು ಮಾಡಲು "ನ ಭೂತೋ ನ ಭವಿಷ್ಯತಿ' ಎಂಬ ಕಲಾವಿದರು ಅವರು. ಅಂಥ ಪಾತ್ರ ಪೋಷಣೆ, ಪಾತ್ರಕ್ಕೆ ಇಳಿಯುವ ಕಲೆ ಅವರಲ್ಲಿತ್ತು. ಎಂಥವರೇ ಮೋಹಿನಿಯ ಪಾತ್ರ ಮಾಡಿದರೂ ಭಸ್ಮಾಸುರನನ್ನು ನೋಡಿ ಹೆದರಿ ಓಡುವಂಥ ರೀತಿಯಲ್ಲಿ ಪಾತ್ರ ಪೋಷಣೆ ಮಾಡುತ್ತಿದ್ದರು.

ನಿರೂಪಣೆ: ಅನುರಾಧಾ ತೆಳ್ಳಾರ್‌
ಚಿತ್ರ: ಷಣ್ಮುಖ

Back to Top