CONNECT WITH US  

ತ್ರಿಪುರ ಸುಂದರಿ! ಅರ್ಚನಾ ಜೋಯಿಸ್‌ ಅಂತರಂಗ

ಝೀ ಕನ್ನಡದಲ್ಲಿ ಪ್ರಸಾರವಾದ "ಮಹಾದೇವಿ' ಧಾರಾವಾಹಿಯ ತ್ರಿಪುರ ಸುಂದರಿ ಪಾತ್ರಧಾರಿ ನಿಮಗೆ ನೆನಪಿರಬೇಕಲ್ಲ. ದೇವರಿಗೆ ಸದಾ ಬಯ್ಯುತ್ತಿದ್ದರೂ ಮುದ್ದಾಗಿ ಕಾಣುತ್ತಿದ್ದ ಆ ಹುಡುಗಿಯೇ ಅರ್ಚನಾ ಜೋಯಿಸ್‌. ಅರ್ಚನಾ ಮೂಲತಃ ಭರತನಾಟ್ಯ ಕಲಾವಿದೆ. ಮನೆಯವರಿಗೆ ಹೇಳದೇ ಆಡಿಷನ್‌ನಲ್ಲಿ ಭಾಗವಹಿಸಿ "ಮಹಾದೇವಿ' ಧಾರಾವಾಹಿಯಲ್ಲಿ ಪಾತ್ರ ಗಿಟ್ಟಿಸಿಕೊಂಡಿದ್ದರು. ಬಳಿಕ "ಸುವರ್ಣ ವಾಹಿನಿ'ಯಲ್ಲಿ ಪ್ರಸಾರವಾದ "ದುರ್ಗಾ' ಧಾರಾವಾಹಿಯಲ್ಲೂ ಮುಖ್ಯಪಾತ್ರ ನಿರ್ವಹಿಸಿದ್ದರು. ಸದ್ಯ ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ "ನೀಲಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿಯಾಗಿ ಬ್ಯುಸಿ ಇರುವುದಕ್ಕಿಂತ, ಗೃಹಿಣಿಯಾಗಿ ಬ್ಯುಸಿಯಾಗಿರುವುದರಲ್ಲೇ ನನಗೆ ಹೆಚ್ಚು ತೃಪ್ತಿ ಎನ್ನುವ ಅರ್ಚನಾಗೆ ಭರತನಾಟ್ಯದಲ್ಲಿ ಮಹತ್ತರ ಸಾಧನೆ ಮಾಡುವ ಗುರಿ ಇದೆಯಂತೆ... 
 
ಅತ್ತೆ ಮಗನ ಮದುವೆಯಲ್ಲಿ ನನ್ನ ಹುಡುಗ ಸಿಕ್ಕ! 
ನಮ್ಮದು ಖಂಡಿತಾ ಲವ್‌ ಮ್ಯಾರೇಜ್‌. ನನ್ನ ಗಂಡ ಶ್ರೇಯಸ್‌ ಉಡುಪ ಅಂತ. ನನ್ನ ಗಂಡನ ಪರಿಚಯವಾಗಿದ್ದು, ನನ್ನ ಅತ್ತೆ ಮಗನ ಮದ್ವೆಯಲ್ಲಿ. ಪರಿಚಯವಾದಾಗಲೇ ಇಬ್ಬರ ಮಧ್ಯೆಯೂ ಆಕರ್ಷಣೆ ಶುರುವಾಯಿತು. ಅದಾದ ಬಳಿಕ 1 ವರ್ಷ ಸ್ನೇಹಿತರಾಗಿದ್ದೆವು. ಬಳಿಕ ಅವರೇ ಮೊದಲು ಪ್ರಪೋಸ್‌ ಮಾಡಿದರು. ನನ್ನ ಮನಸ್ಸಿನಲ್ಲೂ ಅದೇ ಇತ್ತು. ಬೇರೇನೂ ಯೋಚಿಸಿದೇ "ಎಸ್‌' ಅಂದೆ. ಈಗ ಮದುವೆಯಾಗಿ ಸರಿಯಾಗಿ ಒಂದೂವರೆ ವರ್ಷ ಆಗಿದೆ.
 
ನಾನು ಅಪ್ಪಟ ಗೃಹಿಣಿ!
ನಾನು ತುಂಬಾ ಹೆಮ್ಮೆಯಿಂದ ನನ್ನ ಬಗ್ಗೆ ಹೇಳ್ಳೋ ವಿಷಯ ಏನು ಗೊತ್ತಾ? ನಾನು ಪ್ರತಿದಿನ ಬೆಳಗ್ಗೆ ತಿಂಡಿ ತಯಾರಿಸಿ, ಮಧ್ಯಾಹ್ನಕ್ಕೆ ಅಡುಗೆ ತಯಾರಿಸಿ, ಗಂಡನಿಗೆ ಊಟದ ಡಬ್ಬಿ ರೆಡಿ ಮಾಡಿಕೊಡ್ತೀನಿ. ಅಷ್ಟೇ ಅಲ್ಲ, ಕೇವಲ 2 ಗಂಟೆಯೊಳಗೆ, ಮನೆ ಕಸಗುಡಿಸಿ, ಒರೆಸಿ, ರಂಗೋಲಿ ಹಾಕಿ, ಪೂಜೆ ಮಾಡಿ, ಅಡುಗೆ ತಯಾರಿಸಿ, ನಾನೂ ಶೂಟಿಂಗ್‌ಗೆ ಹೊರಡುತ್ತೇನೆ. ಬೆಳಗ್ಗೆ ಎದ್ದು ಯೋಗಾಭ್ಯಾಸ ಮಾಡುವುದು ಕೂಡ ನನ್ನ ನಿತ್ಯದ ಚಟುವಟಿಕೆಯಲ್ಲಿ ಸೇರಿದೆ. ಅಷ್ಟರ ಮಟ್ಟಿಗೆ ನಾನು ಅಪ್ಪಟ ಗೃಹಿಣಿ. 

- ನೃತ್ಯದ ಜೊತೆ ನಿಮ್ಮ ನಂಟಿನ ಬಗ್ಗೆ ಹೇಳಿ? 
12 ವರ್ಷಗಳಿಂದ ಭರತನಾಟ್ಯ ಕಲಿಯುತ್ತಾ ಇದ್ದೇನೆ. ಡಾ. ಮಾಯಾ ರಾವ್‌ ಅವರ "ಕಥಕ್‌ ಆ್ಯಂಡ್‌ ಕೊರಿಯೊಗ್ರಫಿ' ಸಂಸ್ಥೆಯಲ್ಲಿ ನೃತ್ಯ ಸಂಯೋಜನೆಗೆ ಸಂಬಂಧಿಸಿದ ಪದವಿ ಪಡೆದಿದ್ದೇನೆ. ಈ ಪದವಿ ಅಭ್ಯಸಿಸುತ್ತಾ ಕಥಕ್‌ ಮತ್ತಿತರ ನೃತ್ಯಗಳ ಬೇಸಿಕ್‌ ಕಲಿತಿದ್ದೇನೆ. ಈಗ ತಮಿಳುನಾಡಿನ ಶಾಸ್ತ್ರ ವಿಶ್ವವಿದ್ಯಾನಿಲಯದಲ್ಲಿ ಭರತನಾಟ್ಯದಲ್ಲಿ ಸ್ನಾತ್ತಕೋತ್ತರ ಪದವಿ ವ್ಯಾಸಂಗ ಮಾಡ್ತಾ ಇದ್ದೇನೆ. ಜನವರಿಯಲ್ಲಿ ಪರೀಕ್ಷೆ ಇದೆ. ಅದಕ್ಕಾಗಿ ತಯಾರಿ ನಡೆಸುತ್ತಿದ್ದೇನೆ. 
 
 - ಡ್ಯಾನ್ಸ್‌ ಮತ್ತು ನಟನೆ. ನಿಮ್ಮ ಆದ್ಯತೆ ಯಾವ ಕ್ಷೇತ್ರಕ್ಕೆ?
ಡ್ಯಾನ್ಸ್‌ಗೆ ನನ್ನ ಪ್ರಥಮ ಆದ್ಯತೆ. ಡ್ಯಾನ್ಸ್‌ನಲ್ಲಿ ತುಂಬಾ ಸಾಧನೆ ಮಾಡಬೇಕು ಎನ್ನುವುದು ನನ್ನ ಗುರಿ. ಅದಕ್ಕಾಗಿ ಸಮಯ ಕೊಡಲೆಂದೇ ಎಷ್ಟೋ ಧಾರಾವಾಹಿ ಅವಕಾಶಗಳನ್ನು ಕೈಬಿಟ್ಟೆ. ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದ ಮೇಲೆ ನೃತ್ಯ ಪ್ರದರ್ಶನಗಳನ್ನು ನೀಡುವುದು ಕಡಿಮೆಯಾಗಿದೆ. ಈ ಬಗ್ಗೆ ಬೇಸರವೂ ಇದೆ. ನಟನೆಯಿಂದ ಸ್ವಲ್ಪ ಬಿಡುವು ಮಾಡಿಕೊಂಡು ವೇದಿಕೆ ಮೇಲೆ ಪ್ರದರ್ಶನ ನೀಡುವುದನ್ನು ಹೆಚ್ಚು ಮಾಡಬೇಕು ಎಂಬ ಯೋಜನೆ ಕೂಡ ಇದೆ. 
 
 - "ಮಹಾದೇವಿ', "ದುರ್ಗಾ' ಎರಡೂ ಚಿತ್ರಗಳೂ ಭಕ್ತಿಪ್ರಧಾನ ಚಿತ್ರಗಳೇ ಆದವು. "ನೀಲಿ'ಯಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?
ಭಕ್ತಿ ಪ್ರಧಾನ ಧಾರಾವಾಹಿಗಳೆಂದೇ ನಾನು ಆ ಎರಡೂ ಧಾರಾವಾಹಿಗಳನ್ನು ಒಪ್ಪಿಕೊಂಡಿದ್ದು. ಮಹಾದೇವಿಯ "ಸುಂದರಿ' ಪಾತ್ರವಂತೂ ಬಹಳಾನೇ ವಿಭಿನ್ನವಾಗಿತ್ತು. "ಮಹಾದೇವಿ'ಯಲ್ಲಿ ನಾನು 100 ಕಂತುಗಳಲ್ಲಿ ಇದ್ದೇನೆ, "ದುರ್ಗಾ' 500ಕ್ಕೂ ಹೆಚ್ಚು ಎಪಿಸೋಡ್‌ ಪ್ರಸಾರವಾಯಿತು. ಆದರೆ, ಒಂದು ಬೇಸರದ ಸಂಗತಿಯೇನೆಂದರೆ ನನ್ನನ್ನು ಸಾಮಾನ್ಯ ಉಡುಪಿನಲ್ಲಿ ನೋಡುವವರಿಗೆ ನನ್ನ ಗುರುತೇ ಸಿಗುವುದಿಲ್ಲ. "ನೀಲಿ' ಧಾರಾವಾಹಿಯಲ್ಲಿ ನಾನು ನಾಗರಾಣಿ ಪಾತ್ರ ಮಾಡುತ್ತಿದ್ದೇನೆ. ನಾನು ಮತ್ತು ನಾಗರಾಜ ಭೂಲೋಕಕ್ಕೆ ಬರುತ್ತೇವೆ. ಸಾನ್ವಿಗೂ ನಮಗೂ ಸಂಬಂಧ ಇರುತ್ತದೆ. ನೀಲಿಯಲ್ಲೂ ನನ್ನದು ಸಾಮಾನ್ಯ ಹೆಣ್ಣಿನ ಪಾತ್ರವಲ್ಲ. 
 
 - ನಿಮಗೆ ತುಂಬಾ ಕೋಪ ಬರುವುದು ಯಾವಾಗ? 
ಮದುವೆಯಾದ ಮೇಲೆ ಸಂಜೆ ತುಂಬಾ ಹೊತ್ತು ಶೂಟ್‌ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ. ಸೆಟ್‌ನಲ್ಲೂ ಮೊದಲೇ ಹೇಳಿರುತ್ತೇನೆ. ಆದರೂ ಇನ್ನು ಸ್ವಲ್ಪ ಹೊತ್ತು ಇರಿ, ಇನ್ನೊಂದು ಸೀನ್‌ ಶೂಟ್‌ ಮಾಡಿ ಎಂದು ಪೀಡಿಸುತ್ತಾರೆ. ಆಗ ಕೋಪ ಬರುತ್ತದೆ. 
 
 - ನೃತ್ಯಗಾತಿಗೆ ನಟನೆ ಮೇಲೆ ಆಸಕ್ತಿ ಬಂದಿದ್ದು ಹೇಗೆ?
ನಟನೆ ಮೇಲಿನ ಆಸಕ್ತಿಯಿಂದ ಈ ಕ್ಷೇತ್ರ ಆಯ್ದುಕೊಳ್ಳಲಿಲ್ಲ. ಅದೊಂಥರಾ ಭ್ರಮೆ. ಎಲ್ಲರಂತೆ ನನಗೂ ಈ ಬಣ್ಣದ ಬದುಕು ಆಕರ್ಷಣೀಯವಾಗಿ ಕಾಣುತ್ತಿತ್ತು. ತೆರೆ ಮೇಲೆ ಕಾಣಿಸಿಕೊಳ್ಳಬೇಕು, ಮೇಕಪ್‌ ಹಾಕಿಸಿಕೊಳ್ಳಬೇಕು, ಕ್ಯಾಮೆರಾ ಎದುರು ನಿಲ್ಲಬೇಕು ಎಂದೆಲ್ಲಾ ಆಸೆಯಿತ್ತು. ಅವಕಾಶ ಸಿಕ್ಕಾಗ ಖುಷಿಯಿಂದ ಒಪ್ಪಿಕೊಂಡೆ. ಈಗ ಇದೆಲ್ಲಾ ಇಷ್ಟೇನಾ ಅಂತನ್ನಿಸುತ್ತೆ. ಕಲಾವಿದರೂ ಕಷ್ಟ ಪಟ್ಟು ಹಗಲಿಡೀ ದುಡಿಯಲೇಬೇಕು. ಯಾವುದೂ ಸುಲಭಕ್ಕೆ ಸಿಗುವುದಿಲ್ಲ.
 
- ಈ ಕ್ಷೇತ್ರಕ್ಕೆ ಬಂದು ನೀವು ಕಲಿತಿದ್ದು ಏನು?
ಧಾರಾವಾಹಿಯಲ್ಲಿ ನಟಿಸಿದವರಿಗೆ ಇಡೀ ಪ್ರಪಂಚದಲ್ಲಿ ಯಾರೊಡನೆಯಾದರೂ ವ್ಯವಹರಿಸುವುದು ಸುಲಭ. ಮನೆಯಲ್ಲಿ ನಮ್ಮದೇ ಆಪ್ತ ಬಳಗದ ಜೊತೆ ಇರಿ¤àವಿ, ಯಾರೊಡನೆಯೂ ಸಂಬಂಧಗಳನ್ನು ನಿಭಾಯಿಸುವ ಅಗತ್ಯಗಳು ಇರುವುದಿಲ್ಲ. ಆದರೆ, ಇಲ್ಲಿ ಹಾಗಲ್ಲ. ನಾವು ಎಲ್ಲರೊಡನೆ ಬಹಳ ಜಾಣ್ಮೆಯಿಂದ ವ್ಯವಹರಿಸಬೇಕು. ಜನ ಬಳಕೆ ಇಲ್ಲಿ ಹೆಚ್ಚಾಗಿ ಆಗುತ್ತದೆ. ಎಲ್ಲಾ ರೀತಿಯ ಜನರ ಜೊತೆ ಬೆರೆಯುವುದರಿಂದ ಎಂಥ ಕಷ್ಟಕರ ಸನ್ನಿವೇಶವನ್ನಾದರೂ ಎದುರಿಸುವುದು ಸುಲಭವಾಗುತ್ತದೆ. 
 
 - ಧಾರಾವಾಹಿಗಳಲ್ಲಿ ಇಡೀ ದಿನ ಕೆಲಸ ಇರುತ್ತೆ ಅಂದ್ರಿ. ಕೆಲಸದ ಮಧ್ಯೆ ಮನೆಗೆ ಸಮಯ ಕೊಡಲು ಕಷ್ಟವಾಗುವುದಿಲ್ಲವಾ? 
ನಾನು ಧಾರಾವಾಹಿಗಳನ್ನು ಒಪ್ಪಿಕೊಳ್ಳುವ ಮೊದಲೇ, ಸಂಜೆ 6.30 ಮೇಲೆ ಶೂಟಿಂಗ್‌ ಮಾಡಲ್ಲ. ಶನಿವಾರ ಮತ್ತು ಭಾನುವಾರ ಶೂಟಿಂಗ್‌ ಮಾಡಲ್ಲ ಅಂತ ಅಗ್ರಿಮೆಂಟ್‌ ಮಾಡಿಕೊಂಡಿರುತ್ತೇನೆ. ಅದೂ ಅಲ್ಲದೇ ನಾನು ಡ್ಯಾನ್ಸ್‌ ಕ್ಲಾಸಿಗೂ ಶನಿವಾರ, ಭಾನುವಾರವೇ ಹೋಗುವುದು. ಜೊತೆಗೆ ಅಭ್ಯಾಸ ಕೂಡ ಮಾಡಬೇಕು. ಕೆಲಸದಿಂದ ಎಷ್ಟೇ ಬಿಡುವು ಪಡೆದರೂ ಸಮಯ ನಿರ್ವಹಣೆ ನನಗೆ ಬಹಳ ಕಷ್ಟ. 
 
 - ಕೆಲ ಹುಡುಗಿಯರು ಮದುವೆ ಅದ ಮೇಲೆಯೇ ಮನೆಗೆಲಸ ಮಾಡುವುದಂತೆ. ನೀವೂ ಹಾಗೇನಾ?
ನಾನು ಕೂಡ ಅದೇ ವರ್ಗಕ್ಕೆ ಸೇರಿದವಳು. ಮದುವೆಗೂ ಮುಂಚೆ ಅನ್ನ, ತಿಳಿಸಾರು ಬಿಟ್ರೆ ಬೇರೇನೂ ಮಾಡಿರಲಿಲ್ಲ. ಎಲ್ಲಾ ಮದುವೆಯಾದ ಮೇಲೆಯೇ ಕಲಿತಿದ್ದು. ಮೊದಮೊದಲು ಅಡುಗೆ ಮಾಡಿ ಶೂಟಿಂಗ್‌ಗೆ ಹೊರಡಲು ಕಷ್ಟವಾಗುತ್ತಿತ್ತು. ಎಷ್ಟೋ ಬಾರಿ ಶೂಟಿಂಗ್‌ನಿಂದ ಬಂದು ಹಾಗೇ ಮಲಗಿ ಬಿಡ್ತಿದ್ದೆ. ಈಗ ಇಷ್ಟೊಂದು ಚಟುವಟಿಕೆಯಿಂದ ಅಡುಗೆ ಕೆಲಸ ಮಾಡುವುದನ್ನು ನೋಡಿ ನಮ್ಮಮ್ಮ ತುಂಬಾ ಆಶ್ಚರ್ಯಪಡ್ತಾರೆ.  

- ತವರು ಮನೆಯನ್ನು ಮಿಸ್‌ ಮಾಡ್ಕೊàತೀರಾ?
ಈಗೀಗ ಅಷ್ಟಾಗಿ ಮಿಸ್‌ ಮಾಡ್ಕೊಳಲ್ಲ. ಮದುವೆಯಾದ ಹೊಸತರಲ್ಲಂತೂ ನನ್ನ ಅವಸ್ಥೆ ಯಾರಿಗೂ ಬೇಡ. ಬೆಳಗ್ಗೆ ಏಳುತ್ತಿದ್ದಂತೆ, ಅಮ್ಮ ಇವತ್ತು ಏನು ತಿಂಡಿ ಮಾಡಿರಬಹುದು ಅಂತ ಯೋಚಿಸುತ್ತಿದ್ದೆ. ತಕ್ಷಣ, ಓಹೋ ನಾನು ಅಮ್ಮನ ಮನೆಯಲ್ಲಿಲ್ಲ. ಇಲ್ಲಿ ನಾನೇ ತಿಂಡಿ ತಯಾರಿಸಬೇಕು ಅಂತ ನೆನಪಾಗ್ತಿತ್ತು. ಅಮ್ಮ ಇದ್ದಿದ್ರೆ ಬಟ್ಟೆ ಒಗೆದು ಮಡಚಿ ಕೊಡ್ತಿದ್ರು, ಕಾಫಿ ಮಾಡಿಕೊಡ್ತಿದ್ರು... ಹೀಗೆ ನಿಮಿಷ ನಿಮಿಷಕ್ಕೂ ಅಮ್ಮನ ಮನೆಯ ಕಂಫ‌ರ್ಟ್ಸ್ಗಳು ನೆನಪಾಗಿ ಬೇಜಾರಾಗ್ತಿತ್ತು. ಅಮ್ಮ ಮಾಡೊ ಅನ್ನ-ರಸಂ ನೆನೆಸಿಕೊಂಡ್ರಂತೂ ಅಳೂನೆ ಬರ್ತಾ ಇತ್ತು. ಮನೆ ಬಿಟ್ಟು ಬೇರೆ ಯಾರಧ್ದೋ ಮನೆಗೆ ಬಂದು ಇದ್ದೀನಿ ಅನ್ನೋ ಥರಾ ಅನ್ನಿಸ್ತಿತ್ತು. 
 
- ಅರ್ಚನಾ ಬ್ಯೂಟಿ ಮಂತ್ರ ಏನು? 
ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಚರ್ಮ ಕೂಡ ಆರೋಗ್ಯಕರವಾಗಿ ಕಾಣುತ್ತದೆ. ಜೊತೆಗೆ ಸಾಕಷ್ಟು ನೀರು ಕುಡಿಯಬೇಕು. ನೀರು ಕಡಿಯಲು ನೆನಪಾಗಲಿಲ್ಲವಾದರೆ ಮೊಬೈಲ್‌ನಲ್ಲಿ ರಿಮೈಂಡರ್‌ ಇಟ್ಕೊಂಡಾದರೂ ನೀರು ಕುಡಿಯಿರಿ. ಹೊತ್ತಿಗೆ ಸರಿಯಾಗಿ ಶುಚಿಯಾದ, ಆರೋಗ್ಯಕರವಾದ ಊಟ ಮಾಡಿ. ಸದ್ಯ ನಾನು ಬೆಳಗ್ಗೆ 7ರ ಒಳಗೆ ತಿಂಡಿ, ಮಧ್ಯಾಹ್ನ 12.30 ಒಳಗೆ ಊಟ, ರಾತ್ರಿ 7.30 ಒಳಗೆ ರಾತ್ರಿ ಊಟ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇನೆ. ಸಾಧ್ಯವಾದಷ್ಟೂ ಈ ಕ್ರಮವನ್ನು ಅನುಸರಿಸುತ್ತಿದ್ದೇನೆ.
 
- ನಿಮ್ಮ ಡಯಟ್‌ ಹೇಗಿರುತ್ತದೆ?
ನಾನು ತುಂಬಾ ಪ್ಲಾನ್‌ ಮಾಡಿ ಡಯಟ್‌ ಮಾಡಲ್ಲ. ಮನೆಯಲ್ಲಿ ಮಾಡುವ ಎಲ್ಲಾ ಅಡುಗೆಯನ್ನೂ ತಿನ್ನುತ್ತೀನಿ. ಅನ್ನದ ಪದಾರ್ಥಗಳೇ ಹೆಚ್ಚಾಗಿ ತಿನ್ನುತ್ತೇನೆ. ಜೊತೆಗೆ ಬೆಳಗ್ಗೆ ಎದ್ದ ಕೂಡಲೇ 1 ಚೊಂಬು ನೀರು ಕುಡಿಯುತ್ತೇನೆ. ನಂತರ ಹಾಲಿಗೆ ರಾಗಿ ಮಾಲ್ಟ್ ಬೆರೆಸಿ ಕುಡಿಯುತ್ತೇನೆ. ಸಂಜೆ 1 ಲೋಟ ಹಾಲು ಕುಡಿಯುತ್ತೇನೆ. ಯೋಗ, ನೃತ್ಯಾಭ್ಯಾಸ ಮಾಡಿ ತಿಂದಿದ್ದನ್ನು ಕರಗಿಸುತ್ತೇನೆ. 
 
- ನಿಮ್ಮ ಪ್ರಕಾರ ಸಂಬಂಧಗಳನ್ನು ಹೇಗೆ ನಿರ್ವಹಿಸಬೇಕು?
ಸಂಬಂಧಗಳನ್ನು ನಿರ್ವಹಿಸುವುದೇ ಬದುಕಿನಲ್ಲಿ ಬಹಳ ಚಾಲೆಂಜಿಂಗ್‌ ವಿಷಯ. ನಾನೀಗ ಕಂಡುಕೊಂಡಿರುವ ಮತ್ತು ಈಗ ಅಭ್ಯಾಸ ಮಾಡಿಕೊಳ್ಳುತ್ತಿರುವ ವಿಷಯವೆಂದರೆ, ಯಾರೊಂದಿಗಾದರೂ ಮನಸ್ತಾಪವಾಗಿದ್ದರೆ ನಾನೇ ಹೋಗಿ ಮೊದಲು ಅವರನ್ನು ಮಾತಾಡಿಸಿಬಿಡುವುದು. ಹೀಗೆ ಮಾಡುವುದರಿಂದ ಪರಿಸ್ಥಿತಿ ಆ ಕ್ಷಣಕ್ಕೇ ತಿಳಿಯಾಗಿ ಬಿಡುತ್ತದೆ. ಇದರಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ. ಕುಟುಂಬದಲ್ಲೂ ಇದೇ ರೀತಿ ನಡೆದುಕೊಳ್ಳವುದು ಒಳ್ಳೆಯದು.
 
- ನಿಮ್ಮ ಇಷ್ಟದ "ಪಾಸ್‌ ಟೈಮ್‌' ಬಗ್ಗೆ ಹೇಳಿ...
ಥಿಯೇಟರ್‌ಗಳಿಗೆ ಹೋಗಿ ಸಿನಿಮಾಗಳನ್ನು ನೋಡೋದು. ಅದರಲ್ಲೂ ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲೇ ನೋಡುವುದು ನನ್ನ ಫೇವರಿಟ್‌ ಪಾಸ್‌ ಟೈಮ್‌. ಕನ್ನಡದ ಬಹುತೇಕ ಸಿನಿಮಾಗಳನ್ನು ನಾನು ಮತ್ತು ಗಂಡ ಥಿಯೇಟರ್‌ಗೆ ಹೋಗಿ ನೋಡ್ತೇವೆ. 
 
- ಯಾರ ಸಿನಿಮಾಗಳನ್ನು ತಪ್ಪದೇ ನೋಡ್ತೀರ?
ನಾನು ಆಮಿರ್‌ ಖಾನ್‌ರ ದೊಡ್ಡ ಅಭಿಮಾನಿ. ಅವರ ಎಲ್ಲಾ ಸಿನಿಮಾಗಳನ್ನು ತಪ್ಪದೇ ನೋಡುತ್ತೇನೆ. ಅದು ಬಿಟ್ಟರೆ ಯಶ್‌, ರಕ್ಷಿತ್‌ ಶೆಟ್ಟಿ ಮತ್ತು ಪ್ರಭಾಸ್‌ ಚಿತ್ರಗಳನ್ನು ಮಿಸ್‌ ಮಾಡದೆ ನೋಡ್ತೇನೆ. ಇತ್ತೀಚೆಗೆ ಯು-ಟರ್ನ್, ಕಿರಿಕ್‌ ಪಾರ್ಟಿ, ಆಪರೇಷನ್‌ ಅಲುಮೇಲಮ್ಮ ಬಹಳಾ ಮಜಾ ಕೊಟ್ಟ ಸಿನಿಮಾಗಳು. ಶ್ರದ್ಧಾ ಶ್ರೀನಾಥ್‌ ಮತ್ತು ಶೃತಿ ಹರಿಹರನ್‌ ಸದ್ಯದ ಫೇವರಿಟ್‌ ನಟಿಯರು. ಕನ್ನಡ ನಟಿಯರು ಯಾರಿಗೂ ಕಡಿಮೆ ಇಲ್ಲ ಎಂದು ಇವರಿಬ್ಬರನ್ನು ನೋಡಿದರೆ ತಿಳಿಯುತ್ತದೆ.

- ಚೇತನ ಜೆ.ಕೆ.

Trending videos

Back to Top