CONNECT WITH US  

ಅಡುಗೆ ಅಧ್ಯಾತ್ಮ

ಎಲ್ಲ ಹೆಣ್ಮಕ್ಕಳೂ ಅಡುಗೆ ಇಷ್ಟಪಡ್ತಾರಾ?

ಮಹಿಳೆಯರಲ್ಲಿ ಎರಡು ಗುಂಪುಗಳು. ಒಬ್ಬರು ಅಡುಗೆಯನ್ನು ಆರಾಧಿಸುತ್ತಾ, ಅದನ್ನು ಪ್ರೀತಿಸುತ್ತಾ, ಹೋದಲ್ಲಿ ಬಂದಲ್ಲಿ ಅದರ ವಿಚಾರವನ್ನೇ ಮಾತಿಗೆ ವಸ್ತು ಮಾಡಿಕೊಳ್ಳುವವರು. ಅದನ್ನೇ ಜೀವನದ ಭಾಗವನ್ನಾಗಿಸಿಕೊಂಡವರು. ಇನ್ನೊಂದು ಗುಂಪು, ಅಡುಗೆಯನ್ನು "ಮಾಡಬೇಕಲ್ಲ' ಎಂಬ ಭಾವದಿಂದ ಸೌಟನ್ನು ಕೈಗೆತ್ತಿಕೊಳ್ಳುವವರು...

ಅದು ನನ್ನ ಹೌಸ್‌ ಸರ್ಜನ್ಸಿ ದಿನಗಳು. ಸಮಯ ಸಿಕ್ಕಾಗಲೆಲ್ಲ ಕಾಲೇಜಿನ ಕ್ಯಾಂಪಸ್‌ನಲ್ಲಿದ್ದ ಪಾಂಡ್‌ ಸುತ್ತ ಕುಳಿತು ಹರಟುತ್ತಿದ್ದೆವು. ಪಾಂಡ್‌ ಎಂದರೆ ಕೆರೆ ಎಂದುಕೊಳ್ಳಬೇಡಿ. ಕೆರೆಗಾಗಿ ಮಾಡಿದ ಜಾಗವೇ. ಆದರೆ, ಕೇವಲ ಕಟ್ಟೆ ಇತ್ತು, ನೀರಿರಲಿಲ್ಲ. ನಾವು ಸ್ನೇಹಿತರೆಲ್ಲಾ ಸುತ್ತ ಕುಳಿತು "ಪಾಂಡ್‌ ಮೀಟಿಂಗ್‌' ನಡೆಸುತ್ತಿದ್ದೆವು. ಆವತ್ತಿನ ಹರಟೆಯ ವಿಷಯ "ಮದುವೆ'. "ನಿಮ್ಮ ಹುಡುಗ/ ಹುಡುಗಿ ಹೇಗಿರಬೇಕು?' ಎಂದು ಒಬ್ಬರನ್ನೊಬ್ಬರು ಕೇಳುತ್ತಾ, ಹಾಸ್ಯ ಮಾಡುತ್ತಿದ್ದೆವು. ಎಲ್ಲರೂ ಒಂದೊಂದು ಬಗೆಯ ಉತ್ತರ ಕೊಡುತ್ತಿದ್ದರು. ಆದರೆ, ಎಲ್ಲ ಹುಡುಗರ ಉತ್ತರವೂ ಸುಮಾರಾಗಿ ಒಂದೇ ರೀತಿ ಇತ್ತು. "ಹುಡುಗಿಗೆ ಚೆನ್ನಾಗಿ ಅಡುಗೆ ಮಾಡಲು ಬರಬೇಕು' ಎಂಬುದೇ ಎಲ್ಲರ ಕಂಡೀಷನ್‌ ಆಗಿತ್ತು. ಅದಕ್ಕೆ ನಮ್ಮ ಗುಂಪಿನಲ್ಲಿದ್ದ ಒಂದು ಹುಡುಗಿ, "ನೀವೆಲ್ಲರೂ ಡಾಕ್ಟರ್‌, ಎಂಜಿನಿಯರ್‌ ಬೇಕೆಂದು ಯಾಕೆ ಹೇಳ್ತೀರಾ? ಅಡುಗೆ ಮಾಡುವುದನ್ನು ಒಂದು ವೃತ್ತಿಯ ಹಾಗೆ ತೆಗೆದುಕೊಂಡವರನ್ನೇ ಮದುವೆಯಾಗಿ ಬಿಡಿ' ಎಂದಿದ್ದಳು. ಎಲ್ಲ ಹುಡುಗರೂ ಪೆಚ್ಚಾಗಿದ್ದರು. ಹುಡುಗಿಯರೆಲ್ಲಾ ಗೊಳ್ಳೆಂದು ನಕ್ಕಿದ್ದೆವು.

   ಈ ಘಟನೆ ನೆನಪಿಗೆ ಬರುವುದಕ್ಕೆ ಕಾರಣ, ಮೊನ್ನೆ ಸಿಕ್ಕ ಮಹಿಳೆ. ಮೂವತ್ತೈದು ವರ್ಷದ ಆಕೆ, ಮೂಲತಃ ಭಾರತದವಳು. ಆದರೆ, ಅಮೆರಿಕದಲ್ಲಿದ್ದವಳು. ಈಗ ಅಧ್ಯಯನದ ಸಲುವಾಗಿ ತಾತ್ಕಾಲಿಕವಾಗಿ ಭಾರತದಲ್ಲಿ ನೆಲೆಸಿದ್ದಾಳೆ. ಹೀಗೇ ಪರಿಚಯವಾದವಳು ಹರಟೆಗೆ ಕುಳಿತಳು. ಆಗ ಅವಳು- "ಮೇಡಂ, ನೋಡಿ ನಾನು ಮನೆಯಲ್ಲಿ ಅಡುಗೆ ಮಾಡ್ತೀನಿ ಅಂದ್ರೆ, ನನ್ನ ಸ್ನೇಹಿತರೆಲ್ಲ ನಗುತ್ತಾರೆ. "ದಿನವೂ ನೀನೇ ಅಡುಗೆ ಮಾಡ್ತೀಯಾ?' ಅಂತ ಅಚ್ಚರಿಪಡ್ತಾರೆ. ಗಂಡನಿಗೆ, ಮಕ್ಕಳಿಗೆ ಅಡುಗೆ ಮಾಡಿ ಬಡಿಸುವುದೆಂದರೆ ನನಗೆ ಖುಷಿ. ನನ್ನ ಫ್ರೆಂಡ್ಸ್‌ ಎಲ್ಲ ತಮ್ಮ ಮಕ್ಕಳಿಗಾದರೂ, ಆಗೊಮ್ಮೆ ಈಗೊಮ್ಮೆ ತಿಂಡಿ ಮಾಡಿಕೊಡುತ್ತಾರೆ. ಗಂಡನಿಗಂತೂ ಏನೂ ಮಾಡುವುದಿಲ್ಲ. ಎಂಥ ಹೆಣ್ಣು ಮಕ್ಕಳು ಇವರು?' ಎಂದಳು. ಆಕೆ ಆ ಕಡೆಯ ವಾಕ್ಯ ಹೇಳಿರದಿದ್ದರೆ, ನಾನೂ ಅವಳ ಮಾತುಗಳನ್ನು ಒಪ್ಪುತ್ತಿದ್ದೆ. ಆದರೆ, "ಎಂಥ ಹೆಣ್ಣುಮಕ್ಕಳು ಇವರು?' ಎಂದು ಉದ್ಗರಿಸಿದ್ದು ನನಗೆ ಬೇಸರ ತರಿಸಿತ್ತು.

   ನನ್ನ ಸ್ನೇಹಿತೆ ಗೀತಾಳ ಅನುಭವವಿದು. ಆಕೆಗೆ ಹೊಸದಾಗಿ ಮದುವೆಯಾಗಿದೆ. ಇಬ್ಬರೂ ಸಾಫ್ಟ್ವೇರ್‌ ಎಂಜಿನಿಯರ್‌ಗಳು. ಅಂದು ಗೀತಾಳ ಮನೆಯಲ್ಲಿ ಗಂಡನ ಸಂಬಂಧಿಕರಿಗೆಲ್ಲಾ, ಅಂದರೆ 10-15 ಜನಕ್ಕೆ ಊಟ ಏರ್ಪಾಡಾಗಿತ್ತು. ಈ ಪ್ಲ್ರಾನ್‌ ಆಕೆಯ ಅತ್ತೆಯದೇ. ಮನೆಯಲ್ಲೇ ಅಡುಗೆ ಸಿದ್ಧವಾಯಿತು. ಸಮಯವಿಲ್ಲದಿದ್ದರೂ, ಅಡುಗೆ ಮಾಡಲು ಇಷ್ಟವಿಲ್ಲದಿದ್ದರೂ, ಒಂದು ಪದಾರ್ಥವನ್ನು ಮಾಡುವ ಜವಾಬ್ದಾರಿ ಅವಳದ್ದು. ಹೋಗಲಿ, ಹೇಗೋ ಅಮ್ಮನನ್ನು ಕೇಳಿ ಮಾಡಿದ್ದಾಯಿತು. ಗೀತಾಳ ಅತ್ತೆ, ಎಲ್ಲರ ಬಳಿ, "ನನ್ನ ಸೊಸೆಯದ್ದೇ ಅಡುಗೆ. ನಾನು ಹೋಟೆಲ್‌ನಿಂದ ತರೋಣ ಎಂದರೂ, ಅವಳೇ ಬೇಡ ಎಂದು ಎಲ್ಲಾ ಪದಾರ್ಥಗಳನ್ನು ಮಾಡಿದಳು' ಎಂದು ಹೇಳಿದ್ದೇ ಹೇಳಿದ್ದು. ಗೀತಾಳನ್ನು ಎಲ್ಲರೂ ಹೊಗಳಿದರು. ಸಂಜೆ ಕುಳಿತು ಗೀತಾ ಯೋಚಿಸಿದಳು- "ಮನೆಯಲ್ಲಿ ಅಡುಗೆ ಮಾಡುವ ಪ್ಲಾನ್‌ ನನ್ನದಲ್ಲ. ಪಲ್ಯ ಒಂದನ್ನು ಬಿಟ್ಟರೆ ಬೇರೇನನ್ನೂ ಮಾಡಲಿಲ್ಲ. ಆದರೂ ಅತ್ತೆ ಹೀಗ್ಯಾಕೆ ಸುಳ್ಳು ಹೇಳಿದರು? ಅತ್ತೆಯ ಮನಸ್ಸಿನಲ್ಲಿ, ಅಲ್ಲಿ ಬಂದಿದ್ದವರ ಕಣ್ಣಲ್ಲಿ, ಅಡುಗೆ ಮಾಡಿ ಬಡಿಸಿದರೆ ಮಾತ್ರ ನನ್ನ ಸ್ಥಾನ ದೊಡ್ಡದೇ? ಎಂಜಿನಿಯರ್‌ ಆಗಿ ಇಷ್ಟು ಒಳ್ಳೆಯ ಹುದ್ದೆಯಲ್ಲಿರುವುದು ಹೆಮ್ಮೆಯ ವಿಷಯವಲ್ಲವೇ..?'

   ಈ ಮೇಲಿನ ಘಟನೆಗಳನ್ನು ನೋಡಿದರೆ, "ಅಡುಗೆ ಎನ್ನುವುದು ಕೇವಲ ಹೆಣ್ಣು ಮಕ್ಕಳ ಕೆಲಸವೇ? ಅಡುಗೆ ಮಾಡಿದರೆ ಮಾತ್ರ ಹೆಣ್ಣಿಗೆ ಗೌರವವೇ? ಪುರುಷನಷ್ಟೇ ಸಮನಾಗಿ ದುಡಿಯುವ ಮಹಿಳೆಗೆ ಇದು ಹೊರೆ ಅಲ್ಲವೇ?' ಎಂಬ ಪ್ರಶ್ನೆಗಳು ಕಾಡುತ್ತವೆ.

   ನನ್ನ ಮನೋವೈದ್ಯಕೀಯ ಮನಸ್ಸು ಸುತ್ತಲಿನ ಪರಿಸರದ ಘಟನೆಗಳನ್ನು, ಜನರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಆಪ್ತಸಮಾಲೋಚನೆಗೆ ಬರುವ ಮಹಿಳೆಯರು, ಅವರ ಕುಟುಂಬದವರನ್ನು ಕೂಲಂಕಷವಾಗಿ ವಿಶ್ಲೇಷಿಸುತ್ತದೆ. ಮಹಿಳೆಯರಲ್ಲಿ ಎರಡು ಗುಂಪುಗಳು. ಮೊದಲನೆಯ ಗುಂಪು, ಅಡುಗೆಯನ್ನು ತಮ್ಮ ಜೀವನದ ಒಂದು ಭಾಗವೇನೋ ಎಂಬಷ್ಟು ಕಾಳಜಿಯಿಂದ/ ಪ್ರೀತಿಯಿಂದ ಮಾಡುತ್ತಾರೆ. ಅವರ ಮಾತಿನಲ್ಲೂ ಕೂಡ, "ತಿಂಡಿ ಏನು? ಅಡುಗೆ ಏನು? ಹೊಸದಾಗಿ ಏನು ಮಾಡಿದೆ? ಡಬ್ಬಿಗೆ ಏನು ಕಳಿಸಿದೆ?'.. ಇದೇ ವಿಷಯ. ಇನ್ನೊಂದು ಗುಂಪಿನವರು ಹಾಗಲ್ಲ, "ಅಡುಗೆ ಮಾಡಬೇಕಲ್ಲಾ' ಅಂತ ಮಾಡುವವರು. ಹರಟೆಯಲ್ಲಿ ಕೂಡ ಸಾಹಿತ್ಯ, ರಾಜಕೀಯ, ಮಕ್ಕಳು, ವೃತ್ತಪತ್ರಿಕೆ ಇತ್ಯಾದಿಗಳ ಬಗ್ಗೆ ಚರ್ಚೆ. ಮೊದಲ ಗುಂಪಿನವರಿಗೆ ಅಡುಗೆಯ ಬಗ್ಗೆ ಎಷ್ಟು ಆಸಕ್ತಿ ಎಂದರೆ, ಎಲ್ಲಿ ಹೋದರೂ ಪಾರ್ಸೆಲ್‌ ಮಾಡಿಕೊಂಡೇ ಹೋಗುತ್ತಾರೆ, ಕಳಿಸುತ್ತಾರೆ. ಈ ಎರಡನೆಯ ಗುಂಪಿನವರು, ಹೋದಲ್ಲಿ ಏನು ಸಿಗುತ್ತೋ ಅದನ್ನು ತಿನ್ನುತ್ತಾರೆ.  

  ನೀವು ಯಾವ ಗುಂಪಿನವರಾದರೂ ತಪ್ಪಿಲ್ಲ. ಇನ್ನೊಂದು ಗುಂಪಿನ ಬಗ್ಗೆ ಗೌರವವಿದ್ದರೆ ಸಾಕು. ಸಂತಸದಿಂದ ಅಡುಗೆ ಮಾಡಿ ಬಡಿಸಿದರೆ ಎಲ್ಲರಿಗೂ ಖುಷಿಯೇ. ಅದು ಹೆಂಗಸಾದರೇನು? ಗಂಡಸಾದರೇನು? ಇನ್ನು, ರುಚಿರುಚಿಯಾದ ಅಡುಗೆಯನ್ನು "ನಳಪಾಕ' ಎನ್ನುವುದು ಎಲ್ಲರಿಗೂ ತಿಳಿದದ್ದೇ. ನಮ್ಮ ಆಲೋಚನೆಗಳನ್ನು/ಸಿದ್ಧಾಂತಗಳನ್ನು ಇನ್ನೊಬ್ಬರ ಮೇಲೆ ಹೇರದಿದ್ದರಾಯಿತು.

   ದಂಪತಿಯೊಬ್ಬರು ತಮ್ಮ ಮಗುವನ್ನು ನನ್ನಲ್ಲಿಗೆ ಚಿಕಿತ್ಸೆಗೆ ಕರೆ ತಂದಿದ್ದರು. ತಾಯಿ ನರ್ಸ್‌ ಆಗಿ ಸರ್ಕಾರಿ ಹುದ್ದೆಯಲ್ಲಿದ್ದಾರೆ. ಗಂಡ ಮನೆಯಲ್ಲೇ ಇದ್ದು ಅಡುಗೆ ಮಾಡುವುದು, ಮಗಳನ್ನು ಶಾಲೆಗೆ ಕಳಿಸುವುದು, ಮನೆಯ ಇತರೆ ಕೆಲಸ ಮಾಡುತ್ತಾರೆ. ನನ್ನ ಸಹಾಯಕಿ ಇದನ್ನೆಲ್ಲಾ ಕೇಳಿ ಹುಬ್ಬು ಹಾರಿಸಿದಳು. ಮತ್ತೆ ಮತ್ತೆ ಗಂಡನಿಗೆ, "ನೀವೇನೂ ಕೆಲಸ ಮಾಡುವುದಿಲ್ಲವೇ? ಎಂದು ಪ್ರಶ್ನಿಸಿದಳು. ನಾನೇ ಅವಳನ್ನು ಸುಮ್ಮನಾಗಿಸಿದೆ. ಗಂಡು- ಹೆಣ್ಣು ಸಮಾನತೆಯ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುತ್ತೇವೆ. ಆದರೆ, ಅದನ್ನು ಆಚಾರಕ್ಕೆ ತರುವುದು, ತಂದಾಗ ಒಪ್ಪುವುದು ಕಷ್ಟವೇ.

   ಇವೆಲ್ಲಾ ನನ್ನ ವೃತ್ತಿ ಜೀವನದ ಅನುಭವಗಳಾದವು. ನನ್ನ ವೈವಾಹಿಕ ಜೀವನದ ಒಂಬತ್ತನೇ ವರ್ಷವಿದು. ಮನೋವೈದ್ಯೆಯಾಗಿ, ಲೇಖಕಿಯಾಗಿ, ಚಿಕ್ಕ ಭರತನಾಟ್ಯ ತರಗತಿಯ ಶಿಕ್ಷಕಿಯಾಗಿ ಸದಾ ಕೆಲಸ- ಕಾರ್ಯಗಳಲ್ಲಿ ನಿರತಳು. ಅದರ ಜೊತೆಗೆ ಮಕ್ಕಳ ವೈದ್ಯರಾದ ಗಂಡ ಮತ್ತು ಇಬ್ಬರು ಪುಟ್ಟ ಮಕ್ಕಳ ಜವಾಬ್ದಾರಿ. ಅಡುಗೆ ಮಾಡುವುದಕ್ಕೆ ನಿಜಕ್ಕೂ ಪುರುಸೊತ್ತಿಲ್ಲ. ಮದುವೆಯ ಹೊಸತರಲ್ಲಿ, ಅಡುಗೆ ಮಾಡೋಕೆ ಸಹಾಯಕಿ ಇದ್ದಾಳೆ ಅಂತ ಹೇಳಲೂ ಸಂಕೋಚಪಡುತ್ತಿದ್ದೆ. ಈಗ ಮನಸ್ಸು ಪ್ರಬುದ್ಧವಾಗಿದೆ. ಅದನ್ನು ಯಾವ ಸಂಕೋಚವಿಲ್ಲದೆ ಒಪ್ಪಿಕೊಳ್ಳುತ್ತೇನೆ. ಅಡುಗೆಗೆ ಬರುವ ಸಹಾಯಕಿ ಹೇಳುವುದೂ ಇದಕ್ಕೆ ಪುಷ್ಟಿ ಕೊಟ್ಟಿದೆ. "ಮೇಡಂ, ನನಗೆ ದುಡ್ಡಿಗೆ ಅಂಥಾ ಸಮಸ್ಯೆಯೇನಿಲ್ಲ. ಅಡುಗೆ ಮಾಡುವುದು ನನಗೆ ಇಷ್ಟ. ನೀವು ನನಗೆ ಏನು ಸಂಬಳ ಕೊಡುತ್ತೀರೋ, ಅದನ್ನು ನಾನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತೇನೆ. ಸ್ವಲ್ಪ ಹಣವನ್ನು ಅವರ ಹೆಸರಲ್ಲಿ ಕೂಡಿಡುತ್ತೇನೆ. ಏನಾದರೂ ಬೇಕೆನಿಸಿದರೆ, ಯಾರಿಗೂ ಕೈಚಾಚದೇ ಸಂಬಳದಲ್ಲಿಯೇ ಕೊಳ್ಳುತ್ತೇನೆ' ಅನ್ನುತ್ತಾಳೆ. ಮಹಿಳಾ ಸಬಲೀಕರಣ ಎಂದರೆ ಇದೇ ಅಲ್ಲವೇ?

ಅಡುಗೆ ಮಾಡುವವರು ಗಂಡಾದರೇನು, ಹೆಣ್ಣಾದರೇನು? ಚೆನ್ನಾಗಿ ಮಾಡಿದರೆ ಎಲ್ಲರಿಗೂ ಖುಷಿಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು.

ಡಾ. ಶುಭ್ರತಾ ವಿಕ್ರಮ್‌, ಮನೋವೈದ್ಯೆ

Trending videos

Back to Top