CONNECT WITH US  

ಕೋಸಂಬರಿ ಕಮಾಲ್‌

ರಾಮನವಮಿಯಲ್ಲಿ ಹೆಸರು ಕಾಳಿನ ಅಥವಾ ಇಡಿಗಡಲೆಯ ಕೋಸಂಬರಿ ಮಾಡುವುದು ಸಹಜ. ಆದರೆ ಈ ಬಾರಿ ವಿಭಿನ್ನವಾಗಿ ಏನಾದರೂ ಮಾಡಬೇಕು ಅಂದುಕೊಂಡವರಿಗಾಗಿ ಕೆಲವು ಸುಲಭದ ಮತ್ತು ರುಚಿಕಟ್ಟಾದ ಕೋಸಂಬರಿ ರೆಸಿಪಿಗಳು ಇಲ್ಲಿವೆ. 

1. ಹುರುಳಿಕಾಯಿ-ಮಿಶ್ರ ಬೇಳೆಗಳ ಕೋಸಂಬರಿ
ಬೇಕಾಗುವ ಸಾಮಗ್ರಿ:
ಕತ್ತರಿಸಿ ಬೇಯಿಸಿದ ಹುರುಳಿಕಾಯಿ (ಬೀನ್ಸ್‌)-1 ಕಪ್‌, ಕಡಲೆಬೇಳೆ-1/2 ಕಪ್‌, ಹೆಸರುಬೇಳೆ-1/2 ಕಪ್‌, ತೆಂಗಿನತುರಿ-1/4 ಕಪ್‌, ಹಸಿಮೆಣಸಿನಕಾು-2-3, ಅರಿಶಿನ-ಚಿಟಿಕೆ, ಶುಂಠಿ-1/2 ಇಂಚು, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-4 ಚಮಚ, ಸಾಸಿವೆ-1/2 ಚಮಚ, ಇಂಗು-1/4 ಚಮಚ. 

ಮಾಡುವ ವಿಧಾನ: ಕಡಲೆಬೇಳೆ ಹಾಗೂ ಹೆಸರುಬೇಳೆಗಳನ್ನು ಅರ್ಧ ಗಂಟೆ ನೆನೆ ಹಾಕಿ, ನೀರು ಬಸಿದಿಡಿ. ತೆಂಗಿನತುರಿ, ಶುಂಠಿ, ಹಸಿಮೆಣಸಿನಕಾಯಿಗಳನ್ನು ಸೇರಿಸಿ ಅರೆಯಿರಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ- ಇಂಗು- ಅರಿಶಿನ  ಹಾಕಿ ಒಗ್ಗರಣೆ ಮಾಡಿ. ಆ ಒಗ್ಗರಣೆಗೆ ಅರೆದ ಮಿಶ್ರಣ ಹಾಕಿ ಬಾಡಿಸಿ, ಬೇಳೆಗಳನ್ನು, ಹುರುಳಿಕಾಯಿ, ಉಪ್ಪು ಸೇರಿಸಿ ನೀರಿನ ಪಸೆ ಹೋಗುವವರೆಗೆ ಕೈಯಾಡಿ ಒಲೆಯಿಂದ ಇಳಿಸಿ. ತೆಂಗಿನ ತುರಿ, ಕೊತ್ತಂಬರಿ ಸೊಪ್ಪುಗಳಿಂದ ಅಲಂಕರಿಸಿ. 

2. ಮಿಶ್ರ ತರಕಾರಿಗಳ ಕೋಸಂಬರಿ
ಬೇಕಾಗುವ ಸಾಮಗ್ರಿ:
ಕತ್ತರಿಸಿದ ಟೊಮೆಟೊ-1/2 ಕಪ್‌, ಕ್ಯಾರೆಟ್‌ ತುರಿ-1/4 ಕಪ್‌, ಸೌತೆಕಾಯಿ ತುರಿ-1/4 ಕಪ್‌, ಕತ್ತ ರಿಸಿ ಬೇಯಿಸಿದ ಹುರುಳಿಕಾಯಿ (ಬೀನ್ಸ್‌)-1/2 ಕಪ್‌, ಕತ್ತರಿಸಿದ ದೊಣ್ಣೆಮೆಣಸಿನಕಾಯಿ-1/4 ಕಪ್‌, ಹಸಿಮೆಣಸಿನಕಾಯಿ-3-4, ಕಡಲೆ ಬೀಜದ ಪುಡಿ-1/2 ಕಪ್‌, ತೆಂಗಿನ ತುರಿ-1/4 ಕಪ್‌, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-4 ಚಮಚ, ಸಾಸಿವೆ-1/2 ಚಮಚ, ಇಂಗು-1/4 ಚಮಚ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ-ಇಂಗಿನ ಒಗ್ಗರಣೆ ಹಾಕಿಡಿ. ಒಗ್ಗರಣೆಗೆ ಹಸಿಮೆಣಸು, ದೊಣ್ಣೆಮೆಣಸು ಹಾಕಿ ಬಾಡಿಸಿ, ಮಿಕ್ಕೆಲ್ಲಾ ತರಕಾರಿಗಳನ್ನು  ಹಾಕಿ ನೀರಿನ ಪಸೆ ಹೋಗುವವರೆಗೆ ಕೈಯಾಡಿಸಿ ಉಪ್ಪು ಸೇರಿಸಿ. ಕಡಲೆ (ಶೇಂಗಾ)  ಪುಡಿ ಹಾಕಿ ಚೆನ್ನಾಗಿ ಕಲಕಿ ಒಲೆಯಿಂದ ಕೆಳಗಿರಿಸಿ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿಯಿಂದ ಅಲಂಕರಿಸಿ. ಈಗ, ರುಚಿಯಾದ ಮಿಶ್ರ ತರಕಾರಿಗಳ ಕೋಸಂಬರಿ ರೆಡಿ. 

3. ಸ್ವೀಟ್‌ ಕಾರ್ನ್-ತರಕಾರಿ--ಹಣ್ಣುಗಳ ಕೋಸಂಬರಿ
ಬೇಕಾಗುವ ಸಾಮಗ್ರಿ:
ಸ್ವೀಟ್‌ ಕಾರ್ನ್ ಕಾಳುಗಳು-2 ಕಪ್‌, ಸೌತೆಕಾಯಿ ಹೋಳು-1/2 ಕಪ್‌,  ಪಪ್ಪಾಯ ಹಣ್ಣಿನ ಹೋಳು-1/2 ಕಪ್‌, ಟೊಮೆಟೊ ಹೋಳು-1/2 ಕಪ್‌, ತೆಂಗಿನತುರಿ-1/2 ಕಪ್‌, ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಚಮಚ, ಕತ್ತರಿಸಿದ ಹ‌ಸಿಮೆಣಸು -4-5, ಕತ್ತರಿಸಿದ ಪುದಿನಾ ಎಲೆ-7-8, ಜೀರಿಗೆ ಪುಡಿ-1 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-3 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಅರಶಿನ-1/2  ಚಮಚ, ನಿಂಬೆರಸ-1 ಚಮಚ.

ಮಾಡುವ ವಿಧಾನ: ಸ್ವೀಟ್‌ ಕಾರ್ನ್ ಅನ್ನು ಬೇಯಿಸಿಕೊಳ್ಳಿ.  ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ, ಇಂಗು, ಅರಿಶಿನ ಹಾಗೂ ಜೀರಿಗೆ ಹಾಕಿ ಒಗ್ಗರಣೆ ಮಾಡಿ, ಹಸಿಮೆಣಸು, ಪುದಿನಾ ಎಲೆಗಳನ್ನು ಸೇರಿಸಿ ಬಾಡಿಸಿ. ಒಗ್ಗರಣೆ ಮಿಶ್ರಣಕ್ಕೆ, ಸ್ವೀಟ್‌ ಕಾರ್ನ್, ಟೊಮೆಟೊ, ಸೌತೆಕಾಯಿ, ಪಪ್ಪಾಯ ಹೋಳು  ಉಪ್ಪು, ನಿಂಬೆರಸ ಸೇರಿಸಿ ಚೆನ್ನಾಗಿ ಕಲಸಿ ಒಲೆಯಿಂದ ಕೆಳಗಿರಿಸಿ. ತೆಂಗಿನ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ರುಚಿಯಾದ ಸ್ವೀಟ್‌ ಕಾರ್ನ್ ಕೋಸಂಬರಿ ರೆಡಿ. 

4. ರಾಗಿ ಕೋಸಂಬರಿ
ಬೇಕಾಗುವ ಸಾಮಗ್ರಿ:
ಮೊಳಕೆ ಬರಿಸಿದ ರಾಗಿ-2 ಕಪ್‌, ಕತ್ತರಿಸಿದ ಹಸಿಮೆಣಸು-7-8, ನಿಂಬೆರಸ-1 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು-4 ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು-3 ಚಮಚ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಜೀರಿಗೆ-1 ಚಮಚ, ಇಂಗು-1/4 ಚಮಚ, ಅರಶಿನ-1/2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ತೆಂಗಿನತುರಿ-4 ಚಮಚ. 

ಮಾಡುವ ವಿಧಾನ: ರಾಗಿ ಕಾಳುಗಳನ್ನು 8-10 ಗಂಟೆ ನೆನೆಸಿ, ಬಸಿದು ಶುಭ್ರವಾದ ತೆಳು ಬಟ್ಟೆಯಲ್ಲಿ ಮೊಳಕೆ ಬರುವವರೆಗೂ ಕಟ್ಟಿರಿಸಿ. ಮೊಳಕೆ ಬಂದ ರಾಗಿಗೆ ಸ್ವಲ್ಪ ನೀರು ಹಾಕಿ ಬೇಯಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ- ಜೀರಿಗೆ- ಅರಿಶಿನ-ಇಂಗು ಹಾಕಿ ಒಗ್ಗರಣೆ ಕೊಡಿ. ಅದಕ್ಕೆ ಹಸಿಮೆಣಸು, ಕರಿಬೇವಿನ ಸೊಪ್ಪು ಹಾಕಿ ಬಾಡಿಸಿ, ರಾಗಿ, ನಿಂಬೆರಸ, ಉಪ್ಪು ಹಾಕಿ ಚೆನ್ನಾಗಿ ಕಲಸಿ ಒಲೆಯಿಂದ ಕೆಳಗಿರಿಸಿ. ತೆಂಗಿನತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ರುಚಿಯಾದ ರಾಗಿ ಕೋಸಂಬರಿ ಸವಿಯಲು ರೆಡಿ. 

5. ಕಲ್ಲಂಗಡಿ ಹಣ್ಣಿನ ಕೋಸಂಬರಿ 
ಬೇಕಾಗುವ ಸಾಮಗ್ರಿ:
ಸಿಪ್ಪೆ ತೆಗೆದ ಕಲ್ಲಂಗಡಿ ಹೋಳು-3 ಕಪ್‌, ನಿಂಬೆರಸ-1 ಚಮಚ, ತೆಂಗಿನ ತುರಿ-1/4 ಕಪ್‌, ಹಸಿಮೆಣಸಿನಕಾಯಿ-2, ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಚಮಚ, ಕತ್ತರಿಸಿದ ಪುದಿನಾ ಎಲೆ-3 ಚಮಚ, ಕಾಳುಮೆಣಸಿನ ಪುಡಿ-1/4 ಚಮಚ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಉದ್ದಿನಬೇಳೆ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ತೆಂಗಿನತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು ಸೇರಿಸಿ, ಅರೆದಿರಿಸಿ. ಎಣ್ಣೆ ಕಾಯಿಸಿ ಸಾಸಿವೆ- ಇಂಗು-ಉದ್ದಿನಬೇಳೆ ಹಾಕಿ ಒಗ್ಗರಣೆ ತಯಾರಿಸಿ. ಕಲ್ಲಂಗಡಿ ಹೋಳುಗಳಿಗೆ, ಒಗ್ಗರಣೆ, ಅರೆದ ಮಿಶ್ರಣ, ನಿಂಬೆರಸ, ಕಾಳುಮೆಣಸಿನ ಪುಡಿ,  ಉಪ್ಪು ಸೇರಿಸಿ ಕೈಯಾಡಿಸಿದರೆ ಕಲ್ಲಂಗಡಿ ಕೋಸಂಬರಿ ರೆಡಿ.

 6. ಹಣ್ಣು-ತರಕಾರಿಗಳ ಕೋಸಂಬರಿ
ಬೇಕಾಗುವ ಸಾಮಗ್ರಿ:
ಕ್ಯಾರೆಟ್‌-1, ದೊಣ್ಣೆಮೆಣಸಿನಕಾಯಿ-1, ಸೇಬಿನ ಹಣ್ಣು-1, ಬಾಳೆ ಹಣ್ಣು-2, ಕಪ್ಪು ದ್ರಾಕ್ಷಿ-1/2 ಕಪ್‌, ಪಪ್ಪಾ ಹಣ್ಣು-1/2 ಕಪ್‌, ಗೋಡಂಬಿ-7-8, ಏಲಕ್ಕಿ ಪುಡಿ-1/2 ಚಮಚ, ಕಾಳುಮೆಣಸಿನ ಪುಡಿ-1/2 ಚಮಚ, ಸಕ್ಕರೆ ಪುಡಿ-1 ಚಮಚ, ಜೀರಿಗೆ ಪುಡಿ-1 ಚಮಚ, ತೆಂಗಿನ ತುರಿ-1/4 ಕಪ್‌, ತುಪ್ಪ-3 ಚಮಚ.

ಮಾಡುವ ವಿಧಾನ: ಬಾಳೆಹಣ್ಣುಗಳನ್ನು ದುಂಡಾಗಿ ಕತ್ತರಿಸಿ. ತರಕಾರಿ ಹಾಗೂ  ಮಿಕ್ಕ ಹಣ್ಣುಗಳನ್ನು ಉದ್ದುದ್ದುಕ್ಕೆ ಕತ್ತರಿಸಿ, ಬೇರೆಬೇರೆಯಾಗಿ ತುಪ್ಪದಲ್ಲಿ ಹುರಿಯಿರಿ. ಗಾಜಿನ ತಟ್ಟೆಯಲ್ಲಿ, ಕತ್ತರಿಸಿದ ಹಣ್ಣು-ತರಕಾರಿಗಳನ್ನು ನಿಮಗೆ ಬೇಕಾದಂತೆ ಜೋಡಿಸಿ. ಏಲಕ್ಕಿ ಪುಡಿ, ಸಕ್ಕರೆ ಪುಡಿ, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿಗಳನ್ನು ಸೇರಿಸಿ ಕಲಕಿ, ಸಮನಾಗಿ ಹಣ್ಣು-ತರಕಾರಿಗಳ ಮೇಲೆ ಉದುರಿಸಿ ಮತ್ತೆ ಕಲಕಿ. ಇದನ್ನು ತೆಂಗಿನತುರಿ ಹಾಗೂ ತುಪ್ಪದಲ್ಲಿ ಹುರಿದ ಗೋಡಂಬಿಗಳಿಂದ ಅಲಂಕರಿಸಿದರೆ, ಪೌಷ್ಟಿಕವಾದ ಕೋಸಂಬರಿ ಸವಿಯಲು ಸಿದ್ಧ.

* ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

Trending videos

Back to Top