CONNECT WITH US  

ಬೊಂಬೆ ಹೇಳುತೈತೆ...

ಸೆಲೆಬ್ರಿಟಿ ಸಂಗಾತಿ: ಮಾತಿನ ಮಂಟಪದಲ್ಲಿ ಮಹತಿ

"ಲಕ್ಸ್‌' ಜಾಹೀರಾತಿನಲ್ಲಿ ದೀಪಿಕಾ ಪಡುಕೋಣೆ, "ಪರಿಮಳ ನನ್ನ ಹೆಗ್ಗುರುತು' ಎಂದು ಹೇಳುವುದನ್ನು ಕೇಳಿರುತ್ತೀರಿ. "ಮೇಕ್‌ ಮೈ ಟ್ರಿಪ್‌' ಜಾಹೀರಾತಿನಲ್ಲಿ ಆಲಿಯಾ, "ಮೆಡಿಮಿಕ್ಸ್‌' ಜಾಹೀರಾತಿನಲ್ಲಿ ಅಮಲಾ ಪೌಲ್‌ ಧ್ವನಿಯನ್ನೂ ಕೇಳಿದ್ದೀರಲ್ಲವೇ? ಈ ಧ್ವನಿಗಳೆಲ್ಲಾ ಅವರದ್ದಲ್ಲ. ಇವೆಲ್ಲಾ "ಮಹತಿ ವಿಜಯ್‌ ಪ್ರಕಾಶ್‌'ರದ್ದು. ಮಹತಿ, ಜಾಹೀರಾತು ಲೋಕದ ಟಾಪ್‌ ಕಂಠದಾನ ಕಲಾವಿದರಲ್ಲೊಬ್ಬರು.

ಕಲಾವಿದೆ. ರೂಪದರ್ಶಿಯಾಗಿಯೂ ಕಾಣಿಸಿಕೊಂಡವರು. ಅವರೇ ಹೇಳುವಂತೆ ಧೈರ್ಯವಂತೆ, ಕ್ರಿಯಾಶೀಲೆ ಕೂಡ. ಇವರು ಜೈ ಹೋ ಖ್ಯಾತಿಯ ಗಾಯಕ ವಿಜಯ್‌ ಪ್ರಕಾಶ್‌ರ ಮಡದಿ. ಕಾವ್ಯಾ ಎಂಬ ಮುದ್ದಾದ ಹೆಣ್ಣು ಮಗಳ ತಾಯಿ. ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಸದ್ಯ ವಾಸ ಕೂಡ ಅಲ್ಲಿಯೇ. ಆಗಾಗ ಪತಿ ಜೊತೆ ಮುಂಬೈ- ಬೆಂಗಳೂರು ನಡುವೆ ಓಡಾಟ. ಮಡದಿ, ತಾಯಿ, ಕಂಠದಾನ ಕಲಾವಿದೆಯಾಗಿ ತಮ್ಮ ಬಿಡುವಿಲ್ಲದ ಜೀವನದ ಕುರಿತು ಅವರೇ ಮಾತಾಡಿದ್ದಾರೆ ಕೇಳಿ.

1. ನಿಮ್ಮ ಮತ್ತು ವಿಜಯ್‌ ಪ್ರಕಾಶ್‌ರ ಪರಿಚಯ ಆಗಿದ್ದು ಹೇಗೆ?
ವಿಜಯ್‌, ಮುಂಬೈ ಜಾಹೀರಾತು ಉದ್ಯಮಕ್ಕೆ ಕಾಲಿಡುವಾಗಲೇ ನಾನು ಉದ್ಯಮದಲ್ಲಿ ನೆಲೆಯೂರಿದ್ದ ಕಂಠದಾನ ಕಲಾವಿದೆಯಾಗಿದ್ದೆ. ನಾನು ಡಬ್ಬಿಂಗ್‌ಗಾಗಿ ಸ್ಟುಡಿಯೋಗೆ ಹೋಗಬೇಕಿತ್ತು. ಅಲ್ಲಿದ್ದವರೆಲ್ಲಾ, ಮಹತಿ ಬಂದ ಕೂಡಲೇ ಅವಳ ಡಬ್ಬಿಂಗ್‌ ಮುಗಿಸಬೇಕು. ಅವಳು ದೆಹಲಿಗೆ ಡ್ಯಾನ್ಸ್‌ ಪ್ರೋಗ್ರಾಂ ಕೊಡಲು ಹೋರಟಿದ್ದಾಳೆ ಅಂತ ಮಾತಾಡಿಕೊಳ್ತಾ ಇದ್ರಂತೆ. ಯಾರೋ ಹಿರಿಯ ಕಲಾವಿದರಿರಬೇಕು ಅಂತ ವಿಜಯ್‌ ಊಹಿಸಿದ್ದರಂತೆ. ನನ್ನನ್ನು ನೋಡಿ, ಇನ್ನೂ ಕಾಲೇಜು ಹುಡುಗೀನಾ ಅಂತ ಆಶ್ಚರ್ಯ ಆಯ್ತಂತೆ. ಆಮೇಲೆ ವಿಜಯ್‌ ನನ್ನ ಪಕ್ಕ ಕುಳಿತಿದ್ದರು. ಯಾವುದೋ ಹಾಡು ಗುನುಗುತ್ತಿದ್ದರು. ನನಗೂ ಅವರ ಬಗ್ಗೆ ಕುತೂಹಲ ಮೂಡಿತು. ಅವರ ಬಗ್ಗೆ ಮಾಹಿತಿ ಕಲೆಹಾಕಿದೆ. ಕರ್ನಾಟಕದಿಂದ ಬಂದಿದ್ದಾರಂತೆ. ಬೇಸ್‌ ವಾಯ್ಸ ಇದೆಯಂತೆ, ಚೆನ್ನಾಗಿ ಹಾಡ್ತಾರಂತೆ ಅಂತೆಲ್ಲಾ ಗೊತ್ತಾಯಿತು. ಒಟ್ಟಿನಲ್ಲಿ ಮೊದಲ ಭೇಟಿಯಲ್ಲೇ ಒಬ್ಬರ ಬಗ್ಗೆ ಒಬ್ಬರಿಗೆ ಆಸಕ್ತಿ ಮೂಡಿತ್ತು. 

2. ನಿಮ್ಮ ಮತ್ತು ವಿಜಯ್‌ ಪ್ರಕಾಶ್‌ರ ಯಾವ ಗುಣದಲ್ಲಿ ಬಹಳ ವ್ಯತ್ಯಾಸ ಇದೆ?
ನಾನಿರುವ ಜಾಗ ಸದಾ ಚೊಕ್ಕಟವಾಗಿರಬೇಕು. ಮನೆಯನ್ನು ಸ್ವತ್ಛಗೊಳಿಸುವುದು, ಅಚ್ಚುಕಟ್ಟು ಮಾಡುವುದರಲ್ಲೇ ನನ್ನ ಬಿಡುವಿನ ಸಮಯ ಕಳೆಯುತ್ತೇನೆ. ಒಮ್ಮೆ ವಿಜಯ್‌ ಮನೆಗೆ ಬಂದ್ರು ಎಂದರೆ ಮನೆಯಲ್ಲಾ ಹರಡಿ ತಿಪ್ಪೆ ಮಾಡುತ್ತಾರೆ. ಬಾತ್‌ರೂಂ ಕೂಡ ಬಿಡುವುದಿಲ್ಲ. ಅವರಿಗೆ ಸ್ವತ್ಛತೆ ಅಂದ್ರೆ ಇಷ್ಟ. ಆದರೆ ಪಾಪ, ಅವರಿಗೆ ಅದನ್ನು ನಿರ್ವಹಿಸುವುದಕ್ಕೆ ಬರುವುದಿಲ್ಲ. 

3. ಮಗಳು ಈಗ ಏನು ಓದ್ತಾ ಇದ್ದಾರೆ. ಮಗಳಿಗೆ ಅಪ್ಪನ ಮುದ್ದು ಜಾಸ್ತಿಯಾ ಅಥವಾ ಅಮ್ಮನದ್ದಾ? 
ಕಾವ್ಯಾ ಈಗ 11ನೇ ತರಗತಿಯಲ್ಲಿದ್ದಾಳೆ. ಬಿಸಿನೆಸ್‌ ಸ್ಕೂಲ್‌ನಲ್ಲಿ ಓದ್ತಾ ಇದ್ದಾಳೆ. ವೆಸ್ಟ್ರನ್‌ ಮ್ಯೂಸಿಕ್‌ ಕಲಿತಾ ಇದ್ದಾಳೆ. ಅವಳಿಗೆ ಉದ್ಯಮಿಯಾಗಬೇಕು ಅಂತ ಬಯಕೆ. ನಮಗೂ ಅವಳು ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಲಿ ಅಂತ ಆಸೆ. ಮೊದಲೆಲ್ಲಾ ವಿಜಯ್‌ ತುಂಬಾ ಮುದ್ದು ಮಾಡ್ತಾ ಇದ್ರು. ಅವಳಿಗೆ ಜ್ವರ ಬಂದರೆ ನನಗೆ, ನಮ್ಮನೆ ಸಹಾಯಕರಿಗೆಲ್ಲಾ ಚೆನ್ನಾಗಿ ಬಯ್ಯುತ್ತಿದ್ದರು. ಈಗ ಸದಾ ಪ್ರಯಾಣದಲ್ಲೇ ಬ್ಯುಸಿ ಇರ್ತಾರಲ್ಲಾ, ಹಾಗಾಗಿ ಮುದ್ದು ಸ್ವಲ್ಪ ಕಡಿಮೆಯಾಗಿದೆ. ಅವಳೂ ಅಷ್ಟೇ 100% ಅಪ್ಪನ ಮಗಳಾಗಿದ್ಲು. ಈಗ ಅವಳಿಗೆ ಅರ್ಥ ಆಗಿದೆ. ಅಪ್ಪ ಬ್ಯುಸಿ ಇರ್ತಾರೆ. ಅಮ್ಮನೇ ನನ್ನ ಬಳಿ 24 ಗಂಟೆ ಜೊತೆಗಿರೋದು ಅಂತ. ಅದಕ್ಕೆ ಈಗ ನನ್ನ ಫ್ರೆಂಡ್‌ಶಿಪ್‌ ಮಾಡಿಕೊಂಡಿದ್ದಾಳೆ. 

4. ವಿಜಯ್‌ರಲ್ಲಿ ನೀವು ಗುರುತಿಸಿರುವ ವಿಶೇಷ ಗುಣಗಳು ಯಾವುವು? 
ಅವರು ತುಂಬಾ ಭಾವನಾತ್ಮಕ ವ್ಯಕ್ತಿ. ಎಂಥಾ ಆ್ಯಕ್ಷನ್‌ ಸಿನಿಮಾದಲ್ಲೂ ಒಂದು ಭಾವನಾತ್ಮಕ ದೃಶ್ಯ ಬಂದರೆ ಇವರೇ ಅಳುವುದಕ್ಕೆ ಶುರು ಮಾಡ್ತಾರೆ. ತುಂಬಾ ಮಾನವೀಯ ವ್ಯಕ್ತಿ. ಬೇರೆಯವರ ಮನಸ್ಸಿನಲ್ಲಿ ಆಗುತ್ತಿರುವ ಕಷ್ಟ ಇವರಿಗೆ ಅರ್ಥ ಆಗುತ್ತದೆ. ಬೇರೆಯವರ ಕಷ್ಟವನ್ನು ಇವರು ಅರ್ಥ ಮಾಡಿಕೊಂಡು ಸಾಂತ್ವನ ನೀಡುವುದನ್ನು ನೋಡಿದಾಗ ನನಗೆ ಅವರ ಬಗ್ಗೆ ಹೆಮ್ಮೆಯಾಗುತ್ತದೆ.  |

5. ಅವರಲ್ಲಿ ನಿಮಗೆ ತುಂಬಾ ಇಷ್ಟ ಆಗುವ ಗುಣ? 
ನನಗೆ ತುಂಬಾ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಮದುವೆಗೆ ಮುಂಚೆ ನನ್ನ ಜೀವನದಲ್ಲಿ ನನಗೆ ಎಷ್ಟು ಸ್ವಾತಂತ್ರ್ಯ ಇತ್ತೋ, ಮದುವೆಯಾದ ಬಳಿಕವೂ ಅದು ಮುಂದುವರಿದಿದೆ. ನನ್ನ ಕೆರಿಯರ್‌ಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. 

6. ವಿಜಯ್‌ಗೆ ಅಡುಗೆ ಮಾಡಲು ಬರುತ್ತಾ? 
ಅವರು ಬೆಸ್ಟ್‌ ಕುಕ್‌! ಅದ್ಭುತವಾಗಿ ಬಿಸಿಬೇಳೆ ಬಾತ್‌  ಮಾಡ್ತಾರೆ. ನನಗೆ ಹೇಳಿಕೊಡಿ ಅಂದ್ರೆ "ಹಂಗೆಲ್ಲಾ ಹೇಳಿ ಕೊಡಕ್ಕೆ ಆಗಲ್ಲ. ನಾನು ತಯಾರಿಸುವಾಗಿ ನೋಡಿಕೊಂಡು ಕಲಿ' ಅನ್ನುತ್ತಿದ್ರು. ಹೇಗೋ ನೋಡಿಕೊಂಡು ಬಿಸಿಬೇಳೆ ಬಾತ್‌ ಮಾಡಲು ಕಲಿತಿದ್ದೇನೆ. ಆದರೆ, ಅವರಷ್ಟು ರುಚಿಯಾಗಿ ಮಾಡಲು ಬರಲ್ಲ. 

7. ಧ್ವನಿ ಕಲಾವಿದೆಯಾಗಿ ನಿಮ್ಮ ಕೆರಿಯರ್‌ ಬಗ್ಗೆ ಹೇಳಿ? 
ನಾನು ಮೂಲತಃ ನೃತ್ಯಕಲಾವಿದೆ. ಚಿಕ್ಕವಳಿದ್ದಾಗಲೇ ಜಾಹೀರಾತುಗಳಿಗೆ ಕಂಠದಾನ ಕಲಾವಿದೆಯಾಗುವ ಅವಕಾಶ ಸಿಕ್ಕಿತ್ತು.  ಕಾಲೇಜ್‌ ಓದುವ ವೇಳೆಗಾಗಲೇ ನಾನು ತೆಲುಗು, ಹಿಂದಿ, ಮರಾಠಿ ಭಾಷೆಗಳ ಜಾಹೀರಾತುಗಳಿಗೆ ಧ್ವನಿ ಕಲಾವಿದೆಯಾಗಿ ಸಾಕಷ್ಟು ಬ್ಯುಸಿ ಇದ್ದೆ. ಜೊತೆಗೆ ನೃತ್ಯ ಪ್ರದರ್ಶನಗಳನ್ನೂ ಕೂಡ ಕೊಡ್ತಾ ಇದ್ದೆ. ಈಗ ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಭಾಷೆಗಳ ಜಾಹೀರಾತುಗಳಿಗೆ ಧ್ವನಿ ನೀಡುತ್ತೇನೆ. ಇತ್ತೀಚೆಗೆ ದೀಪಿಕಾ ಪಡುಕೋಣೆ, ಆಲಿಯಾ ಭಟ್‌ ಮುಂತಾದ ಟಾಪ್‌ ಹಿರೋಯಿನ್‌ಗಳ ಜಾಹೀರಾತಿಗೂ ಡಬ್‌ ಮಾಡಿದ್ದೇನೆ. 

8. ನೀವೂ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದೀರಿ ಅಲ್ವಾ?
ಜಾಹೀರಾತುಗಳಿಗೆ ಧ್ವನಿ ನೀಡ್ತಾ ಬ್ಯುಸಿ ಇದ್ದಾಗ ಕೆಲ ಉತ್ಪನ್ನಗಳು ಧ್ವನಿ ನೀಡುವ ಜೊತೆಗೆ ನೀವೇ ರೂಪದರ್ಶಿಯಾಗಿ ಅಂತ ಕೇಳಿದರು. ಇದೂ ಒಂದು ಪ್ರಯತ್ನ ಮಾಡೋಣ ಅಂತ ಒಪ್ಪಿಕೊಂಡೆ. ವೊಡಾಫೋನ್‌, ಕಂಫ‌ರ್ಟ್‌ ಫ್ಯಾಬ್ರಿಕ್‌ ಕಂಡೀಷನರ್‌, ಸಫ್ì ಎಕ್ಸೆಲ್‌, ಗೋದ್ರೆಜ್‌ ಉತ್ಪನ್ನಗಳ ಜಾಹೀರಾತುಗಳಲ್ಲಿ ತುಂಬಾ ಹಿಂದೆ ನಟಿಸಿದ್ದೆ. 

9. ಯಾವೆಲ್ಲಾ ಸಿನಿಮಾಗಳಿಗೆ ಕಂಠದಾನ ಮಾಡಿದ್ದೀರಿ?
ಒಂದು ಕಾಕತಾಳೀಯ ಘಟನೆ ಹೇಳ್ತೀನಿ. ಧೂಮ್‌-2 ಚಿತ್ರವನ್ನು ತೆಲುಗಿಗೆ ಡಬ್‌ ಮಾಡಲು ಹಿನ್ನೆಲೆ ಧ್ವನಿ ಕಲಾವಿದರನ್ನು ಆಡಿಷನ್‌ಗೆ ಕರೆದಿದ್ದರು. ನಾನು, ವಿಜಯ್‌ ಇಬ್ಬರೂ ಹೋದೆವು. ನಾನು ಐಶ್ವರ್ಯಾ ರೈಗೆ ಧ್ವನಿ ಕೊಡಲು ಆಯ್ಕೆ ಆದೆ. ವಿಜಯ್‌, ಅಭಿಷೇಕ್‌ ಬಚ್ಚನ್‌ಗೆ ಧ್ವನಿ ನೀಡಲು ಆಯ್ಕೆ ಆದರು. ಕೆಲವೇ ದಿನಗಳಲ್ಲಿ ಅವರಿಬ್ಬರೂ ಮದುವೆಯಾಗುತ್ತಾರೆ ಅಂತ ಸುದ್ದಿ ಹೊರಬಂತು. ಜಾಹೀರಾತು ಜೊತೆ ಹಲವಾರು ಚಿತ್ರಗಳಿಗೂ ಧ್ವನಿ ಕೊಟ್ಟಿದ್ದೇನೆ. ಆದರೆ ಜಾಹೀರಾತು ಕ್ಷೇತ್ರದಲ್ಲಿ ಸಾಕಷ್ಟು ಬ್ಯುಸಿ ಇದ್ದಿದ್ದರಿಂದ ಸಿನಿಮಾ ನನ್ನ ಪ್ರಮುಖ ಆಯ್ಕೆ ಆಗಲಿಲ್ಲ. 

10. ನಿಮಗೆ ಎಷ್ಟು ಭಾಷೆಗಳು ಬರುತ್ತವೆ?
ಕನ್ನಡ, ತೆಲುಗು, ಹಿಂದಿ, ಮರಾಠಿ, ಇಂಗ್ಲಿಷ್‌, ತಮಿಳು ಇಷ್ಟೂ ಭಾಷೆಗಳನ್ನೂ ಸರಾಗವಾಗಿ ಮಾತಾಡ್ತೀನಿ.
 
11. ಅವರು ಹಾಡಿರುವ ಹಾಡುಗಳಲ್ಲಿ ನಿಮ್ಮ ಫೇವರೆಟ್‌ ಹಾಡುಗಳು ಯಾವು?
ಗೊಂಬೆ ಹೇಳುತೈತೆ, ಅನಿತಾ ಓ ಅನಿತಾ...

12. ನಿಮ್ಮ ಇತರೆ ಹವ್ಯಾಸಗಳು ಏನು? 
ನಾನು ತುಂಬಾ ಚಟುವಟಿಕೆಯ ವ್ಯಕ್ತಿ. ಸುಮ್ಮನೆ ಕೂರುವವಳೇ ಅಲ್ಲ. ಸಾಹಸ ಕ್ರೀಡೆಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತೇನೆ. ಹಿಮಾಲಯಕ್ಕೆ ಟ್ರೆಕ್ಕಿಂಗ್‌ ಹೋಗ್ತಿàನಿ, ಸ್ಕೂಬಾ ಡೈವಿಂಗ್‌ ಮಾಡ್ತೀನಿ. ಮಗಳ ಜೊತೆ ನಾನೂ ವೆಸ್ಟ್ರನ್‌ ಸಂಗೀತ ಕಲಿತಾ ಇದ್ದೇನೆ. ಜೊತೆಗೆ ಈಗಲೂ ನಾನು ಕಂಠದಾನ ಕಲಾವಿದೆಯಾಗಿ ಬ್ಯುಸಿ ಇದ್ದೇನೆ. 

ವಿಜಯ್‌ ಮನೆಯವರು ಹೆದರಿದ್ರು: ಪರಿಚಯವಾದ ಮೇಲೆ ವಿಜಯ್‌ ನನ್ನನ್ನು ಮೂರು ಬಾರಿ ಹೊರಗೆ ಕಾಫಿ, ಊಟ ಅಂತೆಲ್ಲಾ ಕರೆದುಕೊಂಡು ಹೋಗಿದ್ರು. 1997ರಲ್ಲಿ ಹುಡುಗ, ಹುಡುಗಿ ಹೊರಗೆ ಭೇಟಿಯಾಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪ್ರತೀ ಬಾರಿ ಆಚೆ ಹೋದಾಗಲೂ ಅವರು ಏನೂ ಹೇಳ್ತಾ ಇರಲಿಲ್ಲ. ಮೂರನೇ ಬಾರಿ ಬಾಯಿ ತೆರೆದರು. ಪ್ರಪೋಸ್‌ ಮಾಡಿದರು. ನನಗೂ ಅವರ ಬಗ್ಗೆ ಆಸಕ್ತಿ ಇತ್ತು. ಓಕೆ ಅಂದುಬಿಟ್ಟೆ. ತಮಾಷೆ ಎಂದರೆ ವಿಜಯ್‌ ಮನೆಯವರಿಗೆ ಫೋನ್‌ ಮಾಡಿ ನಮ್ಮ ಲವ್‌ ಸ್ಟೋರಿ ಬಗ್ಗೆ ಹೇಳಿದಾಗ ಅವರಿಗೆ ಭಯ ಆಯ್ತಂತೆ. "ಮಗ ಏನೋ ಸಾಧನೆ ಮಾಡ್ತೀನಿ ಅಂತ ಮುಂಬೈಗೆ ಹೋದ. ತಿಂಗಳ ಒಳಗೇ ನಾನು ಒಂದು ಹುಡುಗಿಯನ್ನು ಇಷ್ಟ ಪಡ್ತಿದೀನಿ ಅಂತಿದಾನಲ್ಲ, ಇವನ ಭವಿಷ್ಯದ ಕಥೆ ಏನು?' ಅಂತ ಕಂಗಾಲಾದರಂತೆ. ಕಡೆಗೆ ಇಬ್ಬರ ಕುಟುಂಬಕ್ಕೂ ನಮ್ಮ ಪ್ರೀತಿ ಒಪ್ಪಿಗೆಯಾಗಿ 2000ದಲ್ಲಿ ನಾವು ಮದುವೆಯಾದ್ವಿ. 

ನಾನು ಕನ್ನಡ ಕಲಿತೆ, ಓರಗಿತ್ತಿ ತೆಲುಗು ಕಲಿತ್ರು!: ನಮ್ಮದು ಮುಂಬೈನಲ್ಲಿ ನೆಲೆಸಿರುವ ತೆಲುಗು ಭಾಷಿಕ ಕುಟುಂಬ. ಮದುವೆಯಾದ ಹೊಸತರಲ್ಲಿ ಇಬ್ಬರೂ ನಮ್ಮ ನಮ್ಮ ಕೆಲಸಗಳಲ್ಲಿ ತುಂಬಾ ಬ್ಯುಸಿ ಇದ್ವಿ. ವಿಜಯ್‌ಗೆ ಕನ್ನಡ ಕಲಿಸುವಷ್ಟು ಸಮಯ ಇರ್ತಾ ಇರಲಿಲ್ಲ. ನಮಗೆ ತೋಚಿದ ಭಾಷೆಯಲ್ಲಿ ಮಾತಾಡ್ತಾ ಇದ್ವಿ. ವಿಜಯ್‌ ಮತ್ತು ಅವರ ಅಪ್ಪ-ಅಮ್ಮನಿಗೆ ತೆಲುಗು ಸ್ವಲ್ಪ ಮಟ್ಟಿಗೆ ಬರ್ತಾ ಇತ್ತು. ಆದರೆ ನನ್ನ ಓರಗಿತ್ತಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರ್ತಾ ಇರಲಿಲ್ಲ. ಅವರ ಜೊತೆ ಮಾತನಾಡಲು ನಾನು ಕನ್ನಡ ಕಲಿಯಬೇಕಿತ್ತು. ನಾನು ಕನ್ನಡ ಕಲಿಯಲು ಆರಂಭಿಸಿದೆ. ಅವರು ನನಗಾಗಿ ತೆಲುಗು ಕಲಿಯಲು ಆರಂಭಿಸಿದರು. ಕಡೆಗೆ ಇಬ್ಬರೂ ಕನ್ನಡ, ತೆಲುಗು ಮಿಕ್ಸ್‌ ಮಾಡಿ ನಮ್ಮದೇ ಒಂದು ಭಾಷೆಯಲ್ಲಿ ದಿನಪೂರ್ತಿ ಮಾತನಾಡುತ್ತಿದ್ವಿ. ಮನೆಯವರಿಗೆಲ್ಲಾ ಆಶ್ಚರ್ಯವಾಗುತ್ತಿತ್ತು. ನಾನು ಕನ್ನಡ ಯಾವಾಗ ಕಲಿತೆ ಎಂಬುದೇ ನನಗೆ ತಿಳಿಯಲಿಲ್ಲ. ಈಗ ಇಷ್ಟು ಸ್ಪಷ್ಟವಾಗಿ ಮಾತಾಡುತ್ತಿದ್ದೇನೆ.

ವಿಜಯ್‌ ದೊಡ್ಡ ಸ್ಟಾರ್‌ ಆಗ್ತಾರೆ ಅಂತ ನಿರೀಕ್ಷಿಸಿರಲಿಲ್ಲ: ವಿಜಯ್‌ಗೆ ಈ ಮಟ್ಟದಲ್ಲಿ ಜನಪ್ರಿಯತೆ ಸಿಗುತ್ತದೆ ಎಂದು ನನಗೆ ಅಂದಾಜಿರಲಿಲ್ಲ. ಆದರೆ, ಇವತ್ತು ಅವರು ಏರಿರುವ ಎತ್ತರದ ಬಗ್ಗೆ ಆಶ್ಚರ್ಯವೂ ಇಲ್ಲ. ಜಾಹೀರಾತು ಉದ್ಯಮಕ್ಕೆ ವಿಜಯ್‌ ಕಾಲಿಟ್ಟಾಗಲೇ ಅವರಲ್ಲಿದ್ದ ಸ್ಪಾರ್ಕ್‌ ಅನ್ನು ನಾನು ಗಮನಿಸಿದ್ದೆ. ಬಹುತೇಕ ಕಂಠದಾನ ಕಲಾವಿದರು ಬಾಲ ಕಲಾವಿದರಾಗಿ ಉದ್ಯಮದಲ್ಲಿ ನೆಲೆಯೂರಿರುತ್ತಾರೆ. ಆದರೆ, ವಿಜಯ್‌ ಸಾಕಷ್ಟು ತಡವಾಗಿ ಉದ್ಯಮಕ್ಕೆ ಕಾಲಿಟ್ಟು ಯಶಸ್ವೀ ಕಲಾವಿದರಾಗಿದ್ದರು. ಹಿನ್ನೆಲೆ ಗಾಯಕರಾಗುತ್ತಾರೆ ಎಂಬ ಭರವಸೆ ಇತ್ತು. ಆದರೆ ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡ ಸ್ಟಾರ್‌ ಆಗ್ತಾರೆ ಎಂದು ಯೋಚಿಸಿರಲಿಲ್ಲ. 

* ವಿಜಯ್‌, ತುಂಬಾ ಚೆನ್ನಾಗಿ ಅಡುಗೆ ಮಾಡ್ತಾರೆ
* ಅವ್ರು ಇಷ್ಟೊಂದು ಫೇಮಸ್‌ ಆಗ್ತಾರೆ ಅಂತ ಗೊತ್ತಿರ್ಲಿಲ್ಲ
* ಅವ್ರು ಭಾವನಾಜೀವಿ

* ಚೇತನ ಜೆ.ಕೆ.


Trending videos

Back to Top