ಬಲೆಗೆ ಬಿದ್ದವಳು! | Udayavani - ಉದಯವಾಣಿ
   CONNECT WITH US  
echo "sudina logo";

ಬಲೆಗೆ ಬಿದ್ದವಳು!

ಮಿಂಚುಳ್ಳಿ ಕೈಯಲ್ಲಿ ಮೀನು ಬಲೆ

ತೂತು, ತೂತಾಗಿರುವ ಮೀನಿನ ಬಲೆ ನೋಡಿದ್ದೀರ? ಬೋರೆಹಣ್ಣು, ಸೇಬುಹಣ್ಣನ್ನು ಬಲೆಯಂಥ ಚೀಲದಲ್ಲಿಟ್ಟು ಮಾರುವುದೂ ಗೊತ್ತಲ್ಲ? ಅದೇ ಚೀಲ ಈಗ ಹೊಸ ವಿನ್ಯಾಸದಲ್ಲಿ ಫ್ಯಾಷನ್‌ ಲೋಕಕ್ಕೆ ಲಗ್ಗೆಯಿಟ್ಟಿದೆ...

ಫ್ಯಾಷನ್‌ ಡಿಸೈನರ್‌ಗಳಿಗೆ ಇಡೀ ಜಗತ್ತೇ ಸ್ಫೂರ್ತಿ. ಕಣ್ಣಿಗೆ ಬಿದ್ದ ಯಾವ ವಸ್ತು ಬೇಕಾದರೂ ಅವರ ಹೊಸ ಫ್ಯಾಷನ್‌ಗೆ ಸ್ಫೂರ್ತಿಯಾಗಬಹುದು. ಹಾಗೆನ್ನುವುದಕ್ಕೆ ಮೀನಿನ ಬಲೆಯಂಥ ಈ ಬ್ಯಾಗುಗಳೇ ಉದಾಹರಣೆ. ಯಾವುದು ಈ ಹೊಸ ಫ್ಯಾಷನ್‌ ಆ್ಯಕ್ಸೆಸರಿ ಎನ್ನುತ್ತೀರಾ? ದುಡ್ಡಿನ ಪರ್ಸ್‌, ಕರವಸ್ತ್ರ, ಕಾಂಪ್ಯಾಕ್ಟ್ ಮೇಕಪ್‌ ಕಿಟ್‌ ಅನ್ನು ಕೊಂಡೊಯ್ಯಲು ಮಹಿಳೆಯರು ಬಳಸುತ್ತಿದ್ದ ಪುಟ್ಟ ಕೈಚೀಲ/ ವ್ಯಾನಿಟಿ ಬ್ಯಾಗ್‌ ಮೇಕ್‌ ಓವರ್‌ ಪಡೆದಿದೆ. ಮೀನು ಹಿಡಿಯುವ ಬಲೆಯಂತೆ ಕಾಣುವ ಈ ಚೀಲ ವರ್ಷದ ಟ್ರೆಂಡ್‌ ಆಗಿದೆ! 

ಅದರ ಹೆಸರೇ ಫಿಷರ್‌ ಮ್ಯಾನ್‌ ಬ್ಯಾಗ್‌ (ಮೀನುಗಾರನ ಚೀಲ). ಬಾಲ್ಯದಲ್ಲಿ ನಾವು ಬುತ್ತಿ ತೆಗೆದುಕೊಂಡು ಹೋಗಲು ಬಳಸುತ್ತಿದ್ದ ಫಿಶ್‌ ವೈರ್‌ ಚೀಲವನ್ನು ಈ ಹೊಸ ಫ್ಯಾಶನ್‌ ನೆನಪಿಸುತ್ತದೆ. ಬೋರೆಹಣ್ಣು, ಕಿತ್ತಳೆ, ಸೇಬು ಮತ್ತು ಇತರ ಹಣ್ಣುಗಳೂ ಇಂಥ ಸ್ಟಾಕಿಂಗ್‌ ಚೀಲಗಳಲ್ಲಿ ದೊರೆಯುತ್ತವೆ. ಈ ಸ್ಟಾಕಿಂಗ್‌ಗಳ ಗಾತ್ರ ದೊಡ್ಡದಾದರೆ ಫಿಷರ್‌ಮ್ಯಾನ್‌ ಬ್ಯಾಗ್‌ ರೆಡಿ!

ಆಕಾರವಿಲ್ಲದ ಚೀಲ: ಮೊಬೈಲ್‌, ಮನೆಯ ಬೀಗದ ಕೀ, ಗಾಡಿ ಕೀ, ಪೆನ್‌, ಕಾಗದ, ಟಿಶ್ಯೂ, ಶಾಲು, ಜಾಕೆಟ್‌, ಕೋಟ್‌... ಇತ್ಯಾದಿಗಳನ್ನು ಈ ಚೀಲದಲ್ಲಿ ಕೊಂಡೊಯ್ಯಬಹುದು. ಚೀಲದಲ್ಲಿ ತೂತುಗಳಿರುವ ಕಾರಣ ಒಳಗಿರುವ ವಸ್ತು ಹೊರಗೆ ಬೀಳದಂತೆ ಎಚ್ಚರವಹಿಸುವುದು ಅಗತ್ಯ. ಇಲ್ಲ, ವಸ್ತುಗಳನ್ನು ಪ್ರತ್ಯೇಕ ಚೀಲದಲ್ಲಿ ಹಾಕಿ ನಂತರ ಈ ಫಿಷರ್‌ಮ್ಯಾನ್‌ ಬ್ಯಾಗ್‌ನಲ್ಲಿಡಬಹುದು. ಈ ಚೀಲಕ್ಕೆ ಪ್ರತ್ಯೇಕ ಆಕಾರವೇನಿಲ್ಲ. ಒಳಗೆ ಎಷ್ಟು ಮತ್ತು ಯಾವ ಯಾವ ವಸ್ತುಗಳಿವೆಯೋ ಅವುಗಳಿಗೆ ಅನುಗುಣವಾಗಿ ಈ ಚೀಲ ಆಕಾರ ಪಡೆಯುತ್ತದೆ. ಕ್ರೋಷೆ, ಉಣ್ಣೆ, ಪ್ಲಾಸ್ಟಿಕ್‌ನಂಥ ವಸ್ತುಗಳನ್ನು ಬಳಸಿ ನಿಮಗಿಷ್ಟದಂತೆ ಚೀಲವನ್ನು ಹೆಣೆಯಬಹುದು. 

ಬಣ್ಣ ಬಣ್ಣದ ಬಲೆ: ಮೀನು, ಹಣ್ಣು ಮತ್ತು ತರಕಾರಿ ಕೊಂಡೊಯ್ಯಲು ಬಳಸುತ್ತಿದ್ದ ಬಲೆಯ ಮಾದರಿಯ ಚೀಲದಿಂದ ಪ್ರೇರಣೆ ಪಡೆದು ಈ ಚೀಲವನ್ನು ಫ್ಯಾಷನ್‌ ಲೋಕಕ್ಕೆ ಪರಿಚಯಿಸಿದರು. ಬಲೆಯಂಥ ಚೀಲ ಎಂದಮಾತ್ರಕ್ಕೆ, ಕೇವಲ ಕಪ್ಪು-ಬಿಳುಪಿಗೆ ಸೀಮಿತವಾಗದೆ, ಈ ಬ್ಯಾಗ್‌ ಬಗೆ-ಬಗೆಯ ಬಣ್ಣಗಳಲ್ಲೂ ಲಭ್ಯವಿದೆ. ಕಪ್ಪು ಅಥವಾ ಬಿಳುಪಿನ ಬ್ಯಾಗ್‌ ಬಹುತೇಕ ಎಲ್ಲ ಬಣ್ಣದ ಉಡುಪಿನ ಜೊತೆ ಹೋಲುತ್ತದೆ. ಹಾಗಾಗಿ ಈ ಫಿಷರ್‌ಮ್ಯಾನ್‌ ಬ್ಯಾಗ್‌ಗಳಿಗೆ ಬೇಡಿಕೆ ಹೆಚ್ಚು. 

ಭಾರವಿಲ್ಲ, ಹಗುರ: ಚರ್ಮ, ಪ್ಲಾಸ್ಟಿಕ್‌, ಬಟ್ಟೆಯ ದಾರ, ನೈಲಾನ್‌, ಹಗ್ಗ, ಡೆನಿಮ್‌ನಿಂದ ಈ ಬ್ಯಾಗ್‌ಗಳನ್ನು ಮಾಡಲಾಗುತ್ತದೆ. ಇದರ ಮೆಟೀರಿಯಲ್‌ ಬಲು ಹಗುರವಾಗಿರುವ ಕಾರಣ ಬ್ಯಾಗ್‌ ಭಾರ ಅನಿಸಲಾರದು. ಮೆಟೀರಿಯಲ್‌ ಹಗುರವಾಗಿದ್ದರೂ ಗಟ್ಟಿಯಾಗಿರುವುದರಿಂದ ಸುಲಭದಲ್ಲಿ ತುಂಡಾಗಲಾರದು ಕೂಡ.

ಬಲೆ ಹಿಡಿದು ಬೀಚ್‌ಗೆ ನಡೆ...: ಬೀಚ್‌ ಹಾಲಿಡೇಗೆ ಹೋಗುವಾಗ ಈ ಫಿಷರ್‌ಮ್ಯಾನ್‌ ಚೀಲವನ್ನು ಕೊಂಡೊಯ್ಯಬಹುದು. ಇದರಲ್ಲಿ ಸನ್‌ಸ್ಕ್ರೀನ್‌ ಲೋಷನ್‌, ತಂಪು ಕನ್ನಡಕ, ಛತ್ರಿ, ನೀರಿನ ಬಾಟಲಿ, ಹಣ್ಣುಗಳು, ಟವೆಲ್‌ ಮತ್ತು ಇತರ ವಸ್ತುಗಳನ್ನು ಇಡಬಹುದು. ಸ್ವೆಟರ್‌ ಜೊತೆ ತೊಡಲು, ಕ್ರೋಷೆ, ಲೇಸ್‌ ಅಥವಾ ಉಣ್ಣೆಯ ಬ್ಯಾಗ್‌ಗಳು ಲಭ್ಯ. 

ಬಗೆ ಬಗೆಯ ಬ್ಯಾಗು: ಹೂವಿನ ಕಸೂತಿ (ಫ್ಲೋರಲ್‌ ಎಂಬ್ರಾಯರಿ), ಚರ್ಮದ ಚೈನ್‌ ಲಿಂಕ್‌ ಭುಜ ಪಟ್ಟಿ (ಶೋಲ್ಡರ್‌ ಸ್ಟ್ರಾಪ್‌) ಮತ್ತು ಟ್ಯಾಸಲ್ಸ್‌ ಇರುವ ಸರಪಳಿ... ಹೀಗೆ ಬ್ಯಾಗ್‌ನಲ್ಲಿ ಬಗೆ- ಬಗೆಯ ಆಯ್ಕೆಗಳಿವೆ. ಉಟ್ಟ ಉಡುಪಿಗೆ ಹೋಲುವಂತೆ ಬಣ್ಣದ ಬಲೆಯ ಫಿಷರ್‌ಮ್ಯಾನ್‌ ಬ್ಯಾಗ್‌ಗಳನ್ನು ಜೊತೆಗೆ ಕೊಂಡುಹೋಗಿ, ಫ್ಯಾಷನ್‌ ಸ್ಟೇಟ್‌ಮೆಂಟ್‌ ಮಾಡಿ.

* ಅದಿತಿಮಾನಸ ಟಿ.ಎಸ್‌.

ಇಂದು ಹೆಚ್ಚು ಓದಿದ್ದು

ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ "ಪ್ರತಿಭಾ ಪುರಸ್ಕಾರ'ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

Aug 20, 2018 06:00am

Trending videos

Back to Top