ಆಡಾಡತ ಆಯುಷ್ಯ


Team Udayavani, May 23, 2018, 6:00 AM IST

11.jpg

ಕಳೆದುಹೋದ ಬಾಲ್ಯ ಮತ್ತೂಮ್ಮೆ ಬರಲಾರದು. ಮಕ್ಕಳನ್ನು ಬಾಲ್ಯ ಸಹಜ ಆಟಗಳಿಂದ ವಂಚಿತರಾಗಿಸಬೇಡಿ. ದಿವಸ ಒಂದೆರಡು ಗಂಟೆಯ ಕಾಲ ಹೊರಗಡೆ ಮನಸೋ ಇಚ್ಛೆ ಆಡಲು ಬಿಡಿ. ಇದರಿಂದ ದೈಹಿಕವಾಗಿಯೂ, ಮಾನಸಿಕವಾಗಿಯೂ ಸದೃಢರಾಗುತ್ತಾರೆ. ಈಗಂತೂ ರಜೆ. ಆ ದಿನಗಳಲ್ಲಿಯಾದರೂ ಮಕ್ಕಳಿಗೆ ಸ್ವಾತಂತ್ರ್ಯ ನೀಡಿ. ಬದುಕಿನ ಸವಿನೆನಪುಗಳನ್ನು ಸವಿಯಲು ಅವಕಾಶ ನೀಡಿ…

ಬೆಂಗಳೂರಿನಲ್ಲಿ, ಮನೆಯ ಬಾಲ್ಕನಿಯಲ್ಲಿ ನಿಂತು ರಸ್ತೆಯಲ್ಲಿ ಓಡಾಡುವವರನ್ನು ಗಮನಿಸುತ್ತಿದ್ದೆ. ಮನೆಯ ಎದುರಿನ ಖಾಲಿ ನಿವೇಶನದಲ್ಲಿ ಒಂದು ದೊಡ್ಡ ಕಟ್ಟಡ ನಿರ್ಮಾಣವಾಗುತ್ತಿತ್ತು. ಕಟ್ಟಡಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ರಸ್ತೆಯ ಬದಿಯಲ್ಲಿಯೇ ರಾಶಿ ಹಾಕಿದ್ದರು. ಪಕ್ಕದಲ್ಲಿ ಒಂದು ದೊಡ್ಡ ಮರಳಿನ ರಾಶಿ ಪರ್ವತದಷ್ಟು ಎತ್ತರಕ್ಕೆ ನಿಂತಿತ್ತು. ಕಟ್ಟಡ ನಿರ್ಮಾಣದ ಕೂಲಿಗಾರರ ಮಕ್ಕಳೆಲ್ಲ ಆ ಮರಳಿನಲ್ಲಿ ಮನಸೋ ಇಚ್ಛೆ ಆಡುತ್ತಿದ್ದರು. ಮೇಲಕ್ಕೆ ಏರಿ ಜರ್ರನೆ ಜಾರುಗುಪ್ಪೆಯ ಹಾಗೆ ಜಾರುವುದು, ಒಬ್ಬನು ಇನ್ನೊಬ್ಬನ ಮೇಲೆ ಮರಳನ್ನೆರಚುವುದು, ಅವನನ್ನು ಇವರು ಓಡಿಸಿಕೊಂಡು ಹೋಗುವುದು, ಹಾಗೆ ಮರಳಿನ ಮೇಲೆ ಓಡುವಾಗ ಜಾರಿ ಬೀಳುವುದು, ಅಂಗೈ ತುಂಬಾ ಮರಳನ್ನು ತುಂಬಿಸಿ ಅದರಲ್ಲಿ ಒಂದು ಕಡ್ಡಿಯನ್ನಿಟ್ಟು, ಆ ಹುಡುಗನನ್ನು ಕಣ್ಣು ಮುಚ್ಚಿ ಕರೆದುಕೊಂಡು ಹೋಗಿ ಒಂದು ಕಡೆ ಹಾಕುವುದು, ಕಣ್ಣು ಬಿಟ್ಟ ಮೇಲೆ ಆ ಹುಡುಗ ಜಾಗವನ್ನು ಹುಡುಕಿ ಕಡ್ಡಿಯನ್ನು ತೆಗೆದುಕೊಂಡು ಬರುವುದು… ಹೀಗೆ ಒಂದೇ ಎರಡೇ ಅವರ ಆಟಗಳು. 

   ಆ ಮಕ್ಕಳಿಗೆ ಯಾರ ಅಂಕೆಯೂ ಇರುತ್ತಿರಲಿಲ್ಲ. ಎಲ್ಲೋ ಒಮ್ಮೊಮ್ಮೆ ಮಾಲೀಕರು ಬಂದರೆಂದರೆ ಎದ್ದೇನೋ, ಬಿದ್ದೆನೋ ಎಂದು ಓಡಿ ಹೋಗಿ, ಅಲ್ಲಿಯೇ ದೂರದಲ್ಲಿ ರಾತ್ರಿಯ ಅಡುಗೆಗೆ ತಯಾರಿ ಮಾಡಿಕೊಳ್ಳುತ್ತಿರುವ ಅಮ್ಮಂದಿರ ಬೆನ್ನ ಹಿಂದೆ ಅಡಗಿಕೊಳ್ಳುವುದು ಮಾಡುತ್ತಿದ್ದರು. ಆ ಮಕ್ಕಳ ಮುಖದ ಮೇಲಿನ ಸಂತೋಷವನ್ನು ಯಾರೂ ಅಳೆಯುವಂತಿರಲಿಲ್ಲ. ಶಾಲೆಯ ಯಾವ ಒತ್ತಡವೂ ಅವರ ಸಂತೋಷವನ್ನು ಕುಗ್ಗಿಸುವಂತಿರಲಿಲ್ಲ. 

   ಥಟ್ಟನೆ ನನ್ನ ಗಮನ ಒಬ್ಬಳು ಮಹಿಳೆಯತ್ತ ವಾಲಿತು. ಐದಾರು ವರ್ಷದ ಮಗುವನ್ನು ಕರೆದುಕೊಂಡು ತರಕಾರಿಯನ್ನೋ/ ಸಾಮಗ್ರಿಯನ್ನೋ ತೆಗೆದುಕೊಂಡು ಬರುತ್ತಿದ್ದಳು. ಯಾರೋ ಪರಿಚಯದವರು ಸಿಕ್ಕಿದರೆಂದು ಮಾತಿಗೆ ನಿಂತಳು. ತಕ್ಷಣ ಆ ಮಗು ಮೆಲ್ಲನೆ ಅಮ್ಮನ ಕೈ ಬಿಡಿಸಿಕೊಂಡು ಆ ಮರಳಿನ ರಾಶಿಯತ್ತ ಓಡಿತು. ಎಷ್ಟೋ ದೂರದಿಂದ ಮರಳಿನಲ್ಲಿ ಆಡುತ್ತಿದ್ದ ಮಕ್ಕಳನ್ನು ಆಸೆಯ ಕಣ್ಣುಗಳಿಂದ ನೋಡುತ್ತಾ ಬಂದಿತ್ತು. ಒಂದೇ ನಿಮಿಷದಲ್ಲಿ ಆ ಮಕ್ಕಳೊಡನೆ ಗೆಳೆತನ ಬೆಳೆಸಿಕೊಂಡು ಅವರೊಡನೆ ಒಂದಾಗಿ ಮರಳಿನಲ್ಲಿ ಆಡತೊಡಗಿತು. ಅದರ ಮುಖದಲ್ಲಿ ಹರ್ಷದ ಹೊನಲೇ ಹರಿದಿತ್ತು.

    ಇತ್ತ ಮಹಿಳೆಯ ಮಾತು ಮುಗಿದ ನಂತರ ಗಮನ ಪಕ್ಕಕ್ಕೆ ಹರಿಯಿತು. ತನ್ನ ಕೈಯಲ್ಲಿ ಮಗು ಇಲ್ಲದಿರುವುದನ್ನು ಗಮನಿಸಿ ಗಾಬರಿಯಿಂದ ಸುತ್ತಮುತ್ತಲೂ ಕಣ್ಣಾಡಿಸಿದಾಗ ಮಗು ಮರಳಿನಲ್ಲಿ ಆಡುತ್ತಿದ್ದುದನ್ನು ಗಮನಿಸಿ ಕೋಪದಿಂದ ಧಾವಿಸಿದಳು. “ಮಣ್ಣಿನಲ್ಲಿ ಆಡ್ತಾ ಇದ್ದೀಯಾ? ಅದೂ ಈ ಕೂಲಿ ಮಕ್ಕಳ ಜೊತೆ. ಏನಾದ್ರೂ ಕಾಯಿಲೆ, ಗೀಯಿಲೆ ಬಂದರೆ ಏನ್‌ ಗತಿ? ಮನೆಗೆ ಬಾ, ಅಪ್ಪನ ಹತ್ತಿರ ಹೇಳಿ ನಿನಗೆ ಸರಿಯಾಗಿ ಮಾಡಿಸ್ತೀನಿ’ ಅಂತ ಬೈದು ದರದರನೆ ಎಳೆದುಕೊಂಡೇ ಹೋದಳು. ಆ ಮಗುವಂತೂ “ಅಮ್ಮಾ ಪ್ಲೀಸ್‌, ಸ್ವಲ್ಪ ಹೊತ್ತು ಆಡಿ ಬರಿ¤àನಮ್ಮಾ, ಬಿಡಮ್ಮಾ’ ಅಂತ ಕೈ ಕೊಸರಿಕೊಳ್ಳುತ್ತಲೇ ಇತ್ತು. ಆ ಮಗುವನ್ನು ನೋಡುತ್ತಿದ್ದ ನನಗೆ ಕನಿಕರವಾಗತೊಡಗಿತು. 

   ಇದನ್ನೆಲ್ಲ ನೋಡುತ್ತಿದ್ದಂತೆ ನನ್ನ ಮನಸ್ಸು 50 ವರ್ಷಗಳ ಹಿಂದಿನ ಇತಿಹಾಸದ ಪುಟಗಳನ್ನು ರಪರಪನೆ ತಿರುಗಿಸಿತು. ಆ ದಿನಗಳಲ್ಲಿ ನಾವೂ ಇದೇ ರೀತಿ ಮರಳಿನ ರಾಶಿ ಕಂಡರೆ ಸಾಕು ಹುಚ್ಚೆದ್ದು ಕುಣಿಯುತ್ತಿದ್ದೆವು. ಒಬ್ಬೊಬ್ಬರ ಮನೆಗಳಲ್ಲೂ ಆರೇಳು ಮಕ್ಕಳು. ಎಲ್ಲರ ಮನೆಯ ಮಕ್ಕಳೂ ಸೇರಿದರೆ ಒಂದು ಮಕ್ಕಳ ಸೈನ್ಯವೇ ಸೃಷ್ಟಿಯಾಗುತ್ತಿತ್ತು. ಮನೆಯ ಮುಂದೆ ವಿಶಾಲವಾದ ಜಾಗವಿರುತ್ತಿತ್ತು. ಇದೇ ನಮ್ಮ ಆಟದ ಮೈದಾನ. ಈಗಿನ ಮಕ್ಕಳಂತೆ ಆಟವಾಡಲು ಪಾರ್ಕ್‌, ಮೈದಾನಗಳನ್ನು ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯತೆಯೇನೂ ಇರಲಿಲ್ಲ. ಮನೆ ಕಟ್ಟಲು ನದಿಯಿಂದ ತಂದು ಸುರಿದ ಮರಳಿನ ರಾಶಿ ನಮಗೆ ಸ್ವರ್ಗಕ್ಕೆ ಸಮಾನವಾಗಿತ್ತು. ಎಲ್ಲರೂ ಸೇರಿ ನಮ್ಮ ಕನಸಿನ ಅರಮನೆಯನ್ನು ಕಟ್ಟುತ್ತಿದ್ದೆವು. ಅದಕ್ಕೆ ಒಂದು ಬಾಗಿಲು. ಒಳಗೆ ಹೋಗಲು ದಾರಿ. ಎರಡೂ ಬದಿ ಕಾಂಪೌಂಡ್‌ನ‌ಂತೆ ಮರಳಿನ ಆವರಣ. ಮನೆಯ ಬಳಿ ಇರುವ ಹೂವು, ಗಿಡಗಳಿಂದ ಮರಳಿನ ಮನೆಯನ್ನು ಅಲಂಕರಿಸುತ್ತಿದ್ದೆವು. ಯಾವುದಾದರೂ ತುಂಟ ಹುಡುಗ ಹಿಂದಿನಿಂದ ಬಂದು ಕಷ್ಟಪಟ್ಟು ಕಟ್ಟಿದ್ದ ಮನೆಯನ್ನು ಮೆಲ್ಲಗೆ ಬೀಳಿಸಿಬಿಡುತ್ತಿದ್ದ. ನಾವು ಅಳುತ್ತಾ ಹೋಗಿ ಅವನ ಅಮ್ಮನ ಹತ್ತಿರ ದೂರು ನೀಡುತ್ತಿದ್ದೆವು. ಅವನಿಗೆ ನಾಲ್ಕು ಪೆಟ್ಟು ಬಿದ್ದಮೇಲೆಯೇ ನಮಗೆ ಸಮಾಧಾನವಾಗುತ್ತಿದ್ದುದು.

ಅಷ್ಟಾದ ಮೇಲೆ, ಕೈ, ಮೈ, ಬಟ್ಟೆಗೆಲ್ಲಾ ಮಣ್ಣು ಮೆತ್ತಿಕೊಂಡು ಬಂದ ನಮಗೆ ತಾಯಿಯಿಂದ ನಿತ್ಯವೂ ಸಹಸ್ರ ನಾಮಾರ್ಚನೆಯಾಗುತ್ತಿತ್ತು. “ನಾಳೆಯಿಂದ ಮಣ್ಣಿನಲ್ಲಿ ಆಡಲು ಹೋದರೆ ಜಾಗ್ರತೆ. ಸ್ಕೂಲಿಗೆ ಬಂದು ನಿಮ್ಮ ಟೀಚರಿನ ಹತ್ತಿರ ಹೇಳುತ್ತೇನೆ’ ಎನ್ನುತ್ತಿದ್ದರು. ಅವರು ಹೇಳುತ್ತಲೂ ಇರಲಿಲ್ಲ. ನಾವು ಆಡುವುದನ್ನು ಬಿಡುತ್ತಲೂ ಇರಲಿಲ್ಲ. 

  ವಾರಕ್ಕೊಮ್ಮೆ ರಜಾದಿನದಂದು ಎರಡು ಮೂರು ಮನೆಯ ಹೆಂಗಸರು ಸೇರಿ ಬಟ್ಟೆ ಒಗೆಯಲು ಹತ್ತಿರದಲ್ಲಿದ್ದ ಕೆರೆ ಅಥವಾ ನದಿಗೆ ತೆರಳುತ್ತಿದ್ದರು. ತಾಯಂದಿರೊಂದಿಗೆ ಮಕ್ಕಳ ಸೈನ್ಯವೂ ಕೆರೆ, ನದಿಯತ್ತ ಧಾವಿಸುತ್ತಿತ್ತು. ಹಾಗೆ ಬಂದು ಈಜು ಕಲಿತವರು ಎಷ್ಟೋ ಜನ. ಅವರು ಮೆಲ್ಲಗೆ ನೀರಿಗಿಳಿಯುತ್ತಿದ್ದರು. ಅಮ್ಮನ ಕೆಲಸ ಮುಗಿಯುವ ತನಕ ನೀರಿನಲ್ಲಿ ಈಜಾಡುತ್ತಾ ಆನಂದಿಸುತ್ತಿದ್ದರು. ನದಿಯಿಂದ ಬರುವಾಗ ದಡದಲ್ಲಿದ್ದ ಜೇಡಿಮಣ್ಣನ್ನು ಉಂಡೆ ಮಾಡಿ ತರುತ್ತಿದ್ದರು. ಅದರಿಂದ ಸಣ್ಣ ಸಣ್ಣ ಮಡಕೆಗಳು, ಪಾತ್ರೆಗಳು, ಬೊಂಬೆ, ಒಲೆಗಳಂತೆ ಮಾಡಿ ಮನೆಯಾಟ ಆಡುತ್ತಾ ಸಂಭ್ರಮಿಸುತ್ತಿದ್ದರು. ಮನೆಯಾಟ ಆಡಿ ಎಂದು ಆಟದ ಸಾಮಾನುಗಳನ್ನು ದುಡ್ಡು ಕೊಟ್ಟು ತೆಗೆದುಕೊಡುತ್ತಿದ್ದುದು ಭಾರೀ ಅಪರೂಪ.

ಮದುವೆಯಾದ ನಂತರ ಸಮುದ್ರತೀರದ ಊರಿಗೇ ಬಂದು ಸೇರಿದ ಮೇಲೆ ಹಿಂದಿನ “ಮಣ್ಣಿನ ವಾಸನೆ’ ಆಗಾಗ ಮೂಗಿಗೆ ಬಡಿಯುತ್ತಿತ್ತು. ಮನೆಗೆ ಯಾರಾದರೂ ನೆಂಟರು ಬಂದರೆ ಎಲ್ಲರೂ ಒಟ್ಟಾಗಿ ಸಮುದ್ರ ವೀಕ್ಷಿಸಲು ತೆರಳುತ್ತಿದ್ದೆವು. ನೀರಿನಲ್ಲಿ ಸ್ವಲ್ಪ ಸಮಯ ಆಟವಾಡಿ, ನಂತರ ಮರಳಿನಲ್ಲಿ ಕುಳಿತು ಕೈಯಿಂದ ಮರಳನ್ನು ಕೆದಕುತ್ತಾ ಸಮುದ್ರವನ್ನು ನೋಡುವುದು ಪ್ರಿಯವಾಗಿತ್ತು. ರಜೆ ಕಳೆಯಲೆಂದು ಬಂದಿದ್ದ ಮಕ್ಕಳು- ಮೊಮ್ಮಕ್ಕಳ ಜೊತೆ ನಾವೂ ಮಕ್ಕಳಾಗಿ ಬಿಡುತ್ತಿದ್ದೆವು. ಮರಳಿನಲ್ಲಿ ಕಪ್ಪೆಗೂಡನ್ನು ಕಟ್ಟುವುದು, ದೊಡ್ಡ ಪಿರಾಮಿಡ್‌ನ‌ ಗೋಪುರದಂತೆ ಮರಳನ್ನು ಒಟ್ಟುಗೂಡಿಸಿ ಕೆಳಭಾಗದಲ್ಲಿ ನಾಲ್ಕೂ ಕಡೆಯಿಂದ ರಂಧ್ರಗಳನ್ನು ಕೊರೆಯುತ್ತಿದ್ದೆವು. ಒಬ್ಬರ ಕೈ ಇನ್ನೊಬ್ಬರ ಕೈಗೆ ಒಳಭಾಗದಲ್ಲಿ ತಾಗಿದಾಗ ಕಪ್ಪೆಗೂಡು ಪೂರ್ಣವಾದಂತೆ. ಇಷ್ಟೆಲ್ಲಾ ಕಷ್ಟಪಟ್ಟು ಕಟ್ಟಿದ ಗೂಡು ಕಡೆಯ ಹಂತದಲ್ಲಿರುವಾಗ ಕೆಲವು ಸಲ ಬಿದ್ದು ಹೋಗುತ್ತಿತ್ತು. “ಮರಳಿ ಯತ್ನವ ಮಾಡು’ ಎಂಬಂತೆ ಮತ್ತೆ ಪ್ರಯತ್ನ ಶುರುವಾಗುತ್ತಿತ್ತು. ಸುತ್ತಲೂ ಬಿದ್ದಿರುವ ಶಂಖ, ಕಪ್ಪೆಚಿಪ್ಪುಗಳನ್ನೆಲ್ಲಾ ಅಂಟಿಸಿ ಚೆಂದ ನೋಡುತ್ತಿದ್ದೆವು. ಎರಡೂ ಕಾಲಿನ ಪಾದಗಳನ್ನು ಮರಳಿನಿಂದ ಮುಚ್ಚಿ ಮೆಲ್ಲಗೆ ಕಾಲನ್ನು ಹೊರಗೆಳೆಯುತ್ತಿದ್ದೆವು.  

  ಹೀಗೆ ಮಣ್ಣು, ಮರಳು ನಮ್ಮ ಬಾಲ್ಯದಲ್ಲಿನ ಆಟದ ಒಂದು ಸಾಮಾನ್ಯ ವಸ್ತುವಾಗಿಬಿಟ್ಟಿದ್ದಿತು. ಇತ್ತೀಚೆಗೆ ಮಕ್ಕಳು ಮರಳಿನಲ್ಲಿ ಆಡುವ ದೃಶ್ಯವೇ ಅಪರೂಪವಾಗಿಬಿಟ್ಟಿದೆ. ಅವರಿಗೆ ಆಡಲು ಮಣ್ಣೇ ಇಲ್ಲ. ಎಲ್ಲಾ ಕಡೆಯೂ ಕಾಂಕ್ರೀಟ್‌ಮಯ. ಅವರ ದೃಷ್ಟಿಯಲ್ಲಿ ಆಟ ಎಂದರೆ ಕ್ರಿಕೆಟ್‌. ಅದು ಬಿಟ್ಟರೆ ಕಂಪ್ಯೂಟರ್‌. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಜಡತ್ವವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಆಡಲು ಜಾಗದ ಕೊರತೆ. ಆಟಕ್ಕಾಗಿ ತುಂಬಾ ದೂರದಲ್ಲಿರುವ ಮೈದಾನವನ್ನು ಹುಡುಕಿಕೊಂಡು ಹೋಗಬೇಕು. ಫ್ಲ್ಯಾಟ್‌ಗಳಲ್ಲಿ ಆಟವಾಡಿದರೆ ಕಾರುಗಳ ಗ್ಲಾಸ್‌, ಲೈಟ್‌ಗಳು ಒಡೆದು ಹೋಗುತ್ತವೆಂದು ಮಾಲೀಕರ ಕಂಪ್ಲೇಂಟ್‌.

  ತಾಯಂದಿರ ಅಪ್ಪಣೆಯಿಲ್ಲದೆ ಮಕ್ಕಳು ಮಣ್ಣನ್ನು ಮುಟ್ಟುವಂತೆಯೇ ಇಲ್ಲ. ಮುಟ್ಟಿದರೆ ಡೆಟಾಲ್‌, ಲೈಫ್ಬಾಯ್‌ನಂಥ ಸಾಬೂನುಗಳಿಂದ ಕೈ ತೊಳೆಯಲೇಬೇಕು. ಎಲ್ಲವೂ ಹೈಟೆಕ್‌, ಹೈಜಿನಿಕ್‌. ಆದರೆ, ಬೀದಿಯಲ್ಲಿ ಮಣ್ಣಿನಲ್ಲಿ ಆಡುತ್ತಾ, ಅದೇ ಕೈಯಲ್ಲಿ ಏನನ್ನಾದರೂ ತಿಂದು ಬೆಳೆಯುತ್ತಿರುವ ಮಕ್ಕಳೇ ನಿಜವಾಗಿಯೂ ಆರೋಗ್ಯವಂತರು. ಅತಿಯಾದ ಕಾಳಜಿ ತೋರುತ್ತಾ ತಮ್ಮ ಮಕ್ಕಳನ್ನು ತಾವೇ ಹಾಳು ಮಾಡುತ್ತಿದ್ದಾರೆ ಆಧುನಿಕ ಅಮ್ಮಂದಿರು. ಎಲ್ಲಿಗೆ ಹೋಗುವುದಾದರೂ ಮಕ್ಕಳನ್ನೂ ಜೊತೆಗೇ ಕರೆದುಕೊಂಡು ಹೋಗಿ ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಲ್ಲದೆ ಅವರನ್ನು ಪರಾವಲಂಬಿಗಳಂತೆ ಬೆಳೆಸುತ್ತಿದ್ದಾರೆ. ಅತಿಯಾದ ಶಿಸ್ತು ಮತ್ತು ಬಂದೋಬಸ್ತಿನಿಂದ ಬೆಳೆದ ಮಕ್ಕಳು ಸ್ವಲ್ಪ ಅವಕಾಶ ಸಿಕ್ಕಿದರೂ ಹೆತ್ತವರಿಗೆ ಸುಳ್ಳು ಹೇಳಿ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುತ್ತಾರೆ ಎಂಬುದು ಅಪ್ರಿಯವಾದರೂ ಕಟು ಸತ್ಯ. 

   ಮನೆಯ ಹೊರಗೆ ಆಟವಾಡದ ಮಕ್ಕಳು ವ್ಯಾಯಾಮದ ಕೊರತೆಯಿಂದ ದೈಹಿಕವಾಗಿಯೂ, ಮಾನಸಿಕವಾಗಿಯೂ ದುರ್ಬಲರಾಗುತ್ತಿದ್ದಾರೆ. ತಮ್ಮ ಮಕ್ಕಳು ತಮ್ಮ ಸ್ಟೇಟಸ್‌ಗಿಂತ ಕಡಿಮೆಯಿರುವ ಮಕ್ಕಳ ಜೊತೆ ಬೆರೆಯಬಾರದು ಎಂಬ ಹಿರಿಯರ ಧೋರಣೆಯು ಅವರ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಾ ಸಮಾಜದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. “ವೈದ್ಯನ ಮಗ ರೋಗಗ್ರಸ್ಥ’ ಎಂಬಂತೆ ಹೆತ್ತವರ ಅತಿಯಾದ ಕಾಳಜಿ ಮಕ್ಕಳನ್ನು ದಾರಿ ತಪ್ಪಿಸಬಹುದು. ಈಗೀಗ ಅದೆಷ್ಟೋ ಮಕ್ಕಳು ಪ್ರಪಂಚ ಏನೆಂದು ಅರ್ಥ ಮಾಡಿಕೊಳ್ಳುವ ಮೊದಲೇ ಮಾನಸಿಕ ಖನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಒಂದು ದೊಡ್ಡ ದುರಂತ.

  ಹೀಗಾಗಿ ಮಕ್ಕಳ ಕಳೆದುಹೋದ ಬಾಲ್ಯ ಮತ್ತೂಮ್ಮೆ ಬರಲಾರದು. ಮಕ್ಕಳನ್ನು ಬಾಲ್ಯ ಸಹಜ ಆಟಗಳಿಂದ ವಂಚಿತರಾಗಿಸಬೇಡಿ. ದಿವಸ ಒಂದೆರಡು ಗಂಟೆಯ ಕಾಲ ಹೊರಗಡೆ ಮನಸೋ ಇಚ್ಛೆ ಆಡಲು ಬಿಡಿ. ಇದರಿಂದ ದೈಹಿಕವಾಗಿಯೂ, ಮಾನಸಿಕವಾಗಿಯೂ ಸದೃಢರಾಗುತ್ತಾರೆ. ಮೂರು ಹೊತ್ತು ಓದಲು ಒತ್ತಡ ಹಾಕುತ್ತಾ, ನಾಲ್ಕು ಗೋಡೆಗಳ ಮಧ್ಯದ ಕೀಟಗಳನ್ನಾಗಿಸಬೇಡಿ. ಈಗಂತೂ ರಜೆ. ಆ ದಿನಗಳಲ್ಲಿಯಾದರೂ ಮಕ್ಕಳಿಗೆ ಸ್ವಾತಂತ್ರ್ಯ ನೀಡಿ. ಬದುಕಿನ ಸವಿನೆನಪುಗಳನ್ನು ಸವಿಯಲು ಅವಕಾಶ ನೀಡಿ. ಇತರ ಮಕ್ಕಳೊಂದಿಗೆ ಬೆರೆತು ಆಡುವ ಸಂಸ್ಕಾರ, ಸೌಜನ್ಯಗಳನ್ನು ಕಲಿಸಿಕೊಡುವುದು ಉತ್ತಮ. “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬಾಲ್ಯಾವಸ್ಥೆಯಂ’ ಎಂದು ಇನ್ನೊಮ್ಮೆ ಬಾಲ್ಯಾವಸ್ಥೆಗೆ ಮರಳ್ಳೋಣವೇ?

ಪುಷ್ಪಾ ಎನ್‌.ಕೆ. ರಾವ್‌, ಉಡುಪಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.