CONNECT WITH US  

ನಾಳೆಯ ತಿಂಡಿಗೆ ಏನ್ಮಾಡ್ಲಿ?

ಪ್ರತಿಮನೆಯ ಗೃಹಿಣಿಯ ಸ್ವಗತ

"ಬೆಳಗಿನ ತಿಂಡಿಗೇನು ಮಾಡಲಿ?' ಎಂಬ ಜ್ವಲಂತ ಸಮಸ್ಯೆ, ಎಲ್ಲ ಗೃಹಿಣಿಯರಿಗೆ ಪ್ರತಿರಾತ್ರಿಯೂ ಜೊತೆಯಾಗಿ ನಿದ್ದೆಗೆಡಿಸಿಬಿಡುತ್ತದೆ. ಒಬ್ಬರಿಗೆ ಒಪ್ಪಿತವಾದ ತಿಂಡಿ ಮಗದೊಬ್ಬರಿಗೆ ವಜ್ಯì. ಹಿರಿಯರು ಬಯಸುವುದು ಕಿರಿಯರಿಗೆ ಒಪ್ಪಿಗೆಯಿಲ್ಲ. ದಿನಾ ವಿಪರೀತ ಮಸಾಲೆ, ಉಪ್ಪು ಖಾರದ ಆಹಾರ ಆರೋಗ್ಯಕ್ಕೆ ಹಿತವಲ್ಲ. ಎಲ್ಲರ ವೈವಿಧ್ಯತೆಯ ಉಣಿಸು ತಯಾರಿಸುವ ಕಾರ್ಯದ ಜವಾಬ್ದಾರಿಗೆ ಹೆಗಲು ಕೊಡಬೇಕಿರುವುದು ಮನೆಯ ಯಜಮಾನಿ...

"ನಾಳೇನೂ ನನ್ನ ಲಂಚ್‌ಬಾಕ್ಸ್ ಗೆ ಅವರೆಕಾಳಿನ ಬಾತ್‌ ಬೇಕು. ನನ್ನ ಫ್ರೆಂಡ್‌ ಜೊತೆ ಶೇರ್‌ ಮಾಡ್ಕೊಬೇಕು. ಅದನ್ನೇ ತರ್ತೀನಿ ಅಂದಿದ್ದೇನೆ' ಮಗಳ ಹಟ. "ಮಾಮ್‌, ನಾಳೆ ನಂಗೆ ಬೇಗ ಹೊರಡಲೇಬೇಕು. ರೈಸ್‌ಬಾತ್‌ ಸಾಕು. ಸ್ವಲ್ಪ ಬೇಗ ಕೊಟ್ಟರೆ ಕ್ಯಾಂಟೀನ್‌ಗೆ ದುಡ್ಡು ಹಾಕಬೇಕಿಲ್ಲ. ಅಲ್ಲಿಯದು ತುಂಬಾ ಖಾರ. ಬಾಯಿಗಿಡೋಕಾಗೋಲ್ಲ' ಮಗನ ಮೆತ್ತಗಿನ ಬೇಡಿಕೆ.

   "ನಿನ್ನೆ ಹೆರಳೆಕಾಯಿ ತಗೊಂಡೆ ನೋಡು. ಆಮೇಲಿಂದ ಅದರ ಚಿತ್ರಾನ್ನ ತಿನ್ನಬೇಕೂ ಅನ್ನಿಸ್ತಿದೆ. ಸ್ವಲ್ಪ ನಿಧಾನವಾದರೂ ಪರವಾಗಿಲ್ಲ. ಚೆನ್ನಾಗಿ ಕಲಸಿಬಿಡು ಚಿತ್ರಾನ್ನ'... ವಯಸ್ಸಾಗಿ ಬಾಯಿ ರುಚಿ ಇಲ್ಲದ ಅತ್ತೆಮ್ಮನಿಗೆ ಹೆರಳೆಕಾಯಿ ರಸ ಹಿಂಡಿ ಮಾಡಿದ ಚಿತ್ರಾನ್ನದ ಹಂಬಲ. ಪಾಪ, ನಾಲಿಗೆಗೆ ಎಲ್ಲವೂ ರುಚಿಸುವುದಿಲ್ಲ. ಇನ್ನು ಕೈ ಹಿಡಿದಾತನ ಡಿಮ್ಯಾಂಡ್‌ ಏನಿದೆಯೋ? ಹೇಳಿದ್ದು ತಟ್ಟೆಗೆ ಬೀಳದೆ ಹೋದರೆ ಹಾಗೇ ಅದನ್ನು ನೂಕಿ ತಳ್ಳಿ ಹೊರಡುತ್ತಾರೆ ಆಫೀಸಿಗೆ. ಹೊರಗಿನ ಆಹಾರ ಅವರಿಗೆ ಹಿಡಿಸುವುದೇ ಇಲ್ಲ. ಮೊದಲೇ ಮುಂಗೋಪ ಬೇರೆ. ಮನೆ ಯಜಮಾನ ಉಪವಾಸ ಹೋದರೆ ತನಗೆಲ್ಲಿ ನೆಮ್ಮದಿ? ದುಡಿದು ಸಂಪಾದಿಸಿ ತರುವ ಪತಿಗೆ ಬೇಕಾದ ಹಾಗೆ ಊಟ, ತಿಂಡಿ ಮಾಡಿ ಬಡಿಸಲು ತನಗೆ ಇಷ್ಟವೇ. ಆದರೆ, ಈಗಾಗಲೇ ದೊಡ್ಡ ಲಿಸ್ಟ್ ಅನ್ನೇ ಮುಂದಿಟ್ಟಾಗಿದೆ. ಮಕ್ಕಳದು ಬೇರೆ; ಅತ್ತೆಮ್ಮನದು ಬೇರೆ. ಇರುವ ನಾಲ್ಕು ಜನರಿಗೆ ನಾಲ್ಕು ವಿಧದ ಉಪಾಹಾರ. ಕೇಳಿದ್ದು ತಯಾರಿಸಬೇಕಾದರೆ ತಾನು ಅದೆಷ್ಟು ನಸುಕಿಗೆ ಏಳಬೇಕೋ? ನಿದ್ದೆ ಸರಿಯಿಲ್ಲವಾದರೆ ತಲೆ ಸಿಡಿತ ಶುರು. ಹೋಗಲಿ; ಒಂದೇ ತಿಂಡಿ ಸಾಕು. ಎಲ್ಲ ಅದನ್ನೇ ತಿನ್ನಲಿ ಎಂದರೆ, ಮಗಳಿಗೆ ಅವಳು ಹೇಳಿದ್ದೇ ಬೇಕು. ಇಲ್ಲದೆ ಹೋದರೆ, ಹಾಗೇ ಹೋಗುತ್ತಾಳೆ ಸ್ಕೂಲಿಗೆ. ವಾರವಿಡೀ ಅವರೆ ಕಾಳು ಉಪ್ಪಿಟ್ಟು ಮಾಡಿದರೂ ಆಕೆಗೆ ಸಂಭ್ರಮವೇ. 

  ಮಲಗಲು ತಯಾರಿ ನಡೆಸಿದ್ದ ತಾರಾಳಿಗೆ ಗಂಡನ ರಿಕ್ವೆಸ್ಟ್ ಬಂತು.   "ಚೌ ಚೌ ಭಾತ್‌ ತಿನ್ನದೆ ಸುಮಾರು ದಿನವಾಯ್ತು. ಆಗಲೇ ಹೇಳಬೇಕು ಅಂತಿದ್ದೆ. ಅದೇ ಇರಲಿ, ಬೆಳಗಿನ ಉಪಾಹಾರಕ್ಕೆ. ಸ್ವಲ್ಪ ಹೆಚ್ಚಿಗೆ ಇದ್ದರೆ ಲಂಚ್‌ಬಾಕ್ಸ್ ಗೂ ಹಾಕ್ಕೊಳ್ಳಬಹುದು. ಚೆನ್ನಾಗಿರುತ್ತೆ. ಹಾಗೇ ಒತ್ತು ಶ್ಯಾವಿಗೆಯೂ ಇರಲಿ. ನಾಡಿದ್ದು ಸಂಡೇ ಸ್ಪೆಷಲ್‌ ಆಗಿ, ನನ್ನ ಇಬ್ಬರು ಫ್ರೆಂಡ್ಸನ್ನು ಊಟಕ್ಕೆ ಕರೆದಿದ್ದೇನೆ. ಹಾಲು ಖೀರೂ ಇರಲಿ ಜೊತೆಗೆ ಚೆನ್ನಾಗಿರುತ್ತೆ. ನಿಧಾನಕ್ಕೆ ಎದ್ದು ಹಾಯಾಗಿ ಒತ್ತುಶ್ಯಾವಿಗೆ ತಿನ್ನೋಣ ಅಂತ'...

  ಉತ್ತರಿಸಲೂ ಶಕ್ತಿ ಸಾಲದು ಎನ್ನಿಸಿತು ತಾರಾಳಿಗೆ. ನನಗೂ ಹಾಗೇ ಅಲ್ವಾ? ಅನ್ನುವ ಪ್ರಶ್ನೆ ಎದ್ದಿತು. ರವಿವಾರ ಎಲ್ಲರಿಗೆ ರಜೆ, ಹಾಗೆ ತನಗೂ ಸ್ಕೂಲಿಗೆ ರಜಾ ಇದ್ದರೂ ಅಡುಗೆಮನೆಯಿಂದ ಮಾತ್ರ ರಜಾ ಇಲ್ಲ. ಸಂಡೇ ಸ್ಪೆಷಲ್‌ ತಯಾರಿಗೆ ನಿತ್ಯಕ್ಕಿಂತ ಹೆಚ್ಚಿಗೆ ಕೆಲಸ. ಸಣ್ಣಕ್ಕೆ ತಲೆ ಸಿಡಿತದ ಸೂಚನೆ ಇದ್ದಿದ್ದು ಗಂಡನ ಮಾತು ಕೇಳಿದ ಮೇಲೆ ಹೆಚ್ಚಾಗತೊಡಗಿತು. ಒತ್ತು ಶ್ಯಾವಿಗೆ ಮಾಡು ಅಂದರೆ ಅದು ಬಾಳೇಹಣ್ಣು ಸುಲಿದು ತಿಂದಷ್ಟು ಸುಲಭವಾ? ನಾಲ್ಕು ಕೈಗಳಿದ್ದರೂ ಅವರವರ ಹೊತ್ತಿಗೆ ತಯಾರಿಸಲಾಗದು ತನ್ನ ಕಡೆಯಿಂದ. ನೆರವಿಗೆ ಯಾರೂ ಇಲ್ಲ. ಎಲ್ಲರೂ ಅವರವರ ಇಷ್ಟದ ತಿಂಡಿಗೆ ಕೇಳುತ್ತಾರೇ ಹೊರತು ಅದನ್ನೆಲ್ಲ ಸಿದ್ಧಪಡಿಸಿ ಎದುರಿಗೆ ಇರಿಸುವ ಅಮ್ಮನಿಗೇನಿಷ್ಟ ಎಂದು ಕೇಳುವುದೇ ಇಲ್ಲ ಒಂದ್ಸಲಾನೂ. ಹೌದು. ತನಗೇನಿಷ್ಟ? ಪ್ರಶ್ನೆ ನುಗ್ಗಿಬಂತು ಆಕೆಗೆ. ಊಹೂ. ನೆನಪಾಗ್ತಿಲ್ಲ. ಅಥವಾ ಇವರೆಲ್ಲರ ಇಷ್ಟಾನಿಷ್ಟಗಳ ಪೂರೈಸುವಲ್ಲಿ ತಾನು ತನ್ನ ಆಸೆ, ಅಭೀಷ್ಟಗಳನ್ನೆಲ್ಲ ಬಿಟ್ಟುಬಿಟ್ಟೆ... ತಾರಾ, ಸಿಡಿಯುವ ತಲೆಗೆ ಅಮೃತಾಂಜನ ಹಚ್ಚಿ ನಿದ್ದೆಗಾಗಿ ಕಣ್ಮುಚ್ಚಿದಾಗ ಕಣ್ಣೆದುರಿಗೆ ಸುಳಿದಿದ್ದು ವಿವಾಹಕ್ಕೆ ಮೊದಲು ತನಗೆ ಪರಮಪ್ರಿಯವಾಗಿದ್ದ ರಾಗಿ ಮುದ್ದೆ, ಬಸ್ಸಾರು, ಸೊಪ್ಪಿನ ಪಲ್ಯ. ತನ್ನಮ್ಮ ಅದೆಷ್ಟು ಚೆನ್ನಾಗಿ ಮಾಡ್ತಿದ್ದರು ಅದನ್ನು. ಅಂದು ಆಸೆಯಿಂದ ತಿನ್ನುತ್ತಿದ್ದ ರಾಗಿಮು¨ªೆ, ಬಸ್ಸಾರು, ಪಲ್ಯದ ಸವಿಗೆ ಈಗಲೂ ಬಾಯಿ ನೀರೂರುತ್ತಿದೆ. ತಮ್ಮಲ್ಲಿ ಅದು ಯಾರಿಗೂ ಹಿಡಿಸದ ಆಹಾರ. ತನ್ನೊಬ್ಬಳಿಗೋಸ್ಕರ ತಯಾರಿಸಲು ವ್ಯವಧಾನವೆಲ್ಲಿದೆ? ಮಕ್ಕಳು ದೊಡ್ಡವರಾದ ಮೇಲೆ ಸಮೀಪದ ಸ್ಕೂಲಿನಲ್ಲಿ ಟೀಚರ್‌ ಆಗಿ ಕೆಲಸ ಮಾಡುವ ಕಾರಣ ಸಮಯದ ಅಭಾವ ಬೇರೆ. ಆಗಾಗ ತಾನೆದ್ದು ಅವಸರದಲ್ಲಿ ಉಪಾಹಾರ ತಯಾರಿಗೆ ಶುರು ಹಚ್ಚುವ ಕನಸು ವಾರಕ್ಕೆ ನಾಲ್ಕಾರು ಬಾರಿಯಾದರೂ ತಪ್ಪಿದ್ದಲ್ಲ... ತಲೆ ನೋವಿನಿಂದ ನಿದ್ದೆ ಸುಳಿಯದಾದಾಗ ತಾರಾಳಿಗೆ ಇದು ತನ್ನೊಬ್ಬಳ ಮನೆಯ ಸಮಸ್ಯೆ ಮಾತ್ರವೇನಾ ಅಥವಾ ಎಲ್ಲಾ ಮನೆಗಳಲ್ಲೂ ಇದೇ ಹಾಡಾ ಎಂಬ ಸಂದೇಹ ಮೂಡಿತು.

  ಸಾಮಾನ್ಯವಾಗಿ ಮಕ್ಕಳಿರುವ ಎಲ್ಲ ಮನೆಗಳಲ್ಲಿ ತಾಯಂದಿರ ನಿತ್ಯದ ಸಮಸ್ಯೆ ಇದು. ಒಬ್ಬರಿಗೆ ಒಪ್ಪಿತವಾದ ತಿಂಡಿ ಮಗದೊಬ್ಬರಿಗೆ ವಜ್ಯì. ಹಿರಿಯರು ಬಯಸುವುದು ಕಿರಿಯರಿಗೆ ಒಪ್ಪಿಗೆಯಿಲ್ಲ. ದಿನಾ ವಿಪರೀತ ಮಸಾಲೆ, ಉಪ್ಪು ಖಾರದ ಆಹಾರ ಆರೋಗ್ಯಕ್ಕೆ ಹಿತವಲ್ಲ. ಎಲ್ಲರ ವೈವಿಧ್ಯತೆಯ ಉಣಿಸು ತಯಾರಿಸುವ ಕಾರ್ಯದ ಜವಾಬ್ದಾರಿಗೆ ಹೆಗಲು ಕೊಡಬೇಕಿರುವುದು ಮನೆಯ ಯಜಮಾನಿ. ಅದು ಇಂದಿಗೂ ಅಲಿಖೀತ ಸಂಪ್ರದಾಯ. "ಎವೆರಿ ಲಾ ಹ್ಯಾಸ್‌ ಇಟ್ಸ್‌ ಓನ್‌ ಎಕ್ಸೆಪ್ಶರ್ಟ್' ಅಂತ ಹೇಳಿಕೆ ಇದೆ. ಅದರಂತೆ ಪತಿ, ಪತ್ನಿ ಪರಸ್ಪರ ಸಹಕರಿಸಿ ಮನೆಯ ಆಹಾರ ತಯಾರಿಯ ಹೊಣೆ ಹೊರುವುದೂ ಇದೆ. ಇಬ್ಬರೂ ಉದ್ಯೋಗಸ್ಥರಾದಲ್ಲಿ ಸಹಕಾರ ಅನಿವಾರ್ಯ. ದಿನಾ ಹೊರಗಿನ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಹಾನಿ. ಜೊತೆಗೆ ರೆಸ್ಟುರಾಗಳಿಗೆ ವೆಚ್ಚ ಮಾಡುವ ಕಾಲುಭಾಗದ ಮೊತ್ತದಲ್ಲಿ ಮನೆಯಲ್ಲಿ ಎಲ್ಲರಿಗೂ ಆಹಾರ ತಯಾರಿಸಬಹುದು. ತಾರಾಳ ಮನೆಯ ಪ್ರಶ್ನೆ ನಮ್ಮ, ನಿಮ್ಮ ಮನೆಯದೂ ಆಗಿರಬಹುದು. ಗೃಹಿಣಿಯ ಹೆಗಲಿಗೆ ದೈನಂದಿನ ಆಹಾರದ ವ್ಯವಸ್ಥೆಯ ಹೊಣೆಗಾರಿಕೆ ಇರುವುದರ ಜೊತೆಗೆ ಮನೆಯವರ ಅಭಿಪ್ರಾಯ, ಆಸೆಗೆ ಆದ್ಯತೆ ಕೊಡಲೇಬೇಕಾಗುತ್ತದೆ. 

  ಎಳೆಯರು ಬಯಸುವ ತಿಂಡಿ, ತಿನಿಸು ಅದೆಷ್ಟೇ ಕಷ್ಟವಾದರೂ ಮಾಡಿ ಕೊಡದಿರಲು ತಾಯಂದಿರಿಗೆ ಮನಸ್ಸೂಪ್ಪುವುದಿಲ್ಲ. ಏಕೆಂದರೆ, ಅವರು ಅಮ್ಮಂದಿರು. ಸ್ವಂತವನ್ನು ಬದಿಗಿಟ್ಟು ಮಕ್ಕಳ ಆಸೆಯನ್ನು ಈಡೇರಿಸುತ್ತಾರೆ. ತಾರಾ ಕೂಡಾ ಅಂಥ ಒಬ್ಬ ತಾಯಿ. ಅವಳಂತೆ ಮುನ್ನಾ ರಾತ್ರಿಯೇ ಮಾರನೇ ದಿನ ಯಾವ ತಿಂಡಿ ತಯಾರಿಸಲಿ ಎಂಬ, ಮೇಲ್ನೋಟಕ್ಕೆ ಸಣ್ಣದು ಅನ್ನಿಸುವ; ಆದರೆ, ಅಪಾರ ಪ್ರಾಮುಖ್ಯತೆಯ ಸಮಸ್ಯೆ ಮನೆಯೊಡತಿಯರ ನಿದ್ದೆಯನ್ನು ಕಸಿಯುತ್ತದೆ. ಇದು ಮನೆ ಮನೆಯ ತಾಯಂದಿರ ತಲೆನೋವು. ಒಬ್ಬರಿಗಾದುದು ಇನ್ನೊಬ್ಬರಿಗೆ ಹಿಡಿಸದು. ಅವರೊಪ್ಪಿದ್ದು ಇವರಿಗಾಗದು. ಎಲ್ಲರೂ ಒಪ್ಪುವ ತಿನಿಸು ಇನ್ನೂ ಸೃಷ್ಟಿಯಾಗೇ ಇಲ್ಲ.

   ಮೇಲೆ ಉಲ್ಲೆಖೀಸಿದ ತಿನಿಸುಗಳು ಆ ಮನೆಯವರ ಮೆಚ್ಚಿನವು. ತಾವು ಹೇಳಿದ್ದನ್ನು ತಾರಾ ತಯಾರಿಸಲಿ ಎಂಬಾಸೆ. ರೈಸ್‌ಬಾತ್‌, ಟೊಮೆಟೊ ಬಾತ್‌, ಈರುಳ್ಳಿ ಬಾತ್‌, ಬಿಸಿಬೇಳೆ ಬಾತ್‌ ತಟ್ಟೆಇಡ್ಲಿ, ಶಾವಿಗೆ ಬಾತ್‌, ಚೌ ಚೌ ಬಾತ್‌, ವಾಂಗಿಬಾತ್‌, ಖಾರಾಬಾತ್‌, ಅಕ್ಕಿರೊಟ್ಟಿ, ಅವರೆ ಉಪ್ಪಿಟ್ಟು ಹೀಗೆ ತರಹೇವಾರಿ ತಿಂಡಿಗಳ ಸಾಮ್ರಾಜ್ಯವೇ ಇದೆ. ಒಂದರ ಟೇಸ್ಟ್ ಮತ್ತೂಂದಕ್ಕಿಲ್ಲ. ಮನೆಯ ಹಿರಿಯರಿಗೆ ಗೊಜ್ಜವಲಕ್ಕಿ, ಹುಳಿಯವಲಕ್ಕಿ, ಕಡಲೆ ಉಸುಲಿ, ಹೆಸರು ಕಾಳು ಉಸುಲಿ, ಹೆರಳೆಕಾಯಿ ಚಿತ್ರಾನ್ನ, ನಿಂಬೆ ಹಣ್ಣಿನ ಚಿತ್ರಾನ್ನ ಅಂದರೆ ಬಲು ಹಿತ. ಸೊಪ್ಪು ದಿನಾ ಬೇಕು. ಅದು ಆರೋಗ್ಯದ ದೃಷ್ಟಿಯಿಂದಲೂ ಅಗತ್ಯ. 

  ಅನಾದಿಕಾಲದಿಂದಲೂ ಆಹಾರ ತಯಾರಿಯ ಹೊಣೆಗಾರಿಕೆ ಮಹಿಳೆಯರದು ಎಂಬ ಸಿದ್ಧಾಂತದಲ್ಲಿ ಇಂದಿಗೂ ಹೆಚ್ಚೇನೂ ಬದಲಾವಣೆಯಾಗಿಲ್ಲ. ಮನೆ ಎಂದ ಮೇಲೆ ಪತಿ, ಪತ್ನಿ, ಹಿರಿಯರು, ಮಕ್ಕಳು ಇರುತ್ತಾರೆ. ಕೆಲವೊಮ್ಮೆ ಇಬ್ಬರದೇ ಸಂಸಾರವೂ ಆಗಿರಬಹುದು. ಆದರೆ ಇರುವ ಸದಸ್ಯರ ಜಿಹ್ವಾಚಾಪಲ್ಯ ತಣಿಸುವ ಜವಾಬ್ದಾರಿ ಯಜಮಾನಿಯದೇ. ಅನಿವಾರ್ಯವಾದಾಗ ಬದಲಾವಣೆಗಾಗಿ ರೆಸ್ಟುರಾ ಹೊಕ್ಕರೂ, ನಿತ್ಯದ ಆಹಾರ ತಯಾರಿಯ ಜವಾಬ್ದಾರಿಗೆ ಹೆಗಲು ಕೊಡಬೇಕಾಗುವುದು ಮನೆಯೊಡತಿ. ಮಕ್ಕಳ ಹಂಬಲ ಪೂರೈಸುವಷ್ಟರಲ್ಲಿ ತಾಯಿ ಸುಸ್ತು. ಏರಿದ ಖರ್ಚು ವೆಚ್ಚಗಳು, ಕೈ ಹಿಡಿತ ಮಾಡಬೇಕಾದ ಅಗತ್ಯವನ್ನು ಎಚ್ಚರಿಸುತ್ತದೆ. ಹಾಗೆಂದು, ಬೆಳಗ್ಗೆ ತಯಾರಿಸಿದ ತಿನಿಸು ಅವರವರ ಆಯ್ಕೆಯದಲ್ಲವಾದಲ್ಲಿ ಮುಖ ಊದಿಕೊಳ್ಳುತ್ತದೆ. ಅದೆಷ್ಟು  ಶ್ರಮದಾಯಕ ಕೆಲಸವಾದರೂ ಮನೆಯವರು ಕೇಳಿದಾಗ ಆಕೆ ತಯಾರಿಸದೇ ಇರಲಾರಳು. ಭಾಷೆ, ಆಚಾರ, ವಿಚಾರ, ಸಂಪ್ರದಾಯ ಬೇರೆ ಬೇರೆಯದಿದ್ದರೂ ಬೆಳಗಿನ ತಿಂಡಿಗೇನು ಮಾಡಲಿ ಎಂಬ ಜ್ವಲಂತ ಸಮಸ್ಯೆ ಪ್ರತಿರಾತ್ರಿಯೂ ಜೊತೆಯಾಗಿ ಗೃಹಿಣಿಯ ನಿದ್ದೆಗೆಡಿಸುತ್ತದೆ. ಇಂದು  ಮಾಡಿದ ತಿನಿಸು ನಾಳೆಗೆ ಪುನಃ ಫ್ರೆಶ್‌ ಆದರೂ ಬೇಡ, ಹೊಸತಿರಲಿ; ಆ ವಾರಕ್ಕೇ ಅಗತ್ಯವಿಲ್ಲ. ದಿನಕ್ಕೊಂದು ತಿಂಡಿ ಇರಲಿ ಬ್ರೇಕ್‌ಫಾಸ್ಟ್ ಗೆ, ಅದು ಸ್ವಾದಿಷ್ಟವಾಗಿರಲಿ; ಮನೆಯವರೆಲ್ಲರೂ ಒಪ್ಪಿ, ಮೆಚ್ಚಿ ಸೇವಿಸುವ ಹಾಗಿರಲಿ ಎಂಬುದು ಎಲ್ಲರ ಬಯಕೆ. ಹಾಗಾಗಿಯೇ ಮನೆ ಯಜಮಾನಿಯ ನಿದ್ದೆ ಕೆಡಿಸಿ ಆತಂಕ, ತಲೆನೋವು ಹೆಚ್ಚಿಸುವ ಪ್ರಶ್ನೆ- ಈಗ ಹೇಳಿ, ನಾಳೆಯ ತಿಂಡಿಗೆ ನಾನೇನು ಮಾಡಲಿ? 

ಕೃಷ್ಣವೇಣಿ ಕಿದೂರು


Trending videos

Back to Top