CONNECT WITH US  

ಅಮ್ಮನ ಇಮೇಲ್‌ ರಾಮಬಾಣ

ಎಲ್ಲ ಹೆಣ್ಮಕ್ಕಳೂ ಓದುಬೇಕಾದ ಪತ್ರ

ನಾನು ಅಡುಗೆ ಮಾಡಿ ಒಮ್ಮೊಮ್ಮೆ ಮೇಲ್‌ ಚೆಕ್‌ ಮಾಡಲು ಕೂತಿರುತ್ತಿದ್ದೆ. ನೋಡಿದರೆ ಅಮ್ಮನ ಇಮೇಲ್‌. ಒಮ್ಮೆ ಕಣ್ಣು ಹಾಯಿಸಿದಾಗ, ಅಯ್ಯೋ ಎಷ್ಟೊಂದು ಬರೆದಿದ್ದಾರೆ ಅಂದುಕೊಂಡೆ. ಎಲ್ಲರ ಜೊತೆ ಹಂಚಿಕೊಂಡರೆ ಒಳಿತು ಅಲ್ಲವೇ? ಮೇಲ್‌ನ ಒಕ್ಕಣೆ ಇಲ್ಲಿದೆ...

ಮುದ್ದಿನ ಮಗಳೇ,
ಹೇಗಿದ್ದೀ? ಹೇಗಿದೆ ಹೊಸ ಸಂಸಾರ? ನೀನು ಮತ್ತು ಅಳಿಯ ಸದಾ ಕ್ಷೇಮವಾಗಿರಲಿ ಎಂದು ನಾನು ನಿತ್ಯವೂ ದೇವರಲ್ಲಿ ಪ್ರಾರ್ಥಿಸುತ್ತೇನೆ.

  ಎಷ್ಟೋ ದಿವಸಗಳಿಂದ ನಿನಗೊಂದು ಇಮೇಲ್‌ ಪತ್ರ ಬರೆಯಬೇಕೆಂದು ಕಾದಿದ್ದೆ. ಅದಕ್ಕೆ ಪುರುಸೊತ್ತೇ ಸಿಕ್ಕಿರಲಿಲ್ಲ. ಕೊನೆಗೂ ಈಗ ಮುಹೂರ್ತ ಕೂಡಿಬಂದಿದೆ. ಮನೆಕೆಲಸ ಮುಗಿಸಿ, ಕೊಟ್ಟಿಗೆಯಲ್ಲಿ ಹಸುಗಳನ್ನು ಉಪಚರಿಸಿ ಬಂದು ಅಡುಗೆ ಮಾಡೋಷ್ಟರಲ್ಲಿ ಸಾಕ್‌ ಸಾಕಾಗಿ ಹೋಗಿರುತ್ತೆ. ನಂತರ ಅಡುಗೆ ತಯಾರಿ. ಊಟ ಮುಗಿಸಿದ ಮೇಲೆ ತುಸು ವಿರಮಿಸಬೇಕು ಅನ್ಸುತ್ತೆ ಕಣೇ. ಯಾಕೋ ಮುಂಚಿನಂತೆ ಲವಲವಿಕೆ ಇಲ್ಲ. ಬೇಗ ಸುಸ್ತಾಗ್ತಿನಿ. ಇತ್ತೀಚೆಗೆ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಿತ್ತು. ಗೃಹಿಣಿ ಅಂದಮೇಲೆ ಇದೆಲ್ಲ ಕಾಮನ್‌.

 ಬಹುಶಃ ಇವೆಲ್ಲ ಅನುಭವ ಮುಂದೆಯೂ ನಿನಗೆ ಆಗುತ್ತೆ. ಹಾಗಾಗಿ, ನೀನು ಈಗಿನಿಂದಲೇ ಫಿಟ್‌ ಆಗ್ಬೇಕು. ಸಣ್ಣಪುಟ್ಟ ತೊಂದರೆಗಳಿಗೆಲ್ಲ ಮನೆಯಲ್ಲಿಯೇ ಮದ್ದು ತಯಾರಿಸಿ, ಆರೋಗ್ಯವಂತೆ ಆಗಬೇಕೆಂಬುದು ನನ್ನಾಸೆ. ನನ್ನ ಮೇಲ್‌ ನೋಡಿ ನೀನು ಬೇಜಾರು ಮಾಡದೇ, ಇದರಲ್ಲಿರುವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳು ಎಂದು ಭಾವಿಸುತ್ತೇನೆ.

  ಮೊನ್ನೆ ನೀನು ಅಪ್ಪನ ಬಳಿ ಫೋನ್‌ನಲ್ಲಿ ಮಾತಾಡುವಾಗ, ಏನೋ ನೆಗಡಿ, ಕೆಮ್ಮೆ, ಹೊಟ್ಟೆ ಉರಿ ಅಂತೆಲ್ಲ ಹೇಳುತ್ತಿದ್ದೀ. ಮದುವೆಗೂ ಮುನ್ನ ನಿನಗೆ ಏನಾದರೂ ಹೇಳಿದರೆ, ಅದನ್ನು ನೀನು ತಲೆಗೇ ಹಾಕಿಕೊಳ್ತಿರಲಿಲ್ಲ. ಇನ್ನು ಮುಂದೆಯಾದರೂ ಬೆಳಗ್ಗೆ ಎದ್ದ ಕೂಡಲೇ 2-3 ಲೋಟ ನೀರು ಕುಡಿದರೆ, ತಲೆನೋವು, ಮೈಕೈ ನೋವು, ಸಕ್ಕರೆ ಕಾಯಿಲೆ, ಕಣ್ಣು ನೋವು, ಗರ್ಭಕೋಶದ ಸಮಸೈ ಹಾಗೂ ಕಣ್ಣು- ಕಿವಿ- ಗಂಟಲಿನ ಬಾಧೆಗಳು ಮಾಯವಾಗುವುದಂತೂ ನಿಜ. ನಮಗೆಲ್ಲ ಅನುವಂಶಿಕವಾಗಿ ಸಕ್ಕರೆ ಕಾಯಿಲೆ ಬಂದಿದೆ. ಹಾಗಾಗಿ, ನೀನು ಈಗಿನಿಂದಲೇ ಎರಡು ಚಮಚ ಮೆಂತ್ಯೆಯನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗಿನ ಜಾವ ಎದ್ದಕೂಡಲೇ ಕುಡಿದರೆ, ಸಕ್ಕರೆ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದು. ಆ ಕುರುಕಲು, ಎಣ್ಣೆ ತಿಂಡಿಗಳನ್ನು ತಿಂದು ಕೊಲೆಸ್ಟೆರಾಲ್‌ ಜಾಸ್ತಿ ಆಯಿತು ಎಂದರೆ, ಅದಕ್ಕೇನು ತಲೆಕೆಡಿಸಿಕೊಳ್ಬೇಡ. 2 ಚಮಚ ಜೇನು ತುಪ್ಪ ಹಾಗೂ 3 ಚಮಚ ಚಕ್ಕೆ ಪುಡಿಯನ್ನು, ಗ್ರೀನ್‌ ಟೀ ಜೊತೆ ಕುಡಿದರೆ, ದೇಹದಲ್ಲಿನ ಅನಗತ್ಯ ಕೊಬ್ಬಿನಂಶ ದೂರವಾಗುತ್ತೆ.

   ನನಗೆ ಮೂಳೆ ನೋವು. ಡಾಕ್ಟರ್‌ಗೆ ತೋರಿಸಿದಾಗ, ಸಂಧಿವಾತ ಅಂತಂದರು. ಆಗ ನನಗೆ ನಿನ್ನ ಅಜ್ಜಿ ಹೇಳಿದ್ದ ಮನೆಔಷಧಿ ನೆನಪಿಗೆ ಬಂತು. ಒಂದು ಕಪ್‌ ಬಿಸಿನೀರಿಗೆ 1 ಟೀ ಚಮಚ ಜೇನುತುಪ್ಪ ಹಾಗೂ ಚಕ್ಕೆಪುಡಿ ಸೇರಿಸಿ ಕುಡಿದೆ. ಮೂಳೇನೋವೇ ಮಾಯ. ನಿನಗೂ ಮುಂದೆ ಹೀಗೆಯೇ ಆದ್ರೆ, ಇದನ್ನೇ ಮಾಡು.

  ಇದು ಮಳೆಗಾಲ ಬೇರೆ. ಯಾವಾಗ ಫೋನ್‌ ಮಾಡಿದ್ರೂ, ಕೆಮ್ಮು- ನೆಗಡಿ ಅಂತಿರುತ್ತೀಯ. ಒಂದು ಟೇಬಲ್‌ ಚಮಚ ಜೇನು ತುಪ್ಪಕ್ಕೆ ಕಾಲು ಚಮಚ ಚಕ್ಕೆ ಪುಡಿ ಹಾಕಿ 3 ದಿನ ತಗೊಂಡು ನೋಡು. ಕೆಮ್ಮು- ನೆಗಡಿ ಎಲ್ಲೋ ಹೊರಟು ಹೋಗಿರುತ್ತೆ. ಇನ್ನು ನಿನ್ನ ಗಂಡನಿಗೆ ಹೇಳು, ನೀನು ತವರು ಮನೆಗೆ ಬಂದಾಗ, ಅವನು ಹೋಟೆಲ್‌ಗೆ ಊಟಕ್ಕೆ ಹೋಗೋದು ಬೇಡ ಅಂತ. ಅಕಸ್ಮಾತ ತಿಂದೂ ಹೊಟ್ಟೆ ತೊಳೆಸುತ್ತಿದ್ದರೆ ಅಥವಾ ಅಜೀರ್ಣವಾದರೆ, ಅದಕ್ಕೂ ಒಂದು ಉಪಾಯವಿದೆ. ಒಂದು ಟೀ ಚಮಚ ಜೇನು ತುಪ್ಪಕ್ಕೆ ಕಾಲು ಚಮಚ ಚಕ್ಕೆಪುಡಿ ಸೇರಿಸಿ, ಒಂದು ಕಪ್‌ ನೀರಿನಲ್ಲಿ ಶುಂಠಿಯ ತುಣುಕು ಸೇರಿಸಿ, ಅದನ್ನು ಕುಡಿಯಬೇಕು. ಹಾಗೆಯೇ ಎರಡು ಚಮಚ ಚಕ್ಕೆ ಪುಡಿ ಜೊತೆ ಒಂದು ಚಮಚ ಜೇನು ತುಪ್ಪ ಹಾಕಿ, ಬಿಸಿನೀರಿನಲ್ಲಿ ಕುಡಿದರೂ ಸಮಸ್ಯೆಗೆ ಪರಿಹಾರ ಸಿಗುತ್ತೆ. ನಿತ್ಯವೂ ಇದನ್ನು ತೆಗೆದುಕೊಂಡರೆ, ವೈರಲ್‌ ಫೀವರ್‌ ಬರುವುದೇ ಇಲ್ಲ.

  ಮಗಳೇ ನಿನ್ನ ಮೊಡವೆಗಳು ಹೇಗಿವೆ? ಮದುವೆ ಹೊತ್ತಿನಲ್ಲಿ ಅದೇ ತಾನೆ ನಿನಗೆ ಚಿಂತೆಯಾಗಿ ಕಾಡಿದ್ದು? ಮೇಲೆ ಹೇಳಿದಂತೆ ಮೂರು ಚಮಚ ಜೇನು ತುಪ್ಪ, ಒಂದು ಚಮಚ ಚಕ್ಕೆ ಪುಡಿ ಸೇರಿಸಿ ರಾತ್ರಿ ಮಲಗುವ ಮುಂಚೆ ಮುಖಕ್ಕೆ ಹಚ್ಚಿ ಬೆಳಗ್ಗೆ ಮುಖ ತೊಳೆಯಬೇಕು. ಒಂದೆರಡು ವಾರಗಳೊಳಗೆ ಮೊಡವೆಗಳು ಮಾಯವಾಗುತ್ತವಂತೆ. ನನಗೆ ಇದನ್ನು ಪಕ್ಕದ ಮನೆಯ ಸಾವಿತ್ರಿ ಹೇಳಿದಳು.

  ಜ್ವರ ಬಂದಾಗ ಆದಷ್ಟು ಬಿಸಿನೀರನ್ನೇ ಕುಡೀಬೇಕು. ಜೇನು ತುಪ್ಪದ ಜೊತೆಗೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿದರೆ ಕಫ‌, ಕೆಮ್ಮಿನೊಂದಿಗೆ ಹೊರಗೆ ಬರುತ್ತೆ. ಇದನ್ನು ದಿವಸಕ್ಕೆ 2-3 ಸಲ ಮಾಡಬೇಕು. ನೀನು ಯಾವಾಗಲೂ ಐಸ್‌ಕ್ರೀಮ್‌ ತಿಂದು ಗಂಟಲು ನೋವು ಅಂತಲೇ ಇರಿ¤àಯ. ಅರ್ಧ ಚಮಚ ಮೆಣಸಿನಪುಡಿ, ತಲಾ ಒಂದೊಂದು ಚಮಚದಂತೆ ಚಕ್ಕೆಪುಡಿ, ಶುಂಠಿ ಪುಡಿ ಮತ್ತು ಜೇನುತುಪ್ಪವನ್ನು ಒಂದು ಲೋಟದಲ್ಲಿ ಬೆರೆಸಿ, ದಿನಕ್ಕೆರಡು ಬಾರಿ ಸೇವಿಸಬೇಕು. ಬಾಯಿ ವಾಸನೆ ಬಂದರೆ, ಜೇನುತುಪ್ಪ ಹಾಗೂ ಚಕ್ಕೆಪುಡಿಯನ್ನು ನೀರಿನಲ್ಲಿ ಸೇರಿಸಿ, ಬಾಯಿ ಮುಕ್ಕಳಿಸಿದರೆ ಒಳ್ಳೆಯ ಫ‌ಲಿತಾಂಶ ಸಿಗುತ್ತದೆ.

  ಪುಟ್ಟಾ... ಸುಖವಾದ ಆರೋಗ್ಯಯುತ ಸಂಸಾರಕ್ಕೆ ಇವು ಅತ್ಯಮೂಲ್ಯ ಸಲಹೆ. ಮರೆಯದೇ ಪಾಲಿಸು. ಗಂಡನ ಆರೋಗ್ಯವನ್ನೂ ಚೆನ್ನಾಗಿ ನೋಡಿಕೋ.

ಇತಿ ನಿನ್ನ ಅಮ್ಮಾ

ಹೀರಾ ರಮಾನಂದ್‌


Trending videos

Back to Top