CONNECT WITH US  

ಒಬ್ಬರೇ ಮದುವೆ ಆಗ್ತಾರೆ!

ನನಗೆ ನೀನಲ್ಲ; ನನಗೆ ನಾನು!

ಅಲ್ಲಿ ವರ ಇರುವುದಿಲ್ಲ. ತನ್ನನ್ನು ತಾನೆ ವರಿಸಿಕೊಳ್ಳುತ್ತಾಳೆ ಹೆಣ್ಣು. ವಿದೇಶದ ಸಂಪ್ರದಾಯಬದ್ಧ ಮನಸ್ಸುಗಳ ನಿದ್ದೆಗೆಡಿಸಿರುವ ಈ "ಸೋಲೊಗಾಮಿ ಮದುವೆ' ವಿಶ್ವವನ್ನು ನಿಧಾನಕ್ಕೆ ಆವರಿಸುತ್ತಿದೆ.  ಯಾಕೆ ಮಹಿಳೆ ಹಾಗೆ ತನ್ನನ್ನೇ ತಾನು ಮದುವೆ ಆಗ್ತಾಳೆ?

ಅದೊಂದು ವಿಶೇಷ ಸಂದರ್ಭ. ದೇಶದಲ್ಲೇ ಪ್ರಥಮ ಬಾರಿಗೆ ನಡೆಯುತ್ತಿರುವುದರಿಂದ ಎಲ್ಲರಿಗೂ ಕುತೂಹಲ. 41 ವರ್ಷದ ಲಾರಾ ಮೆಸಿಗೆ ಮದುವೆಯ ಸಡಗರ. ತಾನೇ ಇಷ್ಟಪಟ್ಟು ಆರಿಸಿದ ಬಿಳಿ ಗೌನ್‌, ತಲೆಗೆ ತೆಳು ಹೊದಿಕೆಯ ಸಾಂಪ್ರದಾಯಿಕ ಉಡುಪು ತೊಟ್ಟು ಖುುಷಿಯಿಂದ ನಡೆದುಬಂದ ವಧುವ‌ತ್ತ ಆಹ್ವಾನಿತರಾಗಿದ್ದ ಸುಮಾರು 80 ಜನರ ಗಮನ ಕೇಂದ್ರೀಕೃತವಾಗಿತ್ತು. ಮದುವೆಯ ನಂತರದ ಪಾರ್ಟಿಗೆ ದೊಡ್ಡ ಚೆಂದದ ಕೇಕ್‌, ಡಾನ್ಸ್‌ ಮತ್ತು ಈಜಿಪ್ಟ್ಗೆ ಹನಿಮೂನ್‌ಗೆ ಕೂಡಾ ತಯಾರಿ ನಡೆದಿತ್ತು. ಎಲ್ಲವೂ ಸರಿ, ವಿಶೇಷವೇನು? ವಧು, ವರ ಬೇರೆಯಲ್ಲ- ಲಾರಾಳೇ! 

  ಅದು ತನ್ನನ್ನು ತಾನೇ ವರಿಸುವ ಸೊಲೊಗಾಮಿ ಮದುವೆ! ನವವಧು ಹೇಳಿದ್ದು "ನನ್ನ ಮುಂದಿನ ದಿನಗಳನ್ನು ಹಂಚಿಕೊಳ್ಳಲು ಸರಿಯಾದ ವ್ಯಕ್ತಿ ಸಿಕ್ಕರೆ ನನಗೆ ಸಂತೋಷವೇ. ಆದರೆ, ನನ್ನ ಸಂತೋಷ ಆತನ ಮೇಲೆ ಅವಲಂಬಿತವಾಗಿಲ್ಲ. ನನ್ನ ನಂಬಿಕೆ ಪ್ರಕಾರ, ಪ್ರತಿಯೊಬ್ಬರೂ ಮೊದಲು ನಮ್ಮನ್ನು ನಾವು ಪ್ರೀತಿಸಬೇಕು. ರಾಜಕುಮಾರ ಇಲ್ಲದೆಯೂ ಫೇರಿಟೇಲ್‌ ಸಾಧ್ಯವಿದೆ.'

  ಇಂದು ವಿದೇಶದಲ್ಲೆಡೆ ಜನಪ್ರಿಯವಾಗುತ್ತಿರುವ ಸೊಲೊಗಾಮಿಯನ್ನು ಮೊದಲು ಮಾಡಿ ತೋರಿಸಿದ್ದು 1993ರಲ್ಲಿ ಅಮೆರಿಕೆಯ ಲಿಂಡಾ ಬೇಕರ್‌. ತನ್ನ ನಲವತ್ತನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಆಕೆ ಕೈಗೊಂಡಿದ್ದು ಈ ಸ್ವವಿವಾಹವನ್ನು! ಮದುವೆ ಎಂದರೆ, ಇಬ್ಬರು ವ್ಯಕ್ತಿಗಳನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಬೆಸೆಯುವ ಸಂಬಂಧ, ಮಧುರ ಅನುಬಂಧ. ಹಾಗೆಯೇ ಸಂತಾನವನ್ನು ಪಡೆದು, ಪ್ರೀತಿ ಮತ್ತು ಜವಾಬ್ದಾರಿಯಿಂದ ಮಕ್ಕಳನ್ನು ಬೆಳೆಸಿ ಸಮಾಜಕ್ಕೆ ನೀಡುವ ಉದ್ದೇಶವೂ ಅಡಗಿದೆ. ಹೀಗಿರುವಾಗ ಈ ರೀತಿಯ ಮದುವೆ ಸಮಂಜಸವೇ? ಕುಟುಂಬ ಎನ್ನುವ ಮೂಲಭೂತ ಪರಿಕಲ್ಪನೆಗೆ ಇದು ವಿರುದ್ಧವಲ್ಲವೇ? ಕೇವಲ ಮಹಿಳೆಯರೇ ಆಗುತ್ತಿರುವುದರಿಂದ ಸಮಾನತೆ- ಸ್ವಾತಂತ್ರ್ಯ ಎನ್ನುವ ಹೆಸರಿನಲ್ಲಿ ಇದು ಸ್ವಮೋಹ ಹೊಂದಿರುವ ಮಹಿಳೆಯರ ಕ್ರೇಜ್‌ ಅನ್ನಿಸುತ್ತದೆ- ಹೀಗೆ ಈ ಸ್ವವಿವಾಹದ ಬಗ್ಗೆ ಅನೇಕ ಪ್ರಶ್ನೆ, ವಿರೋಧ, ಸಂಶಯಗಳು ವ್ಯಕ್ತವಾಗುತ್ತಿದೆ.

 ಯುವತಿಯರಲ್ಲಿ ಏಕೆ ಈ ಸ್ವವಿವಾಹ ಜನಪ್ರಿಯವಾಗುತ್ತಿದೆ ಎಂಬುದಕ್ಕೆ ಅನೇಕ ಕಾರಣಗಳಿವೆ. ವಿದ್ಯಾಭ್ಯಾಸ ಪಡೆದ ಮಹಿಳೆಯರು ವೃತ್ತಿಪರರಾಗಿದ್ದಾರೆ, ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆ. ರೂಢಿಗತ ಸಂಪ್ರದಾಯಗಳನ್ನು ಪಾಲಿಸುವ ಮನಸ್ಸಿಲ್ಲ. ಅಂದರೆ, ಬಾಲ್ಯದಿಂದಲೇ ಒಳ್ಳೆಯ ಗಂಡ, ಮದುವೆ, ಮಕ್ಕಳೇ ಹೆಣ್ಣಿನ ಅಂತಿಮಗುರಿ ಎನ್ನುವುದನ್ನು ಒಪ್ಪಲು ಸಾಧ್ಯವಾಗುತ್ತಿಲ್ಲ. ಆದರೆ, ಸಮಾಜದಲ್ಲಿ ಇನ್ನೂ ಮದುವೆ ಎನ್ನುವ ಪದಕ್ಕೆ ಮತ್ತು ಅದರೊಂದಿಗೇ ಸಿಗುವ ಮನ್ನಣೆಯನ್ನು ಸಾರಾಸಗಟಾಗಿ ತಿರಸ್ಕರಿಸಲೂ ಸಾಧ್ಯವಾಗುತ್ತಿಲ್ಲ. ಅನೇಕ ಬಾರಿ ತಮ್ಮ ಆಸೆ- ಆಕಾಂಕ್ಷೆಗಳನ್ನು ಬದಿಗಿಟ್ಟು ಮದುವೆಯಾದರೂ ಹೊಂದಾಣಿಕೆ ಏಕಮುಖವಾದಾಗ ಮನಸ್ಸಿಗೆ ಆಘಾತ. ಅತ್ತ ಕುಟುಂಬವೂ ಇಲ್ಲ, ಇತ್ತ ವೃತ್ತಿಗೂ ಪೆಟ್ಟು. ಇದೆಲ್ಲದರ ಜತೆ ಆತ್ಮವಿಶ್ವಾಸಕ್ಕೆ ಧಕ್ಕೆ. ಎಲ್ಲವೂ ಸರಿಯಾಗಿದ್ದಾಗ ಕುಟುಂಬ ಸರಿ. ಆದರೆ, ಇತ್ತೀಚಿನ ದಿನಗಳಲ್ಲಿ ಹಾಗಾಗುತ್ತಿಲ್ಲ. ವಿಚ್ಛೇದನ, ಕೌಟುಂಬಿಕ ದೌರ್ಜನ್ಯಗಳೇ ಹೆಚ್ಚು. ಎಲ್ಲರಿಗೂ ಅಲ್ಲ; ಕೆಲವರಿಗಾದರೂ ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಮದುವೆಯಾದವರು ಎಂಬ ಮನ್ನಣೆಯನ್ನೂ ಪಡೆಯಬೇಕಾದರೆ ಸ್ವವಿವಾಹ ಒಂದು ಆಯ್ಕೆಯಾಗಿದೆ.

   ಮದುವೆ ಈಗ ಲಾಭದಾಯಕ ಉದ್ಯಮ. ಸ್ವವಿವಾಹವೂ ವ್ಯಾವಹಾರಿಕವಾಗಿಬಿಟ್ಟಿದೆ. ಅಮೆರಿಕಾ, ಕೆನಡಾ ಮತ್ತು ಜಪಾನ್‌ಗಳಲ್ಲಿ ಇದಕ್ಕಂತಲೇ ಏಜೆನ್ಸಿಗಳಿವೆ. ಡ್ರೆಸ್‌, ಒಂದು ಉಂಗುರ, ಹೂವಿನ ಗುತ್ಛ, ಐಷಾರಾಮಿ ಕಾರು, ಊಟದ ಜತೆ ಹನಿಮೂನ್‌ ಹೆಸರಲ್ಲಿ ಟ್ರಿಪ್‌ ಕೂಡಾ ಪ್ಯಾಕೇಜಿನಲ್ಲಿ ಪಡೆಯಬಹುದು! ಏನಿದ್ದರೂ ಎಲ್ಲವೂ ನಾನು, ನನ್ನಿಷ್ಟ!! 
 ಸ್ವವಾಹ, ಮಳೆಯರ ಆಯ್ಕೆ ಅಥವಾ ಕೆಲವು ದಿನಗಳಷ್ಟೇ ಇರುವ ಟ್ರೆಂಡ್‌ ಯಾವುದನ್ನೂ ಕಾಲವೇ ತಿಳಿಸಬೇಕು!

ಯಾಕೆ ಹಿಂಗೆ ಮದುವೆ ಆಗ್ತಾರೆ?
"ಹೆಚ್ಚಿನ ಸಲ ಹಿಂದಿನ ಕೆಟ್ಟ ಸಂಬಂಧ‌ ಅಥವಾ ನೋವಿನ ನೆನಪುಗಳಿಂದ ಹೊರಬರುವ ಮಾರ್ಗವೂ ಇದಾಗಿರಬಹುದು' ಎಂದು ವಿಶ್ಲೇಷಿಸುತ್ತಾರೆ ಮನಃಶಾಸ್ತ್ರಜ್ಞರು. "ತನ್ನನ್ನು ತಾನು ಪ್ರೀತಿಸುವುದು, ಇದ್ದಂತೆ ಸ್ವೀಕರಿಸುವುದು ಬಹಳ ಮುಖ್ಯ. ಹಾಗಾಗಿಯೇ ಕೆಲಮಟ್ಟಿಗೆ ಇದು ಮಾನಸಿಕ ನೆಮ್ಮದಿಯನ್ನು ನೀಡಬಹುದು. ಆದರೆ, ಬದುಕಲು ಇತರರೂ ಬೇಕು. ಬರೀ ನಾನು ಎನ್ನುವುದು ಸರಿಯಲ್ಲ. ತನ್ನನ್ನೇ ತಾನು ನಂಬಿ, ಪ್ರೀತಿಸಿ, ತನ್ನ ಅಗತ್ಯಗಳಿಗೇ ಪ್ರಾಶಸ್ತ್ಯ ನೀಡಿ ಬದುಕುತ್ತಾ ಹೋದಲ್ಲಿ ಸ್ವಮೋಹಿಗಳಾಗುವ ಸಾಧ್ಯತೆ ಹೆಚ್ಚಿದೆ. ಇತರರನ್ನು ಅಥವಾ ತನ್ನನ್ನು ಯಾರನ್ನಾದರೂ ಸಮಾಜದ ಸಲುವಾಗಿ ಮದುವೆಯಾಗುವುದು ಸರಿಯಲ್ಲ. ಮಹಿಳೆಗೆ ಸಮಾಜದಿಂದ ಮದುವೆ ಕುಟುಂಬದ ಬಗ್ಗೆ ಹೆಚ್ಚಿನ ಒತ್ತಡಗಳಿವೆ ಎಂಬುದು ಸತ್ಯ. ಅದು ಬದಲಾಗಬೇಕು. ಹಾಗೆಂದು ಸಂಗಾತಿಯೇ ಬೇಡ ಎನ್ನುವುದೂ ತಪ್ಪು. ಇಬ್ಬರು ವ್ಯಕ್ತಿಗಳು ಕೂಡಿ ಬಾಳಬೇಕಾದರೆ ಕೆಲಮಟ್ಟಿಗಿನ ಹೊಂದಾಣಿಕೆ ಅನಿವಾರ್ಯ. ಅನೇಕ ಬಾರಿ ಮದುವೆ ಇಲ್ಲದಿದ್ದರೇ ಒಳ್ಳೆಯದಿತ್ತು ಅನ್ನಿಸಲೂಬಹುದು. ತಕ್ಕ ಸಂಗಾತಿ, ಮದುವೆಯ ವಯಸ್ಸು, ಮಕ್ಕಳು, ವೃತ್ತಿ ಎಲ್ಲವೂ ವೈಯಕ್ತಿಕ ಆಯ್ಕೆ. ಹಾಗೆಂದು ಮದುವೆಯೆಂಬ ವ್ಯವಸ್ಥೆಯನ್ನು ತಿರಸ್ಕರಿಸುವುದು ಸರಿಯಲ್ಲ' ಎನ್ನುತ್ತದೆ ಮನೋವಿಜ್ಞಾನಿಗಳ ಲೋಕ.

ಡಾ.ಕೆ.ಎಸ್‌. ಚೈತ್ರಾ


Trending videos

Back to Top