CONNECT WITH US  

ಪ್ರೀತಿಯೇ ಪ್ರೀ ನರ್ಸರಿ

ನಮಸ್ತೇ ಟೀಚರ್‌

ಬೆಳ್ಳಂಬೆಳಗ್ಗೆ ಕನ್ನಡಿ ಮುಂದೆ ನಿಂತಾಗ ಕಿವಿಯ ಟಿಕ್ಕಿ ಬಿಕ್ಕಳಿಸುತ್ತಿತ್ತು. ಹಿಂದಿನ ದಿನ ಟೀಚರ್‌ ಕಿವಿ ಹಿಂಡಿದ ನೋವು ಇನ್ನೂ ತಣ್ಣಗಾಗಿರಲಿಲ್ಲ. ಸ್ನಾನ ಮಾಡಿಸುವಾಗ ಬೆತ್ತದ ರುಚಿಯ ಕೆಂಪು ಗುರುತುಗಳ ಲೆಕ್ಕವನ್ನು ಅಮ್ಮ ಗಟ್ಟಿಯಾಗಿ ಹೇಳುತ್ತಿದ್ದಾಗ, ಅವಳ ಬಾಯಿಮುಚ್ಚಿಸಲು ಮಾಡಿದ ಕಸರತ್ತುಗಳೆಲ್ಲ ಈಗ ಹಳೆಯ ನೆನಪು. ಆದರೆ, ಈಗ ತಿದ್ದಿ ತೀಡುವ ಕಾಲ ಕಳೆದಿದೆ. ಶಾಲೆಗಳಲ್ಲಿ ಕಲಿಸುವ ಆಯಾಮ ಬದಲಾಗಿದೆ. ಮಕ್ಕಳನ್ನು ದಂಡಿಸದೇ ವಿದ್ಯೆಯನ್ನು ಅವರೆದೆಗೆ ದಾಟಿಸಬೇಕಿದೆ. ಬುದ್ಧಿ ಚಿಗುರುವ ಹೊತ್ತಿನಲ್ಲೂ, ಬುದ್ಧಿ ಬಂದು, ಅದು ಬಲಿತಾದ ಮೇಲೂ ಬದುಕಿಗೆ ದಾರಿ ತೋರುವ ಶಿಕ್ಷಕರಿಗೆ ಮಕ್ಕಳು ನಿತ್ಯವೂ ಸವಾಲು. ಆ ಸವಾಲಿನ ಪ್ರಸಂಗಗಳೇ ಇಲ್ಲಿ ಈ ಇಬ್ಬರು ಶಿಕ್ಷಕಿಯರಿಗೆ ವಸ್ತು...

ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಕೇಳದವರಿಲ್ಲ. ಅದಕ್ಕೆ ಕಾರಣ, ಮಕ್ಕಳು ಪಾಠಶಾಲೆಗೆ ಸೇರಿ ಸರಿ- ತಪ್ಪುಗಳನ್ನು ಕಲಿಯುವುದಕ್ಕಿಂತ ಮೊದಲು ಮನೆಯಲ್ಲೇ ಅವನ್ನೆಲ್ಲಾ ಕಲಿಯುತ್ತಿದ್ದರು. ಅವರನ್ನು ತಿದ್ದುವುದಕ್ಕೆ, ಮಾರ್ಗದರ್ಶನ ಮಾಡುವುಕ್ಕೆ ಹಿರಿಯರು ಇರುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಎಲ್ಲಾ ಮನೆಗಳಲ್ಲೂ ಅಜ್ಜಿ- ತಾತ ಇರುತ್ತಾರೆ ಎನ್ನಲಾಗದು. ಇನ್ನು ಪುಟ್ಟ ಮಕ್ಕಳನ್ನು ತಿದ್ದುವುದಕ್ಕೆ ಅಪ್ಪ- ಅಮ್ಮನಿಗೆ ಟೈಮ್‌ ಇರುವುದಿಲ್ಲ. ಹೀಗಿರುವಾಗ ಮನೆಯ ಬದಲು ಪ್ಲೇಹೋಮ್‌ ಅಥವಾ ಪ್ಲೇಗ್ರೂಪ್‌ಗ್ಳು ಮಕ್ಕಳ ಮೊದಲ ಪಾಠಶಾಲೆಗಳಾಗಿ ಪರಿವರ್ತನೆಗೊಂಡಿವೆ.

  ಮೊದಲೆಲ್ಲ ಮಕ್ಕಳನ್ನು ನೇರವಾಗಿ ಒಂದನೇ ಕ್ಲಾಸಿಗೆ ಸೇರಿಸಲಾಗುತಿತ್ತು. ಅಷ್ಟರಲ್ಲಿ ಆ ಮಕ್ಕಳಲ್ಲಿ ಬುದ್ಧಿ ಬಲಿತಿರುತಿತ್ತು. ಸರಿ-ತಪ್ಪುಗಳ ವಿವೇಚನೆ ಇರುತಿತ್ತು. ಅವರಿಗೆ ಏನು ಪಾಠ ಮಾಡಿದರೂ, ತಡವಾಗಿಯಾದರೂ ಅರ್ಥವಾಗುತಿತ್ತು. ಆದರೆ, ಪ್ಲೇಗ್ರೂಪ್‌ ಅಥವಾ ಪ್ಲೇಹೋಮ್‌ನ ಮಕ್ಕಳಿಗೆ ಬುದ್ಧಿ ಬಲಿತಿರುವುದಿಲ್ಲ. ಅವರಿಗೆ ಸರಿ- ತಪ್ಪುಗಳ ವಿವೇಚನೆ ಇರುವುದಿಲ್ಲ. ಹೇಗಿರಬೇಕು, ಏನು ಮಾತಾಡಬೇಕು ಎಂಬುದರ ಪರಿವೆಯೂ ಇರುವುದಿಲ್ಲ. ಕೆಲವು ಮಕ್ಕಳಿಗೆ ಮಾತು ನಿಧಾನವಾಗಿರುತ್ತದೆ. ಮಾತು ಬಂದರೂ ಅದನ್ನು ಸರಿಯಾಗಿ ಕಮ್ಯುನಿಕೇಟ್‌ ಮಾಡುವುದಕ್ಕೆ ಬರುತ್ತಿರುವುದಿಲ್ಲ. ಕೆಲವರಿಗೆ ಸ್ವಂತವಾಗಿ ಊಟ ಮಾಡುವುದಕ್ಕೆ ಬರುವುದಿಲ್ಲ. ಶುಚಿತ್ವದ ಬಗ್ಗೆ ಗೊತ್ತಿರುವುದಿಲ್ಲ. ತಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವುದಕ್ಕೆ ಬರುವುದಿಲ್ಲ. ಅವರಿಗೆ ಅದೆಲ್ಲವನ್ನೂ ಅರ್ಥ ಮಾಡಿಸುವುದೇ ಈ ಪ್ಲೇಗ್ರೂಪ್‌ ಅಥವಾ ಪ್ಲೇಹೋಮ್‌ನ ಕೆಲಸ.

  ಪ್ಲೇಗ್ರೂಪ್‌ನ ಮಕ್ಕಳಿಗೆ ಪಾಠ ಹೇಳಿಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಹಳ ಮೃದುವಾಗಿರುತ್ತವೆ. ಅವರೊಂದಿಗೆ ಒರಟಾಗಿ ನಡೆದುಕೊಂಡರೆ, ಮರುದಿನ ಅವರು ಶಾಲೆಗೆ ಬರುವುದಕ್ಕೆ ಹೆದರುತ್ತವೆ. ಹಾಗಾಗಿ ಮನಸ್ಸಿಗೆ ಘಾಸಿಯಾಗದಂತೆ, ಅವರೊಂದಿಗೆ ಮಕ್ಕಳಾಗಿ ಬೆರೆತು ಅವರನ್ನು ತಿದ್ದುವ ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಪಾಠ ಅಥವಾ ಓದು-ಬರಹ ಎನ್ನುವುದಕ್ಕಿಂತ ಹೆಚ್ಚಾಗಿ ಬೇಸಿಕ್‌ ವಿಷಯಗಳ ಬಗ್ಗೆ ಹೆಚ್ಚು ಹೇಳಿಕೊಡಲಾಗುತ್ತದೆ. ಪ್ರಮುಖವಾಗಿ ಬಣ್ಣಗಳು, ಪ್ರಾಣಿಗಳು, ಶೇಪ್‌ಗ್ಳು ಮುಂತಾದ ವಿಷಯಗಳನ್ನು ಹೇಳಿಕೊಡುವ ಮೂಲಕ ಅಕಾಡೆಮಿಕ್ಸ್‌ಗೆ ತಯಾರು ಮಾಡಲಾಗುತ್ತದೆ. ಇದರ ಜೊತೆಗೆ ಶುಚಿತ್ವ ಮತ್ತು ಶಿಸ್ತಿನ ಬಗ್ಗೆಯೂ ಹೆಚ್ಚು ಗಮನಕೊಡಲಾಗುತ್ತದೆ. ಮಕ್ಕಳು ಮನೆಯಿಂದ ತಂದಿರುವ ಊಟ- ತಿಂಡಿಯನ್ನು ತಾವೇ ತಿನ್ನುವುದನ್ನು ಅಭ್ಯಾಸ ಮಾಡಿಸುವುದರ ಜೊತೆಗೆ, ಟಾಯ್ಲೆಟ್‌ಗೆ ಹೋಗುವ ಸಂದರ್ಭದಲ್ಲಿ ಕಾಪಾಡಿಕೊಳ್ಳಬೇಕಾದ ಶುಚಿತ್ವವನ್ನು ಹೇಳಿಕೊಡಲಾಗುತ್ತದೆ. ಒಟ್ಟಾರೆ, ಮಕ್ಕಳ ಬುದ್ಧಿ ಬಲಿಯುವಷ್ಟರಲ್ಲಿ ಅವರಿಗೆ ಹೇಗಿರಬೇಕು ಎಂಬುದನ್ನು ಕಲಿಸಲಾಗುತ್ತದೆ.

  ಇಲ್ಲಿ ಓದು- ಬರಹದ ಟೆನ್ಸ್ನ್‌ ಇರುವುದಿಲ್ಲ. ಆದರೆ, ಒಂದು ಮಗು ವಿದ್ಯಾರ್ಥಿಯಾಗಿ ರೂಪುಗೊಳ್ಳುವುದಕ್ಕೆ ಬೇಕಾದ ಅಂಶಗಳನ್ನು ಹೇಳಿಕೊಡುವುದು ಇಲ್ಲಿನ ಹೆಗ್ಗಳಿಕೆ. ಇಲ್ಲಿ ಮಕ್ಕಳಿಗೆ ಪೆನ್ಸಿಲ್ಲು ಹಿಡಿಸಿ ಕಲಿಸುವುದರ ಜೊತೆಗೆ, ಅವರನ್ನು ಔಟಿಂಗ್‌ಗೆಂದು ಪಾರ್ಕ್‌ಗಳಿಗೆ ಕರೆದುಕೊಂಡು ಹೋಗಲಾಗುತ್ತದೆ. ಇತ್ತೀಚೆಗೆ ಶಾಲೆಯ ಎಲ್ಲಾ ಮಕ್ಕಳಿಗೆ 10 ರೂಪಾಯಿ ತರಲು ಹೇಳಲಾಗಿತ್ತು. ಎಲ್ಲಾ ಮಕ್ಕಳು 10 ರೂಪಾಯಿಗಳನ್ನು ತೆಗೆದುಕೊಂಡು ಬಂದಿದ್ದರು. ಅವರನ್ನೆಲ್ಲಾ ಸೂಪರ್‌ ಮಾರ್ಕೆಟ್‌ವೊಂದಕ್ಕೆ ಕರೆದುಕೊಂಡು ಹೋಗಿದ್ದಾಯಿತು. ಆ ಸೂಪರ್‌ ಮಾರ್ಕೆಟ್‌ ತೋರಿಸುವುದರ ಜೊತೆಗೆ ಅವರ ಬಳಿ ಇರುವ 10 ರೂಪಾಯಿಗೆ ಅವರಿಗಿಷ್ಟ ಬಂದ ತಿಂಡಿ- ತಿನಿಸುಗಳನ್ನು ಕೊಡಿಸಲಾಯಿತು. ಇದರಿಂದ ಅವರಿಗೆ ಹೊರಗಿನ ಪ್ರಪಂಚವನ್ನು ತೋರಿಸಿದ ಹಾಗೂ ಆಯಿತು ಮತ್ತು ಹೊರಗಿನ ಸಮಾಜದ ಬಗ್ಗೆ ತಿಳಿಸಿದಂತೆಯೂ ಆಯಿತು. ಬರೀ ಸೂಪರ್‌ ಮಾರ್ಕೆಟ್‌ ಒಂದೇ ಅಲ್ಲ, ಪ್ರತಿ ವಾರ ಮಕ್ಕಳನ್ನು ಪಾರ್ಕು, ದೇವಸ್ಥಾನ ಮುಂತಾದ ಕಡೆ ವ್ಯಾನ್‌ನಲ್ಲಿ ಕರೆದುಕೊಂಡು ಹೋಗುವ ಪರಿಪಾಠವೂ ಇದೆ. ನಾಲ್ಕು ಗೋಡೆಗಳ ಮಧ್ಯೆ ಕೂರಿಸಿ ಹೇಳಿಕೊಡುವುದಕ್ಕಿಂತ, ಅರ್ಥ ಮಾಡಿಸುವುದಕ್ಕಿಂತ ನೇರವಾಗಿ ಅಲ್ಲಿಗೇ ಕರಕೊಂಡು ಹೋಗಿ, ಅರ್ಥ ಮಾಡಿಸುವುದು ಈ ಫೀಲ್ಡ್‌ ಟ್ರಿಪ್‌ಗ್ಳ ಉದ್ದೇಶ.

  ಇನ್ನು ಶಾಲೆಯಲ್ಲೂ ಅವರಿಗೆ ಬರೀ ಅಕ್ಷರ, ಸಂಖ್ಯೆಗಳು, ಬಣ್ಣಗಳನ್ನು ಗುರುತಿಸುವುದಕ್ಕೆ ಹೇಳಿಕೊಡುವುದರ ಜೊತೆಗೆ ವಾಟರ್‌ ಪ್ಲೇ, ಸ್ಯಾಂಡ್‌ ಪ್ಲೇ ತರಹದ ಬೇರೆ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಮಕ್ಕಳೆಲ್ಲಾ ಒಟ್ಟಿಗೇ ಕಲೆತು ಮಣ್ಣಾಟ ಆಡುವುದು, ನೀರಾಟ ಆಡುವುದು, ಒಟ್ಟಿಗೇ ಕುಳಿತು ಊಟ ಮಾಡುವುದು, ಗಿಡಕ್ಕೆ ನೀರು ಹಾಕುವುದು, ಪ್ರಾರ್ಥನೆ ಮಾಡುವುದು ಮುಂತಾದ ಚಟುವಟಿಕೆಗಳನ್ನು ಮಾಡಿದಾಗ, ಒಟ್ಟಾರೆ ಅವರ ಬುದ್ಧಿ ಇನ್ನಷ್ಟು ವಿಸ್ತಾರವಾಗುತ್ತದೆ. ಪ್ರೀಸ್ಕೂಲ್‌ನಲ್ಲಿ ಮಕ್ಕಳು ಇರುವುದು ಕೆಲವೇ ಗಂಟೆಗಳಾದರೂ, ಒಟ್ಟಾರೆ ಈ ಅವಧಿಯಲ್ಲಿ ಅವರ ಮನೋವಿಕಸನಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ಹೇಳಿಕೊಡಲಾಗುತ್ತದೆ. ಇವೆಲ್ಲಾ ಮಕ್ಕಳಿಗೆ ಬಹಳ ಮುಖ್ಯ. ಏಕೆಂದರೆ, ಶಾಲೆಗೆ ಸೇರಿದ ನಂತರದ ವರ್ಷಗಳಲ್ಲಿ, ಮಕ್ಕಳು ಬಹುತೇಕ ಓದಿನಲ್ಲೇ ಮುಳುಗಿರುತ್ತಾರೆ. ಒಳ್ಳೆಯ ಅಂಕ ತೆಗೆಯುವುದೇ ಅವರ ಧ್ಯೇಯವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲುವುದೇ ಅವರ ಗುರಿಯಾಗಿರುತ್ತದೆ. ಇಲ್ಲಿ ಪಠ್ಯವೇ ಮುಖ್ಯವಾಗಿರುತ್ತದೇ ಹೊರತು, ಬದುಕಿಗೆ ಬೇಕಾದ ಶುಚಿತ್ವ, ಶಿಸ್ತು, ಜವಾಬ್ದಾರಿ ಮುಂತಾದ ವಿಷಯಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲುವುದಿಲ್ಲ. ಮಕ್ಕಳ ಬುದ್ಧಿಯ ಬಲಿಯುವುದಕ್ಕಿಂತ ಮುನ್ನ, ಅದೆಷ್ಟೋ ಲಕ್ಷಾಂತರ ಮಕ್ಕಳನ್ನು ತಿದ್ದಿ, ತೀಡಿ ಅವರನ್ನೆಲ್ಲಾ ಉತ್ತಮ ನಾಗರಿಕರಾಗಿ ರೂಪಿಸುತ್ತಿರುವ ಅದೆಷ್ಟೋ ಶಿಕ್ಷಕರಿಗೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಮಕ್ಕಳು ಚುರುಕು ಹೇಗೋ, ಅಷ್ಟೇ ಸೂಕ್ಷ್ಮಜೀವಿಗಳು!
ಪ್ರೀಸ್ಕೂಲ್‌ ಮಕ್ಕಳು ಅದೆಷ್ಟು ಚುರುಕಾಗಿರುತ್ತವೋ, ಅದೆಷ್ಟು ಮುಗ್ಧವಾಗಿರುತ್ತವೋ, ಅದೇ ರೀತಿ ಸೂಕ್ಷ್ಮವಾಗಿಯೂ ಇರುತ್ತವೆ. ಆ ಮಕ್ಕಳು ಎಲ್ಲರನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ. ನಾವು ಹೇಗೆ ಪಾಠ ಮಾಡುತ್ತೀವಿ, ಹೇಗೆ ಮಾತನಾಡುತ್ತೀವಿ ಎಂಬುದನ್ನು ಗಮನಸಿವ ಆ ಮಕ್ಕಳು, ಅದನ್ನೇ ಕಾಪಿ ಮಾಡಿ ತೋರಿಸುತ್ತವೆ. ಉದಾಹರಣೆಗೆ, ಫೋನ್‌ನಲ್ಲಿ ಮಾತನಾಡುವುದನ್ನೇ ಗಮನಿಸುವ ಅವು, ತಾವು ಸಹ ಕಿವಿಗೆ ಏನನ್ನಾದರೂ ಇಟ್ಟುಕೊಂಡು ಫೋನ್‌ನಲ್ಲಿ ಮಾತನಾಡುವ ಹಾಗೆ ಮಾಡುತ್ತವೆ. ಅಷ್ಟೇ ಅಲ್ಲ, ಪಾಠ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸುವ ಮಕ್ಕಳು, ಮನೆಗೆ ಹೋಗಿ ಮನೆಯವರನ್ನೇ ವಿದ್ಯಾರ್ಥಿಗಳನ್ನಾಗಿ ಮಾಡಿ, ತಾವು ಟೀಚರ್‌ ಆಗಿ ಪಾಠ ಮಾಡುವ ಉದಾಹರಣೆಗಳನ್ನು ಹಲವು ತಂದೆ-ತಾಯಿಗಳು ಹೇಳಿಕೊಂಡಿದ್ದಾರೆ. ಇನ್ನು ಕೆಲವು ಮಕ್ಕಳಿಗೆ ಯೂನಿಫಾರ್ಮ್ ಹಾಕಿಕೊಳ್ಳೋಕೇ ಇಷ್ಟವಿರುವುದಿಲ್ಲ. ಮನೆಯಲ್ಲಿ ಕಳಿಸಿರುವ ಕಾಳು-ಬೇಳೆ ತಿನ್ನುವುದಕ್ಕೆ ಮನಸ್ಸಿರುವುದಿಲ್ಲ. ಅಂಥ ಮಕ್ಕಳೆಲ್ಲಾ ಶಾಲೆಗೆ ಬಂದಾಗ, ಊಟದ ಸಮಯದಲ್ಲಿ ರಚ್ಚೆ ಹಿಡಿಯುತ್ತವೆ. ಇನ್ನು ಕೆಲವು ಮಕ್ಕಳಿಗೆ ಶಾಲೆಗೆ ಬರುವುದಕ್ಕೇ ಆಸಕ್ತಿ ಇರುವುದಿಲ್ಲ. ಅವರೆಲ್ಲಾ ಮನೆಯಿಂದ ಹೊರಡುವಾಗಲೇ ಹೊಟ್ಟೆ ನೋವು ಎಂದು ನೆಪ ತೆಗೆದಿರುತ್ತಾರೆ. ಇನ್ನು ಶಾಲೆಗೆ ಬರುವಾಗ ದೊಡ್ಡ ಗಲಾಟೆ ಮಾಡುತ್ತಾರೆ. ಶಾಲೆ ತಪ್ಪಿಸಿಕೊಳ್ಳುವುದಕ್ಕೆ ಹಲವು ಸುಳ್ಳುಗಳನ್ನು ಹೇಳುತ್ತಾರೆ.

ಶ್ರೀಲಕ್ಷ್ಮಿ ಟಿ.ಎಸ್‌


Trending videos

Back to Top