CONNECT WITH US  

ಇಂಗ್ಲಿಸ್‌ ತೀರದ ಕತೆಗಳು

ನಮಸ್ತೇ ಟೀಚರ್‌!

ಸಾಂದರ್ಭಿಕ ಚಿತ್ರ

ಬೆಳ್ಳಂಬೆಳಗ್ಗೆ ಕನ್ನಡಿ ಮುಂದೆ ನಿಂತಾಗ ಕಿವಿಯ ಟಿಕ್ಕಿ ಬಿಕ್ಕಳಿಸುತ್ತಿತ್ತು. ಹಿಂದಿನ ದಿನ ಟೀಚರ್‌ ಕಿವಿ ಹಿಂಡಿದ ನೋವು ಇನ್ನೂ ತಣ್ಣಗಾಗಿರಲಿಲ್ಲ. ಸ್ನಾನ ಮಾಡಿಸುವಾಗ ಬೆತ್ತದ ರುಚಿಯ ಕೆಂಪು ಗುರುತುಗಳ ಲೆಕ್ಕವನ್ನು ಅಮ್ಮ ಗಟ್ಟಿಯಾಗಿ ಹೇಳುತ್ತಿದ್ದಾಗ, ಅವಳ ಬಾಯಿಮುಚ್ಚಿಸಲು ಮಾಡಿದ ಕಸರತ್ತುಗಳೆಲ್ಲ ಈಗ ಹಳೆಯ ನೆನಪು. ಆದರೆ, ಈಗ ತಿದ್ದಿ ತೀಡುವ ಕಾಲ ಕಳೆದಿದೆ. ಶಾಲೆಗಳಲ್ಲಿ ಕಲಿಸುವ ಆಯಾಮ ಬದಲಾಗಿದೆ. ಮಕ್ಕಳನ್ನು ದಂಡಿಸದೇ ವಿದ್ಯೆಯನ್ನು ಅವರೆದೆಗೆ ದಾಟಬೇಕಿದೆ. ಬುದ್ಧಿ ಚಿಗುರುವ ಹೊತ್ತಿನಲ್ಲೂ, ಬುದ್ಧಿ ಬಂದು, ಅದು ಬಲಿತಾದ ಮೇಲೂ ನಮ್ಮ ಬದುಕಿಗೆ ದಾರಿ ತೋರುವ ಶಿಕ್ಷಕರಿಗೆ ಮಕ್ಕಳು ನಿತ್ಯವೂ ಸವಾಲು. ಆ ಸವಾಲಿನ ಪ್ರಸಂಗಗಳೇ ಇಲ್ಲಿ ಈ ಇಬ್ಬರು ಶಿಕ್ಷಕಿಯರಿಗೆ ವಸ್ತು...

"ಈ ಇಂಗ್ಲಿಸ್‌ ಕಲ್ತರೆ ಜಾಸ್ತಿ ಮೀನ್‌ ಸಿಕ್ಕೂದಾ?' ಹತ್ತು ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯೊಬ್ಬ ಹಿಂದಿನ ಬೆಂಚ್‌ನ ಮೂಲೆಯೊಂದರಿಂದ ಕೇಳಿದ್ದ. ಕೆಲಸಕ್ಕೆ ಸೇರಿ ವರ್ಷವಾಗಿತ್ತಷ್ಟೇ. ಈ ಮಾತುಗಳು ಅಕ್ಷರಶಃ ನನ್ನನ್ನು ನಡುಗಿಸಿಬಿಟ್ಟಿತ್ತು. ಯಾಕೆಂದರೆ ನಾನು ತೀರಾ ಗಂಭೀರವಾಗಿ, ಈ ಜಗತ್ತಿನಲ್ಲಿ ಬದುಕಲು ಇಂಗ್ಲಿಷ್‌ ಕಲಿಯದಿದ್ದರೆ ಸಾಧ್ಯವೇ ಇಲ್ಲ. ಬದುಕಬೇಕೆಂದರೆ ಇಂಗ್ಲಿಷ್‌ ಅತೀ ಮುಖ್ಯ ಎಂದು ಒಂದಾದ ಮೇಲೆ ಒಂದರಂತೆ ಉದಾಹರಣೆ ಕೊಡುತ್ತಾ ಹೇಳುತ್ತಿದ್ದೆ. ಇನ್ನೇನು ನನ್ನ ಮಾತಿಗೆ ಎಲ್ಲರೂ ಮಂತ್ರಮುಗ್ಧರಾಗಿ ತಲೆದೂಗುತ್ತಿದ್ದಾರೆ ಎಂದು ನಾನು ಭ್ರಮಿಸಿಕೊಳ್ಳುವ ಹೊತ್ತಿಗೆ ಸರಿಯಾಗಿ ಈ ಪ್ರಶ್ನೆ ತೂರಿ ಬಂದಿತ್ತು. "ಮಕ್ಕಳು ಹಸಿ ಗೋಡೆಯಿದ್ದಂತೆ, ಎಸೆದ ಹರಳು ಸರಿಯಾಗಿ ನಾಟಿಕೊಳ್ಳುತ್ತದೆ' ಎಂಬ ರೂಸೋನ ಹೇಳಿಕೆಯನ್ನು ಬಲವಾಗಿ ನಂಬಿದ್ದ ನನ್ನ ನಂಬಿಕೆಯ ಬುಡಕ್ಕೆ ಕೊಡಲಿ ಏಟು ಬಿದ್ದದ್ದೇ ಆಗ.

   ನಾನು ಕೆಲಸ ಮಾಡುತ್ತಿದ್ದುದು ಏಷ್ಯಾದ ಅತಿ ದೊಡ್ಡ ನೌಕಾನೆಲೆ ಎಂಬ ಬಿರುದಿನ ಸೀಬರ್ಡ್‌ ನಾಮಾಂಕಿತ ಭಾರತೀಯ ನೌಕಾನೆಲೆಯಿಂದಾಗಿ ನಿರ್ಮಿತವಾದ ನಿರಾಶ್ರಿತ ಕಾಲೊನಿಯೊಂದರ ಶಾಲೆಯಲ್ಲಿ. ಬರೀ ಮೀನುಗಾರರೇ ತುಂಬಿರುವ ಕಡಲತೀರದ ಹಳ್ಳಿ ಅದು. ಮೀನು ಹೆಚ್ಚು ಸಿಕ್ಕರಷ್ಟೇ ಬದುಕು ಸಲೀಸು ಎಂಬ ಸತ್ಯದ ಅರಿವು ಪಾಲಕರಿಗಷ್ಟೇ ಅಲ್ಲ, ಚಿಕ್ಕ ಮಕ್ಕಳಿಗೂ ಇದೆ. ಹೀಗಾಗಿ ಮೀನುಗಾರಿಕೆ ಮಾತ್ರ ಜೀವನ ನಡೆಸುವ ಮಾರ್ಗ ಎಂದುಕೊಂಡಿದ್ದಾರೆ. ಇದರ ಮಧ್ಯೆ ನಾನು "ಇಂಗ್ಲೀಷು ಕಲಿಯಿರಿ' ಎಂದು ಇಂಗ್ಲಿಷ್‌ನಲ್ಲಿ ಮಾತಾಡುವುದನ್ನು ಕಲಿಸದೆ ಬರೀ ಕೆಲಸಕ್ಕೆ ಬಾರದ ಡಿಗ್ರಿ ಬದಲಾವಣೆ, ಆಕ್ಟಿವ್‌ ವಾಯ್ಸ- ಪ್ಯಾಸಿವ್‌ ವಾಯ್ಸ ಬಗ್ಗೆ ಹೇಳಿಕೊಡುತ್ತೇನೆ ಎನ್ನುವುದಲ್ಲದೆ, ಈ ಜಗತ್ತಿನಲ್ಲಿ ಇಂಗ್ಲಿಷೇ ಪರಮಶ್ರೇಷ್ಠ ಎಂದರೆ ಹೌದೌದು ಎನ್ನಲು ಅವರೇನು ಪ್ರಾಥಮಿಕ ಹಂತದ ಮಕ್ಕಳಲ್ಲವಲ್ಲ? 

  ಸಾಮಾನ್ಯವಾಗಿ ಪ್ರಾಥಮಿಕ ಹಂತದವರೆಗೆ ಅಂದರೆ, ಎಂಟನೇ ತರಗತಿಯವರೆಗೆ ಶಿಕ್ಷಕರೇ ಸಾûಾತ್‌ ದೇವರು. ಶಾಲೆಯಲ್ಲಿ ಏನು ಹೇಳಿಕೊಡುತ್ತಾರೋ ಅದೇ ಪರಮಸತ್ಯ. ಕೆಲವು ದಿನಗಳ ಹಿಂದೆ ನನ್ನ ಐದನೇ ತರಗತಿಯ ಮಗನಿಗೆ, ಆತ ಬರೆದ ಯಾವುದೋ ಉತ್ತರ ತಪ್ಪಿದೆ ಎಂದಿದ್ದಕ್ಕೆ; ನಮ್ಮ ಟೀಚರ್‌ ಬರೆಸಿದ್ದು ಹಾಗೇನೇ. ಅದೇ ಇರಲಿ ಎಂದು ನಾನು ಹೇಳಿದ ಉತ್ತರವನ್ನು ಬರೆಯಲು ಬಿಲ್‌ಕುಲ್‌ ನಿರಾಕರಿಸಿದ್ದ. ಆದರೆ, ಒಂಬತ್ತನೇ ತರಗತಿಯ ಮಗನಿಗೆ ಮಾತ್ರ ಟೀಚರ್‌ ಬರೆಸಿದ ಉತ್ತರಕ್ಕಿಂತ ಆತನೇ ಹುಡುಕಿ ಬರೆವ ಉತ್ತರದಲ್ಲಿ ನಂಬಿಕೆ. ಸುಮಾರು ಎಂಟನೇ ತರಗತಿಯವರೆಗೆ ಶಿಕ್ಷಕರು ಏನು ಹೇಳಿದರೂ ಕಣ್ಣುಮುಚ್ಚಿ ನಂಬುವ ನಂಬಿಕೆಯಿರುತ್ತದೆ. ನಂತರದ ದಿನಗಳಲ್ಲಿ ಶಿಕ್ಷಕರು ಏನೇ ಹೇಳಿದರೂ ಹಿಂದಿನಿಂದ ಕೊಂಕು ತೆಗೆಯುವ ರೂಢಿಯಾಗಿ ಬಿಡುತ್ತದೆ. ಹೇಳಿದ್ದಕ್ಕೆಲ್ಲ ಕೋಲೆ ಬಸವನ ಹಾಗೆ ತಲೆ ಅಲ್ಲಾಡಿಸುವುದನ್ನು ಬಿಟ್ಟು ಸ್ವತಂತ್ರವಾಗುವ ಉದ್ದೇಶವೇನೂ ಅವರಿಗೆ ಇರುವುದಿಲ್ಲ. ಆದರೆ, ತಾವು ದೊಡ್ಡವರಾಗಿದ್ದೇವೆ ಎಂದು ತೋರಿಸಿಕೊಳ್ಳುವ ಹುಮ್ಮಸ್ಸು. ತಮಗೆಲ್ಲ ಗೊತ್ತು ಎಂಬ ಅತಿಯಾದ ಆತ್ಮವಿಶ್ವಾಸ. ಹೀಗಾಗಿ ಬೆಳೆದ ಮಕ್ಕಳಿಗೆ ಕಲಿಸುವುದೆಂದರೆ ಅದು ತಂತಿಯ ಮೇಲಿನ ನಡಿಗೆ.

   ಈ ತಂತಿಯ ಮೇಲಿನ ನಡಿಗೆಯನ್ನು ಹೈಸ್ಕೂಲು ಶಿಕ್ಷಕರಿಂದ ಹಿಡಿದು ಪಿ.ಯು.ಸಿ. ಹಂತದವರೆಗೆ ಕಲಿಸುವ ಉಪನ್ಯಾಸಕರವರೆಗೆ ಎಲ್ಲರೂ ರೂಢಿಸಿಕೊಳ್ಳುವುದು ಅನಿವಾರ್ಯ. ಆಗಷ್ಟೇ ಹದಿಹರೆಯದೊಳಗೆ ಅಂಜುತ್ತಾ ಕಾಲಿಡುತ್ತಿರುವ ವಿದ್ಯಾರ್ಥಿಗಳಲ್ಲಿ ಉಂಟಾಗುವ ಹಾರ್ಮೋನು ಈ ಬದಲಾವಣೆಗಳಿಗೆ ಕಾರಣ ಎಂಬುದು ಮನೋವಿಜಾnನದ ಹೆಸರು ಕೇಳಿದವರಿಗೂ ಗೊತ್ತಿರುವ ವಿಷಯ. ಇತ್ತ ತೀರಾ ಚಿಕ್ಕವರಲ್ಲದ, ಅತ್ತ ಇನ್ನೂ ಪೂರ್ತಿಯಾಗಿ ದೊಡ್ಡವರಾಗಿರದ ಮಕ್ಕಳಿಗೆ ದೊಡ್ಡವರೆಂದು ತೋರಿಸಿಕೊಳ್ಳುವ ತವಕ. ಆದರೆ ನಾವೋ, ನೀನಿನ್ನೂ ಚಿಕ್ಕವನು/ಳು. ನಿನಗೇನೂ ಗೊತ್ತಾಗುವುದಿಲ್ಲ. ಸುಮ್ಮನಿರು ಎಂದು ಬೈಯ್ದು ಸುಮ್ಮನಿರಿಸಲು ಪ್ರಯತ್ನಿಸುತ್ತೇವೆ. ಸಮಸ್ಯೆ ಪ್ರಾರಂಭವಾಗುವುದೇ ಈ ಹಂತದಲ್ಲಿ. ತಮಗೆಲ್ಲ ಗೊತ್ತಿದೆ ಎಂದು ಬಿಂಬಿಸಲು ಹೊರಟ ವಿದ್ಯಾರ್ಥಿಗಳು ಒಂದೋ ತೀರಾ ವಾಚಾಳಿಗಳಾಗುತ್ತಾರೆ ಅಥವಾ ಏನೂ ಮಾತನಾಡದೇ ಸುತ್ತಲಿನ ಜಗತ್ತಿನ ಬಗ್ಗೆ ಒಂದು ರೀತಿಯ ಅಸಡ್ಡೆ, ಕೀಳು ಭಾವನೆಯನ್ನು ರೂಢಿಸಿಕೊಳ್ಳುತ್ತಾರೆ. ಎರಡೂ ಅಪಾಯಕಾರಿಯೇ. ಹೆಚ್ಚು ಮಾತಾಡುವವರನ್ನು ಸಂಭಾಳಿಸುವುದು ಕಷ್ಟ. ಮಾತೇ ಆಡದವರ ಮನದೊಳಗೆ ಏನಿದೆ ಎಂದು ತಿಳಿಯುವುದು ಇನ್ನೂ ಕಷ್ಟ. ಪ್ರತಿಯೊಂದಕ್ಕೂ ಅಡ್ಡಬಾಯಿ ಹಾಕುವ, ಪ್ರತಿಯೊಂದನ್ನೂ ಉದಾಸೀನವಾಗಿ ನೋಡುವ ವಿದ್ಯಾರ್ಥಿಗಳನ್ನು ನಮ್ಮ ಹಿಡಿತಕ್ಕೆ ತಂದುಕೊಂಡು, ಅವರಿಗೆ ಪಾಠ ಅರ್ಥ ಆಗುವ ಹಾಗೆ ಹೇಳುವುದು ಒಂದು ಸವಾಲೇ ಸರಿ.

  ಹೈಸ್ಕೂಲು ಮತ್ತು ಪಿ.ಯು.ಸಿ. ಹಂತದ ಮಕ್ಕಳು ಮಾನಸಿಕವಾಗಿ ಸಂಪೂರ್ಣವಾಗಿ ಬೆಳವಣಿಗೆ ಹೊಂದಿರುವುದಿಲ್ಲ. ಭಾವನಾತ್ಮಕವಾಗಿಯೂ ಪಕ್ವತೆ ದೊರಕಿರುವುದಿಲ್ಲ. ಹೀಗಾಗಿ, ಯಾವ ಕ್ಷಣಕ್ಕೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸಲು ಯಾರಿಂದಲೂ ಸಾಧ್ಯವಿಲ್ಲ. ಹೋಂ ವರ್ಕ್‌ ಮಾಡಿಕೊಂಡು ಬರಲಿಲ್ಲ ಎಂದು ಶಿಕ್ಷಕರು ಗದರಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಅಪಕ್ವತೆ ತೋರಿಸುವ ಮಕ್ಕಳನ್ನು ಹೊಡೆದು ಬುದ್ಧಿ ಕಲಿಸುವ ಮಾತಿರಲಿ, ಗದರುವಂತೆಯೂ ಇಲ್ಲ. ದೈಹಿಕ ಬದಲಾವಣೆಯ ಸೂಕ್ಷ¾ ಹಂತದ ಈ ಸಮಯದಲ್ಲಿ ಕಲಿಸುವ ವಿಷಯ ಒತ್ತಟ್ಟಿಗಿರಲಿ ವಿದ್ಯಾರ್ಥಿಗಳೊಂದಿಗಿನ ಸಂವಾದವೇ ಈಗಿನ ಶಿಕ್ಷಕರ ಎದುರಿಗೆ ಇರುವ ಅತಿದೊಡ್ಡ ಚಾಲೆಂಜ್‌. ಪ್ರೇಮಪತ್ರ ಬರೆದು ಶಿಕ್ಷಕರ ಕೈಗೆ ಸಿಕ್ಕುಬಿದ್ದ ಹುಡುಗನೊಬ್ಬ ಅದೇ ದಿನ ಕಾಳಿನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಇನ್ನೂ ನನ್ನ ಕಣ್ಮುಂದಿದೆ.

  ಇನ್ನು ಪದವಿ ಹಂತದ ಮಕ್ಕಳು ಮಾನಸಿಕವಾಗಿ ಒಂದಿಷ್ಟು ಬೆಳವಣಿಗೆ ಹೊಂದಿರುತ್ತಾರೆ. ಭಾವನೆಗಳ ಬಗೆಗೂ ಒಂದಿಷ್ಟು ಸಮತೋಲನ ಕಾಯ್ದುಕೊಳ್ಳುವ ತಿಳಿವಳಿಕೆ ಬಂದಿರುತ್ತದೆ. ಪದವಿ ತರಗತಿಯಲ್ಲಿ ಕೇಶಿರಾಜನ ಶಬ್ದಮಣಿ ದರ್ಪಣದ ಲಿಂಗಗಳನ್ನು ಕಲಿಸುವಾಗ ಸ್ತ್ರೀಲಿಂಗದ ಬಗ್ಗೆ ಕೇವಲವಾಗಿ ಮಾತನಾಡಿದ ಲೆಕ್ಚರರ್‌ಗೆ "ಸರ್‌, ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಇಡೀ ಸ್ತ್ರೀಕುಲದ ಮೇಲೆ ಯಾಕೆ ಹೊರೆಸ್ತೀರಿ?' ಅಂತ ರೇಗಾಡಿಬಿಟ್ಟಿದ್ದೆ. ಇದು ಮುಂದೊಂದು ದಿನ ನನ್ನ ವಿದ್ಯಾರ್ಥಿಯಿಂದ ನನಗೂ ಎದುರಾಗಬಹುದು. ಹೀಗಾಗಿ ಶಿಕ್ಷಕರು ತಮ್ಮ ಹೇಳಿಕೆಗಳ ಬಗ್ಗೆ ತೀರಾ ಎಚ್ಚರವಾಗಿರಬೇಕಾಗುತ್ತದೆ. ಆದರೆ, ಹೈಸ್ಕೂಲು ಹಂತದಲ್ಲೇ ಪ್ರಾರಂಭವಾದ, "ನಾನೊಬ್ಬನೇ ಸರಿ, ಉಳಿದವರೆಲ್ಲ ತಪ್ಪು' ಎನ್ನುವ ಮನುಷ್ಯ ಜೀವನದ ಮೊದಲ ಹಂತದ ತಿಳಿವಳಿಕೆ ಇನ್ನೂ ಹೋಗಿರುವುದಿಲ್ಲ. ಆದರೆ, ಪದವಿಯ ಕೊನೆಯ ವರ್ಷಗಳಲ್ಲಿ ಸರಿಯಾದ ಮಾರ್ಗದರ್ಶನ ಸಿಗದಿದ್ದರೆ ಉಳಿದವರೇ ಸರಿ, ನಾನು ಮಾತ್ರ ತಪ್ಪು ಎಂಬ ಆತ್ಮನಿಂದಕ ಎರಡನೇ ಹಂತವನ್ನು ದಾಟಲು ಸಾಧ್ಯವೇ ಆಗದೆ ಮತ್ತೆ ಖನ್ನತೆಗೆ ಜಾರುತ್ತಾರೆ. ನಾನೂ ಸರಿ, ಉಳಿದವರೂ ಸರಿ ಎನ್ನುವ ಕೊನೆಯ ಮತ್ತು ಪರಿಪೂರ್ಣ ಹಂತವನ್ನು ತಲುಪಬೇಕಾದ ಮನುಷ್ಯನ ಜೀವನದ ಹಾದಿ ತೀರಾ ಸರಳವಾಗಿಯೇನೂ ಇಲ್ಲ. ಅಂಥ ಹಂತಕ್ಕೆ ನಮ್ಮನ್ನು ತಲುಪಿಸುವ ಶಿಕ್ಷಕವೃಂದಕ್ಕೆ ಖಂಡಿತಾ ವಂದನೆ ಸಲ್ಲಲೇಬೇಕು.

  ಶಿಕ್ಷಕವೃತ್ತಿ ಎಂದರೆ ಅದೊಂದು ತಪಸ್ಸು. ಒಂದಿಡೀ ಜನಾಂಗವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಸರಿಯಾದ ದಾರಿ ತೋರಿಸುವ ವೃತ್ತಿ. ಶಿಕ್ಷಕರು ಎಂದರೆ ಸರ್ವಜ್ಞರೇನಲ್ಲ. ಆದರೆ, ಸರ್ವಜ್ಞರಾಗುವ ಪ್ರಯತ್ನವನ್ನಂತೂ ಬಿಡುವಂತೆಯೇ ಇಲ್ಲ. ಸರ್ವಜ್ಞರಾಗುವ ಪ್ರಯತ್ನದಲ್ಲಿರುವ ನನ್ನೆಲ್ಲ ಶಿಕ್ಷಕರಿಗೂ ಹಾಗೂ ಶಿಕ್ಷಕ ಸಹೋದ್ಯೋಗಿಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 

ಶ್ರೀದೇವಿ ಕೆರೆಮನೆ


Trending videos

Back to Top