CONNECT WITH US  

ಪುಟ್ಟಗೌರಿ ಹಬ್ಬ!

ರಂಜನಿ ರಾಘವನ್‌, ಕಿರುತೆರೆ ನಟಿ

ರಾತ್ರಿ 7 ಆದರೆ ಸಾಕು, ಪ್ರತಿ ಮನೆಯಲ್ಲೂ ಕೇಳಿಸುವ ಹಾಡು, "ಇದು ಪುಟ್ಟಗೌರಿಯ ಮದುವೆ...'! ಮನೆಯ ಹೆಣ್ಮಕ್ಕಳೆಲ್ಲ ಒಟ್ಟಿಗೆ ಕುಳಿತು, ಈಕೆಯನ್ನು ಸ್ವಾಗತಿಸದೇ ಇದ್ದರೆ, ಆ ದಿನವೇ ಅಪೂರ್ಣ ಎನ್ನುವಷ್ಟು "ಪುಟ್ಟಗೌರಿ ಮದ್ವೆ'ಯ ರಂಜನಿ ರಾಘವನ್‌ ಮನೆಮಾತು. ಅಂದಹಾಗೆ, ಈ ದಿನದ ಗೌರಿಹಬ್ಬ "ಪುಟ್ಟಗೌರಿ' ರಂಜನಿಗೂ ವಿಶೇಷ ಹಬ್ಬ. "ಗೌರಿ' ಎಂಬ ಹೆಸರು ನನಗೆ ಲಕ್ಕಿ ಎನ್ನುವ ರಂಜನಿಗೆ ತನ್ನ ಸ್ವಂತ ಹೆಸರಿನಿಂದಲೂ ಗುರುತಿಸಿಕೊಳ್ಳಬೇಕೆಂಬ ಆಸೆಯಿದೆ. "ಪುಟ್ಟ ಗೌರಿ' ಧಾರಾವಾಹಿಯ ಜನಪ್ರಿಯತೆಯ ಜೊತೆಗೆ ಸಿನಿಮಾರಂಗದಲ್ಲೂ ಅದೃಷ್ಟ ಪರೀಕ್ಷಿಸುತ್ತಿರುವ ಗೌರಿ, ಈಗ "ಠಕ್ಕರ್‌' ಎಂಬ ಚಿತ್ರದಲ್ಲಿ ನಾಯಕಿ. ಪುಟ್ಟ ಗೌರಿಯ ಗೌರಿ ಗಣೇಶ ಹಬ್ಬದ ಸಂಭ್ರಮವನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ...

- ಗೌರಿ ಎಂಬ ಹೆಸರು ನಿಮಗೆ ಅಂಟಿಕೊಂಡಾಗ ಆದಂಥ ಪುಳಕವೇನು?
ಎಲ್ಲಿಯಾದರೂ ಹೊರಗಡೆ ಇದ್ದಾಗ ಬೇರೆಯವರನ್ನು "ಗೌರಿ' ಅಂತ ಕರೆದರೂ ನಾನು ಚಕ್ಕನೆ ತಿರುಗಿ ನೋಡುತ್ತೇನೆ. "ಗೌರಿ' ಎಂಬ ಹೆಸರು ನನಗೆ ಅಷ್ಟರಮಟ್ಟಿಗೆ ಅಂಟಿಕೊಂಡಿದೆ. ಗೌರಿ ಎಂಬ ಹೆಸರು ನನ್ನ ಜೀವನದಲ್ಲಿ ಬಹಳ ಅದೃಷ್ಟ ತಂದುಕೊಟ್ಟಿದೆ. ಪಾತ್ರದ ಹೊರತಾಗಿ ನನ್ನ ಇಮೇಜನ್ನು ಕಟ್ಟಿಕೊಳ್ಳಲು ಈಗಲೂ ಕಷ್ಟಪಡುತ್ತಿದ್ದೇನೆ. ಗೌರಿಯ ಗುಂಗಿನಿಂದ ಹೊರಬಂದು ರಂಜನಿಯಾಗಿ ಜನರು ನನ್ನನ್ನು ನೋಡಲಿ ಅಂತ ಬಯಸುತ್ತೇನೆ. ಆದರೆ, ರಂಜನಿಯನ್ನು ಗೌರಿ ಸಂಪೂರ್ಣವಾಗಿ ಓವರ್‌ಟೇಕ್‌ ಮಾಡಿದ್ದಾಳೆ. ಅವಳ ಹೊರತಾಗಿ ನನಗೆ ಅಸ್ತಿತ್ವವೇ ಇಲ್ಲ ಎನ್ನುವಂತಾಗಿದೆ. ಆದರೂ, ಗೌರಿ ಎಂಬ ಐಡೆಂಟಿಟಿ ನನಗೆ ಯಾವಾಗಲೂ ಸಂಭ್ರಮವೇ.

- ಗೌರಿ ಗಣೇಶ ಹಬ್ಬದ ಸಂಭ್ರಮ ಹೇಗಿದೆ? 
ಈ ಬಾರಿ ಗೌರಿ ಹಬ್ಬದ ವಿಶೇಷ ಎಂದರೆ ನಾನು ಎಷ್ಟೋ ವರ್ಷಗಳ ನಂತರ ಹಬ್ಬದ ದಿನದಂದು ಸೀರೆ ಉಡುತ್ತಿದ್ದೇನೆ. ಈ ಬಾರಿ ಸೀರೆಯನ್ನೇ ಉಡಬೇಕೆಂದು ಅಮ್ಮ ತಾಕೀತು ಮಾಡಿದ್ದಾರೆ. ಹಾಗಾಗಿ, ರೇಷ್ಮೆ ಸೀರೆ ಮತ್ತು ನಾನೇ ಡಿಸೈನ್‌ ಮಾಡಿಸಿದ ಬ್ಲೌಸ್‌ ತೊಡುತ್ತಿದ್ದೇನೆ. ಧಾರಾವಾಹಿಗಾಗಿ ಪ್ರತಿದಿನ ಸೀರೆ ಉಡುವುದರಿಂದ ವಿಶೇಷ ದಿನಗಳಲ್ಲಿ ಬೇರೆ ಉಡುಗೆಗಳನ್ನು ತೊಡುವ ಮನಸ್ಸಾಗುತ್ತದೆ. ಬಹುತೇಕ ಹುಡುಗಿಯರು ಬಾಕಿ ಎಲ್ಲಾ ದಿನಗಳೂ ವೆರೈಟಿ ಬಟ್ಟೆ ತೊಟ್ಟು ಹಬ್ಬದ ದಿನ ಸೀರೆ ಉಡುತ್ತಾರೆ. ಹಾಗಾಗಿ ಅವರು ಆ ದಿನ ಸೀರೆಯಲ್ಲಿ ವಿಶೇಷವಾಗಿ ಕಾಣಿಸುತ್ತಾರೆ. ಆದರೆ, ಪ್ರತಿದಿನ ಸೀರೆ ಉಡುವ ನಾನು ವಿಶೇಷ ದಿನದಲ್ಲೂ ಸೀರೆ ಉಟ್ಟರೆ ವಿಶೇಷವಾಗಿ ಕಾಣಲ್ಲ. ಹೀಗಾಗಿ "ಪುಟ್ಟಗೌರಿ'ಯಲ್ಲಿ ನಟಿಸಲು ಆರಂಭಿಸಿದಾಗಿನಿಂದ ಯಾವ ಹಬ್ಬ, ಮದುವೆಗೂ ಸೀರೆ ಉಟ್ಟಿರಲಿಲ್ಲ. ಇದೇ ಮೊದಲ ಸಲ ಉಡುತ್ತಿದ್ದೇನೆ. 

- ಮನೆಯಲ್ಲಿ ಹಬ್ಬವನ್ನು ಹೇಗೆ ಆಚರಿಸುತ್ತೀರ? 
ನಮ್ಮ ಮನೆಯಲ್ಲಿ ಗಣಪತಿ ಕೂರಿಸುತ್ತೇವೆ. ಕುಟುಂಬದವರೆಲ್ಲಾ ಒಟ್ಟಿಗೇ ಸೇರಿ ಗೌರಿ ಪೂಜೆ ಮಾಡುತ್ತೇವೆ. ಗೌರಿ ಹಬ್ಬದ ಮುಖ್ಯ ಘಟ್ಟ ಎಂದರೆ ಕಂಕಣ ಕಟ್ಟಿಸಿಕೊಳ್ಳುವುದು. ಪೂಜೆಗೆ ನಿರಾಸಕ್ತಿ ತೋರಿದರೂ ಕಂಕಣ ಕಟ್ಟಿಸಿಕೊಳ್ಳಲು ಯಾವತ್ತೂ ನಿರಾಸಕ್ತಿ ತೋರಿದ್ದೇ ಇಲ್ಲ. ಗೌರಿ ಗಣೇಶ ಹಬ್ಬದ ಎಲ್ಲಾ ಆಚರಣೆ, ಸಂಭ್ರಮ ಬಾಲ್ಯದ ಜೊತೆ ತಳುಕು ಹಾಕಿಕೊಂಡಿದೆ. ನಾವು ದೊಡ್ಡವರಾದಂತೆ ನಮ್ಮ ಜೀವನದಲ್ಲಿ ಸಾಕಷ್ಟು ವಿಚಾರಗಳು ಬದಲಾದವು. ಆದರೆ ಗೌರಿ ಗಣೇಶ ಹಬ್ಬದ ಖುಷಿ ಮಾತ್ರ ಹಾಗೇ ಉಳಿದಿದೆ. 

- ಬಾಲ್ಯದ ಗೌರಿ ಹಬ್ಬದ ಸಂಭ್ರಮ ನೆನಪಿದೆಯಾ?
ಚಿಕ್ಕಂದಿನಲ್ಲಿ ಹಬ್ಬದ ದಿನ ನಾನು ಯಾವ ಬಟ್ಟೆ ಹಾಕಿಕೊಳ್ಳಬೇಕು, ಹೇಗೆ ಸಿಂಗರಿಸಿಕೊಳ್ಳಬೇಕು? ಎಂಬುದನ್ನು ಅಮ್ಮನೇ ನಿರ್ಧಾರ ಮಾಡುತ್ತಿದ್ದರು. ಹಬ್ಬಕ್ಕೆ ಹೆಚ್ಚಾಗಿ ಲಂಗ- ಬ್ಲೌಸ್‌ ಅಥವಾ ಗಾಗ್ರ ಕೊಡಿಸುತ್ತಿದ್ದರು. ಸರ, ಬಳೆ, ಬಿಂದಿ ಎಲ್ಲವನ್ನೂ ಅಮ್ಮನ ಜೊತೆ ಮಲ್ಲೇಶ್ವರಕ್ಕೆ ಹೋಗಿ ಖರೀದಿಸುತ್ತಿದ್ದೆವು. ಹಬ್ಬದ ದಿನ ಸಿಂಗರಿಸಿಕೊಳ್ಳುವುದೇ ದೊಡ್ಡ ಹಬ್ಬದಂತಿರುತ್ತಿತ್ತು. ಪೂಜೆ ಶುರುವಾದಾಗಲೂ ನಮ್ಮ ಅಲಂಕಾರ ಮುಗಿದಿರುತ್ತಿರಲಿಲ್ಲ. ಪೂಜೆ ಮುಗಿಯುವ ವೇಳೆಗೆ ಓಡಿ ಬಂದು ಭಾರಿ ಭಕ್ತಿಭಾವದಿಂದ ಕಂಕಣ ಕಟ್ಟಿಸಿಕೊಳ್ಳುತ್ತಿದ್ದೆವು. ನಾನಂತೂ ಕಂಕಣವನ್ನು ತಿಂಗಳಾದರೂ ತೆಗೆಯುತ್ತಿರಲಿಲ್ಲ. ಅದರ ಬಣ್ಣ ಮಾಸಿದರೆ ನಾನೇ ಅದಕ್ಕೆ ಅರಿಶಿನ ಹಚ್ಚಿ ಮತ್ತೆ ಹೊಸದರಂತೆ ಮಾಡುತ್ತಿದ್ದೆ. ಈಗಲೂ ಕಂಕಣದ ಮೇಲೆ ಅಷ್ಟೇ ಪ್ರೀತಿ ಇದೆ. ಗಣಪತಿ ಅಲಂಕಾರ, ಅಡುಗೆ, ಶಾಪಿಂಗ್‌ ಎಲ್ಲದರಲ್ಲೂ ವಿಪರೀತ ಎಕ್ಸೆ„ಟ್‌ಮೆಂಟ್‌ ಇರ್ತಾ ಇತ್ತು.

- ಅದೇ ಎಕ್ಸೆ„ಟ್‌ಮೆಂಟ್‌ ಈಗಲೂ ಇದೆಯಾ?
ಈಗ, ಹಬ್ಬದ ದಿನ ಏಳುತ್ತಲೇ ನನಗೇ ಮೊದಲ ಪೂಜೆ ಮತ್ತು ಸಹಸ್ರ ನಾಮಾರ್ಚನೆಯಾಗುತ್ತದೆ. ಹಬ್ಬದ ದಿನದಂದು ಶೂಟಿಂಗ್‌ಗೆ ಬಿಡುವಿರುವುದರಿಂದ ಆ ದಿನ ತಡವಾಗಿ ಏಳುತ್ತೇನೆ. ನಾನು ಏಳುವಷ್ಟರಲ್ಲಿ ಅಪ್ಪ, ಅಮ್ಮ ತಯಾರಿಯೆಲ್ಲವನ್ನೂ ಮುಗಿಸಿ ಪೂಜೆ ಆರಂಭಿಸಿರುತ್ತಾರೆ. ನಾನು ಎದ್ದು ಸ್ನಾನ ಮಾಡಿ ಬಂದರೆ ಅಮ್ಮ ನನಗೆ ಬೈಗುಳಗಳ ಅರ್ಚನೆ ಮಾಡುತ್ತಾರೆ. ಬೈಸಿಕೊಂಡು ಪೂಜೆಗೆ ಸೇರಿಕೊಳ್ಳುತ್ತೇನೆ. ನಮ್ಮ ಮನೆಯಲ್ಲಿ ಹಬ್ಬದ ದಿನ ಬೆಳಗ್ಗೆ ತಿಂಡಿ ಮಾಡುವುದಿಲ್ಲ. ಪೂಜೆ ಮುಗಿದ ಮೇಲೆ ಒಟ್ಟಿಗೇ ಊಟ ಮಾಡುತ್ತೇವೆ. ಬೆಳಗ್ಗೆಯೇ ಅಮ್ಮ, ತಂಗಿ ಸೇರಿ ಬಹುತೇಕ ಹಬ್ಬದಡುಗೆ ಮಾಡಿಬಿಡುತ್ತಾರೆ. ನನಗೆ ಸಹಾಯ ಮಾಡಲು ಏನೂ ಉಳಿದಿರುವುದಿಲ್ಲ. ಹಾಗಾಗಿ ನಾನು ಊಟ ಬಡಿಸುವ ಕೆಲಸದಲ್ಲಿ ಉತ್ಸುಕತೆಯಿಂದ ಭಾಗಿಯಾಗುತ್ತೇನೆ. ಅಲ್ಲದೆ ಆವತ್ತು ಡಯೆಟ್‌, ಕ್ಯಾಲೊರಿ ಏನನ್ನೂ ಲೆಕ್ಕ ಹಾಕದೆ ಮನಸಾರೆ ಹಬ್ಬದೂಟ ಸವಿಯುತ್ತೇನೆ. 

- ನಟಿಯಾದ ಬಳಿಕ ಹಬ್ಬಕ್ಕೆಂದು ಏನಾದರೂ ತ್ಯಾಗ ಮಾಡಿದ್ದೀರಾ?
ಮುಂಚೆ ಗೌರಿ ಹಬ್ಬಗಳಿಗೂ ಮೆಹಂದಿ ಹಚ್ಚಿಕೊಂಡು ಸಡಗರದಿಂದ ಓಡಾಡುತ್ತಿದ್ದೆ. ಮೆಹಂದಿ ಇಲ್ಲಾ ಎಂದರೆ ಹಬ್ಬದ ದೊಡ್ಡದೊಂದು ಭಾಗ ಮಿಸ್‌ ಆದಂತೆ ಭಾಸವಾಗುತ್ತಿತ್ತು. ಧಾರಾವಾಹಿಯಲ್ಲಿ ನಟಿಸಲು ಪ್ರಾರಂಭಿಸಿದ ಮೇಲೆ ಕಂಟಿನ್ಯೂಟಿ ದೃಷ್ಟಿಯಿಂದ ಮೆಹಂದಿಯನ್ನು ಸಂಪೂರ್ಣವಾಗಿ ತ್ಯಾಗ ಮಾಡಿದ್ದೇನೆ. ಯಾವ ಹಬ್ಬಕ್ಕೂ ಮೆಹಂದಿ ಹಾಕುತ್ತಿಲ್ಲ. 

- ನಿಮ್ಮ ಮನೆಯಲ್ಲಿ ದೈವ ಭಕ್ತಿ ಯಾರಿಗೆ ಹೆಚ್ಚು? ನಿಮ್ಮ ಮೇಲೆ ಯಾರ ಪ್ರಭಾವ ಇದೆ?
ಅಪ್ಪನಿಗೇ ಹೆಚ್ಚು. ಅಪ್ಪನಿಂದ ನಾವೆಲ್ಲರೂ ಪ್ರಭಾವಿತರಾಗಿದ್ದೇವೆ. ನಂಬಿಕೆ, ಆಚರಣೆ, ಭಕ್ತಿ ಎಲ್ಲವೂ ನಮ್ಮ ಮನದೊಳಗೆ ಮತ್ತು ಮನೆಯಲ್ಲಿ ಇರಬೇಕು. ದೇವರು, ಭಕ್ತಿಯನ್ನು ಬಳಸಿಕೊಂಡು ವ್ಯಾಪಾರ ಮಾಡುವುದು ಸ್ವಾರ್ಥವೆನಿಸಿಕೊಳ್ಳುತ್ತದೆ. ನಮ್ಮ ಮನೆಯ ಆಚರಣೆಯನ್ನು ಮತ್ತೂಬ್ಬರ ಮೇಲೆ ಹೇರುವುದಕ್ಕೆ ನನ್ನ ಒಪ್ಪಿಗೆ ಇಲ್ಲ. 

ಸೆಟ್‌ನಲ್ಲಿ ಹಬ್ಬದ ದಿನವೂ ಅಳು!
ಎಲ್ಲಾ ಕಲಾವಿದರೂ, ತಂತ್ರಜ್ಞರೂ ಇದ್ದ ದಿನ ಸೆಟ್‌ನಲ್ಲಿ ಹಬ್ಬದ ವಾತಾವರಣವೇ ಇರುತ್ತದೆ. ಹಬ್ಬದ ದಿನದ ವಿಶೇಷ ಎಪಿಸೋಡ್‌ ಚಿತ್ರೀಕರಣವಿರುತ್ತದೆ. ಸೆಟ್‌ ಹೆಚ್ಚು ಕಲರ್‌ಫ‌ುಲ್‌ ಆಗಿ ಕಾಣುತ್ತದೆ. ಮೇಕಪ್‌, ಕಾಸ್ಟೂéಮ್‌, ಸಂಭಾಷಣೆ ಎಲ್ಲದರಲ್ಲೂ ವಿಶೇಷತೆ ಇರುತ್ತದೆ. ಒಂದು ಬೇಜಾರೆಂದರೆ, ನನ್ನ ಪಾತ್ರ ಹಬ್ಬದ ದಿನವೂ ಆಳುತ್ತದೆ. ಹಬ್ಬದ ಸೆಟ್‌ನಲ್ಲಿ ಗೌರಿ ಸಾಮಾನ್ಯ ಸೀರೆಯನ್ನೇ ಉಟ್ಟುಕೊಳ್ಳಬೇಕಾಗುತ್ತದೆ. ಪಾತ್ರವೇ ಹಾಗಿರುವುದರಿಂದ ಅದರ ಹೊರತಾಗಿ ಏನನ್ನೂ ಮಾಡಲಾಗದು. ಹೀಗಾಗಿ ನನಗೆ ಶೂಟಿಂಗ್‌ನ ಹಬ್ಬಕ್ಕಿಂತ ಮನೆಯಲ್ಲಿ ಮಾಡುವ ಹಬ್ಬವೇ ಹೆಚ್ಚು ಇಷ್ಟ. 

ಬಾಲ್ಯದ ಕುತೂಹಲವೇ ಸೂಪರ್‌
ಗಣಪತಿ ಹಬ್ಬಕ್ಕೆ ಈಗಲೂ ಪೋಷಕರೇ ಬಟ್ಟೆ ಕೊಡಿಸುವುದು. ನಮ್ಮ ಮನೆಯ ಸಂಪ್ರದಾಯದಲ್ಲಿ ಗಣೇಶ ಹಬ್ಬದ ದಿನ ತಾಯಿ, ತಂದೆ ಹೆಣ್ಣು ಮಕ್ಕಳಿಗೆ ಬಾಗೀನ, ಅರಿಶಿಣ ಕುಂಕುಮ ಕೊಡುತ್ತಾರೆ. ಅದರಲ್ಲಿ ದುಡ್ಡು ಕೂಡ ಇಟ್ಟಿರುತ್ತಾರೆ. ಚಿಕ್ಕವರಾಗಿದ್ದಾಗ ದುಡ್ಡು ಕೊಡುತ್ತಾರೆ ಎಂಬುದೇ ದೊಡ್ಡ ವಿಷಯ. ಆಗೆಲ್ಲಾ ಬಾಗೀನದಲ್ಲಿ 100, 200ರೂ. ಇರುತ್ತಿತ್ತು. ಆಗ ಅದೇ ದೊಡ್ಡ ಮೊತ್ತ. ನಾನು, ನನ್ನ ತಂಗಿ ದೊಡ್ಡವರಾದಂತೆ ನಮಗೆ ಕೊಡುವ ಹಣದ ಮೊತ್ತವೂ ಹೆಚ್ಚಾಯಿತು. ಆದರೂ ಬಾಲ್ಯದಲ್ಲಿದ್ದ ಕುತೂಹಲ, ಸಂಭ್ರಮವನ್ನು ಈಗಲೂ ಉಳಿಸಿಕೊಂಡಿದ್ದೇವೆ. ನಾವು ಎಷ್ಟೇ ಸಂಪಾದಿಸಬಹುದು ಆದರೆ, ತಂದೆ ತಾಯಿ ಕೊಡುವ ಹಣಕ್ಕೆ ಯಾವಾಗಲೂ ಬೆಲೆ ಜಾಸ್ತಿ.

- ಚೇತನ ಜೆ.ಕೆ.


Trending videos

Back to Top