CONNECT WITH US  

ಚೌತಿಗೆ ನಕ್ಕ ಚಕ್ಕುಲಿ

ವಜ್ರಾದಪಿ ಕಠೊರಾನಿ ಮೃದೂನಿ ಕುಸುಮಾದಪಿ... ಈ ಚಕ್ಕುಲಿ

ಅಷ್ಟೊಂದು ದೊಡ್ಡ ಸೊಂಡಲಿಟ್ಟುಕೊಂಡು ಆ ಗಣಪ ಅದ್ಹೇಗೆ ಚಕ್ಕುಲಿ ತಿನ್ತಾನೋ! ಆದರೆ, ಆತನೆದುರಿಗೆ ನೈವೇದ್ಯಕ್ಕಿಟ್ಟ ಚಕ್ಕುಲಿ ನಮಗೆ ತಿನ್ನಲು ಸವಾಲಿನ ವಿಚಾರವೇ ಅಲ್ಲ. ಶ್ರಾವಣದ ಈ ಹಬ್ಬದ ಸಾಲುಗಳಲ್ಲಿ ಚೌತಿಗೆ ವಿಶೇಷ ಆದರದ ಸ್ವಾಗತ. ಅದೂ ಚಕ್ಕುಲಿಯ ಕಾರಣಕ್ಕೆ ಎಂಬುದು ತಿನಿಸುಪ್ರಿಯರ ಒಳಗಿನ ಹೊರಜಿಗಿಯಲಾಗದಂಥ ಗುಟ್ಟು. ನಾಲ್ಕಾರು ಸುತ್ತು ಹಾಕಿ, ಕುರುಂಕುರುಂ ನಾದವನ್ನು ತನ್ನೊಳಗೆ ಹುದುಗಿಸಿಕೊಂಡಿರುವ ಈ ತಿನಿಸಿನ ಜತೆ ತಾಜಾ ಪ್ರಸಂಗಗಳು ಥಳುಕು ಹಾಕಿಕೊಂಡಿವೆ... 

ಹಳೆಯ ಕಾದಂಬರಿಗಳಲ್ಲೊಂದು ಸುತ್ತು ಉರುಳಿ ಬರಬೇಕು, ಮಧ್ಯಾಹ್ನ ಆಗಿನ್ನೂ ಬಿಸಿಬಿಸಿ ಹಬೆಯಾಡುವ ಊಟವನ್ನು ಭರ್ಜರಿಯಾಗಿ ಪೂರೈಸುವ ರಾಯರು, ತಮ್ಮ ಮಡದಿ ಉಂಡು ಕೈತೊಳೆದು ಇನ್ನೇನು ಕೊಂಚ ವಿರಮಿಸಬೇಕು ಎಂದುಕೊಳ್ಳುತ್ತಾರೋ ಇಲ್ಲವೋ ಅಷ್ಟು ಹೊತ್ತಿಗೆ ಸರಿಯಾಗಿ "ಉಂಡ ಬಾಯಿಗೆ ಖಾರ ಖಾರವಾಗಿ ಏನೂ ಇಲ್ವೇನೇ?' ಎಂದು ಕೇಳಲೇಬೇಕು. ಅದಕ್ಕೆ ಸರಿಯಾಗಿ, ವರುಷ ಅರುವತ್ತಾದರೂ ಗಂಡನ ಮಾತಿಗೆ ಹುಸಿನಾಚಿಕೊಳ್ಳುವ ಮಡದೀಮಣಿ "ಇಷ್ಟು ವಯಸ್ಸಾದರೂ ನಿಮಗೆ ಬಾಯಿ ಚಪಲ ಮಾತ್ರ ಕಡಿಮೆಯಾಗಿಲ್ಲ ನೋಡಿ' ಎಂದು ರೇಗಿದಂತೆ ನಟಿಸುತ್ತಲೇ ತಟ್ಟೆಯಲ್ಲಿ ಕರಿದ ಅವಲಕ್ಕಿ ಜತೆಗೆರಡು ಚಕ್ಕುಲಿ ಇಟ್ಟು ತಂದುಕೊಡಬೇಕು. ಆ ಅವಲಕ್ಕಿಗೂ, ಚಕ್ಕುಲಿಗೂ ಅದೇನು ಹೊಂದಾಣಿಕೆ, ಥೇಟು ಅವೇ ಹಳೆಯ ದಂಪತಿಗಳಂತೆ! ಅವನ್ನು ನಿಧಾನಕ್ಕೆ ತಿನ್ನುತ್ತಾ ಅವರೀರ್ವರೂ ತಮ್ಮ ಯೌವನದ ದಿನಗಳಿಗೆ ಹೊರಳಿದರೆ ಮಾತು ಮಧುರವಾಗುತ್ತದೆ. ಅದೇಕೋ ಗೊತ್ತಿಲ್ಲ, ಈಗಿನ ಕಾದಂಬರಿಗಳಲ್ಲಿ ಇಂಥ ಸನ್ನಿವೇಶಗಳು ಬರುವುದೇ ಇಲ್ಲ... ಬಹುಶಃ ಅವಲಕ್ಕಿ ಕರಿಯುವುದಕ್ಕೆ ಪತ್ನಿಗೆ, ಮಡದಿಯನ್ನು ಕರೆಯುವುದಕ್ಕೆ ಪತಿಗೆ ಬಿಡುವೇ ಇಲ್ಲ!

  ಚಕ್ಕುಲಿ ಎಂದಾಗಲೆಲ್ಲ ಚಕ್ಕುಲಿ ಕಿಟ್ಟಣ್ಣ ನೆನಪಾಗುತ್ತಾನೆ. ಬಾಲ್ಯದಲ್ಲಿ ಓದಿದ್ದ ಕಥೆಯೊಂದರ ನಾಯಕ. ಅವನಿಗಾದರೋ ಚಕ್ಕುಲಿಯೆಂದರೆ ಬಲು ಪ್ರೀತಿ. ಅಷ್ಟಮಿಗೆಂದು ಅಮ್ಮ ಮಾಡಿದ್ದ ಚಕ್ಕುಲಿಯನ್ನು ಅಮ್ಮನ ಅರಿವಿಗೆ ಬರದಂತೆ ತಿನ್ನಬೇಕೆಂಬ ಆಸೆ ಅವನಿಗೆ. ಸಿಹಿ ತಿನಿಸನ್ನಾದರೂ ಎಲ್ಲರ ಕಣ್ತಪ್ಪಿಸಿ ತಿನ್ನಬಹುದು, ಚಕ್ಕುಲಿಯನ್ನು ತಿನ್ನಲಾದೀತೇ? ಸದ್ದು ಬರದಷ್ಟು ಹೊತ್ತು ಬಾಯಲ್ಲಿರಿಸಿಕೊಂಡು ತಿನ್ನುವುದಿದ್ದರೆ ಅಕ್ಕಿ ಹಿಟ್ಟು ಉದ್ದಿನ ಹಿಟ್ಟು ಉಪ್ಪು ಖಾರ ಕಲಸಿ ಹಾಗೇ ತಿನ್ನಬಾರದೇ! ಚಕ್ಕುಲಿಯೆಂದರೆ ಕುರುಂ ಕುರುಂ ಅನ್ನಲೇ ಬೇಕು. ಅದೇ ಅದಕ್ಕೆ ಮರ್ಯಾದೆ. ಇಂತಿರುವಾಗ, ನಮ್ಮ ಕಿಟ್ಟಣ್ಣ ಮನೆಯಲ್ಲಿ ಕದ್ದು ತಿನ್ನಲಾಗದೇ ಶಾಲೆಗೆ ಹೋಗುವಾಗ ಬುತ್ತಿಯೂಟದ ಜತೆಗೆ ಕಟ್ಟಿಕೊಂಡು ಹೋಗುತ್ತಾನೆ. ಸರಿ, ಅಲ್ಲೂ ಬೇರೆ ಮಕ್ಕಳು ಬಯಸುವುದಿಲ್ಲವೇ? ಅವರ ಕಣ್ತಪ್ಪಿಸಿ ಶಾಲೆಗೆ ಸಮೀಪದ ಬಯಲಲ್ಲಿ ತಿನ್ನ ಹೊರಡುತ್ತಾನೆ. ಆ ವೇಳೆಗೆ ಸರಿಯಾಗಿ ಮೇಷ್ಟರು ಬರುವುದನ್ನು ಕಂಡು ಭಯದಿಂದ ತತ್ತರಿಸಿ ಬಾಯಲ್ಲಿದ್ದ ಚಕ್ಕುಲಿ ನುಂಗುತ್ತಾನೆ. ಗ್ರಹಚಾರ ಗಂಟಲಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ದೇವರ ದಯೆ, ಮೇಷ್ಟರಿಗೆ ಗೊತ್ತಾಗಿ ಅವನ ಗಂಟಲಲ್ಲಿ ಬಾಕಿಯಾದ ಚಕ್ಕುಲಿ ಹೊರಬರುವಂತೆ ಮಾಡುತ್ತಾರೆ, ಉಳಿದ ಚಕ್ಕುಲಿಯನ್ನು ತರಗತಿಯ ಎಲ್ಲರಿಗೂ ಹಂಚುವಂತೆ ಹೇಳುತ್ತಾರೆ. ಅಂದಿನಿಂದ ಅವನು ಚಕ್ಕುಲಿ ಕಿಟ್ಟಣ್ಣನೆಂದೇ ಖ್ಯಾತಿ ಗಳಿಸುತ್ತಾನೆ. ಇಂದು, ಚಕ್ಕುಲಿ ಪ್ರಿಯರಾದ ತನ್ನ ಮೊಮ್ಮಕ್ಕಳನ್ನು ನನ್ನ ಅಮ್ಮನೂ ಇದೇ ಹೆಸರಿನಿಂದ ಕರೆಯುತ್ತಾರೆ! 

  ಹಬ್ಬಗಳಿಗೂ ಚಕ್ಕುಲಿಗೂ ಏನು ಸಂಬಂಧವೋ ಗೊತ್ತಿಲ್ಲ. ಅಂತೂ ಅಷ್ಟಮಿಯೋ ಚೌತಿಯೋ ವರಮಹಾಲಕ್ಷಿ¾ಯೋ ಏನೇ ಇದ್ದರೂ ದೊಡ್ಡ ದೊಡ್ಡ ಗಾತ್ರದ ಚಕ್ಕುಲಿಗಳು ದೇವರ ಮುಂದೆ ಇರಲೇಬೇಕು. ಮಕ್ಕಳು ಆ ಚಕ್ಕುಲಿಯನ್ನೆತ್ತಿ ಕಿರುಬೆರಳಿನಲ್ಲಿ ಸಿಕ್ಕಿಸಿಕೊಂಡರಂತೂ ಸಾûಾತ್‌ ಶ್ರೀಮನ್ನಾರಾಯಣನ ಪ್ರತಿಮೂರ್ತಿಗಳೇ. ತಿಂದರೋ ಬಿಟ್ಟರೋ, ಚಕ್ಕುಲಿಯೆಂಬ ಪದದ ಕಡೆಗೆ ಸೆಳೆಯಲ್ಪಡದ ಮಕ್ಕಳಿದ್ದರೆ ಹೇಳಿ! ಮನೆಯಲ್ಲಿ ಅಮ್ಮನೋ ಅಜ್ಜಿಯೋ ಹಬ್ಬದ ತಯಾರಿಯಲ್ಲಿ ತೊಡಗಿಕೊಂಡು ಚಕ್ಕುಲಿ ಮಾಡುತ್ತಾರಾದರೆ ಮಕ್ಕಳೆಲ್ಲ ಅಲ್ಲಿ ಹಾಜರು. "ದೇವರಿಗೆ ನೈವೇದ್ಯ ಮಾಡಬೇಕಿರುವ ಯಾವುದನ್ನೂ ಮೊದಲೇ ತಿನ್ನಬಾರದು' ಎಂಬ ಅಜ್ಜಿ, "ಮಕ್ಕಳಿಗಿಂತ ಇನ್ನು ದೇವರುಂಟೇ? ಅವರು ತಿಂದರೆ ಪರಮಾತ್ಮ ಸಂತೃಪ್ತನಾದಂತೆ' ಎನ್ನುವ ಅಜ್ಜ; ಅವರೀರ್ವರ ಚರ್ಚೆಯ ನಡುವೆ ಆಗ ತಾನೇ ತಯಾರಾದ ಚಕ್ಕುಲಿ ಇನ್ನೂ ಬಿಸಿಬಿಸಿ ಇರುವಾಗಲೇ ಮಕ್ಕಳ ಚಡ್ಡಿ ಕಿಸೆಯೊಳಗೆ ಸೇರಿದರೂ ಅಚ್ಚರಿಯಿಲ್ಲ.  

  ಚಕ್ಕುಲಿ ತಯಾರಿಸುವ ಸಂಭ್ರಮವೆಂದರೆ ಚಂದ. ಹದವಾಗಿ ತಯಾರಾದ ಹಿಟ್ಟನ್ನು ಚಕ್ಕುಲಿಯ ಒರಳಿನೊಳಗೆ ಹಾಕಿ ವೃತ್ತಾಕಾರವಾಗಿ ಸುತ್ತಿ ರೂಪುಗೊಳಿಸುವುದನ್ನು ನೋಡುವ ಮಕ್ಕಳಿಗೆ ಅಮ್ಮನ ಕೈಯ ಶಕ್ತಿಯ ಅರಿವಾಗದು. ಸುಮ್ಮನೇ ಹಗುರವಾಗಿ ಹೂವು ಸುತ್ತಿದಷ್ಟೇ ಸುಲಭವಾಗಿ ಸುತ್ತುವರೆಂಬ ಭ್ರಮೆಯಲ್ಲಿ ತಾವೇ ಮಾಡುತ್ತೇವೆಂದು ಗಲಾಟೆ ಮಾಡಿಯಾರು. ಚಕ್ಕಳ ಮಕ್ಕಳ ಹಾಕಿದರೂ ಮೊಣಕಾಲಲ್ಲಿ ಕುಳಿತರೂ ವಜ್ರಾಸನವೇ ಆದರೂ ಅಮ್ಮ ಸುತ್ತಿದಂತೆ ಚಕ್ಕುಲಿ ಮಾಡಲು ತಮ್ಮಿಂದಾಗದು ಎಂಬ ಪ್ರಜ್ಞೆ ಜಾಗೃತಗೊಳ್ಳಬೇಕಾದರೆ ಹತ್ತು ಚಕ್ಕುಲಿಯಾಗುವಷ್ಟು ಹಿಟ್ಟು ವಿವಿಧ ಆಕಾರ ಆಕೃತಿಗಳನ್ನು ಪಡೆದಿರುತ್ತದೆ. 

  ಚಕ್ಕುಲಿಯ ಮೋಹ ಎಳೆಯ ಮಕ್ಕಳನ್ನೂ ಬಿಡದು. ನನ್ನ ಅಕ್ಕ ಎರಡನೇ ಮಗುವಿಗೆ ಜನ್ಮ ನೀಡಿದ್ದ ದಿನ, ಮಗ ಬಂದ ಸಡಗರದಲ್ಲಿ ಭಾವ ಮೈಸೂರು ಪಾಕು, ಚಕ್ಕುಲಿಗಳನ್ನೆಲ್ಲ ಕೆ.ಜಿ.ಗಟ್ಟಲೆ ತಂದಿದ್ದರು. ನನ್ನ ಮಗಳಿಗೆ ಎರಡು ವರುಷ. ತಟ್ಟೆಯಲ್ಲಿ ಇಟ್ಟಿದ್ದ ಚಕ್ಕುಲಿ ಅವಳನ್ನು ಸೆಳೆದಿತ್ತು. ಅದಾವ ಮಾಯದಲ್ಲಿ ಬಾಯಿಗಿಟ್ಟಿದ್ದಳ್ಳೋ ಗೊತ್ತಿಲ್ಲ, ಚಕ್ಕುಲಿ ತುಂಡೊಂದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಅವಳು ಉಸಿರಿಗಾಗಿ ಒದ್ದಾಡುವುದನ್ನು ಗಮನಿಸಿದ ಅಕ್ಕನ ಮಾವನವರು "ಚಕ್ಕುಲಿ ತಿಂದಳ್ಳೋ ನೋಡು ಕಡೆಗೆ' ಎಂದಾಗಲೇ ನಮಗೆ ಗೊತ್ತಾದದ್ದು. ಅವಳನ್ನು ಅಡಿಮೇಲು ಮಾಡಿ ಎತ್ತಿದ್ದ ಭಾವ ಅದು ಹೇಗೋ ಗಂಟಲಿನಿಂದ ಚಕ್ಕುಲಿ ತುಂಡನ್ನು ಹೊರತೆಗೆದರು. ಐದು ನಿಮಿಷಗಳಲ್ಲಿ ನಡೆದುಹೋದ ಈ ಘಟನೆ ಅಲ್ಲಿದ್ದ ಎಲ್ಲರಿಗೂ ಕಸಿವಿಸಿ ಸೃಷ್ಟಿಸಿತ್ತು. ಆ ಬಳಿಕ ಪುಟ್ಟ ಮಕ್ಕಳಿದ್ದಾರೆ ಎಂದರೆ ಚಕ್ಕುಲಿ ಮಾಡುವುದನ್ನೋ ತರುವುದನ್ನೋ ಅಕ್ಷರಶಃ ನಿಲ್ಲಿಸಿದ್ದೆವು.  

  ನಾನು ಆರನೇ ತರಗತಿಯಲ್ಲಿದ್ದಾಗಿನ ಒಂದು ಪ್ರಸಂಗ. ಮನೆಯಲ್ಲಿ ಬರೆಯುತ್ತಾ ಕುಳಿತಿದ್ದವಳು ದಾರಿಯ ದಣಿವಿಂದ ಹಾಗೇ ನಿದ್ದೆಗೆ ಜಾರಿದ್ದೆ. ಗಡದ್ದು ನಿದ್ದೆ. ಆಗ ಚಕ್ಕುಲಿ ತಿನ್ನುತ್ತಿದ್ದಂಥ ಕನಸು. ಆ ಚಕ್ಕುಲಿ ಅದೆಲ್ಲಿಂದ ಬಂತೋ ಯಾರು ಮಾಡಿದರೋ ಒಂದೂ ಗೊತ್ತಿಲ್ಲ. ಮುಸ್ಸಂಜೆಯ ಹೊತ್ತಿಗೆ ಅಮ್ಮ ಕಾಫಿ ಮಾಡಿ ಎಚ್ಚರಿಸಿದ್ದರು. ಚಕ್ಕುಲಿ ಕನಸು ಭಂಗವಾಯಿತಲ್ಲ, ಅದು ಕನಸೆಂಬ ಅರಿವು ಮೂಡಿರಲಿಲ್ಲ. "ಅಮ್ಮ ಆಗ ಚಕ್ಕುಲಿ ಕೊಟ್ಟಿದ್ದೆಯಲ್ಲ, ಅದನ್ನು ಕೊಡು ಕಾಫಿ ಜತೆಗೆ' ಎಂದಿದ್ದೆ. "ಚಕ್ಕುಲಿ ಎಲ್ಲಿತ್ತು ಕೂಸೇ? ನಿನಗೆಂಥಾ ಭ್ರಮೆ?' ಎಂದು ಅಮ್ಮ ನಕ್ಕಿದ್ದರು. "ಚಕ್ಕುಲಿ ಕೊಡುವುದಿಲ್ಲವಾದರೆ ನನಗೆ ಕಾಫಿಯೂ ಬೇಡ' ಎಂದು ಅತ್ತುಕೊಂಡು ಮತ್ತೆ ನಿದ್ದೆ ಹೋಗಿದ್ದೆ. ಎದ್ದದ್ದು ಮರುದಿನ ಬೆಳಗ್ಗೆಯೇ. ಅಮ್ಮ ವಿಚಾರಿಸಿದರೆ ನನಗೆ ಚಕ್ಕುಲಿಯ ಕಥೆಯಾಗಲೀ, ಕಾಫಿಯ ಪರಿಮಳವಾಗಲೀ ಯಾವುದೂ ನೆನಪಿರಲಿಲ್ಲ. 

ಆರತಿ ಪಟ್ರಮೆ


Trending videos

Back to Top