CONNECT WITH US  

ಬದುಕೆಂಬುದು ನೋವಿಗದ್ದಿದ ಕುಂಚ

ಕಿಸಾಗೌತಮಿ ನಾಟಕದಲ್ಲಿ  ಭಗವಾನ್‌ ಬುದ್ಧ  ತನ್ನ ಮಗುವಿಗಾಗಿ ಮಮ್ಮಲ ಮರುಗುವ  ಕಿಸಾಗೌತಮಿಯಲ್ಲಿ "ಸಾವಿಲ್ಲದ ನೋವಿಲ್ಲದ ಮನೆಯ ಸಾಸಿವೆ ಕಾಳು ತಂದು ಕೊಡು' ಎಂದು ಹೇಳುತ್ತಾನೆ. ಸಾವು-ನೋವುಗಳನ್ನು ಗೆಲ್ಲಲು ನಮಗೆ ಸಾಧ್ಯವಿಲ್ಲದಿರುವುದರಿಂದಲೇ ಬದುಕೆಂದರೆ ಕೆಲವೊಮ್ಮೆ ನೋವಿಗದ್ದಿದ ಕುಂಚ. ಮನದ ಯಾತನೆ ಮಿಗಿಲೇ. ದೇಹವನ್ನು ಹಿಂಡಿ ಹಿಪ್ಪೆ ಮಾಡುವ ನೋವು ಹೆಚ್ಚೇ ಎಂದೆಲ್ಲ ಸ್ಪಷ್ಟವಾಗಿ ಅರಿವಾಗುವುದು ಸ್ವಾನುಭವದಿಂದ, ಅದರಲ್ಲೂ ಹಾಸ್ಪಿಟಲ್‌ ವಾಸದಿಂದ. ಅಪಘಾತ, ಅನಾರೋಗ್ಯ ಇತ್ಯಾದಿ ನಾವಾಗಿ ತಂದುಕೊಳ್ಳುವ ನೋವುಗಳಷ್ಟೇ ಇತರರಿಂದ ಹೇರಲ್ಪಟ್ಟ ಯಾತನೆಗಳೂ ಇರುವುದೊಂದು ಅಚ್ಚರಿ.

ಚರಿತ್ರೆಯ ಪುಟಗಳನ್ನೋದಿದರೆ ಯುದ್ಧದ ಹೆಸರಿನಲ್ಲಿ ಬಾಂಬ್‌ ದಾಳಿ, ಕೊಲೆ, ಸುಲಿಗೆ, ಅತ್ಯಾಚಾರಗಳು ಸಹಜ ಎನ್ನುವಂತೆ ಒಪ್ಪಿತವಾಗಿತ್ತು. ಇನ್ನು ಮಧ್ಯ ಯುಗದಲ್ಲಂತೂ ಧರ್ಮದ ಹೆಸರಿನಲ್ಲಿ  ಶಿಲುಬೆಗೇರಿಸುವುದು, ಕೈ ಕಾಲು ಕತ್ತರಿಸುವುದು, ಜೀವಂತ ಸುಡುವುದು, ರಥದ ಗಾಲಿಗಳಲ್ಲಿ ಎಳೆದು ಕೊಲ್ಲಿಸುವುದು, ಹೀಗೆ ತೀರ ಅಮಾನವೀಯವಾಗಿ ನಡೆದುಕೊಳ್ಳುತಿದ್ದರು. ಭಾರತದಲ್ಲೂ ಅಷ್ಟೆ. ಅರಮನೆಗಳ ವಸ್ತುಸಂಗ್ರಹಾಲಯಗಳಿಗೆ ಭೇಟಿ ಕೊಟ್ಟರೆ ಸಾಕು ಬೇರೆ ಬೇರೆ ವಿನ್ಯಾಸದ ಬಾಕುಗಳು, ಚೂರಿಗಳು, ಕತ್ತಿಗಳು, ಶಿರಸ್ತ್ರಾಣಗಳು, ಅನೆಗಳಿಂದ  ತುಳಿಸುತ್ತಿದ್ದ ಸ್ಥಳ, ಕತ್ತಲೆ ಕೋಣೆಯ ಕಂದಕಗಳು- ಹೀಗೆ ಆ ಕಾಲದ ಜೀವನ ಶೈಲಿ, ವೈಭೋಗ ಎರಡೂ  ಕ್ರೌರ್ಯಕ್ಕೆ ತಳಕು ಹಾಕಿಕೊಂಡ ವಿಧ ದಿಗಿಲು ಹುಟ್ಟಿಸುತ್ತದೆ.

ಆಧುನಿಕ ಜಗತ್ತು ಬೆಚ್ಚಿ ಬೀಳುವ ಕ್ರೌರ್ಯ ನಡೆದದ್ದು ಹಿಟ್ಲರನ ಕಾಲದಲ್ಲಿ. ಪ್ರಥಮ ಹಾಗೂ ದ್ವಿತೀಯ ಮಹಾಯುದ್ಧದ ಅರ್ಥಹೀನ ಸಾಮೂಹಿಕ ಹತ್ಯೆ, ಯಹೂದ್ಯರ ಮಾರಣ ಹೋಮದ ಬಗ್ಗೆ  ಹೋಲೋಕಾಸ್ಟ್‌ ಲಿಟರೇಚರ್‌ ಎಂಬ ಪ್ರಕಾರವೇ ಇದೆಯೆಂದರೆ ಆ ಸಾವು-ನೋವಿನ ತೀವ್ರತೆ ಎಷ್ಟಿರಬೇಡ? ತಮ್ಮ ಕೃತಿ ಯಾದ್‌ ವಶೇಮ್‌ನಲ್ಲಿ ನೇಮಿಚಂದ್ರ ಅವರು ಆ ಸಮಯದ ಕ್ರೌರ್ಯವನ್ನು ಮನಕಲಕುವಂತೆ ನಿರೂಪಿಸುತ್ತಾರೆ. ಪ್ರಭುತ್ವದ ದಮನಕಾರಿ ಪ್ರವೃತ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬರೆದ ಆಂಗ್ಲ ಕಾದಂಬರಿಕಾರ ಜಾರ್ಜ್‌ ಆರ್ವೆಲ್‌ ಬರೆದ 1984 ಕಾದಂಬರಿಯಲ್ಲಿ ಆತ ಯುದ್ಧ ಕಾಲದ ಕ್ರೌರ್ಯಗಳನ್ನು, ಸಾರ್ವಭೌಮತ್ವದ ಕ್ರೌರ್ಯಗಳನ್ನು ಎಳೆ ಎಳೆಯಾಗಿ ಬಿಂಬಿಸುತ್ತಾನೆ.
 
ಇವಿಷ್ಟು  ಹೇರಲ್ಪಟ್ಟ ಕ್ರೌರ್ಯ, ಯಾತನೆಗಳಾದರೆ ದೇಹಕ್ಕೆ ನಾವೇ ತಂದುಕೊಳ್ಳುವ ಯಾತನೆಗಳು ಹಲವು. ನಮ್ಮ ನಿರ್ಲಕ್ಷ್ಯದಿಂದ ತಂದುಕೊಳ್ಳುವ ಅಪಘಾತಗಳು, ರೋಗ ರುಜಿನಗಳು ಹೀಗೆ.  

ಮನಸ್ಸಿನ ಯಾತನೆ ದೇಹದ ಯಾತನೆಗಿಂತ ತಾತ್ವಿಕವಾಗಿ ದೊಡ್ಡದು ಹೌದಾದರೂ ತನ್ನ ಕಾಲು ಕತ್ತರಿಸಲ್ಪಡಬಹುದೇನೋ ಎಂದು ಕಳವಳಪಡುವ ಗ್ಯಾಂಗ್ರಿನ್‌ ರೋಗಿ, ಒಂದೊಂದು ಉಸಿರಿಗೆ ಹಂಬಲಿಸುವ ಅಸ್ತಮಾ ಪೇಷೆಂಟ್‌, ತನಗೆ ಬ್ರೆ„ನ್‌ ಹ್ಯಾಮರೇಜ್‌ ಆಗಬಹುದೇನೋ ಎಂದು ಭಯಪಡುವ ಬಿ.ಪಿ. ಪೇಷೆಂಟ್‌, ಇತರರನ್ನು ಅವಲಂಬಿಸಿ ನರಕಯಾತನೆ ಅನುಭವಿಸುವ ಪಾರ್ಶ್ವವಾಯು ರೋಗಿ... ಹೀಗೆ ನೋವಿನ ಮಜಲುಗಳು ಅನೇಕ. ಸಾವು ನೋವುಗಳು ಯಾರನ್ನು ಬಿಟ್ಟಿವೆ? ಹಲ್ಲು ಕಚ್ಚಿ ಸಹಿಸುವ ಹೆರಿಗೆನೋವು, ಆ್ಯಕ್ಸಿಡೆಂಟ್‌ ಆಗಿ ಪ್ರಾಣ ಹೋಗುವ ಸಂಕಟ, ಭಯ ಹುಟ್ಟಿಸುವ ಮಾರಣಾಂತಿಕ ಕಾಯಿಲೆಗಳು, ಕೆಮಿಕಲ್‌ ಬರ್ನ್ಗಳು, ಆಪರೇಶನ್‌ಗಳು, ಬಾಂಬ್‌ ದಾಳಿಗೆ ಸುಲಿಯಲ್ಪಟ್ಟ ಚರ್ಮ, ಆ್ಯಸಿಡ್‌ನಿಂದ ವಿರೂಪಗೊಳ್ಳುವ ಮುಖಗಳು. 
ನೋವನ್ನು ಮೀರುವ ಬದುಕಿನ ಸೆಲೆ ಯಾವುದು? ಕುತೂಹಲದ ವಿಚಾರ. ನೋವಿಗೆ ಕಾರಣ ಯಾವುದು? ಈ ಜನ್ಮದ, ಪೂರ್ವಜನ್ಮದ ಪಾಪ ಕೃತ್ಯಗಳೇ, ವಿಧಿಯೇ ಅಥವಾ ಕೇವಲ ನಮ್ಮ ಅಜಾಗ್ರತೆಯೇ? ಮನದ ನೋವು  ತಡೆಯಲಾಗದೆ ಕುಡಿತ, ಧೂಮಪಾನ, ಅಮಲು ಪದಾರ್ಥಗಳ ಮೊರೆ ಹೋಗುವವರು ಹಲವರಾದರೆ, ದೇವರು, ಧರ್ಮ ಎಂಬ ಸಮಾಧಾನದ ಮೊರೆ ಹೋಗುವವರು ಹಲವರು.

ನಾನು ಕಂಡಂತೆ ನಾಗರಿಕ ಸಮಾಜದಲ್ಲಿ ಹೀಲಿಂಗ್‌ ಸೆಂಟರ್‌ಗಳು ಎರಡು ವಿಧ. ಹಾಸ್ಪಿಟಲ್‌ಗ‌ಳು ಮತ್ತು ಆಶ್ರಮಗಳು. (ದೇವಸ್ಥಾನಗಳು, ಚರ್ಚು, ಮಸೀದಿಗಳು, ಮಠಗಳು ಅವರವರ ಭಾವಕ್ಕೆ ಸಂಬಂಧಿಸಿದ್ದು). ಚರಕ ಶುಶ್ರುತರ ಕಾಲದಿಂದಲೂ  ಔಷಧೋಪಚಾರಗಳು, ವೈದ್ಯ ಪದ್ಧತಿಗಳು ನಮ್ಮಲ್ಲಿವೆ. ಇನ್ನು ಫ್ಲಾರೆನ್ಸ್‌ ನೈಟಿಂಗೇಲ್‌ ಎಂಬ ಪ್ರಖ್ಯಾತ ದಾದಿಯ ವಿಚಾರ ಎಲ್ಲರಿಗೂ ತಿಳಿದೇ ಇದೆ.

ಸಾವು-ನೋವುಗಳು ಹುಟ್ಟಿಸುವ ಆತಂಕ, ಭಯ ನಮಗೆ ಪ್ರಿಯವಾದುದನ್ನು, ನಮ್ಮನ್ನು ಅವಲಂಬಿಸಿರುವವರನ್ನು ಬಿಟ್ಟುಹೋಗಬಹುದಾದ ಸಾಧ್ಯತೆಯೇ ಮನುಷ್ಯರ ಭಯ, ಆತಂಕಗಳಿಗೆ ಕಾರಣ. ಅವನ್ನು ಮೀರಲು ತಾಯಿತಗಳು,  ಮಂತ್ರ-ತಂತ್ರ, ನೇಮ-ವ್ರತಗಳು, ಜ್ಯೋತಿಷ್ಯ... ಬದುಕೆಂದರೆ ನೋವಿಗದ್ದಿದ ಕುಂಚ.

ನೋವಿಗೆ ನಮ್ಮನ್ನು ಹೆಚ್ಚು ಸಜ್ಜನರಾಗಿಸುವ, ಸಹೃದಯರಾಗಿಸುವ ಶಕ್ತಿ ಇದೆ. ಅರಸನಿರಲಿ, ಆಳಿರಲಿ, ನೋವಿನ ಮುಂದೆ ಎಲ್ಲರೂ ಕುಬjರೇ. ಹಣ, ಶ್ರೀಮಂತಿಕೆ, ದರ್ಪ, ದೌಲತ್ತು ಯಾವುದಕ್ಕೂ ಕಳೆದುಕೊಂಡ ಆರೋಗ್ಯ, ಯೌವನ ಮರಳಿ ತಂದುಕೊಡಲು ಸಾಧ್ಯವಿಲ್ಲ. ನೋವಿನ ಅಪಾರ ಸಾಧ್ಯತೆಗಳು, ಸಹಿಸಲೇಬೇಕಾದ ಅನಿವಾರ್ಯತೆ ಮನಗಂಡಿರುವುದರಿಂದಲೇ ಬಹುಶಃ ಜಗತ್ತಿನಲ್ಲಿ ಮಾನವೀಯತೆ ಇನ್ನೂ ಉಳಿದಿದೆ. ನೋವನ್ನು ಮೀರಿ ಸಾಧಿಸಿದ ಅನೇಕ ಸಾಹಸಿಗಳು ನಮ್ಮ ಮುಂದೆ ಇದ್ದಾರೆ. ಅನೇಕ ತಣ್ತೀಜ್ಞಾನಿಗಳು, ಕಲಾವಿದರು ನೋವನ್ನು ಮೀರುವ ಉತ್ಕಟತೆಯಲ್ಲಿಯೇ ಬೆಳೆದು ಬಂದವರು. ಜಗತ್ತಿನ ನೋವನ್ನು ದೂರ ಮಾಡಲು ಪ್ರಯತ್ನಿಸಿದ ದಾರ್ಶನಿಕರು, ಸಮುದಾಯದ, ದೇಶದ ನೋವನ್ನು ಕಡಿಮೆ ಮಾಡಲೆತ್ನಿಸಿದ ಸಮಾಜ ಸುಧಾರಕರು- ಹೀಗೆ ನೋವಿಗೆ ಅನೇಕ ಸಾಧ್ಯತೆಗಳು, ಸಾಫ‌ಲ್ಯಗಳು ಕೂಡ. ಎಲ್ಲರ ಬಾಳಿನಲ್ಲಿಯೂ ನೋವಿದೆ, ನಲಿವಿದೆ. ನೋವು ಮೀರಿ ಗೆಲುವಿಗಾಗಿ ಪ್ರಯತ್ನಿಸೋಣ. 

ಜಯಶ್ರೀ ಬಿ. ಕದ್ರಿ


Trending videos

Back to Top