CONNECT WITH US  

ಮಗು ಎಂತಾ? ಹೆಣ್ಣಾ?

ಮುಂಚಿನ ಮಗು ಏನಮ್ಮ?'' ಸಿಸೇರಿಯನ್‌ ಮಾಡಿ ಮಗುವನ್ನು ಹೊರತೆಗೆದ ಡಾಕ್ಟರ್‌ ಕೇಳಿದಾಗ ""ಹೆಣ್ಣು ಮಗು ಡಾಕ್ಟ್ರೆ'' ಎಂದೆ. ಇದೂ ಅದೆ. ಇದ್ದದ್ದನ್ನೆಲ್ಲ ಇಬ್ಬರು ಅಳಿಯಂದ್ರಿಗೆ ಹಂಚಿ, ಮತ್ತೂ ಏನಾದ್ರು ಉಳಿದ್ರೆ ನನಗೆ ಕೊಡು'' ಎಂದು ಡಾಕ್ಟರ್‌ ತಮಾಷೆಯಾಗಿ ಹೇಳಿದಾಗ ನನಗೇನೂ ಬೇಜಾರಾಗಲಿಲ್ಲ. ಯಾವ ಮಗು ಆದರೇನು? ಅದು ಕಿಲಕಿಲನೆ ನಕ್ಕಾಗ, ರಚ್ಚೆ ಹಿಡಿದು ಅತ್ತಾಗ, ಎಲ್ಲದಕ್ಕೂ ಅಮ್ಮನೇ ಬೇಕು ಎಂದು ಹಠ ಹಿಡಿದಾಗ, ಯಾವ ಚಿಂತೆಯೂ ಇಲ್ಲದಂತೆ ಹಾಯಾಗಿ ಮಲಗಿದಾಗ, ಮೊದಲ ಸಲ "ಅಮ್ಮಾ' ಎಂದು ಕರೆದಾಗ, ಎದೆಯಲ್ಲಿ ಹುಟ್ಟುವ ಮಮತೆಯ ಧಾರೆಯೊಂದೇ! ಅದು ಹೆಣ್ಣು ಮಗುವಿಗೊಂದು ಗಂಡು ಮಗುವಿಗೊಂದು ಎಂದು ಬೇರೆ ಇರುವುದಿಲ್ಲ.

ಆದರೂ ಎರಡೂ ಹೆಣ್ಣುಮಕ್ಕಳಾದಾಗ ಈ ಸಮಾಜ ಅವರನ್ನು ಅನುಕಂಪದಿಂದ ನೋಡುವುದಂತೂ ತಪ್ಪುವುದಿಲ್ಲ ! ನನಗಂತೂ ಇದು ಸಾಕಷ್ಟು ಸಲ ಅನುಭವಕ್ಕೆ ಬಂದಿದೆ.ಮಗು ಹುಟ್ಟಿದ ವಿಷಯ ತಿಳಿಸಲು ನೆಂಟರಿಷ್ಟರಿಗೆ, ಪತಿರಾಯರಿಗೆ ಫೋನಾಯಿಸಿದರೆ  ಅದರಲ್ಲಿ ಹೆಚ್ಚಿನವರು ""ಹೆಣ್ಣು ಮಗು ಆಯಿತೆಂದು ಬೇಜಾರು ಮಾಡ್ಕೊಬೇಡಿ. ಎಲ್ಲ ಹಣೆಬರಹ!'' ಎಂದು ಏನೋ ಆಗಬಾರದ್ದು ಆಯಿತು ಅನ್ನೋ ತರಹ ಪ್ರತಿಕ್ರಿಯಿಸಿದವರೇ ಹೆಚ್ಚು.

ಮಗುವನ್ನು ನೋಡಲು ಬಂದವರದ್ದು ಹೆಚ್ಚಾ ಕಡಿಮೆ ಇದೇ ರೀತಿಯ ಪ್ರತಿಕ್ರಿಯೆ ""ಮುಖ ಎಲ್ಲ ಥೇಟ್‌ ಮಾಣಿ (ಗಂಡುಮಗು) ಕಣಂಗೆ! ಛೇ, ಒಂದು ತು... ತಪ್ಪು ಕಾಯಿಲ್ಯಾ?'' ಎಂದು ಕೆಲವರು ಹೇಳಿದರೆ, ಛೆ! ದೇವರು ಎಂಥಾ ಅನ್ಯಾಯ ಮಾಡ್ತಾನೆ. ಗಂಡಿದ್ದವರಿಗೇ ಗಂಡು ಕೊಡ್ತಾನೆ, ಹೆಣ್ಣಿದ್ದವರಿಗೆ ಮತ್ತೂ ಹೆಣ್ಣೇ ಕೊಡ್ತಾನೆ'' ಎಂದು ಇನ್ನೊಬ್ಬರ ಉವಾಚ! ನಿನಗೆ ಇನ್ನೊಂದೂ ಹೆಣ್ಣಾಯ್ತಲ್ಲಾ ಅಂತ ಎಷ್ಟೋ ದಿವಸ ನಿದ್ದೆನೇ ಬರ್ಲಿಲ್ಲ ಎಂದು ಗೆಳತಿಯೊಬ್ಬಳು ಎದೆಗೇ ಚೂರಿಚುಚ್ಚಿದಳು. ""ಹೆಣ್ಣೋ ಗಂಡೋ ನನಗೆ ಮಗು ಆರೋಗ್ಯವಾಗಿದೆ ಅನ್ನೋದೇ ಸಮಾಧಾನ'' ಎಂದು ಅವಳ ಬಾಯಿಮುಚ್ಚಿಸಿದ್ದೆ. ನನ್ನ ಗಂಡನ ದೂರದ ಸಂಬಂಧಿ ಅಜ್ಜಿಯೊಬ್ಬರು ಇವರ ಅಂಗಡಿಗೆ ಬಂದು ಮಾತಾಡಿದೆ. ಮಾಧವ ಇನ್ನೊಂದೂ ಹೆಣ್ಣಾಯಿತಂತೆ ಕೇಳಿ ಭಾಳ ಬೇಜಾರಾಯಿತು ಮಾರಾಯ. ಅವಳಿಗೆ ಹೇಗೂ ಆಪರೇಷನ್‌ ಆಗಿಲ್ಲಲ್ಲ. ಇನ್ನೊಂದು ಹೆರಲಕ್ಕಲ್ಲ. ಕೆಲವರಿಗೆ ಎರಡು ಹೆಣ್ಣಾದ ಮೇಲೆ ಮತ್ತೂಂದು ಮಾಣಿ ಆತ್ತ'' ಎಂದಾಗ ನನಗೆ ನಗಬೇಕೊ ಅಳಬೇಕೊ ತಿಳಿಯಲಿಲ್ಲ. ಕಾರಣ ಆ ಅಜ್ಜಮ್ಮನಿಗೆ 4 ಜನ ಗಂಡು ಮಕ್ಕಳು ಆದರೆ ಅವರ್ಯಾರೂ ಈಕೆಯನ್ನು ನೋಡಿಕೊಳ್ಳುವುದಿಲ್ಲ. ಆದರೂ ಅವರಿಗೆ ಗಂಡುಮಕ್ಕಳ ಮೇಲಿನ ಮೋಹ ಹೋಗಿಲ್ಲ.

ಗಂಡು ಮಕ್ಕಳು ವೃದ್ಧಾಪ್ಯದಲ್ಲಿ ಆಸರೆಯಾಗುತ್ತಾರೆ ಎಂಬ ದೂರದ ಆಸೆ ಅದು ಎಷ್ಟು ಜನರ ಮಟ್ಟಿಗೆ ಫ‌ಲಿಸಿದೆಯೊ ಗೊತ್ತಿಲ್ಲ. ಅದು ಎಲ್ಲರ ವಿಷಯದಲ್ಲೂ ನಿಜವಾಗಿದ್ದರೆ ದೇಶದಲ್ಲಿ ಇಷ್ಟೊಂದು ವೃದ್ಧಾಶ್ರಮಗಳು ಯಾಕೆಂತಾ ಇದ್ದವು?! ಒಂದು ಕಾಲವಿತ್ತು. ಆಗ ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವತಂತ್ರವಾಗಿರಲಿಲ್ಲ. ಅವರೇ ಗಂಡನ ಮೇಲೆ ಅವಲಂಬಿತರಾಗಿ ಕೂಡುಕುಟುಂಬದಲ್ಲಿರುತ್ತಿದ್ದಾಗ ತಮ್ಮ ತಂದೆ-ತಾಯಿಯನ್ನು ಹೇಗೆ ತಾನೆ ನೋಡಿಕೊಂಡಾರು? ಹೀಗಾಗಿ ಮುಪ್ಪಿನಲ್ಲಿ ಮಗನೇ ದಿಕ್ಕು ಎಂಬ ಮಾತು ನಿಜವಾಗಿತ್ತು! ಆದರೆ ಈಗ ಕಾಲ ಬದಲಾಗಿದೆ. ತಂದೆ-ತಾಯಿಗಳು ಗಂಡಿನಷ್ಟೆ ಹೆಣ್ಣಿಗೂ ಸಾಕಷ್ಟು ಶಿಕ್ಷಣ ಕೊಡಿಸುತ್ತಾರೆ. ಸಾಕಷ್ಟು ಚಿನ್ನ-ಬೆಳ್ಳಿ ಕೊಟ್ಟು ಮದುವೆಯ ಮಾಡಿ ಆಸ್ತಿಯಲ್ಲೂ ಪಾಲು ಕೊಡುತ್ತಾರೆ. ಹೆಣ್ಣು ತಾನೂ ದುಡಿಯುತ್ತಾಳೆ. ಆರ್ಥಿಕವಾಗಿ ಸ್ವತಂತ್ರಳಾಗಿದ್ದಾಳೆ. ಹೀಗಾಗಿ ಆಕೆ ತನ್ನ ತಂದೆ-ತಾಯಿಯನ್ನು ನೋಡಿಕೊಳ್ಳಬಲ್ಲಳು.

ಎಷ್ಟೋ ಜನ ಹೆಣ್ಣು ಮಕ್ಕಳು ಇಳಿವಯಸ್ಸಿನಲ್ಲಿರುವ ತಮ್ಮ ತಂದೆ-ತಾಯಿಯರಿಗೆ ಆಸರೆಯಾಗಿದ್ದಾರೆ. ಅಂಥವರಿಗೊಂದು ಹ್ಯಾಟ್ಸಾಫ್. ಆದರೆ, ಈ ಸಮಾಜ ಅದಕ್ಕೂ ಅವಕಾಶ ಕೊಡುವುದಿಲ್ಲ. ""ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ. ಹೆಣ್ಣು ಮಕ್ಕಳ ಮನೆ ಏನಿದ್ದರೂ ನಾಲ್ಕು ದಿನಕ್ಕೆ ಚೆಂದ. ಮಗಳ ಮನೇಲೆ ಖಾಯಂ ಆಗಿ ಇರೋದಾ'' ಎಂದು ಕುಹಕವಾಡಿದರೆ ಮಗಳ ಮನೆಯಲ್ಲಿ ಇರುವವರಿಗೆ ಚೇಳು ಕುಟುಕಿದಂತಾಗುವುದಿಲ್ಲವೆ?

ಜನರ ಈ ಧೋರಣೆ ಬದಲಾದರೆ ಮಾತ್ರ "ಅಯ್ಯೋ ಹೆಣ್ಣಾ?' ಎಂಬ ರಾಗ ಬದಲಾಗುತ್ತದೇನೊ?

ಸವಿತಾ ಮಾಧವ ಶಾಸ್ತ್ರಿ , ಗುಂಡ್ಮಿ

Trending videos

Back to Top