CONNECT WITH US  

ಮಳೆಗಾಲಕ್ಕಾಗಿ ರುಚಿಕರ ಚಟ್ನಿಪುಡಿಗಳು

ವಿವಿಧ ಬೇಳೆಗಳ ಪರ್ಪುಪುಡಿ
ಬೇಕಾಗುವ ಸಾಮಗ್ರಿ: ಕಡ್ಲೆಬೇಳೆ- 1/4 ಕಪ್‌, ಹೆಸರುಬೇಳೆ-1/4 ಕಪ್‌, ತೊಗರಿಬೇಳೆ- 1/4 ಕಪ್‌, ಉದ್ದಿನಬೇಳೆ-1/4 ಕಪ್‌, ಒಣಮೆಣಸಿನ ಕಾಯಿ- 15, ಮೆಂತೆ- 1 ಚಮಚ, ಜೀರಿಗೆ- 1 ಚಮಚ, ಅರಸಿನ ಹುಡಿ- 1 ಚಮಚ, ಇಂಗಿನಪುಡಿ- 1 ಚಮಚ, ರುಚಿಗೆ ಉಪ್ಪು .

ತಯಾರಿಸುವ ವಿಧಾನ: ಎಲ್ಲಾ ಬೇಳೆಗಳನ್ನು ಬಾಣಲೆಗೆ ಹಾಕಿ ಪರಿಮಳ ಬರುವವರೆಗೆ ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ. ಒಣಮೆಣಸಿನ ಕಾಯಿ ಹುರಿದಿಡಿ. ಜೀರಿಗೆ, ಮೆಂತ್ಯ, ಇಂಗಿನಪುಡಿ ಯನ್ನು ಹುರಿಯಿರಿ. ಕೊನೆಗೆ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ಉಪ್ಪು ಹಾಕಿ ನಯವಾಗಿ ಹುಡಿಮಾಡಿ ಚೆ‌ನ್ನಾಗಿ ಬೆರೆಸಿಡಿ. ಸ್ವಲ್ಪ ಎಣ್ಣೆ ಹಾಕಿ ಅನ್ನನೊಂದಿಗೆ ಚಪಾತಿ, ದೋಸೆಯೊಂದಿಗೆ ಸವಿದರೆ ಬಲು ರುಚಿ.  

ಶೇಂಗಾ ಚಟ್ನಿಪುಡಿ
ಬೇಕಾಗುವ ಸಾಮಗ್ರಿ: ಶೇಂಗಾ- 1/2 ಕಪ್‌, ಹುರಿಗಡಲೆ- 1/4 ಕಪ್‌, ಒಣಕೊಬ್ಬರಿ- 1 ಕಪ್‌, ಹುಣಸೆಹಣ್ಣು ಗೋಲಿಗಾತ್ರ, ಬೆಳ್ಳುಳ್ಳಿ ಬೀಜ 7-8, ಬೆಲ್ಲ ಸ್ವಲ್ಪ , ಕರಿಬೇವಿನ ಸೊಪ್ಪು 7-8, ಒಣಮೆಣಸಿನಕಾಯಿ 8-10, ರುಚಿಗೆ ಉಪ್ಪು. 

ತಯಾರಿಸುವ ವಿಧಾನ: ಶೇಂಗಾ ಹುರಿದು ಸಿಪ್ಪೆ ತೆಗೆದು ಕರಿಬೇವಿನ ಸೊಪ್ಪು ಹಾಕಿ ಪರಿಮಳ ಬರುವವರೆಗೆ ಹುರಿದಿಡಿ. ಒಣ ಮೆಣಸಿನಕಾಯಿ, ಒಣ ಕೊಬ್ಬರಿ ತುರಿ/ತೆಂಗಿನತುರಿ, ಸಿಪ್ಪೆ ಸುಲಿದ ಬೆಳ್ಳುಳ್ಳಿ ಬೀಜ ಬೇರೆ ಬೇರೆಯಾಗಿ ಹುರಿಯಿರಿ. ಹುರಿದಿಟ್ಟ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ಉಪ್ಪು, ಹುಣಸೆಹಣ್ಣು, ಬೆಲ್ಲ ಸೇರಿಸಿ ನಯವಾಗಿ ರುಬ್ಬಿ ತೆಗೆದು ಗಾಜಿನ ಬಾಟಲಿ ಇಲ್ಲವೆ ಸ್ಟೀಲ್‌ ಡಬ್ಬಿಯಲ್ಲಿ ಹಾಕಿಡಿ. (ಬೆಲ್ಲ ಸೇರಿಸದಿದ್ದರೂ ಆಗುತ್ತದೆ). ಫ್ರಿಜ್‌ನಲ್ಲಿಟ್ಟರೆ ಎರಡು-ಮೂರು ತಿಂಗಳು ಹಾಳಾಗುವುದಿಲ್ಲ. ಊಟಕ್ಕೆ, ಚಪಾತಿ, ದೋಸೆಯೊಂದಿಗೆ ತಿನ್ನಬಹುದು.

ಕರಿಬೇವು ಸೊಪ್ಪಿನ ಚಟ್ನಿಪುಡಿ
ಬೇಕಾಗುವ ಸಾಮಗ್ರಿ:
ಕರಿಬೇವಿನ ಸೊಪ್ಪು - 1 ಕಪ್‌, ಕಡಲೆಬೇಳೆ- 1/4 ಕಪ್‌, ಉದ್ದಿನಬೇಳೆ-1/4 ಕಪ್‌, ಕೊತ್ತಂಬರಿ ಬೀಜ- 2 ಚಮಚ, ಒಣಮೆಣಸಿನ ಕಾಯಿ 7-8, ಉಪ್ಪು ರುಚಿಗೆ, ಹುಣಸೆಹಣ್ಣು ಗೋಲಿಗಾತ್ರ, ಎಣ್ಣೆ - 2 ಚಮಚ.

ತಯಾರಿಸುವ ವಿಧಾನ: ಕರಿಬೇವಿನ ಸೊಪ್ಪನ್ನು ಸ್ವತ್ಛಗೊಳಿಸಿ ಸಣ್ಣದಾಗಿ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಒಣಮೆಣಸಿನ ಕಾಯಿ ಹುರಿದು ತೆಗೆಯಿರಿ. ಕಡಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಬೇವಿನ ಸೊಪ್ಪನ್ನು ಬೇರೆ ಬೇರೆ ಹುರಿಯಿರಿ. ಹುರಿದ ಎಲ್ಲ ಸಾಮಗ್ರಿಗಳನ್ನು ಮಿಕ್ಸಿ ಜಾರಿಗೆ ಹಾಕಿ ಇಲ್ಲವೆ ಒರಳಲ್ಲಿ ಹಾಕಿ ಉಪ್ಪು , ಹುಣಸೆಹಣ್ಣು ಸೇರಿಸಿ ನಯವಾಗಿ ಪುಡಿಮಾಡಿ. ಆರೋಗ್ಯದಾಯಕ ರುಚಿಯಾದ ಕರಿಬೇವಿನ ಪುಡಿ ತಯಾರ್‌.

ಹುರುಳಿಕಾಳಿನ ಚಟ್ನಿಪುಡಿ
ಬೇಕಾಗುವ ಸಾಮಗ್ರಿ
: ಹುರುಳಿ- 1 ಕಪ್‌, ತೆಂಗಿನತುರಿ- 1 ಕಪ್‌, ಒಣಮೆಣಸಿನ ಕಾಯಿ- 10, ಹುಣಸೆಹಣ್ಣು ಗೋಲಿಗಾತ್ರ, ಉದ್ದಿನಬೇಳೆ- 2 ಚಮಚ, ಕೊತ್ತಂಬರಿ- 2 ಚಮಚ, ರುಚಿಗೆ ಉಪ್ಪು, ಎಣ್ಣೆ- 2 ಚಮಚ.

ತಯಾರಿಸುವ ವಿಧಾನ: ಹುರುಳಿಕಾಳಿನ ಕಲ್ಲು, ಧೂಳು ತೆಗೆದು ಚೆನ್ನಾಗಿ ತೊಳೆದು ಒಣಗಿಸಿರಿ. ಒಣಮೆಣಸಿನಕಾಯಿ, ತೆಂಗಿನತುರಿ, ಹುರುಳಿ, ಉದ್ದಿನಬೇಳೆ, ಕೊತ್ತಂಬರಿಯನ್ನು ಬೇರೆ ಬೇರೆಯಾಗಿ ಬಾಣಲೆಯಲ್ಲಿ ಹಾಕಿ ಹುರಿಯಿರಿ. ಎಲ್ಲವನ್ನೂ ಮಿಕ್ಸಿಜಾರಿಗೆ ಹಾಕಿ ಹುಣಸೆ ಹಣ್ಣು , ಉಪ್ಪು ಸೇರಿಸಿ ನಯವಾಗಿ ಹುಡಿ ಮಾಡಿರಿ. ಶಕ್ತಿದಾಯಕ ಹುರುಳಿ ಚಟ್ನಿಪುಡಿಯನ್ನು ಊಟಕ್ಕೆ, ದೋಸೆ, ಇಡ್ಲಿ ಚಪಾತಿ ಯೊಂದಿಗೆ ತಿಂದರೆ ರುಚಿಯಾಗಿ ರುವುದು.

ಎಸ್‌. ಜಯಶ್ರೀ ಶೆಣೈ

Trending videos

Back to Top