ಹೂ ಕಟ್ಟೋಣ ಬನ್ನಿ …


Team Udayavani, Mar 16, 2018, 7:30 AM IST

a-18.jpg

ಮೊನ್ನೆ ದೇವಸ್ಥಾನಕ್ಕೆ ಹೋಗಿದ್ದಾಗ ದೇವರ ಫೋಟೊವೊಂದಕ್ಕೆ ಹಾಕಿದ ಹೂಮಾಲೆೆಯೊಂದು ಕಣ್ಣಿಗೆ ಬಿತ್ತು. ಆಹಾ! ಆ ಮಾಲೆ ಎಷ್ಟು ಸುಂದರವಾಗಿತ್ತು ಎಂದರೆ, ಸ್ವಲ್ಪ ಹೊತ್ತು ಅದನ್ನೇ ನೋಡುತ್ತ ಅಲ್ಲೇ ನಿಂತುಬಿಟ್ಟೆ. ಮಾಲೆಯನ್ನು ಕಟ್ಟಿದ ರೀತಿಗೆೆ ಯಾರಾದರೂ ಬೆರಗಾಗಲೇಬೇಕು, ಅಷ್ಟೊಂದು ಕಲಾತ್ಮಕವಾಗಿ ಅದನ್ನು ಹೆಣೆಯಲಾಗಿತ್ತು. ವೀಳ್ಯದೆಲೆಗಳನ್ನು ಒಂದಕ್ಕೊಂದು ಹೊಲಿದು ಪ್ರತಿಯೊಂದು ಎಲೆಯ ಮೇಲೆ ತಾಜಾ ಹಳದಿ ಬಣ್ಣದ ಸೇವಂತಿಗೆಯನ್ನು ಇಟ್ಟು ಪೋಣಿಸಿದ್ದರಿಂದಲೋ ಏನೋ ಬಹಳ ಸುಂದರವಾಗಿ ಕಾಣಿಸುತ್ತಿತ್ತು. ವೀಳ್ಯದೆಲೆ ಮತ್ತು ಸೇವಂತಿಗೆಯ ಕಾಂಬಿನೇಷನ್‌ ಎಂದರೆ ಕಾಂಬಿನೇಷನ್‌! ಸಾಮಾನ್ಯವಾಗಿ ನಾವು ಸೇವಂತಿಗೆ, ಮಲ್ಲಿಗೆ, ಜಾಜಿ, ಕಾಕಡ, ತುಳಸಿ, ಕನಕಾಂಬರ ಹೂವಿನ ಮಾಲೆಗಳನ್ನು ನೋಡಿರುತ್ತೇವೆ. ಆದರೆ, ಇಂತಹ ಕಲಾತ್ಮಕವಾಗಿ ಪೋಣಿಸಿದ ಆಕರ್ಷಕ ಹೂಮಾಲೆಗಳು ಕಾಣಸಿಗುವುದು ಬಹಳ ಅಪರೂಪ.

ಹೂ ಕಟ್ಟುವುದೂ ಒಂದು ಕಲೆ. ಮಾತ್ರವಲ್ಲ ಅದೊಂದು ಸೂಕ್ಷ್ಮದ ಕೆಲಸವೂ ಹೌದು. ಹೂಗಳನ್ನು ಗಿಡದಿಂದ ಕೊಯ್ದರಷ್ಟೇ ಸಾಲದು. ಅದನ್ನು ಮಾಲೆ ಕಟ್ಟಬೇಕು. ಬಿಡಿಬಿಡಿ ಹೂಗಳಿಗಿಂತಲೂ ಹೂಗಳನ್ನು ಮಾಲೆ ಕಟ್ಟಿದರೆ ಅದರ ಚೆಂದವೇ ಬೇರೆ! ಬಹುತೇಕ ಮಂದಿ ಮಹಿಳೆಯರಿಗೆ ಸರಾಗವಾಗಿ ಹೂಕಟ್ಟುವ ಕಲೆ ಕರಗತವಾಗಿರುತ್ತದೆ. ಅಲ್ಲದೆ ಕೆಲವು ಮಂದಿಗೆ ಸಾಧಾರಣ ಹೂಮಾಲೆಗಳಲ್ಲದೆ ಬಗೆ ಬಗೆಯ ರೀತಿಯಲ್ಲಿ ಹೂಮಾಲೆ ಕಟ್ಟುವ ಹವ್ಯಾಸವಿರುತ್ತದೆ. ನಮ್ಮ ಮನೆಯಲ್ಲೂ ಒಂದೆರಡು ಜಾಜಿ ಹೂವಿನ ಗಿಡಗಳಿವೆ. “ಸಂಜೆಯಾದರೆ ಜಾಜಿ ಅರಳುತ್ತದೆ, ಅರಳಿದ ಮೇಲೆ ಮಾಲೆಮಾಡಲು ಆಗುವುದಿಲ್ಲ’ ಎಂದು ನಮ್ಮತ್ತೆ ಬೆಳಗ್ಗೆಯೇ ಮೊಗ್ಗುಗಳನ್ನು ಗಿಡದಿಂದ ಕೊಯ್ದು ಮಾಲೆಮಾಡುತ್ತಾರೆ. ಒಂದು ಮೊಗ್ಗು ಸಹ ಹಾಳಾಗದಂತೆ ಚಕಚಕನೆ ಕೈಬೆರಳುಗಳನ್ನು ತಿರುಗಿಸುತ್ತ ಒಂದರ್ಧ ಗಂಟೆಯೊಳಗೆ ಹೂಕಟ್ಟಿ ಚೆಂದದ ಚೆಂಡನ್ನು ಮಾಡಿಬಿಡುತ್ತಾರೆ. ನನಗೂ ಅವರಂತೆ ಹೂಕಟ್ಟಲು ಕಲಿತುಕೊಳ್ಳಬೇಕೆಂದು ಆಸೆಯಾಗುತ್ತಿತ್ತು. ಅವರಿಂದ ಸ್ವಲ್ಪಮಟ್ಟಿಗೆ ಹೂಕಟ್ಟುವುದನ್ನು ಕಲಿತುಕೊಂಡೆನಾದರೂ ಅವರ ಹಾಗೆ ಸಲೀಸಾಗಿ ಹೂಕಟ್ಟುವ ನಾಜೂಕುತನ ನನಗೆ ಬಂದಿಲ್ಲ ಎನ್ನುವುದನ್ನು ಒಪ್ಪಲೇಬೇಕು.

ಹೂಕಟ್ಟುವುದರಲ್ಲೂ ಹಲವಾರು ವಿಧಗಳಿವೆ. ಒಂದೇ ಹಗ್ಗದಿಂದ ಅಥವಾ ಎರಡು-ಮೂರು ಹಗ್ಗವನ್ನು ಬಳಸಿಯೂ ಹೂಮಾಲೆಮಾಡುತ್ತಾರೆ. ಹೆಚ್ಚಾಗಿ ಹೂಕಟ್ಟಲು ಬಾಳೆನಾರು ಬಳಕೆಯಾದರೂ ನಮಗೆ ಮಾರುಕಟ್ಟೆಯಲ್ಲಿ ದಾರ, ನೂಲಿನಿಂದ ಕಟ್ಟಿದ ಮಾಲೆಗಳು ಸಾಮಾನ್ಯವಾಗಿ ಲಭ್ಯವಾಗುತ್ತವೆ. ನನ್ನ ಸ್ನೇಹಿತೆಯೊಬ್ಬಳು ಬಣ್ಣಬಣ್ಣದ ನೂಲಿನಿಂದ ಹೂಕಟ್ಟುತ್ತಾಳೆ. ನಂದಿಬಟ್ಟಲಿನ ಚಿಕ್ಕ ಚಿಕ್ಕ ಮೊಗ್ಗುಗಳನ್ನು ಹಸಿರು, ಕೆಂಪು, ಹಳದಿ ಬಣ್ಣದ ನೂಲಿನಿಂದ ಕಟ್ಟಿ “ಇದು ನಿನಗೆ’ ಎಂದು ಅಪರೂಪಕ್ಕೊಮ್ಮೆ ತಂದುಕೊಟ್ಟಾಗ ಹೂವರಳಿದಂತೆಯೇ ನನ್ನ ಮುಖವೂ ಇಷ್ಟಗಲವಾಗುತ್ತದೆ.

ಹೂಗಳ ಲೋಕವೆಂದರೇ ಅದೊಂದು ವರ್ಣಮಯ ಲೋಕ. ಒಂದೇ ಬಣ್ಣದ ಹೂಮಾಲೆಗಳಿಗಿಂತ ಬೇರೆ ಬೇರೆ ಬಣ್ಣದ ಹೂಗಳನ್ನು ಮಿಶ್ರ ಮಾಡಿ ಮಾಲೆಮಾಡಿದರೆ ಸುಂದರ ಹೂಮಾಲೆ ರೂಪುಗೊಳ್ಳುತ್ತದೆ. ಇನ್ನು ಒಂದೇ ಜಾತಿಯ ಹೂಗಳ ಬದಲು ವಿಭಿನ್ನ ಜಾತಿಯ ಹೂಗಳನ್ನು ಕಟ್ಟಿದರೆ ಹೂವಿನ ಚೆಲುವು ಇಮ್ಮಡಿಯಾಗುವುದಂತೂ ನಿಜ. ಉದಾಹರಣೆಗೆ ಹೇಳಬೇಕೆಂದರೆ, ಅಬ್ಬಮಲ್ಲಿಗೆಯೊಂದಿಗೆ ಮುತ್ತುಮಲ್ಲಿಗೆಯನ್ನು ನಡುನಡುವೆ ಸೇರಿಸಿ ಕಟ್ಟಿದ ಮಾಲೆ, ಹಾಗೆಯೇ ದಾಸವಾಳವನ್ನು ಗರಿಕೆಯೊಂದಿಗೆ ಸೇರಿಸಿ ಕಟ್ಟಿದ ಮಾಲೆಯನ್ನು ನೋಡಲು ಎರಡು ಕಣ್ಣು ಸಾಲದು!  

ಸಂಜೆಯಾಯಿತೆಂದರೆ, ಮನೆ-ಮನೆಗಳಲ್ಲಿ ಹೆಂಗಳೆಯರೆಲ್ಲ ಕೈಯಲ್ಲೊಂದು ಬುಟ್ಟಿ ಹಿಡಿದು ತಮ್ಮ ಮನೆಯಂಗಳದ ಹೂದೋಟದಲ್ಲಿ ಅರಳಿ ಪರಿಮಳ ಸೂಸುವ ಮಲ್ಲಿಗೆ, ಅಬ್ಬಮಲ್ಲಿಗೆ, ಸೂಜಿಮಲ್ಲಿಗೆ, ಸೇವಂತಿಗೆ, ಮುತ್ತುಮಲ್ಲಿಗೆ ಹೂಗಳನ್ನು ಕೊಯ್ಯುವ ದೃಶ್ಯ ಎತ್ತಲೂ ಕಾಣಸಿಗುತ್ತದೆ. ಕೊಯ್ದ ಹೂವನ್ನು ಟಿವಿ ನೋಡುತ್ತಲೋ, ಹರಟೆ ಹೊಡೆಯುತ್ತಲೋ ಅದನ್ನು ಕಟ್ಟುವ ಅವರ ಕೆಲಸವೂ ಅಷ್ಟೇ ಸಂಭ್ರಮದಿಂದ ಸಾಗುತ್ತದೆ. ಹೀಗೆ, ತಯಾರಾದ ಮಾಲೆಗಳು ಮುಡಿಯಲೂ, ದೇವರ ಪೂಜೆಗೆ ಒದಗುತ್ತವೆ. ನಮಗೆ ಗೊತ್ತಿರುವಂತೆ ಮಾಲೆಗಳಲ್ಲಿ ತುಲಸೀಮಾಲೆ ಅಗ್ರಸ್ಥಾನ ಪಡೆದಿದೆ. ತುಲಸೀಮಾಲೆ ಕೃಷ್ಣನಿಗೆ ಅತ್ಯಂತ ಪ್ರಿಯ. ಗರಿಕೆಯ ಮಾಲೆ ಗಣಪತಿಗೆ ಪ್ರೀತಿ. ಪ್ರತಿನಿತ್ಯದ ದೇವರ ಪೂಜೆಗೆ ಹೂ ಬೇಕೇ ಬೇಕು. ನಮಗಿಷ್ಟವಾದ ಕಾಂಬಿನೇಷನ್‌ನಲ್ಲಿ ಹೂಮಾಲೆ ಕಟ್ಟಿ ದೇವರಿಗರ್ಪಿಸುವುದರಿಂದ ಮನದಲ್ಲಿ ಒಂದು ರೀತಿಯ ಧನ್ಯತಾಭಾವ ಮೂಡುತ್ತದೆ! 

ಹೂಕಟ್ಟಲು ಬಾಳೆನಾರು ಶ್ರೇಷ್ಠ. ಬಾಳೆನಾರಿನಿಂದ ಕಟ್ಟಿದರೆ ಹೂ ಬೇಗ ಬಾಡುವುದೂ ಇಲ್ಲ. ಇನ್ನು ಪಾರಿಜಾತ, ದುಂಡು ಮಲ್ಲಿಗೆ, ರಂಜೆ, ಅನಂತಪುಷ್ಪದಂತಹ ಹೂಗಳನ್ನು ಸೂಜಿಯಲ್ಲಿ ಪೋಣಿಸುತ್ತಾರೆ. ಸುಗಂಧಿ, ಬಯ್ಯಮಲ್ಲಿಗೆಯಂಥ ಮೃದುವಾದ ಹೂಗಳನ್ನು ಒಂದಕ್ಕೊಂದು ಜಡೆಹಾಕಿದಂತೆಯೂ ಕಟ್ಟುತ್ತಾರೆ.

ಮೇಲೆ ಹೇಳಿದ ವೀಳ್ಯದೆಲೆ ಮಾಲೆಯಂತೆ ಸಿಂಗಾರವನ್ನು,  ಕೇದಗೆಯನ್ನು,  ಗುಲಾಬಿ ಎಸಳುಗಳನ್ನು, ನೆನೆಸಿದ ಕಡಲೆಯನ್ನೂ ಪೋಣಿಸಿ ಕಲಾತ್ಮಕವಾದ  ಮಾಲೆಗಳನ್ನು ಹೆಣೆದದ್ದನ್ನು ನೋಡಿರುತ್ತೇವೆ. ಸಿಂಗಾರ ಒಂದೊಂದು ಎಲೆಗಳನ್ನು ಜೋಡಿಸಿ ಪೋಣಿಸುವುದು, ಕೇದಗೆಯನ್ನು ಕತ್ತರಿಸಿ ನೇಯುವುದು ಸುಲಭದ ಮಾತಲ್ಲ. ಇದರ ಹಿಂದೆ ಹೆಣಿಗೆಗಾರರ ಕುಸುರಿಗಾರಿಕೆ ಅಡಗಿರುವುದು ಸ್ಪಷ್ಟವಾಗುತ್ತದೆ. ಇಂತಹ ಮಾಲೆ ಹೆಣೆಯುವುದೂ ಬಹಳ ಸೂಕ್ಷ್ಮದ ಕೆಲಸವೇ ಸರಿ.

ಈಗ ಮಾರುಕಟ್ಟೆಯಲ್ಲೂ  ಮದುವೆಯಲ್ಲಿ ವಧೂ-ವರರು ಬದಲಾಯಿಸಿಕೊಳ್ಳುವ ವೈವಿಧ್ಯಮಯ ಹೂವಿನ ಮಾಲೆಗಳು ಸಿಗುತ್ತವೆ. ಮಲ್ಲಿಗೆಯಿಂದ ತಯಾರಿಸಿದ ಮಾಲೆಗಳು, ಸುಗಂಧರಾಜದ ಮಾಲೆಗಳು, ಗುಲಾಬಿ ದಳಗಳ ಮಾಲೆಗಳು ಮದುಮಕ್ಕಳಿಗೆ ಆಕರ್ಷಕ ಕಳೆಯನ್ನು ನೀಡುತ್ತವೆ. ಮದುಮಗಳ ಮುಡಿಯನ್ನು ಅಲಂಕರಿಸುವ ಹೂವಿನ ಜಡೆಯಲ್ಲೂ ಮಲ್ಲಿಗೆಯದ್ದೇ ಕಾರುಬಾರು. ವಧುವಿನ ಜಡೆಯಲ್ಲೂ ಸಿದ್ಧಗೊಂಡ ನವನವೀನ ಹೂವಿನ ಜಡೆಗಳು ಸಿಗುವುದರಿಂದ ಕೈಯಿಂದಲೇ ಮದುಮಗಳಿಗೆ ಹೂವಿನ ಜಲ್ಲಿ ಹಾಕುವ ಶ್ರಮ ಇಲ್ಲ. ಆದರಲ್ಲೂ ಮಲ್ಲಿಗೆಯ ಮೇಲೆ ಜರಿಯ ಪಟ್ಟಿಯನ್ನಿಟ್ಟು ಅದರ ಮೇಲೆ ಗುಲಾಬಿ ಎಸಳುಗಳನ್ನು ದುಂಡಗಾಗುವಂತೆ ಕತ್ತರಿಸಿಟ್ಟು ಟಿಕ್ಲಿಗಳನ್ನು ಅಂದವಾಗಿ ಹೊಲಿದು ನೇಯ್ದ ವೇಣಿಗಳು ಮದುಮಗಳಿಗೆ ವಿಶೇಷ ಶೋಭೆಯನ್ನು ನೀಡುತ್ತವೆ!

ನಮ್ಮ ಉಡುಪಿ-ಮಂಗಳೂರು ಕಡೆ ಮಲ್ಲಿಗೆ ಹೂವನ್ನು ಹೆಚ್ಚಾಗಿ ಬೆಳೆಸುತ್ತಾರೆ. “ಶುಭ ಸಮಾರಂಭಗಳಿಗೆ ಮಲ್ಲಿಗೆ ಬೇಕೇ ಬೇಕು. ಮಲ್ಲಿಗೆ ಅಟ್ಟೆಗೆ ಬೆಲೆ ದುಬಾರಿ. ಮಲ್ಲಿಗೆ ನೆಟ್ಟವರಿಗೆ ಹೆಚ್ಚು ಗಳಿಕೆ ಇರಬಹುದು’ ಎಂದೆಲ್ಲಾ ಹೇಳುತ್ತಿರುತ್ತೇವೆ. ಆದರೆ ನಾನು ಕಂಡಂತೆ ಮಲ್ಲಿಗೆ ಗಿಡ ನೆಟ್ಟ ಮೇಲೆ ಸುಮ್ಮನೆಯಲ್ಲ ! ನಮ್ಮ ಸಂಬಂಧಿಯೊಬ್ಬರ ಮನೆಯಲ್ಲಿ ಮಲ್ಲಿಗೆ ಕೃಷಿ ಇದೆ. ನಿತ್ಯವೂ ಆ ಮನೆಮಂದಿಗೆಲ್ಲ ಒಂದರೆಗಳಿಗೆಯೂ ಪುರುಸೊತ್ತಿಲ್ಲ. ಬಿಡುವಿಲ್ಲದ ದುಡಿಮೆ! ಮುಂಜಾನೆ ಸೂರ್ಯನ ಬಿಸಿಲು ಬೀಳುವ ಮೊದಲೆ ಮೊಗ್ಗುಗಳನ್ನು ಗಿಡಗಳಿಂದ ಕೊಯ್ಯಬೇಕು, ಕೊಯ್ದ ನಂತರ ಮಾಲೆ ಮಾಡಬೇಕು. ಮಾಲೆಗಳನ್ನು ಚೆಂಡು ಮಾಡಬೇಕು. ಬಳಿಕ ಹತ್ತು-ಹನ್ನೊಂದು ಗಂಟೆಯೊಳಗೆ ಮಾರುಕಟ್ಟೆಗೆ ಸಾಗಿಸಬೇಕು. ಅರೆಗಳಿಗೆಯೂ ಸಮಯ ವ್ಯರ್ಥಮಾಡುವುದಿಲ್ಲ ಅವರು!

ಒಮ್ಮೆ ನಾನು ಅವರ ಮನೆಗೆ ಹೋಗಿದ್ದಾಗ ಮನೆಯ ಹಿರಿಯ ಸದಸ್ಯರೊಬ್ಬರು ಕುಳಿತು ಬಾಳೆನಾರನ್ನು ಬಿಡಿಸುತ್ತಿದ್ದರು. “”ಇಷ್ಟೊಂದು ಬಾಳೆನಾರು ಯಾಕೆ?” ಎಂದು ಕೇಳಿದಾಗ ಅವರು ಹೇಳಿದ್ದೇನೆಂದರೆ, “”ಬೆಳಗ್ಗೆ ಹೂಕೊಯ್ದ ನಂತರ ಹಗ್ಗ ತಯಾರಿಸಲು ಹೋದರೆ ತಡವಾಗಿಬಿಡುತ್ತದೆ. ಮಲ್ಲಿಗೆಗೆ ನಯವಾದ ಹಗ್ಗ ಬೇಕು. ಹಾಗಾಗಿ ಮೊದಲ ದಿನವೇ ತಯಾರಿಸಿ ಇಟ್ಟುಕೊಂಡರೆ ಅನುಕೂಲವಾಗುತ್ತದೆ”

ಮನೆಯ ಸದಸ್ಯರೆಲ್ಲ ಮಲ್ಲಿಗೆ ಮೊಗ್ಗುಗಳ ಸುತ್ತ ವೃತ್ತಾಕಾರವಾಗಿ ಕುಳಿತು ಮಾಲೆಮಾಡುವ ಅವರ ಕೈಚಳಕ ನೋಡುವುದೇ ಒಂದು ಚೆಂದ! ಒಂದೊಂದು ಮೊಗ್ಗುಗಳನ್ನು ಮೇಲೆ-ಕೆಳಗೆ ಜೋಡಿಸುತ್ತಾ ಚಕಚಕನೆ ಮಾಲೆ ಹೆಣೆಯುತ್ತಾರೆ. ಕಟ್ಟಿದ ಮಾಲೆ ಹೊಲಿಗೆ ಮೆಷಿನ್‌ನಲ್ಲಿ ಹೊಲಿದಂತೆಯೇ ಭಾಸವಾಗುತ್ತದೆ. ಒಂದು ಚೂರೂ ಆಚೆಈಚೆ ಆಗದೆ ಬಟ್ಟೆಯ ಮೇಲೆ ಹೊಲಿಗೆ ಬಿದ್ದಂತೆ ಮೊಗ್ಗುಗಳ ಮೇಲೆ ನಾರಿನ ಹೊಲಿಗೆ ಬಿದ್ದಿರುತ್ತದೆ!

ಪ್ರಪಂಚದಾದ್ಯಂತದ ಹೂವುಗಳನ್ನು ಅನೇಕ ಸಂದರ್ಭಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಪೂಜೆ, ಉತ್ಸವ, ಆರಾಧನೆ ಸಮಯದಲ್ಲಿ ದೇವಾಲಯಗಳನ್ನು ಬೃಹತ್‌ ಗಾತ್ರದ ಹೂಮಾಲೆಗಳಿಂದ ಅಲಂಕರಿಸುತ್ತಾರೆ. ಗೃಹಪ್ರವೇಶ, ಮದುವೆಯಂಥ ಸಮಾರಂಭಗಳಲ್ಲೂ ಮನೆ-ಮಂಟಪಗಳನ್ನು ಸೊಗಸಾಗಿ ಅಲಂಕಾರ ಮಾಡುತ್ತಾರೆ. ಈ ಹೂವಿನ ಅಲಂಕಾರಗಳು ಕಣ್ಣನ್ನು ತಣಿಸುವ ಜತೆಗೆ ಮನಸ್ಸಿಗೆ ಮುದ ನೀಡುತ್ತದೆ. ಧಾರ್ಮಿಕ ಕಾರ್ಯಕ್ರಮ, ಮದುವೆ, ಉಪನಯನದಂತಹ ಸಮಾರಂಭಗಳಲ್ಲಿ ಭಾಗವಹಿಸಲು ನಾರಿಯರಿಗೆ ಹೂ ಬೇಕೇಬೇಕು. ಹೂವಿನ ದಂಡೆ ಮುಡಿದು ಹೋಗುವ ಬಿನ್ನಾಣವೇ ಬೇರೆ. ಹಾಗಾದರೆ ತಡವೇಕೆ? ಬನ್ನಿ, ನಮ್ಮ ಮನದ ಭಾವನೆಗಳ ಜೊತೆ ನಿಕಟ ಸಂಬಂಧವನ್ನು ಹೊಂದಿರುವ ಹೂಗಳನ್ನು ನಾವೂ ನಮ್ಮ ಅಂಗಳದಲ್ಲಿ ಬೆಳೆಸಿ ಅದರಲ್ಲಿ ಅರಳಿರುವ‌ ಹೂಗಳನ್ನು ಕಿತ್ತು ಹೂಮಾಲೆ ಕಟ್ಟೋಣ.

ಸ್ವಾತಿ 

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.