CONNECT WITH US  

ಬೆಳಗ್ಗೆ ತಿಂಡಿಗೆ ಏನು ಮಾಡ್ತೀರಾ?

ಬೆಳಬೆಳಗ್ಗೆ ಆರು ಗಂಟೆಗೆ  ಪರಿಚಿತರ ಫೋನ್‌ ಬಂದಿತ್ತು. "ಬೆಂಗಳೂರಿನಿಂದ ಬರುತ್ತಿದ್ದೇನೆ. ತಿಂಡಿಗೆ  ನಿಮ್ಮಲ್ಲಿಗೇ ಬರುತ್ತಿದ್ದೇನೆ'.
"ಆಯ್ತು. ಬನ್ನಿ' ಎಂದಿದ್ದೆ. 

           ಶಾಲೆ, ಕಾಲೇಜಿಗೆ ಹೋಗುವವರಿಗೆ ತಿಂಡಿ ಕೊಟ್ಟು ಕಳಿಸಿದರೂ ಬರುತ್ತೇನೆ ಎಂದವರ ಸುಳಿವಿಲ್ಲ. ನಾವೂ ಉಪಾಹಾರಕ್ಕೆ  ಅವರನ್ನು ಕಾಯುತ್ತಿದ್ದೆವು.  ಒಂಬತ್ತು ಘಂಟೆಗೆ ತಲುಪಿದರು. ತುಂಬಾ ಹೊತ್ತಾಗಿದೆ.  ಸಾಕಷ್ಟು ಹಸಿವಾಗಿರುತ್ತದೆ ಎಂದು ಕಾವಲಿ ಇರಿಸಿ  ತುಪ್ಪ ಹಾಕಿ  ಬಿಸಿಯಾಗಿ ನೀರುದೋಸೆ ಮಾಡಿದೆ.  ಕರೆದಾಗ ಬಂದು ಕೂತರು. ಬಡಿಸಿದೆ. ನಿರೀಕ್ಷಿಸದೇ ಇದ್ದ ಪ್ರತಿಕ್ರಿಯೆ ಬಂತಾಗ. 

"ಇಲ್ಲೂ ದೋಸೇನಾ? ಅದೇನು ದೋಸೆ ಬಿಟ್ಟು ಬೇರೇನೂ ತಿಂಡಿ ಮಾಡಲ್ವಾ ನೀವು?'
"ಏನಾಗಿದೆ? ಚೆನ್ನಾಗಿಯೇ ಇದೆಯಲ್ವಾ?'
"ಇನ್ನಿಬ್ಬರು ಪರಿಚಿತರ ಮನೆಗೆ ಭೇಟಿ ಕೊಟ್ಟು ಬಂದೆ ಇಲ್ಲಿಗೆ. ಅಲ್ಲೂ  ದೋಸೆ. ಎಲ್ಲ ಕಡೆ ಅದೇ ತಿಂದರೆ ಬೇಜಾರು' ಅಂದರು.

 ನನಗೆ  ಮನೆಯದು, ಸ್ವಂತದ್ದು ರಾಶಿ ಕೆಲಸ ಕಾಯುತ್ತಿತ್ತು. ಅದಾಗಲೆ ಊರಿಡೀ ತಿಂಡಿ ಮುಗಿಯುವ ಹೊತ್ತು ಬೇರೆ. ಅತಿಥಿಗಳು ಬರ್ತಾರೆ ಅಂತ ನಾವೂ ಉಪಾಹಾರ ತೆಗೆದುಕೊಂಡಿರಲಿಲ್ಲ.  ಹೇಳಿದ ಮಾತಿಗೆ ಅಲ್ಪ ಅಸಮಾಧಾನ ಬೇರೆ. 
"ಬೇರೆ ತಿಂಡಿ ಅಂದ್ರೆ ಗೊತ್ತಾಗಲಿಲ್ಲ?' 
"ರೈಸ್‌ಬಾತ್‌, ಪುಳಿಯೋಗರೆ, ಖಾರಾ ಬಾತ್‌, ಟೊಮ್ಯಾಟೋ ಬಾತ್‌, ಪಲಾವ್‌ ಅವೆಲ್ಲ ಮಾಡಲು ಗೊತ್ತಿಲ್ವಾ?'
"ನಮ್ಮ ಕಡೆ  ಹೆಚ್ಚಾಗಿ ದೋಸೆನೇ ಮಾಡ್ತಾರೆ. ಬಿಸಿಯಾಗಿ, ಸಮಯಕ್ಕೆ ಸರಿಯಾಗಿ ಮಾಡಲು ಅದು ಸುಲಭ. ಅಲ್ಲದೆ ಅರೋಗ್ಯಕ್ಕೆ ತೊಂದರೆ ಇಲ್ಲ ಅದರಿಂದ. ಬೆಳ್ತಿಗೆ ಅನ್ನದ ತಿನಸು ಅಪರೂಪಕ್ಕೆ ಮಾತ್ರ'
ಅತಿಥಿಯಾಗಿ ಬರುವಾಗ ಅವರು ಮೊದಲೇ ಸೂಚನೆ ಕೊಟ್ಟಿದ್ದು ಬಹುಶಃ ಅಂಥ ತಿಂಡಿ ಇರಲಿ ಅಂತಲೇನೋ ಅಂತ ನನ್ನ ಅನುಮಾನ. ಏನಿದ್ದರೂ ಮನೆಯವರು  ಫ್ರೆಶ್‌ ಆಗಿ ತಯಾರಿಸಿ ಕೊಟ್ಟ ತಿನಿಸೂ ಕಳಪೆ ಏನಲ್ಲ. ಎಳೆಯರಿಂದ ಹಿಡಿದು ಹಲ್ಲಿಲ್ಲದ ವೃದ್ಧರ ತನಕ ತಿಂದು ಅರಗಿಸಬಹುದು. ಬಡಿಸಿದ ದೋಸೆ ಮನಸ್ಸಿಲ್ಲದ ಮನಸ್ಸಿನಿಂದ ತಿಂದಿದ್ದರು. ಈ ದೋಸೆ ಎನ್ನುವ ತಿಂಡಿ ಮನೆ ಮನೆಯ ಬೆಳಗಿನ ಉಪಾಹಾರ. ಅವರು ಹೇಳಿದಂತೆ ರೈಸ್‌ಬಾತ್‌, ಟೊಮ್ಯಾಟೋ ಬಾತ್‌, ಖಾರಾಬಾತ್‌ ಅವಿಭಜಿತ ದಕ್ಷಿಣಕನ್ನಡದ ಮನೆಗಳಲ್ಲಿ ಅಪರೂಪಕ್ಕೊಮ್ಮೆ ಇರಬಹುದೇ ಹೊರತು ನಿತ್ಯಕ್ಕೆ ಸಿಗದು. ಬೆಳಗ್ಗೆ ಅದೆಷ್ಟೇ ಅವಸರಿಸಿದರೂ ಶಾಲೆ, ಕಾಲೇಜಿಗೆ, ಆಫೀಸ್‌ ಕೆಲಸಕ್ಕೆ, ಮನೆಯ ಹಿರಿಯರಿಗೆ ಅವರವರ ಸಮಯಕ್ಕೆ ತಿಂಡಿ ಕೊಡಬೇಕಾದರೆ ಆ ಗೃಹಿಣಿ ನಸುಕಿಗೆ ಏಳದಿದ್ದರೆ ನಡೆಯದು. ಮನೆಯಲ್ಲಿರುವವರ  ಅಭಿಪ್ರಾಯ ಹೊಂದಾಣಿಕೆ ಆಗದು. "ಅಯ್ಯೋ, ಇಡ್ಲಿಯಾ? ಅದು ತಿಂದು ಹೋದರೆ ಜೂಗರಿಸಬೇಕಷ್ಟೆ ಕ್ಲಾಸ್‌ನಲ್ಲಿ, ಶಾಲೆ ಇದ್ದ ದಿನ ಉದ್ದು ಹಾಕಿದ್ದು ಮಾಡಬೇಡಮ್ಮ' ಅಂತ ಮಕ್ಕಳ ಗೋಗರೆತವಾದರೆ, ಮನೆಮಂದಿಗೆಲ್ಲ ಸರ್ವಸಮ್ಮತವಾಗುವ ಆಹಾರ ದೋಸೆ. ಗೃಹಿಣಿಗೂ ಉಸಿರು ಬಿಡುವಷ್ಟು ವಿರಾಮ. ಅಷ್ಟಕ್ಕೂ ದೋಸೆಗಳೆಂದರೆ ನಿತ್ಯ ಒಂದೇ ಆಗಿರುವುದಿಲ್ಲ. ಅದರಲ್ಲಿ  ವೈವಿಧ್ಯ ಇಲ್ವಾ?  ನಮ್ಮ ನೀರು ದೋಸೆ ಜಗತ್‌ಪ್ರಸಿದ್ಧವಾದರೆ ಇನ್ನು ತರಕಾರಿಗಳನ್ನು ಬಳಸಿ ತಯಾರಿಸುವ ಹಲವಾರು ಬಗೆಯ ದೋಸೆಗಳಿವೆ. ಉಪಾಹಾರದ ಜೊತೆಗೆ ತರಕಾರಿಯೂ ಒಡಲಿಗೆ  ಸೇರುತ್ತದೆ. ಸೌತೆಕಾಯಿ, ಕುಂಬಳಕಾಯಿ, ಬಾಳೆಕಾಯಿ, ಬಾಳೆಹಣ್ಣು, ಗೆಣಸು, ಹಲಸಿನಕಾಯಿ ದೋಸೆ, ಗೋಧಿ ದೋಸೆ, ಓಡುಪ್ಪಳೆ, ಹಲಸಿನ ಹಣ್ಣಿನ ದೋಸೆ, ಮೊಸರು ದೋಸೆ, ಮಸಾಲೆ ದೋಸೆ ಅದೆಷ್ಟು ವೆರೈಟಿ !  ವ್ಯಂಜನವಾಗಿ  ಚಟ್ನಿಯೇನೂ ಕಡ್ಡಾಯವಲ್ಲ. ಮಿಡಿ ಮಾವಿನ ಅದರ ಸವಿಯೆದುರಿಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ! ಹಾಗೆಂದು ಈ ಭಾತ್‌ಗಳು ಆಸೆಪಟ್ಟು ತಯಾರಿಸಿ ತಿನ್ನುವವರಿಗೇನೂ ಕಡಿಮೆಯಿಲ್ಲ. ಆದರೆ, ಕರಾವಳಿಯ ಮನೆಗಳಲ್ಲಿ  ಕಡಿಮೆ.                                                        

ನಮ್ಮ ಅತಿಥಿಗಳ ಅಭಿಪ್ರಾಯದಂತೆ ಬಾತ್‌ಗಳನ್ನು  ತಯಾರಿಸಬಹುದು. ಬೆಳ್ತಿಗೆ ಅನ್ನದ  ತಿನಿಸಿಗೆ ವಾರದಲ್ಲೊಮ್ಮೆ ಒಪ್ಪಿಗೆ ಸಿಗಬಹುದು. ಇಲ್ಲಿ ಗಮನಿಸುವ ಅಂಶವೆಂದರೆ ಹಿರಿಯರಿದ್ದ ಮನೆಗಳಲ್ಲಿ ಅವರಿಗೆ ಅದಕ್ಕೆ ಹಾಕುವ ಮಸಾಲೆಯ  ಘಮ ಘಮ ಹಿಡಿಸುವುದು ಅನುಮಾನ. ವಾರಕ್ಕೆ ನಾಲ್ಕು ಬಾರಿಯೂ ಇರಲಿ ಎಂಬ ಬೇಡಿಕೆ ಕಮ್ಮಿ. ಮನೆಮನೆಗಳಲ್ಲಿ ಅನಿವಾರ್ಯವಾದರೆ ಮಾತ್ರ ಬೆಳ್ತಿಗೆ ಅನ್ನ ಅಥವಾ ವೈಟ್‌ರೈಸ್‌ ಎನ್ನುವ ಬಿಳಿಯನ್ನ. ನಿತ್ಯದ ಆಹಾರ ಕಡಿಮೆ ಪಾಲಿಶ್‌ ಆದ ಕುಸುಬಲಕ್ಕಿಯ ಅನ್ನವೇ. ಕರಾವಳಿಯ ಹೊಟೇಲ್‌ಗ‌ಳಲ್ಲಿ  ಬೇಸಿಗೆಯಲ್ಲಿ ಇಲ್ಲಿ ಗಂಜಿಯೂಟ ಲಭ್ಯವಿದೆ ಎಂಬ ಬೋರ್ಡ್‌ ದಪ್ಪಕ್ಕೆ ದೂರದಿಂದಲೇ ಕಣ್ಣಿಗೆ ರಾಚುವಂತೆ ಹಾಕಿರುತ್ತಾರೆ. ಅದಕ್ಕೆ ಡಿಮಾಂಡ್‌ ಹೆಚ್ಚು. ಅನ್ನ ಬೆಂದ ನೀರಿನ ಸಮೇತ ಬಡಿಸುವ ಗಂಜಿಗೆ ಚಟ್ನಿ ಅತ್ಯುತ್ತಮ ಕಾಂಬಿನೇಶನ್‌. ಬಡವ-ಬಲ್ಲಿದರೆಂಬ ಭೇದ ಗಂಜಿಯೂಟದ ಮಟ್ಟಿಗಿಲ್ಲ. ದೇಶಿಕತೆಗೆ ಹೊಂದುವ ಹವೆ, ಅದಕ್ಕೆ ಹೊಂದಿಕೊಳ್ಳುವ ಆಹಾರಕ್ಕೆ  ಶರೀರ  ಒಗ್ಗುತ್ತದೆ. ಹಾಗೆ ಅನ್ಯ ಪ್ರದೇಶಗಳ ಊಟ, ಉಪಾಹಾರ ಎಂದಿಗೂ ಕಡಿಮೆಯದಲ್ಲ. ಅಲ್ಲಿನ ಪರಿಸರ, ಹವಾಮಾನಕ್ಕೆ ಅಲ್ಲಿನ ಪದ್ಧತಿಯ ತಿನಿಸು, ಉಣಿಸುಗಳು ಹಿತ. ಕರಾವಳಿಗರ ಅಚ್ಚುಮೆಚ್ಚು ಶೈಶವದಿಂದಲೇ ರೂಢಿಗೆ ಬಂದ  ತಿನಿಸುಗಳಿಗೆ ಜನತೆ ಹಾತೊರೆಯುವುದು ಗಮನಿಸಬಹುದಾದ ವಿಚಾರವಾದರೆ ; ಅನಿವಾರ್ಯತೆಯಿಂದ ತಮ್ಮದಲ್ಲದ ನೆಲದ ಆಹಾರ ಪದ್ಧತಿ ಅಭ್ಯಾಸವಾದರೂ, ಊರಿನ ತಿನಿಸುಗಳ ಸೆಳೆತ ಜಾಸ್ತಿ.

ಕೃಷ್ಣವೇಣಿ

Trending videos

Back to Top