CONNECT WITH US  

ಸಂಸಾರ ಮತ್ತು ಸೌಂದರ್ಯ

ಗಂಡನೇ ಹೊಗಳಲಿಲ್ಲ ಅಂದಮೇಲೆ, ನಾಳೆ ಮದುವೆಯಲ್ಲಿ ಸಿಕ್ಕ ಮೂರನೆಯವರು ಹೊಗಳುತ್ತಾರೆಯೇ ಅಂತೆಲ್ಲಾ ಅನ್ನಿಸಿ ಸಿಟ್ಟುಬಂತು. ಹಾಗಂತ ನಾನೇ ಬಾಯಿಬಿಟ್ಟು ಕೇಳುವುದಕ್ಕೂ ಮನಸ್ಸು ಒಪ್ಪಲಿಲ್ಲ. ಆದರೂ ಬಡಿಸುವಾಗ ಕೈ ಮುಂದೆ ಚಾಚಿ, ಮುಂಗುರುಳನ್ನು ಎರಡೆರಡು ಬಾರಿ ನೇವರಿಸಿ, ಮಾತಾಡುವಾಗ ಹುಬ್ಬು ಕುಣಿಸಿ ಅವರ ಗಮನ ಸೆಳೆಯುವ ಸಣ್ಣಪುಟ್ಟ ಸಾಹಸಗಳನ್ನೆಲ್ಲ ಮಾಡಿ ನೋಡಿದೆ. ಏನೂ ಪ್ರಯೋಜನವಾಗಲಿಲ್ಲ...

ಇನ್ನೆರಡು ದಿನಗಳಲ್ಲಿ ಕಸಿನ್‌ ಮದುವೆ. ಹಲವಾರು ವರ್ಷಗಳ ನಂತರ ನೆಂಟರಿಷ್ಟರೆಲ್ಲ ಒಟ್ಟಿಗೆ ಸೇರುವ ಸಂದರ್ಭ ಅದಾಗಿದ್ದರಿಂದ ನಾನು ಸ್ವಲ್ಪ ಜಾಸ್ತಿಯೇ ಎಕ್ಸೆ„ಟ್‌ ಆಗಿದ್ದೆ. ಮೆಹಂದಿ, ಮದುವೆ, ರಿಸೆಪ್ಷನ್‌... ಹೀಗೆ ಸಾಲು ಸಾಲು ಸಮಾರಂಭಗಳಿಗೆ ಅಂತ ಭರ್ಜರಿ ಶಾಪಿಂಗ್‌ ಕೂಡ ನಡೆಸಿದ್ದೆ. ಅಷ್ಟಾದರೆ ಸಾಕೇ? ಮೇಕಪ್‌ನತ್ತ ಗಮನ ಹರಿಸದಿದ್ದರೆ ಆಗುತ್ತದೆಯೇ? ಕಳೆಗುಂದಿದ ಚರ್ಮ, ಜೀವ ಕಳೆದುಕೊಂಡ ಕೂದಲು, ಕಣ್ಣಿನ ಸುತ್ತಲಿನ ಕಪ್ಪು ಉಂಗುರಕ್ಕೊಂದು ಏನಾದರೂ ಮಾಡಬೇಕು ಅಂತ ನಿರ್ಧರಿಸಿ ಬ್ಯೂಟಿಪಾರ್ಲರ್‌ನತ್ತ ಹೆಜ್ಜೆ ಹಾಕಿದೆ.

ಗಂಡ, ಮನೆ, ಮಕ್ಕಳು ಅಂತ ಕಳೆದುಹೋಗುವ ಮುನ್ನ ತಿಂಗಳಿಗೊಮ್ಮೆಯಾದರೂ ಪಾರ್ಲರ್‌ಗೆ ಹೋಗುತ್ತಿದ್ದೆ. ಆಮೇಲಾಮೇಲೆ ಹುಬ್ಬು ತಿದ್ದಿಸಿಕೊಳ್ಳುವುದು ಅನಿವಾರ್ಯವಾದಾಗ, ಕಷ್ಟಪಟ್ಟು ಸಮಯ ಹೊಂದಿಸಿಕೊಳ್ಳುವಷ್ಟು ಬ್ಯುಸಿಯಾದೆ. ಸಮಯ ಸಿಗುತ್ತಿರಲಿಲ್ಲ ಅನ್ನೋದಕ್ಕಿಂತ, "ಅಯ್ಯೋ ನನ್ನನ್ಯಾರು ನೋಡಬೇಕಿದೆ' ಅನ್ನುವ ಅಸಡ್ಡೆಯೂ ಸೌಂದರ್ಯಪ್ರಜ್ಞೆ ಕುಂದಲು ಕಾರಣವಿರಬಹುದು. ಅದೇನೇ ಇರಲಿ, ಈಗ ಮದುವೆಗೆ ಬಂದವರ್ಯಾರೂ, "ಏನೇ ಹೀಗಾಗಿಬಿಟ್ಟಿದ್ದೀಯಾ?' ಅಂತ ಕೇಳಬಾರದು ಅಂತ ಮುಖಕ್ಕೊಂದಷ್ಟು ಹೊಸ ಮೆರುಗು ಪಡೆಯಲು ನಿರ್ಧರಿಸಿದೆ.

ವರ್ಷಗಳ ನಂತರ ಪಾರ್ಲರ್‌ಗೆ ಹೋಗಿದ್ದಕ್ಕಿರಬೇಕು, ಯಾವುದೋ ಹೊಸ ಲೋಕಕ್ಕೆ ಪ್ರವೇಶಿಸಿದಂತಾಗಿತ್ತು. ಕೂದಲಿಗೆ ಕತ್ತರಿ ಹಾಕಲೆಂದೇ ಕಾದು ನಿಂತಿದ್ದ ಹುಡುಗಿಯೊಬ್ಬಳು, ವಾರೆಕೋರೆಯಾಗಿ ಬೆಳೆದುಕೊಂಡಿದ್ದ ಕೂದಲಿಗೊಂದು ಚಂದದ ಶೇಪ್‌ ನೀಡಿದಳು. ಆಮೇಲೆ ಫೇಶಿಯಲ್‌ ಹೆಸರಿನಲ್ಲಿ ಮುಖಕ್ಕೊಂದಷ್ಟು ಮಸಾಜ್‌ ಸಿಕ್ಕಿತು. ಹುಬ್ಬು ತೀಡಿಸಿಕೊಂಡು ಹೊರಡೋಣ ಅಂದುಕೊಂಡಿದ್ದವಳನ್ನು, "ಮೇಡಂ, ಪೆಡಿಕ್ಯೂರ್‌, ಮೆನಿಕ್ಯೂರ್‌ ಮಾಡಿಸಿಕೊಳ್ಳಿ' ನೋಡಿ, ಕೈ ಉಗುರುಗಳೆಲ್ಲಾ ಹೇಗಾಗಿವೆ' ಅಂದಳು ಪಾರ್ಲರ್‌ ಹುಡುಗಿ. "ಆಯ್ತಮ್ಮಾ, ಅದೇನು ಮಾಡ್ತೀಯೋ ಮಾಡು' ಅಂತ ಕೈ, ಕಾಲಿನ ಉಗುರುಗಳನ್ನು ಅವಳ ಪ್ರಯೋಗಗಳಿಗೊಪ್ಪಿಸಿ ಸುಮ್ಮನೆ ಕುಳಿತೆ. ಉಗುರು ಕೊಟ್ಟಿದ್ದಕ್ಕೆ ಹಸ್ತವನ್ನೇ ನುಂಗಿದ ಆಕೆ, ಕೈಗಳಿಗೆ ವ್ಯಾಕ್ಸಿಂಗ್‌ ಕೂಡ ಮಾಡಿಬಿಟ್ಟಳು. ಇಷ್ಟೆಲ್ಲಾ ಮುಗಿಯುವಾಗ ಮೂರ್ನಾಲ್ಕು ಗಂಟೆಯೇ ಕಳೆದಿತ್ತು. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ, ವಯಸ್ಸು ಒಂದೆರಡು ವರ್ಷ ಕಡಿಮೆಯಾದಂತೆ ಕಾಣಿಸಿತು.

ಮನೆಗೆ ಬಂದ ಮೇಲೆ ಮತ್ತೂಮ್ಮೆ ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ಕಣ್ಣಿನ ಸುತ್ತಲಿನ ಕಪ್ಪು ಕೊಂಚ ಕಡಿಮೆಯಾಗಿತ್ತು. ಮೂಗಿನ ಮೇಲಿನ ಜಿಡ್ಡು ಕೂಡ ಕೈಗಂಟಲಿಲ್ಲ. ಕಣ್ಣು ಹುಬ್ಬನ್ನು ಕಾಮನಬಿಲ್ಲಿಗೆ  ಹೋಲಿಸುವಷ್ಟಲ್ಲದಿದ್ದರೂ ಅದಕ್ಕೊಂದಷ್ಟು ಶಿಸ್ತು ಸಿಕ್ಕಿತ್ತು.  ಕೈಕಾಲು ಉಗುರುಗಳು ಮೊದಲಿಗಿಂತ ಮೃದುವಾಗಿದ್ದವು. ರೋಮಗಳನ್ನು ಕಳಚಿಕೊಂಡ ಕೈ ನುಣುಪಾಗಿ ಹೊಳೆಯುತ್ತಿತ್ತು. ಮೂರು ಸಾವಿರ ತೆತ್ತಿದ್ದು  ವ್ಯರ್ಥವೇನೂ ಆಗಿರಲಿಲ್ಲ. ಮಧ್ಯಾಹ್ನ ಮಗನನ್ನು ಪ್ಲೇ ಹೋಮ್‌ನಿಂದ ಕರೆ ತರುವಾಗ, "ಸಂತೂರ್‌ ಮಮ್ಮಿ' ಎಂದು ಜನರು ಗುರುತಿಸಲಿ ಅಂತನಿಸಿದ್ದು ಮಾತ್ರ ಸ್ವಲ್ಪ ಜಾಸ್ತಿಯಾಯೆ¤àನೋ! ಆದರೂ, ಸಂಜೆ ಪತಿರಾಯರು ಮನೆಗೆ ಬಂದಾಗ ಅವರ ಮುಖದಲ್ಲಿ ಕಾಣುವ ಅಚ್ಚರಿಯನ್ನು ಎದುರು ನೋಡುತ್ತಾ ಅವರಿಗಾಗಿ ಕಾಯತೊಡಗಿದೆ.

ಸಂಜೆಯಾಯಿತು. ದಿನಕ್ಕಿಂತ ಸ್ವಲ್ಪ ತಡವಾಗಿಯೇ ರಾಯರು ಮನೆಗೆ ಬಂದರು. ಬಾಗಿಲು ತೆಗೆದ ಕೂಡಲೇ, ಕಣ್ಣುಬಾಯಿ ಬಿಟ್ಟು "ಏನೇ ಇಷ್ಟ್ ಚಂದ ಕಾಣಿ¤ದೀಯ, ಸುಂದ್ರಿ' ಅಂತ ಹೊಗಳುತ್ತಾರೆ ಅಂತೆಲ್ಲ ನಿರೀಕ್ಷಿಸಿದ್ದೆ. ಆದರೆ, ಅಂಥ ಯಾವ ಘಟನೆಯೂ ನಡೆಯಲಿಲ್ಲ. ಬಳಲಿ, ಬೆಂಡಾಗಿದ್ದ  ಅವರಿಂದ ಅದನ್ನು ನಿರೀಕ್ಷಿಸುವುದೂ ತಪ್ಪು ಅಂತ ಮನಸ್ಸು ಸಮಾಧಾನ ಹೇಳಿತು. ಉಫ್ ಎಂದು ಉಸಿರುಬಿಡುತ್ತಾ ಸೋಫಾಗೆ ಒರಗಿದ ಅವರು, "ಕಾಫಿ ಕೊಡು' ಅಂದರು. ಕಾಫಿ ಮಾಡಲು ಅಡುಗೆಮನೆಯತ್ತ ಹೊರಟವಳ ಹೇರ್‌ಕಟ್‌ ಅನ್ನಾದರೂ ಅವರು ಗಮನಿಸಬಾರದೇ? ಉಹೂಂ, ಅದೂ ನಡೆಯಲಿಲ್ಲ. "ಕಾಫಿ ಕಪ್‌ ಅನ್ನು ಚಾಚಿದ ಕೈಗಳ ನುಣಪನ್ನೂ , ಉಗುರಿಗೆ ಸಿಕ್ಕ ಹೊಸ ಜೀವಂತಿಕೆಯನ್ನು ನೋಡುವೆಯಾ ಪತಿದೇವ' ಅಂತ ಮನಸ್ಸಿನಲ್ಲಿಯೇ ಬೇಡಿಕೊಳ್ಳುತ್ತ ಕಾಫಿ ಮಾಡಿಕೊಟ್ಟೆ. "ತುಂಬಾ ತಲೆನೋಯ್ತಾ ಇತ್ತು. ಕಾಫಿ ಕುಡಿದ ಮೇಲೆ ಸ್ವಲ್ಪ ಪರವಾಗಿಲ್ಲ' ಅನ್ನುತ್ತಾ, ಫ್ರೆಶ್‌ ಆಗಲು ಹೊರಟವರ ಮೇಲೆ ಸಿಟ್ಟೇನೂ ಬರಲಿಲ್ಲ. ಪಾಪ, ಆಫೀಸಲ್ಲಿ ಜಾಸ್ತಿ ಕೆಲಸವಿತ್ತೇನೋ ಅಂತ ಸುಮ್ಮನಾದೆ.

ಊಟದ ಸಮಯದಲ್ಲಿ ಅವರಾಗಿಯೇ ಕೇಳುತ್ತಾರೆ, ಇವತ್ತು ಚಂದ ಕಾಣಿಸ್ತಿದೀಯ ಅಂತ ಹೇಳುತ್ತಾರೆ ಅಂತ ಕಾದು ಕುಳಿತಿದ್ದೆ. ಎಂದಿನಂತೆ ಕೂದಲನ್ನು ತುರುಬು ಕಟ್ಟದೆ ಹಾಗೇ ಬಿಟ್ಟಿದ್ದೂ ಅದೇ ಕಾರಣಕ್ಕಾಗಿಯೇ. ರಾಯರು ಬಂದು ಊಟಕ್ಕೆ ಕುಳಿತರು. ಅದೂ ಇದೂ ಮಾತಾಡುತ್ತಾ ಊಟ ಮಾಡತೊಡಗಿದರು. ಈಗ ಹೇಳುತ್ತಾರೆ, ಈಗ ಹೊಗಳುತ್ತಾರೆ ಅಂತ ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಕಾದಿದ್ದೇ ಬಂತು, ಮಹಾಶಯನಿಗೆ ನನ್ನ ಮುಖದ ಹೊಳಪು, ಹುಬ್ಬಿನ ಚೂಪು, ಕೆನ್ನೆಯ ನುಣುಪು ಕಾಣಿಸಲೇ ಇಲ್ಲ. ಅವರು ದಿನಾ ನನ್ನನ್ನು ಗಮನಿಸುತ್ತಿದ್ದರೋ, ಇಲ್ಲವೋ? ದಿನವೂ ಗಮನಿಸುವುದೇ ಆದರೆ, ಇವತ್ತಿನ ಹೊಸ ಬದಲಾವಣೆಯನ್ನು ಗುರುತಿಸಬೇಕು ತಾನೇ?

ಗಂಡನೇ ಹೊಗಳಲಿಲ್ಲ ಅಂದಮೇಲೆ, ನಾಳೆ ಮದುವೆಯಲ್ಲಿ ಸಿಕ್ಕ ಮೂರನೆಯವರು ಹೊಗಳುತ್ತಾರೆಯೇ ಅಂತೆಲ್ಲಾ ಅನ್ನಿಸಿ ಸಿಟ್ಟು ಬಂತು. ಹಾಗಂತ ನಾನೇ ಬಾಯಿಬಿಟ್ಟು ಕೇಳುವುದಕ್ಕೂ ಮನಸ್ಸು ಒಪ್ಪಲಿಲ್ಲ. ಆದರೂ ಬಡಿಸುವಾಗ ಕೈ ಮುಂದೆ ಚಾಚಿ, ಮುಂಗುರುಳನ್ನು ಎರಡೆರಡು ಬಾರಿ ನೇವರಿಸಿ, ಮಾತಾಡುವಾಗ ಹುಬ್ಬು ಕುಣಿಸಿ ಅವರ ಗಮನ ಸೆಳೆಯುವ ಸಣ್ಣಪುಟ್ಟ ಸಾಹಸಗಳನ್ನೆಲ್ಲ ಮಾಡಿ ನೋಡಿದೆ. ಏನೂ ಪ್ರಯೋಜನವಾಗಲಿಲ್ಲ. ನಿರಾಸೆಯಿಂದಲೇ ಊಟ ಮುಗಿಸಿ ಕೈ ತೊಳೆದೆ. ಸಿಟ್ಟಿನಲ್ಲಿ ಪಾತ್ರೆ ತೊಳೆಯುತ್ತಿದ್ದವಳ ಹಿಂದೆ ಬಂದು ನಿಂತು ಅವರು, "ನಿನ್ನ ಕೂದಲು ಮೊದಲಿಗಿಂತ ಸಣ್ಣ ಆಗಿದೆ ಅಲ್ವಾ? ಸರಿಯಾಗಿ ಊಟ ಮಾಡದೇ ಇದ್ದರೆ ಹಾಗೇ ಆಗುತ್ತೆ. ಮುಖವೂ ಬಿಳಿಚಿಕೊಂಡಂತೆ ಕಾಣಿಸ್ತಿದೆ' ಅನ್ನಬೇಕೆ!

ಮೂರು ಸಾವಿರ ಕೊಟ್ಟು ಪಾರ್ಲರ್‌ನಲ್ಲಿ ಮುಖ ತೊಳೆಸಿಕೊಂಡಿದ್ದಕ್ಕೆ ಇಷ್ಟು ಒಳ್ಳೆಯ ಹೊಗಳಿಕೆಯನ್ನು ನಮ್ಮವರಿಂದ ನಿರೀಕ್ಷಿಸಿರಲಿಲ್ಲ !

ಪ್ರಿಯಾಂಕಾ ಎನ್‌. 


Trending videos

Back to Top