CONNECT WITH US  

ಮಿಥಿಲಾ ಪಾಲ್ಕರ್‌ 

ಮಾಡೆಲಿಂಗ್‌ನಿಂದ, ರಂಗಭೂಮಿಯಿಂದ, ಕಿರುತೆರೆಯಿಂದ ಬಾಲಿವುಡ್‌ಗೆ ನಾಯಕಿಯರು ಬಂದಿರುವುದನ್ನು ನೋಡಿದ್ದೇವೆ. ಆದರೆ, ಮಿಥಿಲಾ ಪಾಲ್ಕರ್‌ ಕತೆ ಮಾತ್ರ ತುಸು ಭಿನ್ನವಾದದ್ದು. ಈಗ ಬಾಲಿವುಡ್‌ಗೆ ಬಂದಿರುವುದು ಇಂಟರ್‌ನೆಟ್‌ನಿಂದ. ಹಾಗೆಂದು, ಇಂಟರ್‌ನೆಟ್‌ನಿಂದ ಡೌನ್‌ಲೋಡ್‌ ಮಾಡಿಕೊಂಡವಳು ಎಂದು ಭಾವಿಸಬೇಡಿ. ಮಿಥಿಲಾ ನಟಿಸುತ್ತಿದ್ದದ್ದು ಇಂಟರ್‌ನೆಟ್‌ ಸಿನೆಮಾಗಳಲ್ಲಿ.

ಕಾರ್‌ವಾನ್‌ ಎಂಬ ಚಿತ್ರ ಮಿಥಿಲಾಳಿಗೆ ಬಾಲಿವುಡ್‌ ಬಾಗಿಲು ತೆಗೆದಿದೆ. ಈ ಚಿತ್ರದಲ್ಲೇ ಮಲಯಾಳಂ ಸೂಪರ್‌ಸ್ಟಾರ್‌ ದುಲ್ಕರ್‌ ಸಲ್ಮಾನ್‌ ಕೂಡ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆಕರ್ಷ್‌ ಖುರಾನ ನಿರ್ದೇಶಿಸಿರುವ ಕಾರ್‌ವಾನ್‌ ಒಂದು ರೋಡ್‌ ಟ್ರಿಪ್ಪಿನ ಕಥೆ. ಪ್ರತಿಭಾವಂತ ಇರ್ಫಾನ್‌ ಖಾನ್‌ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ. ಭಿನ್ನ ಸ್ವಭಾವದ ಮೂವರು ಅನಿರೀಕ್ಷಿತ ಸ್ಥಿತಿಯಲ್ಲಿ ಜತೆಗೆ ಪ್ರಯಾಣ ಮಾಡಬೇಕಾದ ಸಂದರ್ಭ ಬಂದಾಗ ಉಂಟಾಗುವ ವಿಚಿತ್ರ ಘಟನೆಗಳೇ ಚಿತ್ರದ ಕಥಾವಸ್ತು. ಅಂದ ಹಾಗೆ ಚಿತ್ರ ಪ್ರಾರಂಭವಾಗುವುದು ಬೆಂಗಳೂರಿನಲ್ಲಿ. ಅಲ್ಲಿಂದ ಊಟಿಗೆ ಹಾಗೂ ಕೊನೆಗೆ ಕೇರಳಕ್ಕೆ ಹೋಗಿ ತಲಪುತ್ತದೆ. 

ಮಿಥಿಲಾ ಪಾಲಿಗೆ ಮೊದಲ ಚಿತ್ರವೇ ಚಾಲೆಂಜಿಂಗ್‌ ಆದ ಪಾತ್ರವನ್ನು ತಂದುಕೊಟ್ಟಿದೆ. ಹಾಗೆಂದು ಮಿಥಿಲಾಗೆ ಟ್ರಾವೆಲಿಂಗ್‌ ಹೊಸದೇನೂ ಅಲ್ಲ. ರೋಡ್‌ ಟ್ರಿಪ್‌ ಅವಳ ಖಯಾಲಿ. ಹೀಗಾಗಿ, ಪಾತ್ರ ಅವಳ ಹವ್ಯಾಸಕ್ಕೆ ಸರಿಯಾಗಿ ಹೊಂದಿಕೊಂಡಿದೆಯಂತೆ. ಮಿಥಿಲಾ ನಟಿ ಮಾತ್ರ ಅಲ್ಲ ಗಾಯಕಿಯೂ ಹೌದು. ಕಾರ್‌ವಾನ್‌ನಲ್ಲಿ ತನ್ನ ಒಂದು ಹಾಡನ್ನು ಸ್ವತಃ ಹಾಡಿದ್ದಾಳೆ. ಹಾಡುಗಳಿಗೆ ಅನಿರೀಕ್ಷಿತ ಟ್ವಿಸ್ಟ್‌ ಕೊಡುವುದರಲ್ಲಿ ಅವಳು ಎಕ್ಸ್‌ಪರ್ಟ್‌ ಅಂತೆ. ಬಾಲಿವುಡ್‌ನಿಂದ ಹಾಡುವ ಆಫ‌ರ್‌ಗಳು ಬಂದರೂ ತಯಾರಿದ್ದಾಳಂತೆ. ಹತ್ತಾರು ಇಂಟರ್‌ನೆಟ್‌ ಚಿತ್ರಗಳಲ್ಲಿ ನಟಿಸಿರುವ ಮಿಥಿಲಾ ಮೊದಲು ಕಾಣಿಸಿಕೊಂಡದ್ದು ಮರಾಠಿ ಚಿತ್ರದಲ್ಲಿ. ಇದರ ಬೆನ್ನಿಗೆ ಇದೀಗ ಬಾಲಿವುಡ್‌ನ‌ ದೊಡ್ಡ ಚಿತ್ರ ಸಿಕ್ಕಿದೆ. ಕಾರ್‌ವಾನ್‌ ಹಿಟ್‌ ಆದರೆ ದುಲ್ಕರ್‌ ಸಲ್ಮಾನ್‌ ಮತ್ತು ಮಿಥಿಲಾ ಇಬ್ಬರ ಭಾಗ್ಯದ ಬಾಗಿಲು ತೆರೆಯಲಿದೆ.  

Trending videos

Back to Top