ಸೋನೆ ಮಳೆಯಲ್ಲಿ ಸೋಣೆ ಸಂಭ್ರಮ


Team Udayavani, Aug 17, 2018, 6:00 AM IST

c-26.jpg

ಸೋಣೆ ಸಂಕ್ರಮಣದ ದಿನ ಬೆಳಿಗ್ಗೆ ಲಗುಬಗೆಯಿಂದ ಏಳುವ ಹೆಣ್ಮಕ್ಕಳು ತಲೆ -ಮೈ ಸ್ನಾನ ಮಾಡಿಕೊಂಡು ಶುಚಿಭೂತರಾಗಿ, ಮನೆಯ ಎಲ್ಲ ಹೊಸ್ತಿಲುಗಳನ್ನು ಶುದ್ಧಗೊಳಿಸಿ, ರಂಗೋಲಿ ಇಟ್ಟು , ಅರಸಿನ-ಕುಂಕುಮ ಹಾಗೂ ಧಾನ್ಯದ ಮೊಳಕೆ ಹೂಗಳನ್ನು ಹೊಸ್ತಿಲಿಗೆ ಹಾಕಿ ನಮಸ್ಕರಿಸುವ ಸಂಪ್ರದಾಯ ಇಂದಿಗೂ ಇದೆ.

ಶ್ರಾವಣದ ಸೋನೆ ಮಳೆ. ಮಳೆಯ ಕಲರವಕ್ಕೆ, ಹೆಣ್ಮಕ್ಕಳ ಕೈಯಲ್ಲಿ ಇರುವ ಬಳೆಗಳ ಕಿಣಿಕಿಣಿ ಶಬ್ದ. ಕಿವಿಗೆ ಇಂಪು ಇಂಪು. ಶ್ರಾವಣ ಮಾಸ ನಮ್ಮ ಹಿಂದೂ ಸ್ತ್ರೀಯರ ಮೆಚ್ಚಿನ ತಿಂಗಳು. ನಾಗರ ಪಂಚಮಿಯಿಂದ ಆರಂಭಗೊಳ್ಳುವ ತಿನ್ನುವ ಹಬ್ಬದ ಸರದಿ, ಸೋಣೆ ಸಂಕ್ರಮಣ, ಹೊಸ್ತಿಲ ಪೂಜೆಯ ಸಡಗರ, ತವರಿಗೆ ಹೋಗಿ ಬರುವ ನೆಪ, ಆಷಾಢದ ಜಡತ್ವ ದೂರಾಗಿ ನವೋಲ್ಲಾಸ ತುಂಬುವ ಕಾಲ ಶ್ರಾವಣ ಮಾಸ. ಅಲ್ಲದೇ ಆಷಾಢದ ಅನುಭೂತಿಯಿಂದ ಅರಳದೆ ಮುದುಡಿದ ಪುಷ್ಪಗಳೆಲ್ಲ ನಳನಳಿಸುತ್ತಾ ಮನೆಯಂಗಳದಲ್ಲಿ ಅರಳುವ ಹೊತ್ತು ಶ್ರಾವಣ.

ನಮ್ಮ ಕರಾವಳಿಯಲ್ಲಿ ಶ್ರಾವಣ ಸೋಣೆ ತಿಂಗಳಾಗಿದೆ. ಈ ಸೋಣೆ ಸಂಕ್ರಮಣದ (ಸಿಂಹ ಸಂಕ್ರಾಂತಿ) ದಿನ ಬೆಳಿಗ್ಗೆ ಲಗುಬಗೆಯಿಂದ ಏಳುವ ಹೆಣ್ಮಕ್ಕಳು ತಲೆ -ಮೈ ಸ್ನಾನ ಮಾಡಿಕೊಂಡು ಶುಚಿಭೂìತರಾಗಿ, ಮನೆಯ ಎಲ್ಲ ಹೊಸ್ತಿಲುಗಳನ್ನು ಶುದ್ಧಗೊಳಿಸಿ, ರಂಗೋಲಿ ಇಟ್ಟು , ಅರಸಿನ-ಕುಂಕುಮ, ಹಾಗೂ ಧಾನ್ಯದ ಮೊಳಕೆ ಹೂಗಳನ್ನು ಹೊಸ್ತಿಲಿಗೆ ಹಾಕಿ ನಮಸ್ಕರಿಸುವ ವಿಶೇಷ ಪದ್ಧತಿ ಇಂದಿಗೂ ಇದೆ.

ಹುರುಳಿ, ಹೆಸರು, ಮೆಂತೆ, ಉದ್ದು – ಹೀಗೆ ಎಲ್ಲ ಧಾನ್ಯ ಗಳನ್ನು ನೆನೆಸಿಟ್ಟು, ಅದು ಮೊಳಕೆ ಬಂದಾಕ್ಷಣ ಭೂಮಿಗೆ ಬಿತ್ತಿ, ಆ ಜಾಗದ ಮೇಲೆ ಹಳೆಯ ಅಗಲ ಬಾಯಿಯ ಪಾತ್ರೆ, ಮಡಕೆಯನ್ನು ಮುಚ್ಚಬೇಕು, ಗಾಳಿಯಾಡಬಾರದು. ಮೂರ್ನಾಲ್ಕು ದಿನದ ಬಳಿಕ ನೋಡಿದರೆ, ಈ ಧಾನ್ಯಗಳೆಲ್ಲ ಎತ್ತರಕ್ಕೆ ಬೆಳೆದು ಚಿಕ್ಕ ಹಳದಿ ಬಣ್ಣದ ಎಲೆ ಬಿಟ್ಟಿರುತ್ತವೆ. ಇದೇ “ಕೊಳ್‌ ಹೂವು’ ಎಂದು ಹೆಸರಾದ ಧಾನ್ಯಗಳ ಹೂವು. ಮಹಡಿಗಳಲ್ಲಿ ವಾಸಿಸುವವರು ಪಾಟ್‌ಗಳಲ್ಲಿ ಈ ಧಾನ್ಯದ ಹೂವು ಬೆಳೆಯಬಹುದು. ಕುಂಡಗಳಿಗೆ ಈ ಮೊಳಕೆ ಬರಿಸಿದ ಧಾನ್ಯಗಳನ್ನು ಬಿತ್ತಿ ಪಾಟಿನ ಮೇಲೆ ಅದೇ ಅಳತೆಯ ಪಾತ್ರೆ ಮುಚ್ಚಿದರೆ ಕೊಳ್‌ ಹೂವು ತಯಾರಾಗುತ್ತದೆ. ಗಾಳಿ ಈ ಪಾತ್ರೆಯ ಒಳ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಇದನ್ನು ಸೋಣೆ ತಿಂಗಳ ಸಂಕ್ರಾಂತಿಯ ದಿನ ಹೊಸ್ತಿಲಿಗೆ, ಮನೆ ದೇವರಿಗೆ, ಊರ ದೇವರಿಗೆ, ನಾಗರ ಪಂಚಮಿಯಂದು ನಾಗದೇವರಿಗೆ ಹಾಕಿದರೆ ಶ್ರೇಷ್ಠ ಎಂಬ ನಂಬಿಕೆ.

ಸೋಣೆ ಸಂಕ್ರಮಣದ ದಿನ ಈ ಕೊಳ್‌ ಹೂವಿನ ಜೊತೆಗೆ, ಸೋಣೆ ಹೂವು, ದಂಟು ಸೋಣೆ, ಬೊಂಬಾಯಿ ಸೋಣೆ, ಅರಳು ಸೋಣೆ- ಹೀಗೆ ಹಲವು ಬಗೆಯ ಸೋಣೆ ಹೂವನ್ನೂ , ಕಾಗೆಕಾಲು, ಗುಬ್ಬಿಕಾಲು ಎಂದು ಕರೆಯುವ ಸಣ್ಣ ಜಾತಿಯ ಸಸ್ಯಗಳನ್ನೂ ಹೊಸ್ತಿಲಿಗೆ ಹಾಕುತ್ತಾರೆ. ಸೋಣೆ ತಿಂಗಳಿಡೀ ಬೆಳಿಗ್ಗೆ ಸಂಜೆ ಹೊಸ್ತಿಲಿಗೆ ನೀರಿಡುವ ಕ್ರಮವೂ ಇದೆ. ಮುಂಜಾನೆ ರಂಗೋಲಿ ಹಾಕಿ, ಹೂವು, ಅರಸಿನ-ಕುಂಕುಮ ಇಟ್ಟು, ನೀರಿನ ಗಿಂಡಿ ಇಟ್ಟು ಹೊಸ್ತಿಲಿಗೆ ನಮಸ್ಕರಿಸಿ, ಆ ಗಿಂಡಿಯ ನೀರನ್ನು  ಹೊಸ್ತಿಲಿನ ಹೊರಗೆ ಒಂದು ಹನಿಯಷ್ಟು ಎರೆದು ಲಕ್ಷಿ¾à ದೇವಿಯನ್ನು ಮನೆಯೊಳಗೆ ಬರಮಾಡಿಕೊಂಡು, ಗಿಂಡಿಯಲ್ಲಿ ಉಳಿದ ನೀರನ್ನು  ತುಳಸಿಗೆ ಎರೆದು ಬರುತ್ತಾರೆ. ಸಂಜೆ ಹೊಸ್ತಿಲಿನ ಮೇಲೆ ಗಿಂಡಿ ನೀರು, ಜೊತೆಗೆ ಕಾಲುದೀಪವಿಟ್ಟು, ಸಂಜೆ ಮಲ್ಲಿಗೆ, ಪಾರಿಜಾತ, ಹೀರೆ ಹೂವು, ರಾತ್ರಿರಾಣಿ, ರಥಪುಷ್ಪ$, ಬಿಳಿ ರಥ ಹೂವು- ಇತ್ಯಾದಿ ಸಂಜೆ ಹೊತ್ತಿಗೆ ಅರಳುವ ಹೂವಿಟ್ಟು, ಏನಾದರೊಂದು ಭಕ್ಷ್ಯ (ಕಜ್ಜಾಯ, ಪಾಯಸ, ಸಿಹಿ ತಿನಿಸು) ದೋಸೆ, ಇತ್ಯಾದಿ ತಯಾರಿಸಿ ಹೊಸ್ತಿಲಿಗೆ ನೈವೇದ್ಯ ಮಾಡಬೇಕು. ಪಂಚಕಜ್ಜಾಯ, ತುಪ್ಪ, ಬೆಲ್ಲ, ಸಕ್ಕರೆ, ತುಪ್ಪ, ತ್ರಿಮಧುರ, ಕೇವಲ ಹಾಲಾದರೂ ಸಾಕು. ಹೀಗೆ ಏನಾದರೊಂದು ನೈವೇದ್ಯ ಮಾಡಿ, ಗಿಂಡಿಯ ಒಂದು ಹನಿ ನೀರನ್ನು ಹೊಸ್ತಿಲಿನ ಒಳಗೆ ಎರೆದು, ಗಿಂಡಿ ಮತ್ತು ದೀಪವನ್ನು ದೇವರ ಮನೆಯಲ್ಲಿ ಇಡುತ್ತಾರೆ. ರಾತ್ರಿ ಈ ಗಿಂಡಿಯ ನೀರನ್ನು ಹೊರಚೆಲ್ಲುವುದಿಲ್ಲ.

ಹೊಸ್ತಿಲಿಗೆ ನಮಸ್ಕಾರ
ನಮ್ಮ ಊರಲ್ಲಿ ಅಕ್ಕಪಕ್ಕದ ಮನೆಗೆ ಸೋಣೆ ತಿಂಗಳಲ್ಲಿ ಹೊಸ್ತಿಲು ನಮಸ್ಕಾರಕ್ಕೆ ಹೋಗಿ ಬರುವ ಕ್ರಮವಿದೆ. ಹೀಗೆ ಹೋದಾಗ ಮನೆಯವರು ವಿಶೇಷ ಖಾದ್ಯ ತಯಾರಿಸಿ, ಹೊಸ್ತಿಲಿಗೆ ನೈವೇದ್ಯ ಮಾಡಿ, ಅದನ್ನೇ ಪ್ರಸಾದವಾಗಿ ತಿನ್ನಲು ನೀಡಿ ಸತ್ಕರಿಸಿ, ನಂತರ ಬಾಗೀನ ನೀಡಿ ಕಳುಹಿಸುತ್ತಾರೆ. ಸೋಣೆ ತಿಂಗಳ ಸಂಜೆ ಮುತ್ತೈದೆಯರಿಗೆ ಅರಸಿನ-ಕುಂಕುಮ, ರವಿಕೆ ಕಣ, ಹಾಗೂ ಬಹುಮುಖ್ಯವಾಗಿ ಬಳೆಗಳನ್ನು ನೀಡುವರು.

ಸೋಣೆ ತಿಂಗಳ ಕೊನೆಯ ದಿನ ಅರ್ಥಾತ್‌ ಕನ್ಯಾ ಸಂಕ್ರಮಣದ ಮುನ್ನಾ ದಿನ ಸಂಜೆ ಹೊಸ್ತಿಲಿಗೆ ಕಾಯಿ ಒಡೆದು, ದೋಸೆ, ಶ್ಯಾವಿಗೆ ಇತ್ಯಾದಿ ತಿಂಡಿಗಳನ್ನು ನೈವೇದ್ಯ ಮಾಡಿ, ಹೊಸ್ತಿಲು ಅಜ್ಜಿಯನ್ನು ಬೀಳ್ಕೊಡುತ್ತಾರೆ. 
ಕೆಲವು ಸಮುದಾಯದಲ್ಲಿ ಒಂದು ತಿಂಗಳಿಡೀ ಬೆಳಿಗ್ಗೆ , ಸಂಜೆ ಹೊಸ್ತಿಲ ಪೂಜೆಯ ಕ್ರಮವಿದ್ದರೆ, ಕೆಲವರು ಈ ಕ್ರಮವನ್ನು ಚೌತಿ ಹಬ್ಬದ (ಗಣೇಶ ಚತುರ್ಥಿ) ವರೆಗೆ ಮಾತ್ರ ಆಚರಿಸಿ ಆ ದಿನ ಮುಗಿಸುತ್ತಾರೆ.

ಸೋಣೆ ತಿಂಗಳಲ್ಲಿ ಬರುವ ಅನಂತ ಚತುರ್ಥಿ, ಗಣೇಶ ಚತುರ್ಥಿ, ನಾಗರ ಪಂಚಮಿ, ವರಮಹಾಲಕ್ಷ್ಮೀ ಪೂಜೆಗಳಿಗೆ ಮಧ್ಯಾಹ್ನದ ನೈವೇದ್ಯಕ್ಕೆ ತಯಾರಿಸಿದ ಭಕ್ಷ್ಯಗಳನ್ನು, ದೇವರಿಗೆ ಸಮರ್ಪಿಸಿದ ನಂತರ, ಹೊಸ್ತಿಲಿಗೆ ನೈವೇದ್ಯ ಮಾಡುವರು. ಮನೆಗೆ ಪೂಜೆಗೆ ಆಗಮಿಸಿದ ಮುತ್ತೈದೆಯರು, ಹೆಣ್ಮಕ್ಕಳು ನಡುಮನೆಯ ಹೊಸ್ತಿಲಿನ ಬಳಿ ಜಮಾಯಿಸಿ, ಹೊಸ್ತಿಲು ನಮಸ್ಕಾರಕ್ಕೆ ಅಣಿಯಾಗುವರು. ಮಧ್ಯಾಹ್ನದ ಹೊಸ್ತಿಲು ನಮಸ್ಕಾರದಲ್ಲಿ ದೀಪವನ್ನು ಹೊಸ್ತಿಲ ಕೆಳಭಾಗದಲ್ಲಿ ಇಡುವರು. ಬೆಳಿಗ್ಗೆಯೇ ಹೊಸ್ತಿಲು ಬರೆದಿರುವುದರಿಂದ, ಗಿಂಡಿಯ ನೀರನ್ನಷ್ಟೇ ಹೊಸ್ತಿಲ ಮೇಲಿಟ್ಟು, ಅರಸಿನ-ಕುಂಕುಮ ಹೂವುಗಳನ್ನು ಎಲ್ಲರೂ ಹೊಸ್ತಿಲಿಗೆ ಅಲಂಕರಿಸಿ ನೈವೇದ್ಯ ಮಾಡಿ, ನಮಸ್ಕಾರ ಮಾಡಿ, ಕೊನೆಯಲ್ಲಿ ಗಿಂಡಿಯನ್ನು ಹೊಸ್ತಿಲ ಮೇಲಿಟ್ಟ ಹಿರಿಮುತ್ತೈದೆ, ಆ ಗಿಂಡಿಯ ನೀರನ್ನು ಒಂದು ಹನಿ ಒಳಗೆರೆದು, ಮತ್ತುಳಿದ ನೀರನ್ನು ಕಟ್ಟೆಯ ತುಳಸಿಗೆ ಎರೆದು ಬರುತ್ತಾರೆ.

ಹೊಸ್ತಿಲ ಅಜ್ಜಿಗೆ ದೋಸೆ ನೈವೇದ್ಯ ಮಾಡಿ ಕಳುಹಿಸುವುದೆಂದರೆ ಸೀರೆ ಉಡುಗೊರೆಯ ಸಂಕೇತ, ಹಾಗೇ ಶ್ಯಾವಿಗೆ ನೈವೇದ್ಯ ಎಂದರೆ ನೂಲು ನೀಡುವುದರ ಸೂಚನೆ ಎಂಬುದು ಜನಪದ ಪ್ರತೀತಿ.

ಈಗ ಕೆಲವರು ಹಾಸ್ಯಕ್ಕಾಗಿ ಈ ಬಾರಿ ನಮ್ಮನೆ ಹೊಸ್ತಿಲು ಅಜ್ಜಿಗೆ ಸಂಜೆ ನೈವೇದ್ಯಕ್ಕೆ  ನಿತ್ಯವೂ ಕೇವಲ ಚಪಾತಿ. ಯಾಕೆಂದರೆ, ಅವಳಿಗೆ ಸಕ್ಕರೆ ಕಾಯಿಲೆ ಎನ್ನುವರು. ಒಟ್ಟಿನಲ್ಲಿ ನಾವು ತಿನ್ನಲು ಮಾಡುವ ಆಹಾರ ಖಾದ್ಯಗಳನ್ನು ಹೊಸ್ತಿಲಜ್ಜಿಗೆ ನೈವೇದ್ಯ ಮಾಡುತ್ತೇವೆ.

ಶುಕ್ರವಾರ ಅಥವಾ ಮಂಗಳವಾರ ಸೋಣೆ ತಿಂಗಳ ಕೊನೆಯ ದಿನವಾಗಿದ್ದರೆ, ಈ ಹೊಸ್ತಿಲಜ್ಜಿಯನ್ನು ಕಳುಹಿಸುವುದಿಲ್ಲ. ಒಂದೋ ಮಂಗಳವಾರದ ಮೊದಲೇ ಸೋಮವಾರ ಅಥವಾ, ಬುಧವಾರ ನೀರು ಹೊರಹಾಕುತ್ತಾರೆ. ಶುಕ್ರವಾರ ಬಂದರೂ ಗುರುವಾರ ಅಥವಾ ಶನಿವಾರ ನೀರು ಹೊರಹಾಕುತ್ತಾರೆ. 

ಅಂದರೆ ಶುಕ್ರವಾರ ಮತ್ತು ಮಂಗಳವಾರ ಲಕ್ಷ್ಮೀ ದೇವಿಯ ರೂಪದ ಹೊಸ್ತಿಲಜ್ಜಿಯನ್ನು ಕಳುಹಿಸಿದರೆ, ಮನೆಯ ಸಿರಿ ಸಮೃದ್ಧಿ ಅವಳೊಂದಿಗೆ ಹೊರಟುಹೋಗಿತ್ತದೆಂದು ಅಂಬೋಣ. ಹಾಗೇ ಸೋಣೆ ಶುಕ್ರವಾರ ಸೊಸೆ ಮನೆಯಿಂದ ತೆರಳಬಾರದು, ಮಂಗಳವಾರ ಮಗಳು ತೌರಿನಿಂದ ಹೊರಡಬಾರದೆಂದೂ ಹೇಳುವರು. 

ಇದರೊಂದಿಗೆ ಸೋಣೆ ತಿಂಗಳಲ್ಲಿ ಕರಾವಳಿಯ ಬಹುತೇಕ ದೇಗುಲಗಳಲ್ಲಿ ಸೋಣೆ ಆರತಿ ಎಂಬ ವಿಶೇಷ ಸೇವೆಯ ಸಡಗರ. ಸಂಜೆಯಾಗುತ್ತಿದ್ದಂತೆ ಮನೆಯ ಮಹಿಳೆಯರು, ಮಕ್ಕಳು, ಹಿರಿಯರೆಲ್ಲ ದೇಗುಲಗಳಿಗೆ ಹೋಗುವ ತಯಾರಿ ನಡೆಸುತ್ತಾರೆ. ಜಿಟಿಜಿಟಿ ಮಳೆಯ ನಡುವೆ ಊರ ದೇಗುಲಗಳಲ್ಲಿ ನಡೆಯುವ ಸೋಣೆ ಆರತಿಯನ್ನು ಕಣ್ತುಂಬಿಕೊಳ್ಳುವ ಸಡಗರ! ಸೋಣೆ ಆರತಿ ನೋಡಿದರೆ ಪಾಪ ಪರಿಹಾರವೆಂಬ ಪ್ರತೀತಿ. ಕತ್ತಲಾವರಿಸಲು ಶುರುವಾದೊಡನೆ, ದೇಗುಲಗಳಲ್ಲಿ ಬಹುವಿಧ ಹೂಮಾಲೆಗಳಿಂದ ದೇವರನ್ನು ಅಲಂಕರಿಸಿ, ಅರಳು, ಅವಲಕ್ಕಿ, ಬೆಲ್ಲ ಕಾಯಿ, ತುಪ್ಪಗಳನ್ಮು ಮಿಶ್ರಣ ಮಾಡಿದ ಪಂಚಕಜ್ಜಾಯವನ್ನು ನೈವೇದ್ಯ ಮಾಡಿ, ಸಾಲಂಕೃತ ಆರತಿ ಬೆಳಗಿ ಪೂಜಿಸುತ್ತಾರೆ. ಸೋಣೆ ತಿಂಗಳಲ್ಲಿ ಮರದ ಆರತಿ ಬೆಳಗುವುದು ವಿಶೇಷ. ಈ ಆರತಿಗೆ  ಹಲಗೆ ಆರತಿ ಎಂಬ ಹೆಸರೂ ಇದೆ.

ಬಳೆಗಳಿಗೂ ಸೋಣೆ (ಶ್ರಾವಣ) ತಿಂಗಳಿಗೂ ವಿಶೇಷ ನಂಟು. ಹಿಂದೆಲ್ಲ ಬಳೆಗಾರರೇ ಸೋಣೆ ತಿಂಗಳಿಗೆ ಮನೆಮನೆಗೆ ಬಂದು ಮನೆಯಲ್ಲಿ ಇರುವ ಎಲ್ಲಾ ಹೆಣ್ಣುಮಕ್ಕಳಿಗೆ, ಮುತ್ತೈದೆಯರಿಗೆ ಕೈತುಂಬಾ ಬಳೆ ಇಟ್ಟು , ಹೋಗುವ ಪದ್ಧತಿ ಇತ್ತು. ವರ್ಷಕ್ಕೊಮ್ಮೆಯಷ್ಟೇ ಬಳೆ ಇಡುವ ಹರ್ಷದ ಕಾಲ ಅದಾಗಿತ್ತು. ಬಳೆಗಾರರಿಗೆ ಮನೆ ಮರ್ಯಾದೆಯಾಗಿ ಬಳೆಗಳಿಗೆ ನಿಗದಿಯಾದ ಹಣದೊಂದಿಗೆ, ಅಕ್ಕಿ-ಕಾಯಿ, ವೀಳ್ಯದ ಪಟ್ಟಿ ನೀಡಿ ಗೌರವಿಸಿ ಕಳುಹಿಸುತ್ತಿದ್ದರು. ಅಂಗಡಿಗಳಿಗೆ ಹೋಗಿ ಬಳೆ ಇಟ್ಟು ಬರುವ ಪ್ರಮೇಯವೇ ಇರಲಿಲ್ಲ. ಆರ್ಥಿಕವಾಗಿಯೂ ಹಿಂದುಳಿದ ಕಾಲ ಅದಾಗಿತ್ತು. ಈಗ ಸೋಣೆ ತಿಂಗಳಲ್ಲಿ ದೇವಿ ದೇಗುಲಗಳಿಗೆ ಹೋದರೆ ದೇವರಿಗೂ ಬಳೆ ಅರ್ಪಿಸಿ, ನಾವು ಹೆಣ್ಮಕ್ಕಳು ಕೈ ತುಂಬಾ ಬಳೆ ಇಟ್ಟು ಬರುವ ಪದ್ಧತಿಯನ್ನು ಹುಟ್ಟುಹಾಕಬೇಕಿದೆ. ಈ ಶ್ರಾವಣ ಮಾಸದಲ್ಲಾದರೂ ಸ್ತ್ರೀ ಕುಲದ ಶುಭಕಳೆಗಳಾದ ಬಳೆಗಳನ್ನು ಎರಡೂ ಕೈಗಳ ತುಂಬಾ ಹಾಕಿಕೊಂಡು ನಲಿದಾಡಿದರೆ ಸಿಗುವ ಸಂತೋಷಕ್ಕೆ ಎಣೆಯುಂಟೆ?

ಸೋಣೆ ತಿಂಗಳು ತವರು ಮನೆಗೆ ಹೋಗಿ, ತಾ ಹುಟ್ಟಿ ಬೆಳೆದ ತವರಿನ ಹೊಸ್ತಿಲಿಗೆ ನಮಸ್ಕರಿಸಿ, ತವರಿನವರು ಕೊಡುವ ಬಳೆ ಧರಿಸಿ ಸಂಭ್ರಮಿಸಿ, ಚೆನ್ನೆಮಣೆ, ಪಗಡೆ ಮೊದಲಾದ ಒಳಾಂಗಣ ಕ್ರೀಡೆಯಾಡಿ ಮನಸ್ಸನ್ನು ಹಗುರ ಮಾಡಿಕೊಂಡು ಬರುವ ಕ್ರಮವೂ ಇಂದು ಕೆಲವೆಡೆ ಇದೆ. ಶ್ರಾವಣ ಮಾಸದ ಒಂದು ನೆಪ ಹೆಣ್ಮನಗಳಿಗೆ ನವೋಲ್ಲಾಸ ನೀಡುತ್ತದೆ. ಕಾರುತಿಂಗಳ ವ್ಯವಸಾಯದ ಕಾರುಬಾರಿನ ಜಂಜಾಟ, ಆಷಾಢ ಮಾಸದ ಜಡತ್ವ ಇವೆಲ್ಲದರಿಂದ ಹೊಸ ಹುರುಪು ಪಡೆಯಲು ಶ್ರಾವಣ ಅಥವಾ ಸೋಣೆ ತಿಂಗಳು ಮಹಿಳೆಯರಿಗೆಲ್ಲ ಮುದ ನೀಡುವ ಕಾಲ ಎಂದದ್ದು ಯಾಕೆಂದು ತಿಳಿಯಿತಷ್ಟೇ?

ಪೂರ್ಣಿಮಾ ಎನ್‌. ಭಟ್ಟ ಕಮಲಶಿಲೆ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.