CONNECT WITH US  

ಮಳೆ ಧಾರೆಯಲ್ಲಿ ಕಾಯಿಲೆಗಳಿಂದ ರಕ್ಷ ಣೆ

ಧೋ ಧೋ' ಎಂದು ಧಾರಾಕಾರವಾಗಿ ಮಳೆ ಸುರಿಯುತ್ತಿರುವಾಗ ದೇಹದ ಜೀರ್ಣಶಕ್ತಿ, ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಜೊತೆಗೆ ವಾತಾವರಣದ ಬದಲಾವಣೆಗಳಿಂದ ಜೀವಾಣು ವೈರಾಣುಗಳು ಹೆಚ್ಚುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಆರೋಗ್ಯ ರಕ್ಷಣೆಗೆ ವಿಶೇಷ ಮುತುವರ್ಜಿ ಅವಶ್ಯ.

ನೆಗಡಿ, ಕೆಮ್ಮು, ದಮ್ಮುಗಳೇ ಅಲ್ಲದೆ,  ಡೆಂಗ್ಯೂ, ಮಲೇರಿಯಾ, ಕಾಲರಾ, ಟೈಫಾಯಿಡ್‌, ಹೆಪಟೈಟಿಸ್‌ ಹೀಗೆ ಹತ್ತು ಹಲವು ರೋಗಗಳು ಅಧಿಕವಾಗಿ ಕಂಡುಬರುತ್ತವೆ.

ಈ ರೋಗಗಳು ಬಾರದಂತೆ ತಡೆಗಟ್ಟಲು ಮತ್ತು ಪ್ರತಿಬಂಧಕವಾಗಿ ಹಾಗೂ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿ ಸಿಕೊಂಡು ರೋಗ ಬಾರದೆ ತಡೆಯಬಲ್ಲ ಕೆಲವು ಗೃಹೌಷಧಿಗಳನ್ನು, ಮನೆಮದ್ದುಗಳನ್ನು ಈ ಕೆಳಗೆ ತಿಳಿಸಲಾಗಿದೆ.

.ನೆಗಡಿ, ಕೆಮ್ಮು , ದಮ್ಮು ಇರುವಾಗ ಹಸಿಶುಂಠಿಯ ರಸಕ್ಕೆ ಸಮಪ್ರಮಾಣದಲ್ಲಿ ಜೇನು ಬೆರೆಸಿ ಸೇವಿಸಿದರೆ ಶಮನಕಾರಿ. ಇದನ್ನು ದಿನಕ್ಕೆ 1-2 ಚಮಚವನ್ನು 2ರಿಂದ 3 ಸಾರಿ ಸೇವಿಸಬೇಕು.

.ಚಳಿಯ ಜೊತೆ ಜ್ವರವಿರುವಾಗ ತುಳಸಿಯ ಬೇರಿನ ಸಮೇತ ಕಷಾಯ ಮಾಡಿ ಆರಿದ ಬಳಿಕ ಜೇನು ಬೆರೆಸಿ ಸೇವಿಸಿದರೆ ಚಳಿಜ್ವರ ಕಡಿಮೆಯಾಗುತ್ತದೆ.

.ಅಲರ್ಜಿಯ ತೊಂದರೆಗಳಿಗೆ ಹಾಲಿನಲ್ಲಿ ಅರಸಿನ ಹುಡಿ ಬೆರೆಸಿ (1 ಕಪ್‌ ಹಾಲಿಗೆ 1 ಚಮಚ ಶುದ್ಧ ಅರಸಿನ ಹುಡಿ) ಬೆರೆಸಿ ನಿತ್ಯ ಸೇವಿಸಿದರೆ ಅಲರ್ಜಿ, ಶೀತ, ಕೆಮ್ಮು , ಚರ್ಮದ ಅಲರ್ಜಿ, ಕಜ್ಜಿ , ತುರಿಕೆ, ಗಜಕರ್ಣ ಇತ್ಯಾದಿ ಶಮನವಾಗುತ್ತದೆ. ಚರ್ಮದ ಅಲರ್ಜಿಯಲ್ಲಿ ಅಂದರೆ ತುರಿಕೆ-ಕಜ್ಜಿಗಳಿರುವಾಗ ತುಳಸೀ ಎಲೆ, ಅರಸಿನ ಹುಡಿ, ನಿಂಬೆರಸ ಹಾಗೂ ಉಪ್ಪು ಬೆರೆಸಿ ಪೇಸ್ಟ್‌ ತಯಾರಿಸಿ ಲೇಪಿಸಿದರೆ ಶಮನವಾಗುತ್ತದೆ.

.ಮಳೆಗಾಲದಲ್ಲಿ ಸೊಳ್ಳೆಗಳಿಂದ ಉಂಟಾಗುವ ರೋಗಗಳು ಹೆಚ್ಚು. ಆದ್ದರಿಂದ ನೀರು ನಿಲ್ಲುವ ಸ್ಥಳಗಳನ್ನು ಸ್ವತ್ಛಗೊಳಿಸುವುದು, ಶುದ್ಧ ನೀರಿನ ಮೂಲದಿಂದ ನೀರನ್ನು ಉಪಯೋಗಿಸುವುದು, ಕುದಿಸಿದ ನೀರು ಹಾಗೂ ಬಿಸಿ ನೀರನ್ನು ಫಿಲ್ಟರ್‌ ಮಾಡಿದ ನೀರನ್ನು ಬಳಸಿದರೆ ಹಿತಕರ.

.ತಾಜಾ ಕಿತ್ತಳೆಯ ಜ್ಯೂಸ್‌ ಸೇವನೆ ಉತ್ತಮ. ಕಿತ್ತಳೆ ಜ್ಯೂಸ್‌ನಲ್ಲಿ ಅಧಿಕ ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು, ಜೀರ್ಣಕ್ಕೂ ಉಪಯುಕ್ತ ಹಾಗೂ ರೋಗನಿರೋಧಕ ಶಕ್ತಿ ವರ್ಧಿಸುತ್ತದೆ. ನೆಗಡಿ, ವಿವಿಧ ಚಳಿಜ್ವರ, ಡೆಂಗ್ಯೂ ಬಾರದಂತೆ ತಡೆಗಟ್ಟಲು ಮಳೆಗಾಲದಲ್ಲಿ ನಿತ್ಯ ತಾಜಾ ಕಿತ್ತಳೆಯ ಜ್ಯೂಸ್‌ 1 ಕಪ್‌ ಸೇವಿಸಿದರೆ ಪರಿಣಾಮಕಾರಿ.

.ಎಳೆಯ ಪಪ್ಪಾಯಿ ಎಲೆಗಳನ್ನು ಸ್ವಲ್ಪ  ಬೆಲ್ಲ ಹಾಗೂ ತ್ರಿಫ‌ಲಾ ಪುಡಿಯೊಂದಿಗೆ ಸೇವಿಸಿದರೆ ಡೆಂಗ್ಯೂ ಬಾರದಂತೆ ತಡೆಗಟ್ಟುತ್ತದೆ. ಮಾತ್ರವಲ್ಲದೆ ಇದು ಇತರ ರೋಗಗಳ ವಿರುದ್ಧ ರೋಗ ಪ್ರತಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

.2 ಚಮಚ ಕಹಿಬೇವಿನ ಎಲೆಯ ಜ್ಯೂಸ್‌ನ್ನು 1 ಚಮಚ ಜೇನು ಬೆರೆಸಿ ವಾರಕ್ಕೆ 1 ಬಾರಿ ಸೇವಿಸಿದರೆ ಉತ್ತಮ. ಅಥವಾ 1/4 ಕಪ್‌ ಕಹಿಬೇವಿನ ಎಲೆಯ ಕಷಾಯ ವಾರಕ್ಕೆ 1-2 ಬಾರಿ ಸೇವಿಸಿದರೆ ಮಳೆಗಾಲದಲ್ಲಿ ಇಮ್ಯುನಿಟಿ ವರ್ಧಿಸುತ್ತದೆ.

.ಭೇದಿ, ಮಾಂಸಭೇದಿ, ಕಾಲರಾ ಇತ್ಯಾದಿಗಳೂ ಮಳೆಗಾಲದಲ್ಲಿ ಹೆಚ್ಚು. ಅದಕ್ಕಾಗಿ ಶುಂಠಿಯನ್ನು  ಆಹಾರದಲ್ಲಿ ಉಪಯೋಗಿಸಿದರೆ ಉತ್ತಮ. ಉದಾ: ಶುಂಠಿ ಚಟ್ನಿ ಮತ್ತು ತಂಬುಳಿ, ಪುದೀನಾ ಚಟ್ನಿ ಹಾಗೂ ತಂಬುಳಿ, ಪಂಚಪತ್ರೆಯ ಚಟ್ನಿ ಹಾಗೂ ಅದರ ತಂಬುಳಿ ಇತ್ಯಾದಿ ಜೀರ್ಣಾಂಗ ವ್ಯೂಹದ ತೊಂದರೆಗಳಿಗೆ ಒಳ್ಳೆಯದು. ಜೊತೆಗೆ ಮಳೆಗಾಲದ ಕೊನೆಯಲ್ಲಿ ಇದನ್ನು ಬಳಸಿದರೆ ಪರಿಣಾಮಕಾರಿ.

.ಆಹಾರದಲ್ಲಿ ಕಹಿಯಂಶ ಉಳ್ಳ ತರಕಾರಿ ಬಳಸಿದರೆ ಹಿತಕರ. ಉದಾಹರಣೆಗೆ ಹಾಗಲಕಾಯಿ. ಹಾಗಲಕಾಯಿಯ ವಿವಿಧ ಖಾದ್ಯಗಳನ್ನು ಬಳಸಿದರೆ ಉಪಯುಕ್ತ. ತರಕಾರಿ ಮತ್ತು ಹಣ್ಣುಗಳಲ್ಲಿ ನೀರಿನಂಶ ಅಧಿಕವಿರುವ ತರಕಾರಿ ಉದಾ: ಸೌತೆಕಾಯಿ, ಕುಂಬಳ, ಮುಳ್ಳುಸೌತೆ, ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಮೊದಲಾದ ಅಧಿಕ ಜಲೀಯ ಅಂಶ ಹೊಂದಿರುವ ತರಕಾರಿ ಹಾಗೂ ಹಣ್ಣುಗಳು ಸೇವನೆಗೆ ಹಿತಕರವಲ್ಲ. ದಾಳಿಂಬೆ, ಕಿತ್ತಳೆ, ಸೇಬು, ಪಿಯರ್‌ ಹಾಗೂ ಒಣ ಹಣ್ಣುಗಳು ಸೇವನೆಗೆ ಹಿತಕರ.

.ಕೆಂಗಣ್ಣು ಅಥವಾ ಕಂಜಕ್ಟವೈಟಿಸ್‌ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ತೊಂದರೆ. ತಣ್ಣೀರಿನಲ್ಲಿ ಅದ್ದಿದ ಶುದ್ಧ ಹತ್ತಿಯ ಉಂಡೆಗಳನ್ನು ಮುಚ್ಚಿದ ಕಣ್ಣುಗಳ ಮೇಲೆ ಇರಿಸಿ ಕಣ್ಣುಗಳನ್ನು ಶುದ್ಧ ಮಾಡಬೇಕು. ಶುದ್ಧ ಜೇನು ಕಣ್ಣಿಗೆ 1 ಹನಿಯಷ್ಟು ಹಾಕಿದರೆ ಪರಿಣಾಮಕಾರಿ. ಅಥವಾ ಕೊತ್ತಂಬರಿ ಕಷಾಯವನ್ನು ಸೋಸಿ ಒಂದೊಂದು ಹನಿ ಆಗಾಗ್ಗೆ ಹಾಕುತ್ತಿದ್ದರೆ ಕೆಂಗಣ್ಣ ನಿವಾರಣೆಯಾಗುತ್ತದೆ.

.ಈರುಳ್ಳಿ , ಬೆಳ್ಳುಳ್ಳಿ , ಮೆಣಸಿನಕಾಳು, ಲವಂಗ, ಯಾಲಕ್ಕಿ , ಚಕ್ಕೆ ಮೊದಲಾದ ಸಾಂಬಾರ ಪದಾರ್ಥಗಳ ಬಳಕೆ ಮಳೆಗಾಲದಲ್ಲಿ ಹಿತಕಾರಿ. ಇವುಗಳನ್ನು ಕಷಾಯ ಸೂಪ್‌, ಜ್ಯೂಸ್‌ ಹಾಗೂ ಆಹಾರ ರೂಪದಲ್ಲಿ ಸೇವಿಸಿದರೆ ಮಳೆಗಾಲದಲ್ಲಿ ವಿವಿಧ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ.

-ಡಾ. ಅನುರಾಧಾ ಕಾಮತ್‌


Trending videos

Back to Top