CONNECT WITH US  

ಸೊಂಟನೋವಿನ ವಿಷ್ಯ

"ಸೊಂಟ ನೋವನ್ನು ಅನುಭವಿಸಿದವರಿಗೆ ಮಾತ್ರವೇ ಗೊತ್ತು' ಎನ್ನುವ ಅತ್ತೆಯ ನುಡಿಮುತ್ತು, ನನ್ನ ಪಾಲಿಗೂ ನಿಜವಾಗುವ ಸಂದರ್ಭವೊಂದು ಎದುರಾಯಿತು. ಒಂದು ಬೆಳಗ್ಗೆ ಅಡುಗೆ ಕೋಣೆ ಒರೆಸಲು ಬಗ್ಗುತ್ತೇನೆ. ಅದು "ಚಳಕ್‌' ಎಂಬ ರಾಗ ಹಾಡಿತು...

ಸೊಂಟನೋವಿಗೂ, ಮಹಿಳೆಯರಿಗೂ ಆತ್ಮೀಯವಾದ ನಂಟಿದೆ. "ಸೊಂಟ ನೋವನ್ನು ಅನುಭವಿಸಿದವರಿಗಷ್ಟೇ ಗೊತ್ತು' ಎಂದು ನಮ್ಮ ಅತ್ತೆ ಸದಾ ಹೇಳುತ್ತಿರುತ್ತಾರೆ. "ನಾವೆಷ್ಟೇ ಹೇಳಿದ್ರೂ ಬೇರೆಯವರಿಗೆ ಅದು ಅರ್ಥವೇ ಆಗೋಲ್ಲ. ಈ ಕಷ್ಟ ಹೇಳಿ ಏನು ಪ್ರಯೋಜನ?' ಎಂದು ಅತ್ತೆ, ವಾತರೋಗದಿಂದ ಮೈಕೈ ನೋವು ಅನುಭವಿಸುತ್ತಾ, ಹೀಗೆ ಹೇಳುತ್ತಿರುತ್ತಾರೆ. "ಹಾಗಾದರೆ, ಅರ್ಥವಾಗಲು ಆ ನೋವು ಭರಿಸಿಕೊಳ್ಳಬೇಕಾ?' ಎಂದು ನಾನು ಅವರನ್ನು ತಮಾಷೆಯಿಂದ ಕೆಣಕುತ್ತಿರುತ್ತೇನೆ.

ಹೌದು! ಜ್ವರ, ಹೊಟ್ಟೆನೋವು, ಶೀತ, ತಲೆನೋವು- ಹೀಗೆ ಯಾವ ಕಾಯಿಲೆಯಾದರೂ ಸರಿ, ಅದು ನಮಗೆ ತಟ್ಟಿದರೆ ತಾನೇ ಅದರ ಕಷ್ಟ ಏನೆಂದು ಗೊತ್ತಾಗೋದು! ಜ್ವರ, ಶೀತದಂಥ ಸಣ್ಣಪುಟ್ಟ ರೋಗಗಳನ್ನು ನಾನು ಅನುಭವಿಸಿದ್ದೇನೆ. ನನ್ನ ದೊಡ್ಡಪ್ಪ, ದೊಡ್ಡಣ್ಣ, ಅಕ್ಕಂದಿರಿಬ್ಬರು ತೀವ್ರ ಸೊಂಟನೋವಿನಿಂದ ಬಳಲಿರುವುದನ್ನು ಹತ್ತಿರದಿಂದ ಕಂಡಿದ್ದೇನೆ. ಅದರ ತೀವ್ರತೆಯಿಂದ ಅವರು ನರಳಿರುವುದನ್ನೂ ನೋಡಿದ್ದೇನೆ. ಆದರೆ, ಸೊಂಟನೋವಿನ ಅನುಭವ ಮಾತ್ರ ನನಗೆ ಆಗಿರಲಿಲ್ಲ. 

ಅತ್ತೆಯ ನುಡಿಮುತ್ತಿನ ಫ‌ಲವೋ ಏನೋ, ಅದೊಂದು ದಿನ ನನಗೂ ಸೊಂಟ "ಚಳಕ್‌' ಎಂದು ಕೈಕೊಟ್ಟಿತು. ಅಂದು ಹೇಗೋ ಕೋಲಿನಲ್ಲಿ ನೆಲ ಒರೆಸಿ ಸುಧಾರಿಸಿದೆ. ಸಂಜೆ ಯೋಗಾಭ್ಯಾಸಕ್ಕೆ ಹೋದೆ. ಅಲ್ಲಿ ಸೂರ್ಯ ನಮಸ್ಕಾರ ಮಾಡಲು ಬಗ್ಗಿದೆ. ಯಮಯಾತನೆಯ ಪರಿಚಯವಾಯಿತು. ಏನೋ ಭಾರ ಎತ್ತಿ ಹೀಗಾಗಿರಬಹುದು. ಸೊಂಟಕ್ಕೆ ವಿಶ್ರಾಂತಿ ಕೊಟ್ಟರೆ, ಸರಿ ಹೋದೀತು ಎಂದು ಭಾವಿಸಿದೆ. ನಾಲ್ಕು ದಿನ ಆರಾಮ ಕೊಟ್ಟರೂ ಕಡಿಮೆ ಆಗಲಿಲ್ಲ.

ಸೊಂಟನೋವಿಗೆ ಕಾರಣವೇನೆಂದು ತಿಳಿದುಕೊಳ್ಳಲು ನಮ್ಮ ಮನೆಯವರು ಎಕ್ಸರೇ ಮಾಡಿಸಿದ್ದು ನೆನಪಿಗೆ ಬಂದು ನನ್ನ ಸೊಂಟನೋವಿಗೆ ಕಾರಣ ತಿಳಿಯಲು ನಾನೂ ಎಕ್ಸರೇ ತೆಗೆಸಿದರೆ ಹೇಗೆ ಎಂಬ ಉಪಾಯ ಹೊಳೆಯಿತು! ನಮ್ಮ ಮನೆಯ ಬಳಿಯೇ ಇದ್ದ ಲ್ಯಾಬಿಗೆ ನಡೆದು ಹೋದೆ. ಅಲ್ಲಿ ಬೇರೆಲ್ಲ ಸೌಲಭ್ಯ ಇದ್ದರೂ ಎಕ್ಸರೇ ಮಾತ್ರ ಇರಲಿಲ್ಲ. ಹಾಗಾಗಿ, ನನ್ನ ಸೊಂಟ ಎಕ್ಸರೇಯಿಂದ ಬಚಾವಾಯಿತು! ಸೊಂಟದ ನೋವನ್ನು ಗುಣಪಡಿಸಲೇಬೇಕೆಂದು ಹೋಮಿಯೋಪತಿ ಮದ್ದಿಗೆ ಮೊರೆ ಹೋದೆ. ನಮ್ಮ ಬಂಧು (ನಮ್ಮತ್ತೆಯ ಅಣ್ಣನ ಮೊಮ್ಮಗ) ಹೋಮಿಯೋ ವೈದ್ಯ ಕ್ಲಿನಿಕ್‌ ಮುಚ್ಚಿ ಮನೆಗೆ ಹೋಗುವಾಗ ರಾತ್ರಿ ನಮ್ಮ ಮನೆಗೇ ಬಂದು ಔಷಧಿ ನೀಡಿದ. ಜೊತೆಗೆ 4 ವಿಟಮಿನ್‌ ಮಾತ್ರೆಯನ್ನೂ ಕೊಟ್ಟಿದ್ದ. ನಾಲ್ಕು ದಿನ ತಪ್ಪದೇ ಕುಚ್ಚಲಕ್ಕಿ ಗಂಜಿ ತಿಳಿಯನ್ನೂ ಎರಡು ಲೋಟ ಕುಡಿದಿದ್ದೆ. ಒಟ್ಟಿನಲ್ಲಿ ನನ್ನ ಸೊಂಟ ಸಹಜ ಸ್ಥಿತಿಗೆ ಮರಳಿತು. ಸುಮಾರು ಹತ್ತು ದಿನ ನೋವು-ಕಾಟ ಕೊಟ್ಟಿತ್ತು.

ಮನೆಯಲ್ಲಿ ನಮ್ಮ ಅತ್ತೆಗೆ ನನ್ನ ಸೊಂಟ ನೋವಿನ ವಿಷಯ ಹೇಳಿರಲಿಲ್ಲ. ನೋವನ್ನಾದರೂ ಹೇಗೋ ಸಹಿಸಬಹುದು. ಆದರೆ, ನಮ್ಮ ಅತ್ತೆಯ ತೀವ್ರ ಕಾಳಜಿಯನ್ನು ಸಹಿಸಲು ಮಾತ್ರ ಸಾಧ್ಯವಿಲ್ಲ! ಹಾಗಾಗಿ, ಗುಟ್ಟಾಗಿ ಇಟ್ಟಿದ್ದೆ. ಅವನು ಮನೆಗೆ ಬಂದಾಗ ಗೇಟಿನ ಬಳಿಯೇ ಔಷಧಿ ಪಡೆದು, "ಅಜ್ಜಿಗೆ ಹೇಳಬೇಡ' ಎಂದು ಹೇಳಿದ್ದೆ. ಒಳಗೆ ಕಾಲಿಟ್ಟ ಅವನನ್ನು, "ಇದೇನು ಇಷ್ಟು ತಡರಾತ್ರಿ ಬಂದದ್ದು?' ಎಂದು ಅತ್ತೆ ಕೇಳಿದಾಗ, "ಅಜ್ಜಿ, ನಿಮ್ಮನ್ನು ನೋಡಿ ಹೋಗೋಣವೆಂದು ಬಂದೆ. ತುಂಬಾ ದಿವಸವಾಯಿತಲ್ಲ, ಬರಲೇ ಆಗಿರಲಿಲ್ಲ' ಅಂತ ಅವನು ಹೇಳಿದಾಗ, ನಮ್ಮತ್ತೆಗೆ ಬಹಳ ಖುಷಿ.

ಸೊಂಟ ನೋವಿದ್ದಾಗ ನನಗೆ ಒಂದೇ ಒಂದು ಚಿಂತೆ ಬಲವಾಗಿ ಕಾಡಿತ್ತು. ಆಯಿತು, ಇನ್ನು ನನಗೆ ಯಾವುದೇ ಚಾರಣಗಳಿಗೆ ಹೋಗಲು ಸಾಧ್ಯವಿಲ್ಲ. ಸೊಂಟನೋವು ಇಟ್ಟುಕೊಂಡು ಬೆಟ್ಟಗುಡ್ಡ ಹತ್ತುವುದು ಅಸಾಧ್ಯ ಎಂದು ಬಹಳ ಚಿಂತೆಯಾಗಿತ್ತು. "ಬೆಟ್ಟ ಗುಡ್ಡ ಹತ್ತಿದ್ದು ಜಾಸ್ತಿ ಆಯಿತು. ಅದಕ್ಕೇ ಸೊಂಟ ನೋವು ಬಂದದ್ದು' ಎಂದು ಹೇಳಿ ಪತಿಯೂ, ನನ್ನ ಹೆದರಿಕೆಗೆ ತುಪ್ಪ ಸುರಿದಿದ್ದರು. ಸೊಂಟನೋವು ವಾಸಿಯಾದ ಮರುದಿನವೇ ಚಾರಣ ಕೈಗೊಂಡು, ನನ್ನ ಸೊಂಟ ಸರಿಯಾಗಿದೆ ಎಂಬುದನ್ನು ಖಾತ್ರಿಗೊಳಿಸಿಕೊಂಡಿದ್ದೆ!

ಸೊಂಟನೋವಿನಿಂದ ಕೆಲವು ನೀತಿಪಾಠಗಳನ್ನು ಕಲಿತೆ. ನಾನು ಬಹಳ ಗಟ್ಟಿ, ಎಷ್ಟು ಭಾರವನ್ನಾದರೂ ಎತ್ತಬಲ್ಲೆ ಎಂಬ ಜಂಭವನ್ನು ಬಿಟ್ಟು ಮೊದಲಿನಷ್ಟು ಭಾರ ಎತ್ತಲು ಹೋಗುತ್ತಿಲ್ಲ. ಮೊದಲೆಲ್ಲ 25 ಕಿಲೋ ಅಕ್ಕಿ ಮೂಟೆಯನ್ನು ಲೀಲಾಜಾಲವಾಗಿ ಹೊರುತ್ತಿದ್ದೆ. ಸಿಲಿಂಡರನ್ನೂ ಎತ್ತಿ ತರಲು ಆಗುತ್ತಿತ್ತು. ಈಗ ಆ ಸಾಹಸಗಳಿಗೆ ಗುಡ್‌ ಬೈ ಹೇಳಿರುವೆ. 

- ರುಕ್ಮಿಣೀಮಾಲಾ


Trending videos

Back to Top