CONNECT WITH US  

ಬೆಳಗ್ಗೆ  ಪತ್ರೊಡೆ. ಮಧ್ಯಾಹ್ನ ಕೆಸುವಿನ ದಂಟು ಸಾಂಬಾರ್‌

ಒಂದೆಲಗ ಸೊಪ್ಪಿನ ತಂಬುಳಿ, ರಾತ್ರಿ ಕುಂಡಿಗೆ ಪಲ್ಯ

ಬೆಂಗಳೂರಿನಲ್ಲಿ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿರುವ ಗೆಳತಿ ಹಿಂದೆಯೆಲ್ಲ ಸಂಜೆ ಫೋನ್‌ನಲ್ಲಿ ಕೇಳುತ್ತಿದ್ದಳು, "ಈವೊತ್ತು ಏನು ಅಡುಗೆ ಮಾಡಿದ್ದಿ?' ನಾನು ಹೇಳುತ್ತಿದ್ದೆ- ""ಬೆಳಿಗ್ಗೆಗೆ ತಿಂಡಿ ಪತ್ರೊಡೆ. ಮಧ್ಯಾಹ್ನ ಕೆಸುವಿನ ದಂಟು ಸಾಂಬಾರ್‌, ಒಂದೆಲಗ ಸೊಪ್ಪಿನ ತಂಬುಳಿ, ಕುಂಡಿಗೆ ಪಲ್ಯ''. ಮರುದಿನ ಮತ್ತೆ ಇದೇ ಪ್ರಶ್ನೆ ಅವಳದು. ನಾನು ಹೇಳುತ್ತಿದ್ದೆ- ""ಬೆಳಗ್ಗೆ ಬಾಳೆಕಾಯಿ ದೋಸೆ. ಮಧ್ಯಾಹ್ನ ಕಣಿಲೆ ಪಲ್ಯ, ಕಾನಕಲ್ಲಟೆ ಮಜ್ಜಿಗೆ ಹುಳಿ''.

ಒಂದರೆಡು ದಿನ ಕಳೆದು ಮತ್ತೆ ಅದೇ ಪ್ರಶ್ನೆ, "ಬೆಳಗ್ಗೆ ಸೌತೆಕಾಯಿ ಕಡುಬು. ಮಧ್ಯಾಹ್ನ ಗುಜ್ಜೆ ಸಾಂಬಾರ್‌, ಬಾಳೆದಿಂಡಿನ ಪಲ್ಯ' ಹೇಳುತ್ತಿದ್ದೆ. ""ಅಲ್ಲಾ, ದಿನಾ ಕೆಸುವು, ಬಸಳೆ, ಬಾಳೆಕಾಯಿ, ಬಾಳೆದಿಂಡು, ಹಲಸು, ಪಪ್ಪಾಯಿ ತಿಂತೀಯಲ್ಲ! ಒಂದು ದಿನವಾದರೂ ಕ್ಯಾರೆಟ್‌, ಬೀಟ್‌ರೂಟ್‌, ಬೀನ್ಸ್‌, ಕಾಲಿಫ್ಲವರ್‌, ಕ್ಯಾಬೇಜ್‌, ಟೊಮೆಟೊ, ಬಟಾಟೆ ತಿಂದಿದೀಯ. ನಿನಗೆ ಪೌಷ್ಟಿಕಾಂಶಗಳ ಕೊರತೆ ಕಾಡುತ್ತೆ ನೋಡು. ನನ್ನ ಮನೆಗೆ ಬಂದು ಒಂದೆರಡು ದಿನ ಇದ್ದು ಹೋಗು. ಮಾರ್ಕೆಟಿನಿಂದ ಒಳ್ಳೊಳ್ಳೆ ಫ್ರೆಶ್‌ ತರಕಾರಿ ತಂದು ಅಡುಗೆ ಮಾಡಿ ಬಡಿಸುತ್ತೇನೆ. ದ್ರಾಕ್ಷಿ, ಆ್ಯಪಲ್‌ ತಿನ್ನಲು ಕೊಡುತ್ತೇನೆ'' ಎನ್ನುತ್ತಿದ್ದಳು. 

    ಅವಳು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಅಲ್ಲೇ ಬದುಕು ಕಟ್ಟಿಕೊಂಡವಳು. ಹಳ್ಳಿ ತರಕಾರಿ ತಿಂದು ಗೊತ್ತಿಲ್ಲದವಳು. ಕೆಸುವು, ನುಗ್ಗೆ ಸೊಪ್ಪು, ಬಸಳೆ, ಹರಿವೆ, ಜೀಗುಜ್ಜೆ, ಹಲಸು, ಕುಂಡಿಗೆ, ಕಾಡು ಮಾವು ಎಂದರೆ ಬಡವರ ಆಹಾರ ಎಂದು ತಿಳಿದವಳು. ನಾನು ಅವಳನ್ನು ನನ್ನ ಮನೆಗೆ ಬರಲು ಹೇಳಿದೆ. 

    ಅವಳು ಮೊನ್ನೆ ಮನೆಗೆ ಬಂದಳು. ನಾನು ಮಾಡಿದ ಚಗ್ತಿ ಸೊಪ್ಪು ಮತ್ತು ಹಲಸಿನ ಬೀಜ ಸೇರಿಸಿ ಮಾಡಿದ ಪಲ್ಯ, ಕಣಿಲೆ ಗಸಿ, ಮುಳ್ಳುಸೌತೆ ದೋಸೆ, ಬಾಳೆಕಾಯಿ ಪೋಡಿಯನ್ನು ಚಪ್ಪರಿಸಿಕೊಂಡು ತಿಂದಳು. ಅಂದು ಕಡೆದ ಸಿಹಿ ಮಜ್ಜಿಗೆಯನ್ನು "ಇನ್ನೂ ಬೇಕು' ಎಂದು ಕೇಳಿ ಕುಡಿದಳು. ""ಆಹಾ! ಏನು ಸ್ವಾದ! ಇಂಥ ರುಚಿಯ ಅಡುಗೆಯನ್ನು ನಾನು ಜೀವಮಾನದಲ್ಲೇ ಸವಿದಿಲ್ಲ. ತರಕಾರಿ ಬಗ್ಗೆ ಇರುವ ನನ್ನ ತಪ್ಪು ಕಲ್ಪನೆ ದೂರವಾಯಿತು ನೋಡು. ನನಗೆ ನಿನ್ನ ಕೈಯಡುಗೆಯನ್ನು ತಿಂದುಕೊಂಡು ಇಲ್ಲೇ ಇದ್ದುಬಿಡುವ ಎಂದು ಅನಿಸಿದೆ'' ಎಂದಳು. ಆಗ ನಾನು ಅವಳಿಗೆ ಹೇಳಿದೆ, ""ನನಗೆ ಇಂದಿನವರೆಗೆ ಯಾವ ವಿಟಮಿನ್‌ ಕೊರತೆಯೂ ಆಗಿಲ್ಲ. ಸುಸ್ತು, ಸಂಕಟ, ತ‌ಲೆನೋವೂ ಕಾಡಿಲ್ಲ. ವರ್ಷಕ್ಕೊಮ್ಮೆಯೋ, ಎರಡು ಬಾರಿಯೋ ಸಣ್ಣಪುಟ್ಟ ಜ್ವರ ಬಂದದ್ದು ಬಿಟ್ಟರೆ ನಾನು ತುಂಬ ಆರೋಗ್ಯವಾಗಿದ್ದೇನೆ. ಹೆಚ್ಚಿನವರಿಗೆ ಹಳ್ಳಿ ತರಕಾರಿಯ ಬಗ್ಗೆ ಅಸಡ್ಡೆ ಇದೆ. ನಾನು ಪೇಟೆಯಿಂದ ತರಕಾರಿ ತರುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹಾಗೆ ತರುವುದು ರೈತರಾದ ನಮಗೆ ನಾವು ಮಾಡುವ ಅಪಮಾನ ಎಂದು ನಾನು ಅಂದುಕೊಂಡಿದ್ದೇನೆ.

ನಮ್ಮ ಮನೆ ಅಂಗಳದಲ್ಲಿ ಆಯಾಯ ಋತುವಿಗೆ ಸಂಬಂಧಪಟ್ಟ ತರಕಾರಿಯನ್ನು ಹಟ್ಟಿ ಗೊಬ್ಬರ ಹಾಕಿ ಬೆಳೆಸುತ್ತೇನೆ. ಅದನ್ನೇ ಅಡುಗೆ ಮಾಡುತ್ತೇನೆ. ತರಕಾರಿ ಇಲ್ಲದಿದ್ದರೆ ಪ್ರಕೃತಿಯಲ್ಲಿ ಸಿಗುವ ಗಿಡಗಳ ಬೇರು, ಸೊಪ್ಪು, ತೊಗಟೆ ಹೀಗೆ ಸರ್ವ ಭಾಗಗಳಿಂದಲೂ ಅಡುಗೆ ಮಾಡುತ್ತೇನೆ'' ಎಂದಾಗ ಅವಳು ಆಶ್ಚರ್ಯದಿಂದ ಹುಬ್ಬೇರಿಸಿದಳು.

    ನನ್ನ ಮನೆ ಪೇಟೆಯಿಂದ ದೂರ ಇರುವ ದಟ್ಟ ಕಾಡಿನಲ್ಲಿದೆ. ಡಾಂಬರ್‌ ರಸ್ತೆ, ವಾಹನ ಸೌಕರ್ಯ ಇಲ್ಲ. ಹಳ್ಳಿ ಸೊಗಡಿನ ನನ್ನ ಮನೆಯಲ್ಲಿ ರಜಾ ದಿನ ಕಳೆಯಲು ಪೇಟೆಯ ಗೆಳತಿಯರು ಬರುತ್ತಾರೆ. ಒಮ್ಮೆ ಬಂದವರು ಇನ್ನೊಮ್ಮೆ ಬರುತ್ತಾರೆ. ಆಗೆಲ್ಲ ನನ್ನ ಪಕ್ಕದ ಮನೆಯ ಕೃಷಿಕ ಗೆಳತಿ, ""ಸಹನಕ್ಕ, ನೀವು ಯಾಕೆ ಅವರಿಗೆ ಬರಲು ಒಪ್ಪಿಗೆ ಕೊಡುತ್ತೀರಿ? ರೈತರಾದ ನಮಗೆ ಬರುವ ಆದಾಯ ಅಷ್ಟರಲ್ಲೇ ಇದೆ. ಅಂತಹದರಲ್ಲಿ ಅವರಿಗೆ ಅಡುಗೆ ಮಾಡಿ ಬಡಿಸುವುದು ನಿಮಗೆ ಖರ್ಚು ಅಲ್ವಾ?'' ಎನ್ನುತ್ತಾಳೆ. ಆಗ ನಾನು ಅವಳಿಗೆ, ""ಬರಲಿ ಬಿಡು. ನಾನೇನು ಅವರು ಬರುತ್ತಾರೆಂದು ವಿಶೇಷ ಅಡುಗೆ ಮಾಡುತ್ತೇನೆಯೇ? ಪೇಟೆಗೆ ಹೋಗಿ ತರಕಾರಿ ತರುತ್ತೇನೆಯೇ? ಹಿತ್ತಲು, ತೋಟಕ್ಕೆ ಹೋಗುತ್ತೇನೆ ಹೂ, ಕಾಯಿ, ಹಣ್ಣು, ಚಿಗುರು ಸೆರಗಿನಲ್ಲಿ ಕಟ್ಟಿಕೊಂಡು ಬರುತ್ತೇನೆ. ಅದರಿಂದಲೇ ಸಾರು, ಚಟ್ನಿ, ತಂಬುಳಿ, ದೋಸೆ ಇತ್ಯಾದಿ ಅಡುಗೆ ಮಾಡುತ್ತೇನೆ. ಯಾರೂ ಇದುವರೆಗೆ ಚೆನ್ನಾಗಿಲ್ಲ ಎಂದು ಹೇಳಲಿಲ್ಲ ಗೊತ್ತಾ?'' ನಗುತ್ತೇನೆ. 

    ನಾನು ಇಪ್ಪತ್ತು ವರ್ಷಗಳ ಹಿಂದೆ ಪುತ್ತೂರಿನ ಪಾಣಾಜೆಯಲ್ಲಿರುವ ಖ್ಯಾತ ಗಿಡಮೂಲಿಕೆ ವೈದ್ಯರಾದ ಪಿ. ಎಸ್‌. ವೆಂಕಟ್ರಾಮ ದೈತೋಟ ಅವರ ಮನೆಗೆ ಹೋಗಿ¨ªೆ. ಅವರ ಮನೆ ಸುತ್ತ ಸೊಂಟದೆತ್ತರ ಹುಲ್ಲು ಬೆಳೆದಿತ್ತು. ದೈತೋಟ ಅವರ ಹೆಂಡತಿ ಜಯಲಕ್ಷ್ಮೀ ಅವರಲ್ಲಿ ಕೇಳಿದೆ ""ಯಾಕೆ ನೀವು ಈ ಕಳೆಗಿಡಗಳನ್ನು ತೆಗೆಸಲಿಲ್ಲ?'' ಆಗ ಅವರು ಹೇಳಿದರು- ""ಇವು ಕಳೆಗಿಡಗಳೆಂದು ನಿಮಗೆ ಯಾರು ಹೇಳಿದ್ದು? ಇವುಗಳನ್ನು ನಾವು ಒಂದಿಲ್ಲೊಂದು ಔಷಧಿ ಅಥವಾ ಅಡುಗೆಯಲ್ಲಿ ಬಳಸಿಕೊಳ್ಳುತ್ತೇವೆ''. 

ಅಂದಿನಿಂದ ನಾನು ಸಸ್ಯಗಳನ್ನು ನೋಡುವ ರೀತಿಯೇ ಬೇರೆಯಾಯ್ತು. ನಾನು ನನ್ನ ತಿಳುವಳಿಕೆಯ ಮಿತಿಯಲ್ಲಿ ಸಸ್ಯಗಳನ್ನು ಅಧ್ಯಯನ ಮಾಡತೊಡಗಿದೆ. ನನ್ನ ಮನೆ ಸುತ್ತ ಅಮೃತಬಳ್ಳಿಯನ್ನು ಹಬ್ಬಿಸಿದೆ. ಹೂ ತೋಟದಲ್ಲಿ ಬ್ರಾಹ್ಮಿ, ಲೋಳೆಸರ, ನೆರುಗಳ, ಗಣಿಕೆ, ಕಾಡುಕೊತ್ತಂಬರಿ, ರಕ್ತಮಿತ್ರ, ಆಡುಸೋಗೆ, ನೆಲನೆಲ್ಲಿ, ನೆಲಬಸಳೆ, ತುಳಸಿ, ಗರಿಕೆ, ಶುಂಠಿ, ದೊಡ್ಡಪತ್ರೆ, ಅರಸಿನ, ಕೂವೆ, ಪುದೀನ, ಮಜ್ಜಿಗೆ ಹುಲ್ಲು, ನೆಕ್ಕರಿಕ, ಕರಿಬೇವು- ಹೀಗೆ ಗಿಡಗಳನ್ನು ಬೆಳೆಸತೊಡಗಿದೆ. ಇವೆಲ್ಲ ಆರೈಕೆ ಇಲ್ಲದೆ ತಾವಾಗಿಯೇ ಬೆಳೆಯುವ ಸಸ್ಯಗಳು. ಅವು ಅಡುಗೆಗೂ ಆಗುತ್ತವೆ. ಶೀತ, ನೆಗಡಿ, ತಲೆನೋವು, ಜ್ವರ, ಹೊಟ್ಟೆನೋವು, ಅಜೀರ್ಣ, ಭೇದಿ ಇತ್ಯಾದಿಗಳಲ್ಲಿ ಮನೆಮ¨ªಾಗಿಯೂ ಉಪಯೋಗಕ್ಕೆ ಬರುತ್ತವೆ.

    ಮಳೆಗಾಲದಲ್ಲಿ ಖಾಲಿ ಜಾಗಗಳಲ್ಲಿ, ರಸ್ತೆಯ ಬದಿಯಲ್ಲಿ, ತೋಟದಲ್ಲಿ ತನ್ನಷ್ಟಕ್ಕೆ ಬೆಳೆಯುವ ಚಗ್ತಿ, ಕೆಸುವು, ಚಕ್ರಮುನಿ, ಗಣಿಕೆ ಸೊಪ್ಪು, ನುಗ್ಗೆ ಸೊಪ್ಪು, ಹೊನಗೊನೆ ಇವುಗಳನ್ನು ಎಲ್ಲರೂ ನಿರ್ಲಕ್ಷ್ಯ ಮಾಡುತ್ತಾರೆ. ಖರ್ಚಿಲ್ಲದೆ ದೊರೆಯುವ ಅವುಗಳನ್ನು ಆಹಾರದಲ್ಲಿ ಬಳಸಬೇಕು. ಅವು ಆರೋಗ್ಯಕ್ಕೆ ಬೇಕಾದ ಅನೇಕ ಖನಿಜಾಂಶಗಳನ್ನೂ, ವಿಟಮಿನ್‌ಗಳನ್ನೂ ಹೇರಳವಾಗಿ ಒದಗಿಸುತ್ತವೆ. ರಕ್ತಹೀನತೆ ತಡೆಯುತ್ತವೆ. ಗರ್ಭಿಣಿ ಸ್ತ್ರೀಯರಿಗೆ, ಬಾಣಂತಿಯರಿಗೆ, ಬೆಳೆಯುವ ಮಕ್ಕಳಿಗೆ ಒಳ್ಳೆಯದು. ನಾವು ಕಳೆಗಿಡಗಳೆಂದು ಬಿಸಾಡುವ ಅನೇಕ ಸಸ್ಯಗಳು ಆಹಾರಯೋಗ್ಯವಾಗಿರುತ್ತವೆ ಮತ್ತು ಪೌಷ್ಟಿಕಾಂಶಭರಿತವಾಗಿರುತ್ತವೆ. ಇಂತಹ ಗಿಡಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಗ್ರಾಮೀಣ ಜನರೂ ಮಾರುಕಟ್ಟೆಯಲ್ಲಿ ವಿಷ ಸಿಂಪರ‌ಣೆಯಿಂದ ಬೆಳೆಸಲ್ಪಡುವ ಹಣ್ಣು, ತರಕಾರಿಗಳನ್ನು ಸೇವಿಸುತ್ತಿದ್ದು ತಮ್ಮ ಹೊಲಗದ್ದೆಗಳಲ್ಲಿ ಪ್ರಕೃತಿದತ್ತವಾಗಿ ಸಿಗುವ ಹಣ್ಣು, ಸೊಪ್ಪು, ಕಾಯಿ, ಗೆಡ್ಡೆಗಳನ್ನು ಕಡೆಗಣಿಸಿದ್ದಾರೆ. 

ನನ್ನ ಮನೆಯಲ್ಲಿ 82 ವರ್ಷದ ಅತ್ತೆ ಇದ್ದಾರೆ. ತವರುಮನೆಯಲ್ಲಿ 80 ವರ್ಷದ ಅಪ್ಪ ಇದ್ದಾರೆ. ಇಳಿ ಹರೆಯವಾದರೂ ಎಷ್ಟೊಂದು ಆರೋಗ್ಯವಾಗಿದ್ದಾರೆ ! ಬಿಪಿ, ಶುಗರ್‌, ಗ್ಯಾಸ್ಟ್ರಿಕ್‌, ಅಸಿಡಿಟಿ, ಬೊಜ್ಜು, ಮಲಬದ್ಧತೆ ಇತ್ಯಾದಿ ಕಾಯಿಲೆಗಳು ಅವರನ್ನು ಬಾಧಿಸಿಲ್ಲ. ನನ್ನ ಅಪ್ಪ ಸುಮ್ಮನೆ ಕುಳಿತುಕೊಳ್ಳುವುದೆಂದು ಇಲ್ಲ. ಈಗಲೂ ಹಸುವಿಗೆ ಹುಲ್ಲು ಮಾಡುವುದು, ಅಡಿಕೆ ಸುಲಿಯುವುದು ಇತ್ಯಾದಿ ಕೆಲಸ ಮಾಡುತ್ತಾರೆ. ಅವರ ಆರೋಗ್ಯದ ಗುಟ್ಟು ಯಾವುದಿರಬಹುದೆಂದು ಯೋಚಿಸಿದಾಗ ನನಗೆ ಅನಿಸಿದ್ದು ಅವರು ತೆಗೆದುಕೊಳ್ಳುವ ಆಹಾರವೇ ಇರಬಹುದು ಎಂದು. ಅವರು ಕರಿದ ತಿಂಡಿ ತಿನ್ನುವುದೇ ಇಲ್ಲ ಎಂದೇನೂ ಇಲ್ಲ. ಮನೆಯಲ್ಲಿ ಕರಿದದ್ದನ್ನು ಕರಿದ ದಿನ ಮಾತ್ರ ಮಿತಿಯಲ್ಲಿ ತಿನ್ನುತ್ತಾರೆ. ಬ್ರೆಡ್‌, ರಸ್ಕ್, ಬನ್‌, ಬಿಸ್ಕೆಟ್‌, ಚಾಕೊಲೇಟ್‌, ಕುರ್‌ಕುರೆ, ಪ್ಯಾಕೆಟ್ಟಿನಲ್ಲಿ ಸಿಗುವ ಎಣ್ಣೆತಿಂಡಿ ಮುಂತಾದ ಬೇಕರಿ ತಿನಸುಗಳನ್ನು ಮುಟ್ಟಿಯೂ ನೋಡುವುದಿಲ್ಲ. ಅಂದಂದು ಸಿದ್ಧಪಡಿಸಿದ ಆಹಾರವನ್ನು ತಿನ್ನುತ್ತಾರೆ. ಆರೋಗ್ಯಕ್ಕಾಗಿ ಅವರು ಈ ಆಹಾರ ಪದ್ಧತಿ ರೂಢಿಸಿಕೊಂಡದ್ದಲ್ಲ. ಅದು ಅವರಿಗೆ ಹುಟ್ಟಿನಿಂದ ಬಂದ ಕ್ರಮ. "ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಮಾತೇ ಇದೆಯಲ್ಲ !

    ಸಂಸ್ಕರಿಸಿದ ಆಹಾರ, ಫಾಸ್ಟ್‌ ಫ‌ುಡ್‌ಗಳು, ಪ್ಯಾಕೆಟಿನಲ್ಲಿ ಸಿಗುವ ತಿನಸುಗಳಿಂದ ಆದಷ್ಟು ದೂರವಿರಬೇಕು.
    ಆರೋಗ್ಯ ಮತ್ತು ಆಹಾರ ಕ್ರಮಗಳ ಮಧ್ಯೆ ನಿಕಟ ಸಂಬಂಧ ಇದೆ. ನಮ್ಮ ಸುತ್ತಮುತ್ತ ಸಿಗುವ ಸಸ್ಯಗಳನ್ನು ಆಹಾರದಲ್ಲಿ ಬಳಸಿ ರೋಗ ಬಹುಮಟ್ಟಿಗೆ ನಮ್ಮ ಬಳಿ ಸುಳಿಯದಂತೆ ಜಾಗ್ರತೆ ವಹಿಸೋಣ. 

ಸಹನಾ ಕಾಂತಬೈಲು


Trending videos

Back to Top