CONNECT WITH US  

ವರ್ತುಲದ ಸುತ್ತ

ಒಂದು ಲಘುವಾದ ಬರಹ

ಮೇಡಂ ನಿಮ್ಮ ಕರ್ಚಿಫ್ ಕೆಳಗೆ ಬಿದ್ದಿದೆ ನೋಡ್ರಿ''- ನನ್ನಂತೆ ದೇವರ ದರ್ಶನಕ್ಕೆಂದು ಉದ್ದನೆಯ ಕ್ಯೂನಲ್ಲಿ ನಿಂತಿದ್ದ ನಡುವಯಸ್ಸಿನ ಮಹಿಳೆಯೊಬ್ಬರು ಹೇಳಿದರು. ಏನಾದರೊಂದು ಹೇಳಿ ನಮ್ಮ ಗಮನ ಬೇರೆಡೆ ಹರಿಸಿ ಸರವನ್ನೋ ಪರ್ಸನ್ನೋ ಎಗರಿಸುವ ಮಂದಿಯ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಇದಕ್ಕೆಲ್ಲ ಜಗ್ಗಬಾರದೆಂದು ಕೇಳಿಸಿಕೊಳ್ಳದಂತೆ ಅವಳ ಮೇಲೆ ಒಂದು ಕಣ್ಣಿಟ್ಟು ನಿಂತೆ. ಜೊತೆಯಲ್ಲಿದ್ದ ಪುಟ್ಟ ಹುಡುಗಿಯೊಬ್ಬಳು ನನ್ನ ಕರ್ಚಿಫ್ ಹೆಕ್ಕಿ ಕೈಗೆ ಕೊಟ್ಟಳು. ನನ್ನ ಶರೀರವನ್ನು ಹೊತ್ತ ಅಡಿಕಂಬಗಳ ತಳಪಾಯ ನನ್ನ ಕಣ್ಣಿಗೆ ಕಾಣಿಸದೆ ಇರಲು ಕಾರಣವಾದ ನಡುವಿನ ಒಂದು ವರ್ತುಲದ ಸುತ್ತ ಯೋಚನೆ ಬಂದದ್ದೆ ಆಗ.

ವರ್ಷ ಕಳೆದಂತೆ ನಮ್ಮಲ್ಲಾಗುವ ಬದಲಾವಣೆ ನಮಗೆ ತಿಳಿಯುವುದಿಲ್ಲ. ನಿನ್ನೆಯ ಹಾಗೆ ಈವತ್ತೂ ಇದ್ದೇನೆ ಎಂದುಕೊಂಡು ಕನ್ನಡಿ ತೋರಿಸುವ ಪ್ರತಿಬಿಂಬವನ್ನೂ ನಂಬುವುದಿಲ್ಲ. ಶಾಲಾ ದಿನಗಳಲ್ಲಿ ಕ್ಲಾಸ್‌ಮೇಟ್‌ ಆಗಿದ್ದ ಮುರಳಿ ಇತ್ತೀಚೆಗೆ ಪೇಟೆಯಲ್ಲಿ ಕಾಣಲು ಸಿಕ್ಕಿದ. ಅವನ ಕೂದಲು ಹಿಂದೆ ಸರಿದು ಹಣೆಗೆ ಬೇಕಾದಷ್ಟು ಜಾಗ ಬಿಟ್ಟುಕೊಟ್ಟಿತ್ತು. ಕಪ್ಪು-ಬಿಳುಪು ಗಡ್ಡಮೀಸೆ ಜೀವನದ ಕಷ್ಟಕೋಟಲೆಗಳನ್ನು ಸಾರುವಂತಿತ್ತು. ""ಹೋ! ಮುರಳಿ, ಗುರುತು ಸಿಕ್ತಾ? ಚೆನ್ನಾಗಿದ್ದೀಯಾ?'' ಇತ್ಯಾದಿ ಆತ್ಮೀಯವಾಗಿ ಮೊದಲಿನ ಸದರದಲ್ಲೇ ಮಾತನಾಡಿಸಿದೆ. ನನ್ನನ್ನು ನಖಶಿಖಾಂತ ನೋಡಿ, ""ಓ ನೀನಾ? ನಿನ್ನ ದೊಡ್ಡಕ್ಕ ಅಂದ್ಕೊಂಡಿದ್ದೆ'' ಎಂದು ಹೇಳಿದಾಗ ಹತ್ತು ವರ್ಷ ಚಿಕ್ಕವಳಾಗಿ ಕಾಣಿಸ್ತಿದ್ದೇನೆ ಎಂಬ ಹಮ್ಮು ಒಮ್ಮೆಲೆ ಪಾತಾಳಕ್ಕೆ ಇಳಿಯಿತು.

ಅತ್ತ ಗೆಳತಿಯರ ವರ್ಗದಲ್ಲಿ ಒಂದಿಷ್ಟು ದಪ್ಪಗಿದ್ದವರೆಲ್ಲ ನೀನು ಯಾವ ತರಹದ ಡ್ರೆಸ್ಸೂ ಹಾಕ್ಕೊಳ್ಬಹುದು ಎಂದು ಹೇಳುತ್ತಿದ್ದುದರಲ್ಲಿ ನಿಜ ಇಲ್ಲವೇ? ಮಧ್ಯವಯಸ್ಸು ಸಮೀಪಿಸುತ್ತಿದ್ದಂತೆ ನಡುಭಾಗದ ವರ್ತುಲದ ಬಗ್ಗೆ ಯೋಚನೆ ಹುಟ್ಟಿಕೊಳ್ಳುತ್ತೆ. ಫಿಟ್‌ನೆಸ್‌ಗಾಗಿ ನಾನಾ ಕಸರತ್ತುಗಳನ್ನು ಕೈಗೊಳ್ಳುವ ಯೋಚನೆ ಬರುತ್ತದೆ.

ಶಾಲಾ-ಕಾಲೇಜುಗಳಲ್ಲಿ ಪಾಠ ಹೇಳುವ ಮಹಿಳೆಯರಿಗೆ ಸೀರೆಯೆಂಬ ಡ್ರೆಸ್‌ಕೋಡ್‌ ಇರುತ್ತದೆ ಎಂಬುದು ಬಿಟ್ಟರೆ, ಇನ್ನುಳಿದಂತೆ ಸೀರೆ ಕೇವಲ ಸಮಾರಂಭಗಳಿಗಷ್ಟೆ ತೊಡುವವರು ಅಧಿಕ. "ಇನ್ನೂ ನೀನು ಚೂಡಿದಾರ್‌ ಯಾಕೆ ಹಾಕ್ತಿ, ಲಕ್ಷಣವಾಗಿ ಸೀರೆ ಉಟ್ಟುಕೊಳ್ಳಬಾರದಾ' ಎಂದು ಗಂಡಸರು ಸೂಚನೆ ಕೊಟ್ಟರೂ ಗೆಳತಿಯರ ಎದುರು, "ನಾನು ಯಾವ ಡ್ರೆಸ್‌ ಹಾಕ್ಕೊಂಡರೂ ನನ್ನ ಯಜಮಾನರು ಏನೂ ಹೇಳಲ್ಲ' ಎಂಬ ಸರ್ಟಿಫಿಕೇಟ್‌ ಕೊಟ್ಟು ಬಿಡ್ತೇವೆ.

ಯಾವುದೋ ಸಮಾರಂಭವೊಂದಕ್ಕೆ ಸೀರೆ ಉಡೋಣವೆಂದುಕೊಂಡು ಉಡಲು ಹೊರಟರೆ ಸೊಂಟದ ಸುತ್ತಲು ಟಯರ್‌ನಂತೆ ಬೆಳೆದ ವರ್ತುಲ. ಸೀರೆ ಅಂಗಡಿಯಲ್ಲಿ ಗೊಂಬೆಗೆ ಉಡಿಸಿದ್ದು ಬಹಳ ಚೆನ್ನಾಗಿ ಒಪ್ಪುವಂತೆ ನನಗೂ ಒಪ್ಪುತ್ತದೆ ಎಂಬ ಭ್ರಮೆಯಿಂದ ಕೊಂಡು ತಂದಿದ್ದನ್ನು ಮೂಲೆಗೆಸೆದೆ. ಅಂದಿನಿಂದ ಆಹಾರ, ವಿಹಾರಗಳ ಕುರಿತು ಯೋಚಿಸುತ್ತ ಯೋಗಾಸನಗಳಲ್ಲಿ ಆಸಕ್ತಿ ಮೂಡಿತು. ""ರೀ, ನಾಳೆಯಿಂದ ನಾನೂ ನಿಮ್ಮ ಜೊತೆ ಬೆಳಗ್ಗೆ ವಾಕಿಂಗ್‌ ಬರ್ತೇನೆ'' ದಿನವೂ ವಾಕಿಂಗ್‌ ಮಾಡುತ್ತಿರುವ ಯಜಮಾನರಲ್ಲಿ ಹೇಳಿದೆ. ಅದಕ್ಕಾಗಿ ಒಂದು ಜೊತೆ ಡ್ರೆಸ್‌ ತೆಗೆದುಕೊಂಡದ್ದೂ ಆಯ್ತು. ಪ್ರೀ ಕೆಜಿ ಮಗುವಿನಂತೆ ಬೆಳಗಿನ ವಾಯುವಿಹಾರದ ಮೊದಲ ದಿನ. ಪಕ್ಕದ ಬೀದಿಯ ರಾಧಮ್ಮ, ಸಿಲ್ಲಿ ಟೀಚರ್‌, ಪೋಸ್ಟ್‌ ಮೇಡಂ- ಹೀಗೆ ಎಲ್ಲ ವಿಶ್ರಾಂತ ಜೀವನದ ಮಹಿಳೆಯರೆಲ್ಲ ದಾರಿಯಲ್ಲಿ ಸಿಕ್ಕಾಗ ಒಂದೆರಡು ಮಾತನಾಡದೆ ಇದ್ದರೆ ಹೇಗೆ? ಎಂದುಕೊಂಡರೆ, ಮರುದಿನ ಯಜಮಾನರು, ""ನೀನಿನ್ನು ನನ್ನ ಜೊತೆ ವಾಕಿಂಗ್‌ ಬರ್ಬೇಡ... ಬರೇ ಟಾಕಿಂಗ್‌ ಮಾಡ್ತಾ ವಾಕ್‌ ಮಾಡಿ ಏನು ಪ್ರಯೋಜ°? ಮನೆಕೆಲಸದ ನಿಂಗಮ್ಮ ಇತ್ತೀಚೆಗೆ ಸರಿಯಾಗಿ ಬರ್ತಾ ಇಲ್ಲ ಅಂತಿದ್ದೀಯಲ್ಲ'' ಎಂದಾಗ ಒಳಗೆ ರೋಷ ಉಕ್ಕಿದರೂ ಇದು ಒಂದು ಸೂಕ್ತ ಸಲಹೆ ಎಂದು ಎದುರಾಡದೆ ಏನೋ ಕಾರಣ ಕೊಟ್ಟು ಆಕೆಗೆ ಒಂದು ತಿಂಗಳ ರಜೆ ಸಾರಿದೆ.

ಎರಡು ದಿನ ಬಹಳ ಉತ್ಸಾಹದಿಂದ ಬೇಗ ಬೇಗ ಮನೆಗೆಲಸಗಳನ್ನು ಮಾಡುವಷ್ಟರಲ್ಲಿ ಸೊಂಟ "ಕಳಕ್‌' ಎಂದಿತು. ಇದು ನನ್ನಿಂದ ಆಗಲ್ಲಪ್ಪ ಒಂದು ತಿಂಗಳ ಮಟ್ಟಿಗೆ ಬೇರೆ ದಾರಿ ಹುಡುಕಿ ಎಂದು ಯಜಮಾನರಲ್ಲಿ ಹೇಳಲು ಬಂದರೆ ಯಾರೋ ಹಿರಿಯರೊಬ್ಬರ ಜೊತೆ ಗೇಟಿನ ಬಳಿ ಮಾತನಾಡುತ್ತಿದ್ದರು. ಪಕ್ಕದ ಮನೆಯ ಮೇಲಿನ ಮಹಡಿಗೆ ಹೊಸದಾಗಿ ಬಂದವರು. ನನ್ನನ್ನು ಗಮನಿಸಿದಂತೆ ""ನಿಮ್ಮ ಮನೆಗೆಲಸದ ಹೆಂಗಸರಲ್ಲಿ ನನ್ನ ಹೆಂಡ್ತಿ ಮಾತಾಡ್ಬೇಕಂತೆ. ಒಂದೈದು ನಿಮಿಷ ಈಚೆ ಕಳಿಸ್ತೀರಾ? ನೀವೆಷ್ಟು ಕೊಡ್ತೀರಿ. ನಮ್ಮಲ್ಲಿ ಹೆಚ್ಚೇನೂ ಕೆಲಸ ಇಲ್ಲ. ಯಾವುದಕ್ಕೂ ಒಮ್ಮೆ ಆಕೆಯನ್ನು ಕಳಿಸಿ ಉಪಕಾರ ಮಾಡಿ'' ಎಂದರು. ಯಜಮಾನರು ತಬ್ಬಿಬ್ಟಾದಂತೆ ನನ್ನ ಕಡೆ ನೋಡಿದರು. ನಾನು ಏನೂ ತಿಳಿಯದಂತೆ ಒಳಗೆ ಹೋದೆ.

ಇನ್ನು ದೇಹವನ್ನು ಸುಸ್ಥಿತಿಯಲ್ಲಿಡಲು ಆಸನಗಳೇ ದಾರಿ ಎಂದುಕೊಂಡೆ. ಸುಂದರ ಕಾಯಾಕಾಂಕ್ಷಿಯಾಗಿ ಯೋಗ ಗುರುಗಳೊಬ್ಬರನ್ನು ಆರಿಸಿಕೊಂಡೆನು. ಹತ್ತು ದಿನಗಳ ಯೋಗ ತರಬೇತಿ ಮುಗಿಸಿ ಆಸನಗಳ ವಿವರಣೆ ಮತ್ತು ಸೂಚನೆಗಳನ್ನು ಒಳಗೊಂಡ ಸಿಡಿಯನ್ನು ಖರೀದಿಸಿ ಮನೆಯಲ್ಲೇ ದಿನವೂ ಒಂದರ್ಧ ಗಂಟೆ ಅದಕ್ಕಾಗಿ ಮೀಸಲಿಡಲಾಯಿತು. ಗುರುಗಳ ಮಾರ್ಗದರ್ಶನದಂತೆ ಯಜಮಾನರು ವಾಕಿಂಗ್‌ ಹೊರಟಾಗ ನನ್ನ ಯೋಗಾಸನ ಆರಂಭವಾಗುವಂತೆ ಸಮಯ ಹೊಂದಿಸಿಕೊಂಡೆ. ಸಿಡಿ ಪ್ಲೇಯರ್‌ ಹಾಕಿ ಸರಳವಾದ ಆಸನಗಳನ್ನೆಲ್ಲ ಮಾಡಿಯಾಯಿತು. "ಕೊನೆಯದಾಗಿ ಶವಾಸನ. ನಿಮ್ಮ ಉಸಿರಾಟದ ಮೇಲೆ ಗಮನವಿರಲಿ' ಅಡಕ ಮುದ್ರಿಕೆಯ ಸೂಚನೆಯಂತೆ ಮಾಡುತ್ತಾ ಹೋದೆ. ಶವಾಸನದಲ್ಲಿ ಶವದಂತೆ ಮಲಗಿದ್ದೆ. ಪಟ್ಟೆಂದು ಸದ್ದು ಕೇಳಿ ಗಡಬಡಿಸಿ ಕಣ್ಣು ಬಿಟ್ಟೆ. ತಮ್ಮ ಬೆಳಗಿನ ಎಲ್ಲ ಚಟುವಟಿಕೆ ಮುಗಿಸಿದ ಯಜಮಾನರು, ""ನಾನು ಕ್ಯಾಂಟೀನಲ್ಲೇ ತಿಂಡಿ ತಿನ್ತೀನಿ ಕಣೆ'' ಎನ್ನುತ್ತಾ ಸಿಡಿ ಪ್ಲೇಯಸ್‌ ಆಫ್ ಮಾಡಿ ಹೊರಟುಹೋದರು.

ಶೈಲಜಾ ಪುದುಕೋಳಿ

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top