CONNECT WITH US  

ಏಳು ಮಲ್ಲಿಗೆ ತೂಕದ ಹುಡುಗಿ ಆಗಬೇಕೆ?

ಅರೇ, ನೀ ಯಾಕೆ ಇಷ್ಟು ದಪ್ಪಗಾಗಿದ್ದು. ಕಳೆದ ಸಲ ನೋಡುವಾಗ ಇಷ್ಟು ದಪ್ಪಗಿರಲಿಲ್ಲ , ಅಲ್ವಾ?'' ಎಂದಾಗ ನಾನು ಮನಸ್ಸಿನೊಳಗೆ ನಕ್ಕು "ಹೌದೌದು' ಎಂದು ಸುಮ್ಮನಾದೆ. ಮತ್ತೂ ಸುಮ್ಮನಾಗದೇ, ""ಇಷ್ಟು ಚಿಕ್ಕ ಪ್ರಾಯಕ್ಕೆ ಹೀಗೆಲ್ಲಾ ದಪ್ಪಗಾಗಬಾರದು. ಏನಾದರೂ ವ್ಯಾಯಾಮ ಮಾಡು, ಡಯೆಟ್‌ ಮಾಡು'' ಎಂದರು. ನನಗೆ ಈ ಮಾತನ್ನು ಹೇಳಿದವರು ಯಾವ ರೀತಿಯಲ್ಲೂ ಬಳುಕುವ ಬಳ್ಳಿಯಂತೆ ಕಾಣುತ್ತಿರಲಿಲ್ಲ. ಇರಲಿ ಬಿಡಿ, ನನ್ನ ದೇಹ ನನ್ನಿಷ್ಟ. ಹೊತ್ತುಕೊಂಡ ನನಗೆ ಭಾರವಿಲ್ಲವಂತೆ. ನಿಮಗ್ಯಾಕೆ ತಲೆಬಿಸಿ ಮಾರಾಯ್ರ್ ಎಂದು ಸುಮ್ಮನಾದೆ. ಮುಖ ಸಿಂಡರಿಸಿ ಆಕೆ ಹೊರಟೇ ಬಿಟ್ಟಳು. ಹಾಗೇ, ಇದು ಅಲ್ಲಿಯೇ ಮುಗಿಯುವ ಅಧ್ಯಾಯವಲ್ಲ. ಅದು ನಾಲ್ಕು ಜನರ ಬಾಯಿಗೆ ಆಹಾರವಾಗುತ್ತದೆ ಎಂಬ ಅರಿವು ನನಗಿತ್ತು! 

ಈ ವ್ಯಂಗ್ಯದ ಮಾತು ಕೇವಲ ಹೆಂಗಸರ ಬಾಯಿಯಿಂದ ಮಾತ್ರ ಉದುರುತ್ತದೆ ಎಂದುಕೊಳ್ಳಬೇಡಿ. ಕೆಲವು ಗಂಡಸರೂ ಹೆಂಗಸರಿಗಿಂತ ಒಂದು ಕೈ ಮೇಲೆ ಇರುತ್ತಾರೆ. ""ಸರೀ ತಿಂತಾಳೆ, ಎಮ್ಮೆ ಬೆಳೆದ ಹಾಗೇ ಬೆಳೆದಿದ್ದಾಳೆ ನೋಡು'' ಎಂದು ತಮ್ಮ ಬಾಯಿಚಪಲ ತೀರಿಸಿಕೊಳ್ಳುತ್ತಾರೆ. 
ಮೊದಲೆಲ್ಲ ಮೈ-ಕೈ ತುಂಬಿಕೊಂಡಿರುವ ಹೆಣ್ಣು ಮಕ್ಕಳನ್ನು ನೋಡಿದಾಗ ಎಷ್ಟು ಲಕ್ಷಣವಾಗಿ ಇದ್ದಾಳೆ ಎನ್ನುತ್ತಿದ್ದವರು ಈಗ ಹಂಚಿಕಡ್ಡಿಯಂತೆ ಇರುವವರನ್ನೇ ಸೌಂದರ್ಯದ ಪ್ರತೀಕ ಎನ್ನುವವರ ಹಾಗೆ ನೋಡುತ್ತಾರೆ. ಈಗಿನ ಹೆಣ್ಣುಮಕ್ಕಳಿಗೂ ಅದೇ ಚಿಂತೆ. ಹೊಟ್ಟೆ ದಪ್ಪಗಾಗಿದೆ, ಸೊಂಟದಲ್ಲಿ ಕೊಬ್ಬು ಸೇರಿದೆ, ಯಾವ ಆಹಾರ ತಿಂದರೆ ಮೈ ಕರಗಿಸಿಕೊಳ್ಳಬಹುದು? ಯಾವ  ವ್ಯಾಯಾಮ ಮಾಡಿದರೆ ಏಳು ಮಲ್ಲಿಗೆ ತೂಕದ ಹುಡುಗಿಯಾಗಬಹುದು ಎಂದು. 

ಯಾರಾದರೂ ನೀ ಯಾಕಿಷ್ಟು ದಪ್ಪಗಿದ್ದೀಯಾ, ಸಣ್ಣಗಿದ್ದೀಯಾ, ಎಂದು ಕೇಳಿದಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದು ಬಗೆಯ ಅಭದ್ರತೆಯ ಭಾವನೆ ಉಂಟಾಗುತ್ತದೆ. ತಾನು ಇಷ್ಟಪಟ್ಟ ಉಡುಪು ಹಾಕಿಕೊಳ್ಳುವುದಕ್ಕೆ ಆಗದೇ ಇದ್ದಾಗ, ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ "ನೀ ಯಾಕೆ ಇಷ್ಟು ದಪ್ಪಗಾದೆ' ಎಂಬ ಪ್ರಶ್ನೆ ಎದುರಿಸಬೇಕಾಗಿ ಬಂದಾಗ ಸಹಜವಾಗಿ ಕಿರಿಕಿರಿ ಅನಿಸುತ್ತೆ. ಬೇಕಂದು ಯಾರೂ ದಪ್ಪಗಾಗಲ್ಲ, ಯಾರೂ ಸಣ್ಣಗೂ ಆಗಲ್ಲ. ಒಬ್ಬೊಬ್ಬರ ದೇಹಪ್ರಕೃತಿ ಒಂದೊಂದು ರೀತಿ ಇರುತ್ತೆ. ತಿನ್ನುವ ಆಹಾರದಿಂದ ಹಿಡಿದು ದೇಹದೊಳಗಿನ ಹಾರ್ಮೋನುಗಳು ಕೂಡ ಈ ಕೊಬ್ಬಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುತ್ತವೆ. ನಮ್ಮ ಬದುಕಿನಲ್ಲಿ ಏರುಪೇರುಗಳು ಇದ್ದಂತೆ ಈ ದೇಹದಲ್ಲೂ ಸಣ್ಣ-ದಪ್ಪ ಎಂಬ ಸಮಸ್ಯೆಗಳು ಇದ್ದೇ ಇರುತ್ತದೆ. ಕೆಲವರಿಗೆ ವಂಶಪಾರಂಪರಿಕ ತೊಂದರೆ ಇದ್ದರೆ ಮತ್ತೆ ಕೆಲವರಿಗೆ ಆರೋಗ್ಯ ಸಮಸ್ಯೆಯಿಂದಲೂ ದೇಹದಲ್ಲಿ ಬದಲಾವಣೆ ಕಂಡುಬರಬಹುದು. ಹಾಗಾಗಿ ನಮ್ಮ ದೃಷ್ಟಿಕೋನ ಬದಲಾಯಿಸಿಕೊಂಡರೆ ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡುವುದನ್ನು ತಪ್ಪಿಸಬಹುದು,
ಹೆಣ್ಣು ದಪ್ಪಗಾಗುವುದಕ್ಕೆ ಸಾಕಷ್ಟು ಕಾರಣವಿರುತ್ತದೆ. ಪ್ರಾಯದಲ್ಲಿ ಚೆನ್ನಾಗಿ ತಿಂದುಂಡು, ಮೈಬಗ್ಗಿಸಿ ಕೆಲಸ ಮಾಡದೇ ಇದ್ದಾಗ ದೇಹದಲ್ಲಿ ಕೊಬ್ಬು ತನ್ನ ಅಸ್ತಿತ್ವ ಸ್ಥಾಪಿಸಲು ಶುರುಮಾಡುತ್ತೆ. ಇನ್ನು ಕೆಲಸಕ್ಕೆಂದು ಪೇಟೆಗೆ ಮುಖಮಾಡಿದವರಿಗೆ, ಕಂಪ್ಯೂಟರ್‌ ಮುಂದೆ ಕುಳಿತು ಬರ್ಗರ್‌, ಪಿಜ್ಜಾದ ಮೊರೆ ಹೋದವರಿಗೆ ಈ ಕೊಬ್ಬು ಒಂದು ಶಾಪವೇ. ಇನ್ನು ಮುಟ್ಟಿನ ಸಮಯದಲ್ಲಿ ಕೆಲವು ಹೆಣ್ಣುಮಕ್ಕಳ ಹೊಟ್ಟೆ ಅಗತ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಕಾಣಿಸುತ್ತದೆ. ಇದನ್ನೆಲ್ಲ ಪಕ್ಕಕ್ಕಿಟ್ಟು ಮದುವೆಯಾಗಿ, ತಾಯ್ತನವನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳ ಗೋಳು ಇನ್ನೊಂದು ಬಗೆಯದ್ದು.  

ಗೆಳತಿಯೊಬ್ಬಳು ಹೇಳುತ್ತಿದ್ದಳು, ""ಮಗ ತಿಂದು ಬೇಡ ಎಂದು ಬಿಟ್ಟಿದ್ದನ್ನು ಹಾಳಾಗುತ್ತದೆ ಎಂದು ನಾನು ತಿನ್ನುವುದಕ್ಕೆ ಶುರು ಮಾಡಿದೆ. ಈಗ ನೊಡು ಯಾವ ಪರಿ ಊದಿಕೊಂಡಿದ್ದೇನೆ'' ಎಂದು. ಹೌದು ಮಕ್ಕಳಿರುವ ಮನೆಯಲ್ಲಿ ಇದು ಸಹಜ. ಮಕ್ಕಳ ದೈಹಿಕ ಬೆಳವಣಿಗೆಗೆಂದು ತಾಯಂದಿರು ಗೂಗÇÉೋ ಇಲ್ಲ ಅಮ್ಮಂದಿರ ಮೊರೆ ಹೋಗಿ ಒಂದಷ್ಟು ರುಚಿಕರ ಹಾಗೂ ಆರೋಗ್ಯಕರವಾದ ತಿಂಡಿ-ತಿನಿಸುಗಳನ್ನು ಮಾಡುವುದನ್ನು ಕಲಿಯುತ್ತಾರೆ. ತಾಯಂದಿರು  ಮಾಡಿದ್ದನ್ನೆಲ್ಲ ಮಕ್ಕಳೆಲ್ಲಿ ತಿನ್ನುತ್ತಾರೆ. ಎಷ್ಟು ಬೇಕೋ ಅಷ್ಟು ತಿಂದು ಉಳಿದಿದ್ದನ್ನು ಅಲ್ಲಿಯೇ ಇಟ್ಟು ಹೋಗುತ್ತಾರೆ. ತುಪ್ಪ, ಬೆಣ್ಣೆ, ಹಾಕಿ ಮಾಡಿದ್ದೆಲ್ಲಾ ಹಾಳಾಗುತ್ತದೆ ಎಂದು ತಾಯಂದಿರು ತಮ್ಮ ಹೊಟ್ಟೆಗೆ ಇಳಿಸಿಕೊಳ್ಳುತ್ತಾರೆ. ಇದು ಕೂಡ ಆಕೆಯ ದೇಹ ದಪ್ಪಗಾಗುವುದಕ್ಕೆ ಕಾರಣವಾಗಬಹುದು.

ಇನ್ನು ಮಗುವಿಗೆ ಎದೆಹಾಲು ಉಣಿಸುತ್ತಿರುವ ತಾಯಿ  ತನ್ನ ಮಗುವಿಗಾಗಿ ಸಾಕಷ್ಟು ಪೌಷ್ಠಿಕವಾದ ಆಹಾರವನ್ನು ತಿನ್ನುತ್ತಿರುತ್ತಾಳೆ. ಮಗು ಎದೆಹಾಲನ್ನು ಕುಡಿಯುವ ಕಾರಣ ಯಾವುದೇ ಡಯೆಟ…ನ ಮೊರೆ ಆಕೆ ಹೋಗುವುದಿಲ್ಲ. ಆದರೆ, ಒಮ್ಮೆ ಎದೆಹಾಲು ಬಿಡಿಸಿದಾಗ ಅವಳ ದೇಹ ಪುನಃ ತಹಬಂದಿಗೆ ಬರುವುದಕ್ಕೆ ಒಂದಷ್ಟು ಸಮಯಾವಕಾಶ ಬೇಕಾಗಬಹುದು. ಎದೆ ಹಾಲು ಉತ್ಪಾದನೆ ನಿಂತ ನಂತರ ಅವಳು ತಿಂದ ಕೆಲವೊಂದು ಆಹಾರ ಕೊಬ್ಟಾಗಿ ಮಾರ್ಪಾಡಾಗಿ ಅವಳ ದೇಹದಲ್ಲಿ ಶೇಖರವಾಗುವುದಕ್ಕೆ ಶುರುವಾಗುತ್ತೆ. ಇದರಿಂದ ಕೆಲವರು ದಪ್ಪಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಒಬ್ಬೊಬ್ಬರ ದೇಹಪ್ರಕೃತಿಯ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಯಾರಾದರೂ ಆಕೆಯ ದೇಹದ ಮೇಲೆ ಕಮೆಂಟ್‌ ಮಾಡಿದಾಗ ಮನಸ್ಸು ಘಾಸಿಯಾಗುತ್ತದೆ. 

ಮನೆ ಕೆಲಸ, ಮಗುವಿನ ಕೆಲಸ, ಜತೆಗೆ ಕಚೇರಿ- ಹೀಗೆ ಹತ್ತಾರು ಯೋಚನೆಯನ್ನು ತಲೆಯಲ್ಲಿ ತುಂಬಿಟ್ಟುಕೊಂಡ ಮಹಿಳೆಯರು ತಮ್ಮ ದೇಹದಲ್ಲಿ ಆಗುತ್ತಿರುವ ಮಾರ್ಪಾಡುಗಳನ್ನು ಕೆಲವೊಮ್ಮೆ ಗಮನಿಸಿಯೂ, ಗಮನಿಸದೆಯೋ ಸುಮ್ಮನಿದ್ದು ಬಿಡುತ್ತಾರೆ. ಒಂದು ಮಗುವಾಗಿದೆ ಇನ್ಯಾಕೆ ಫಿಗರ್‌ ಮೆಂಟೈನ್‌ ಮಾಡಬೇಕು ಎಂಬ ಉದಾಸೀನದ ಮಾತೊಂದು ನಮ್ಮ ಗೆಳತಿಯರ ವಲಯದಲ್ಲಿಯೇ ಕೇಳಿಬರುತ್ತಿರುತ್ತದೆ. ಹಾಗಾಗಿ, ದೇಹಕ್ಕೆ ಬೇಕಾದ ಸೂಕ್ತ ಯೋಗ, ಆರೈಕೆ ಮಾಡುವುದನ್ನು ಬಿಟ್ಟುಬಿಡುತ್ತೇವೆ. 

ನಮ್ಮ ದೇಹವನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು. ಯೋಗಾಸನ ಮಾಡುವುದಕ್ಕೆ ದಿನಾ ಆಗದಿದ್ದರೂ ವಾರದಲ್ಲಿ ಎರಡು-ಮೂರು ದಿನವಾದರೂ ಮಾಡುವುದಕ್ಕೆ ಪ್ರಯತ್ನಿಸಿದರೆ ಅನಗತ್ಯ ಬೊಜ್ಜು ಹೇರುವುದು ತಪ್ಪಬಹುದು. ನಡೆದು ಹೋಗುವ ಕಡೆ ಗಾಡಿಯ ಮೊರೆ ಹೋಗದೇ, ಆದಷ್ಟು ಕಾಲ್ನಡಿಗೆಗೆ ಒತ್ತು ನೀಡಿದರೆ ಕೈಕಾಲುಗಳಿಗೂ ವ್ಯಾಯಾಮ ಸಿಕ್ಕಂತೆ ಆಗುತ್ತದೆ. ಇನ್ನು ರಜೆಯ ಸಮಯವಿರುವಾಗ ಅಥವಾ ಮನೆಯಲ್ಲಿರುವಾಗ  ವಾರಕ್ಕೆ ಎರಡು ದಿನವಾದರೂ ಕುಳಿತುಕೊಂಡು ನೆಲ ಒರೆಸುವುದು, ವಾಷಿಂಗ್‌ ಮೆಷಿನ್‌ಗಳ ಸಹವಾಸ ಬಿಟ್ಟು ಕುಳಿತುಕೊಂಡು ಬಟ್ಟೆ ಒಗೆಯುವುದು ಇದರ ಮೂಲಕ ನಮ್ಮ ದೇಹವನ್ನು ತುಸುವಾದರೂ ದಂಡಿಸಬಹುದೇನೋ. ಇದರಿಂದ ಬಾಲಿವುಡ್‌ ಬೆಡಗಿಯರ ಹಾಗೆ ಸಪಾಟದ ಹೊಟ್ಟೆ, ಬಳುಕುವ ನಡು ನಮ್ಮದಾಗದಿದ್ದರೂ ಒಂದು ಮಟ್ಟಿಗಿನ ವ್ಯಾಯಾಮ ದೇಹಕ್ಕೆ ಸಿಗುವುದು ಗ್ಯಾರಂಟಿ !
 
ಪವಿತ್ರಾ ರಾಘವೇಂದ್ರ ಶೆಟ್ಟಿ


Trending videos

Back to Top