ಕಲ್ಲುಬಾಳೆ ಬೆಳೆಸಿ ಆನೆ ಉಳಿಸಿ


Team Udayavani, Feb 8, 2019, 12:30 AM IST

16.jpg

ನಾನು ಐದಾರು ವರ್ಷಗಳ ಹಿಂದೆ ನಮ್ಮೂರಾದ ಕಲ್ಲುಗುಂಡಿಯಲ್ಲಿ ಕಂಪ್ಯೂಟರ್‌ ಕಲಿಯುತ್ತಿದ್ದಾಗ ನನ್ನ ಶಿಕ್ಷಕಿ ಒಂದು ಮಧ್ಯಾಹ್ನ ಅವರ‌ ಮನೆಗೆ ಕರೆದುಕೊಂಡು ಹೋದರು. ಅವರ ಮನೆ ಪಾರೆ ಕಲ್ಲುಗಳಿಂದ ಕೂಡಿದ ಬೆಟ್ಟದ ಮೇಲೆ ಇತ್ತು. ಆ ಕಲ್ಲುಗಳ ಎಡೆಯಲ್ಲಿ ಅಗಲವಾದ ದಪ್ಪ ಎಲೆಗಳಿಂದ ಕೂಡಿ ತಾಳೆ ಮರದ ಬೊಡ್ಡೆಯಂತೆ ದಪ್ಪ ಬುಡ ಹೊಂದಿದ ಬಾಳೆ ಗಿಡಗಳಿದ್ದವು. ನನಗೆ ಕುತೂಹಲ ಉಂಟಾಗಿ “ಇದು ಯಾವ ಬಾಳೆಗಿಡ?’ ಎಂದು ಅವರ‌ಲ್ಲಿ ಕೇಳಿದೆ. ಅದಕ್ಕೆ ಅವರು, “ಇದು ಕಲ್ಲು ಬಾಳೆ’ ಎಂದರು. ಮಾತ್ರವಲ್ಲ, ಮನೆಯೊಳಗಿನಿಂದ ಒಂದು ಪಾಡ ಹಣ್ಣು ತಂದು ನನ್ನ ಮುಂದೆ ಇಟ್ಟರು. ಊಟದ ಹೊತ್ತಾದ್ದರಿಂದ ನನಗೆ ತುಂಬ ಹಸಿವೆಯಾಗಿತ್ತು. ಹಿಂದೆಮುಂದೆ ನೋಡದೆ ಸಿಪ್ಪೆ ತೆಗೆದು ಒಮ್ಮೆಗೇ ಇಡೀ ಹಣ್ಣನ್ನು ಬಾಯಿಗೆ ಹಾಕಿಕೊಂಡೆ. ಈಗ ಬಂತು ನೋಡಿ ಕಷ್ಟ. ಕಲ್ಲಿನಂತೆ ಹರಳು ಹರಳಾಗಿ ಗಟ್ಟಿ ಇದ್ದ ಅದನ್ನು ನನಗೆ ನುಂಗುವುದೋ, ಉಗುಳುವುದೋ ಗೊತ್ತಾಗಲಿಲ್ಲ! ನನ್ನ ಅವಸ್ಥೆಯನ್ನು ನೋಡಿ ಅವರು ಜೋರಾಗಿ ನಕ್ಕು ಹೇಳಿದರು, “ಅದರ ಸಿಹಿಯಷ್ಟೇ  ಚಪ್ಪರಿಸಿ ಬೀಜ ಉಗುಳಬೇಕು’. ಬಾಳೆಹಣ್ಣು ಎಂದರೆ ಮೃದುವಾದ ಹಣ್ಣು ಎಂಬ ಕಲ್ಪನೆ ನನಗೆ ಅದುವರೆಗೂ ಇತ್ತು. ತಿರುಳು ಇಲ್ಲದ, ಬರೀ ಕಪ್ಪು ಬಣ್ಣದ ಪುಟ್ಟಪುಟ್ಟ ಗಟ್ಟಿ ಬೀಜಗಳಿಂದ ಆವೃತವಾಗಿರುವ ಈ ಹಣ್ಣು ನನಗೆ ಸೋಜಿಗ ಉಂಟುಮಾಡಿತು. ಅಪರೂಪದ ಈ ಬಾಳೆತಳಿಯನ್ನು ನನ್ನ ಜಮೀನಿನಲ್ಲಿ ಬೆಳೆಸಿದರೆ ಹೇಗೆ ಎಂಬ ಯೋಚನೆ ಮೂಡಿತು.

ನಾನು ಅಲ್ಲಿಂದ ಬರುವಾಗ ನಾಲ್ಕು ಬೀಜಗಳನ್ನು ತಂದು ಮನೆಯಂಗಳದಲ್ಲಿ ಬಿತ್ತಿದೆ. ಅದರಲ್ಲಿ ಎರಡು ಬೀಜ ಮೊಳೆತು ಗಿಡವಾಯಿತು. ನಾನು ಅದನ್ನು ಕಿತ್ತು ಒಂದನ್ನು ತೋಟದ ಬದುವಿನಲ್ಲಿ, ಇನ್ನೊಂದನ್ನು ಮನೆಯಂಗಳದ ಮೂಲೆಯಲ್ಲಿ ನೆಟ್ಟೆ. ಅದು ಬೆಳೆದು ನನಗಿಂತ ಎತ್ತರದ ಗಿಡವಾಯಿತು. ಅದರ ವಿಶೇಷ ಏನೆಂದರೆ ಮಳೆಗಾಲದಲ್ಲಿ ಅದು ಕೊಡೆಯಂತೆ ಅರಳಿ ಬೇಸಿಗೆಯಲ್ಲಿ ಎಲೆಗಳನ್ನು ಒಣಗಿಸಿ ಬಿಡುವುದು. ಇತರ ಬಾಳೆಯಲ್ಲಿ ಹುಟ್ಟುವಂತೆ ಇದರ ಬುಡದಲ್ಲಿ ಕಂದುಗಳು ಹುಟ್ಟುವುದಿಲ್ಲ. ಮನೆಗೆ ಬಂದ ಆಯುರ್ವೇದ ಪಂಡಿತರೊಬ್ಬರು ಈ ಗಿಡವನ್ನು ನೋಡಿ ಹೇಳಿದರು, “ಕಲ್ಲುಬಾಳೆಯ ಬೀಜ ಹಾಗೂ ದಿಂಡು ಮೂತ್ರಕೋಶದ ಕಲ್ಲು ಕರಗಿಸುವಲ್ಲಿ ರಾಮಬಾಣವಾಗಿ ಕೆಲಸ ಮಾಡುತ್ತದೆ’ ಎಂದು. ಇದರ ಬಾಳೆಕಾಯಿ, ಹಣ್ಣು, ದಿಂಡು ಅಡುಗೆಗೆ ಒದಗದಿದ್ದರೂ ಔಷಧೀಯ ಗುಣ ಹೊಂದಿದೆಯಲ್ಲ ಎಂದು ನನಗೆ ಸಂತಸವಾಯ್ತು. ಅಂದ ಹಾಗೆ ಕಲ್ಲುಬಾಳೆಯ ಸಸ್ಯಶಾಸ್ತ್ರೀಯ ಹೆಸರು ಎಸೆಟ್‌ ಸುಪರ್ಬಮ್‌ ಹಾಗೂ ಇದು ಮ್ಯುಸೇಸಿ ಕುಟುಂಬಕ್ಕೆ ಸೇರಿದೆ.

    ನಿನ್ನೆ ಯಾಕೋ ಅಂಗಳದ ತುದಿಗೆ ಹೋದವಳಿಗೆ ಒಂದು ಆಶ್ಚರ್ಯ ಕಾದಿತ್ತು. ಕಲ್ಲುಬಾಳೆ ತಾವರೆಯಂತೆ ಹೂ ಬಿಟ್ಟು ಗೊನೆ ಇಳಿಸಲು ತಯಾರಾಗಿತ್ತು. ತೋಟದ ಬದುವಿನಲ್ಲಿ ನೆಟ್ಟ ಗಿಡವೂ ಗೊನೆ ಹಾಕಿರಬಹುದೇನೋ ಎಂದು ನೋಡಲು ಅಲ್ಲಿಗೆ ಹೋದೆ. ಆ ಬಾಳೆ ಗಿಡ ಚಿಂದಿ ಚಿಂದಿಯಾಗಿತ್ತು. ಅದರ ಬುಡ ನಾಮಾವಶೇಷ ಆಗಿತ್ತು. ಎಲೆಗಳು ಅರ್ಧ ಅರ್ಧ ಹರಿದು ಬಿದ್ದಿದ್ದವು. ಇದು ಯಾರ ಕೆಲಸ? ಮೊನ್ನೆ ಮೊನ್ನೆಯವರೆಗೂ ಗಿಡ ಚೆನ್ನಾಗಿಯೇ ಇತ್ತಲ್ಲ! ನಾನು ಬೆಳಗಿನ ಉಪಾಹಾರಕ್ಕೆ ಅದರಿಂದ ಎಲೆಯನ್ನೂ ಕೊçದು ತಂದಿದ್ದೇನಲ್ಲ! ಇದ್ದಕ್ಕಿದ್ದಂತೆ ಗಿಡಕ್ಕೆ ಏನಾಯಿತು? ಎಂದು ಚಿಂತಿಸುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಆನೆ ಲಡ್ಡಿ ಕಾಣಿಸಿತು. ಇದು ಆನೆ ಮಾಡಿದ ಕಾರ್ಯ ಎಂದು ಗೊತ್ತಾಯಿತು. ಕೊಡಗಿನ ನಮ್ಮ ಕೃಷಿಭೂಮಿಗೆ ಈ ದಿನಗಳಲ್ಲಿ ಆನೆ ಬರುವುದು ಸಾಮಾನ್ಯ ಸಂಗತಿ. ಹಾಗೆ ಬಂದಾಗ ಅದು ಅಡಿಕೆ, ಬಾಳೆ, ತೆಂಗಿನ ಗಿಡಗಳನ್ನು ತಿಂದು ಹಾಳು ಮಾಡಿ ಹೋಗುತ್ತದೆ. ಆದರೆ, ಅದು ಈ ಸಾರಿ ಒಂದು ಗಿಡವನ್ನೂ ಮುಟ್ಟದೆ ಬರೀ ಕಲ್ಲುಬಾಳೆ ಗಿಡವನ್ನು ಮಾತ್ರ ತಿಂದಿತ್ತು. ಮನೆಗೆ ಬಂದು ನಾನು ಈ ವಿಷಯವನ್ನು ನಮ್ಮ ಕೂಲಿಯಾಳುಗಳಲ್ಲಿ ಹೇಳಿದೆ. ಅವರಲ್ಲಿ ಹಿರಿತಲೆಯವರಾದ “ಬೆಟ್ಟದ ಜೀವ’ ಅಂಗಾರ ಎಂಬವರು ಹೇಳಿದರು- “ಆನೆಗಳಿಗೆ ಕಲ್ಲುಬಾಳೆ ಎಂದರೆ ಪ್ರಾಣ. ಕಲ್ಲುಬಾಳೆ ಎಲ್ಲಿ ಕಂಡರೂ ಅದು ಬಿಡುವುದಿಲ್ಲ. ಅದರ ಬೊಡ್ಡೆ ದಪ್ಪ ಮತ್ತು ನೀರಿನಂಶ ಹೇರಳವಾಗಿ ಇರುವುದರಿಂದ ಈ ಗಿಡಕ್ಕೆ ಆನೆಗಳ ಹಸಿವು ಮತ್ತು ಬಾಯಾರಿಕೆ ಎರಡನ್ನೂ ನೀಗಿಸುವ ಶಕ್ತಿ ಇದೆ. ಇಲ್ಲಿಂದ 5 ಕಿ.ಮೀ. ದೂರದಲ್ಲಿ ಬಾಳೆಕಾಡು ಎಂಬ ದಟ್ಟ ಅರಣ್ಯ ಇದೆ. ಅಲ್ಲಿ ಕಲ್ಲುಬಾಳೆ ಸಮೃದ್ಧವಾಗಿರುವುದರಿಂದಲೇ ಅದಕ್ಕೆ ಬಾಳೆಕಾಡು ಎಂದು ಹೆಸರು. ಅದು ಆನೆಗಳ ವಿಶ್ರಾಂತಿ ತಾಣ. ಅಲ್ಲಿ ಹಗಲೂ ಆನೆಗಳು ಅಡ್ಡಾಡಿಕೊಂಡಿರುತ್ತವೆ’. ಕಲ್ಲುಬಾಳೆ ಆನೆಗಳ ಅತ್ಯಂತ ಪ್ರಿಯ ಆಹಾರ ಎಂದು ಗೊತ್ತಾಗಿ ಅದರ ಔಷಧೀಯ ಗುಣ ತಿಳಿದದ್ದಕ್ಕಿಂತಲೂ ಹೆಚ್ಚು ಸಂತೋಷ ಪಟ್ಟೆ.

ಇಪ್ಪತ್ತೆ„ದು ವರ್ಷಗಳ ಹಿಂದೆ ನಾನು ಮದುವೆಯಾದ ಹೊಸದರಲ್ಲಿ ಆನೆಗಳು ನಮ್ಮ ತೋಟಕ್ಕೆ ಬಂದದ್ದೇ ಇಲ್ಲ. ಆಗ ನನ್ನ ಮನೆ ದಾರಿಯಲ್ಲಿ ಆನೆ ಹೋಗುತ್ತಿದ್ದದ್ದು ಕಾಡಿನಲ್ಲಿರುವ ಮರ ಎಳೆಯಲು ಮಾತ್ರ. ಆ ಸಮಯದಲ್ಲಿ ಇನ್ನೂ ಜೆಸಿಬಿ ಬಳಕೆಗೆ ಬಂದಿರಲಿಲ್ಲ. ಮಂಗಳೂರಿನ ಟಿಂಬರ್‌ ವ್ಯಾಪಾರಿಗಳು ನಮ್ಮೂರಿನ ಎಸ್ಟೇಟ್‌ನಲ್ಲಿರುವ ಮರಗಳನ್ನು ಗುತ್ತಿಗೆಗೆ ಪಡೆಯುತ್ತಿದ್ದರು. ಅವುಗಳನ್ನು ಲಾರಿಗೆ ಹಾಕಲು ಕೇರಳದಿಂದ ಆನೆಗಳನ್ನು ತರಿಸುತ್ತಿದ್ದರು. ಮರ ಎಳೆಯಲು ಆನೆ ನಮ್ಮ ದಾರಿಯಲ್ಲಿ ನಡೆದು ಹೋಗುವಾಗ ಅದರ ಕುತ್ತಿಗೆಗೆ ಕಟ್ಟಿದ ಗಂಟೆ ಸದ್ದಾಗುತ್ತಿತ್ತು. ಆಗ ನಾನು ಆನೆಗೆ ತಿನ್ನಿಸಲು ಬಾಳೆಹಣ್ಣು ತೆಗೆದುಕೊಂಡು ಓಡುತ್ತಿದ್ದೆ. ನಂತರ ಕೆಲವೇ ವರ್ಷಗಳಲ್ಲಿ ಸರ್ಕಾರ ಮರ ಕಡಿಯಲು ಪರ್ಮಿಶನ್‌ ಕೊಡುವುದನ್ನು ನಿಲ್ಲಿಸಿದ್ದರಿಂದ ಮರ ಸಾಗಣೆ ನಿಂತಿತು. ಸಾಕಾನೆೆ ಬರುವುದೂ ನಿಂತಿತು. ಆದರೆ ಅದಾಗಿ ಕೆಲವು ವರ್ಷಗಳ ನಂತರ ಕೆಲವೊಮ್ಮೆ ಕಾಡಿನಿಂದ ಆನೆ ಇಳಿದು ನಮ್ಮೂರಿಗೆ ಬರಲಾರಂಭಿಸಿತು. ಇದು ಆಗ ದೊಡ್ಡ ಸುದ್ದಿ. ಈಗ ಐದಾರು ವರ್ಷಗಳಿಂದ ಆನೆ ಅರಣ್ಯ ಬಿಟ್ಟು ಊರನ್ನೇ ಆಶ್ರಯಿಸಿಕೊಂಡಿದೆ. ನಾವು ಕಷ್ಟಪಟ್ಟು ಬೆಳೆಸಿದ ಬಾಳೆ, ತೆಂಗು, ರಬ್ಬರ್‌, ಬತ್ತ, ಕಬ್ಬು ಎಲ್ಲವೂ ಆನೆಗೆ ಆಹಾರವಾಗುತ್ತಿದೆ. ನಮ್ಮ ಮತ್ತು ಆನೆಯ ನಡುವೆ ನಿತ್ಯ ಸಂಘರ್ಷ ನಡೆಯುತ್ತಿದೆ. ನಾವು ತೋಟಕ್ಕೆ ಆನೆ ಬಂದಾಗ ಗರ್ನಾಲು ಸಿಡಿಸಿ ಓಡಿಸುತ್ತೇವೆ. ಆನೆ ನಮ್ಮ ತೋಟದಿಂದೇನೋ ಓಡುತ್ತದೆ. ಆದರೆ, ಪಕ್ಕದವರ ತೋಟಕ್ಕೆ ಲಗ್ಗೆ ಇಡುತ್ತದೆ. ಅಲ್ಲಿ ಆನೆ ಬಂದದ್ದು ಗೊತ್ತಾಗಿ ಅವರೂ ಓಡಿಸಿದರೆ ಅದು ಇನ್ನೊಂದು ತೋಟಕ್ಕೆ ನುಗ್ಗುತ್ತದೆ. ಇದು ಹೆಚ್ಚಾಕಡಿಮೆ ತಿಂಗಳಿಗೊಮ್ಮೆಯಾದರೂ ನಡೆಯುವಂಥದ್ದು. ಆನೆಗಳು ಕಾಡಿನಲ್ಲಿರುವ ಬಿದಿರು, ಬೈನೆ ಮರದ ಕೈ, ಹಲಸಿನ ಹಣ್ಣು, ಮಾವಿನ ಹಣ್ಣು, ಹುಲ್ಲು, ಬಳ್ಳಿ ಇತ್ಯಾದಿ ಸಸ್ಯಾಹಾರವನ್ನು ತಿಂದು ಬದುಕುತ್ತವೆ. ಈಗ ಮಳೆ ಕೊರತೆಯಿಂದಲೋ, ಜನರು ಕಾಡನ್ನು ಆಕ್ರಮಿಸಿ ಕೃಷಿಭೂಮಿಯನ್ನಾಗಿ ಮಾಡಿರುವುದರಿಂದಲೋ ಆನೆಗಳಿಗೆ ಹಸಿರು ಮೇವು ದೊರೆಯದಂತೆ ಆಗಿದೆ. ಆಹಾರದ ಅಭಾವದಿಂದಲೇ ಇಂದು ಆನೆಗಳು ಆಹಾರ ಹುಡುಕಿಕೊಂಡು ಊರಿಗೆ ನುಗ್ಗುತ್ತವೆ ಎಂಬುದನ್ನು ಅಲ್ಲಗಳೆಯಲಾಗದು ಅಥವಾ ಆನೆಗಳ ಸಂಖ್ಯೆ ಹಿಂದೆ ಇದ್ದದ್ದಕ್ಕಿಂತ ಇಂದು ಜಾಸ್ತಿಯಾಗಿರಲೂ ಬಹುದು. ಈ ಹೆಚ್ಚಾದ ಆನೆಗಳಿಗೆ ಹೆಚ್ಚಿನ ಆಹಾರದ ಅಗತ್ಯ ಇದೆ. ಆನೆಗಳ ಹಸಿವನ್ನು ಹೋಗಲಾಡಿಸಲು ಕಲ್ಲುಬಾಳೆಯನ್ನು ಕಾಡಿನಲ್ಲಿ ಯಥೇತ್ಛವಾಗಿ ಬೆಳೆಸಬೇಕೆಂದು ಅರಣ್ಯ ಇಲಾಖೆಗೆ ನನ್ನ ಸಲಹೆ. ಏಕೆಂದರೆ ಇದನ್ನು ಬೆಳೆಸಲು ಉಳಿದ ಗಿಡಮರ ಬೆಳೆಸುವಂತೆ ಕಷ್ಟ ಇಲ್ಲ. ಗಿಡಗಳ ನರ್ಸರಿ ಮಾಡುವ ಖರ್ಚೂ ಇಲ್ಲ.

ಮಳೆಗಾಲದಲ್ಲಿ ಅರಣ್ಯದಲ್ಲಿ ನೇರವಾಗಿ ಕಲ್ಲುಬಾಳೆಯ ಬೀಜಗಳನ್ನು ಬಿತ್ತಿದರಾಯಿತು. ಈ ವಿಧಾನ ಬಹಳ ಸುಲಭ. ಕೋಲಿನಿಂದ ಕುಳಿ ಮಾಡಿ ಅದರಲ್ಲಿ ಬೀಜ ಹಾಕಿ ಮಣ್ಣು ಮುಚ್ಚಿದರೆ ಮುಗಿಯಿತು. ಕೆಲವೇ ದಿನಗಳಲ್ಲಿ ಬೀಜ ಮೊಳಕೆಯೊಡೆಯುತ್ತದೆ. ಹೀಗೆ ಮೊಳೆತ ಗಿಡಗಳಿಗೆ ಬೇಸಿಗೆಯಲ್ಲಿ ನೀರು ಎರೆಯಬೇಕೆಂದು ಇಲ್ಲ. ಗೊಬ್ಬರ ಕೊಡುವ ಅಗತ್ಯವೂ ಇಲ್ಲ. ಕಲ್ಲುಹಾಸಿನ ನೆಲದಲ್ಲೂ ಸಲೀಸಾಗಿ ಬೆಳೆಯುತ್ತದೆ. ಎರಡೇ ವರ್ಷದಲ್ಲಿ ಗಿಡ ಮೊರದಂತಹ ಎಲೆಗಳನ್ನು ಹರಡಿಕೊಂಡು ನಳನಳಿಸುತ್ತದೆ. ಒಮ್ಮೆ ಇದು ಕಾಡಿನಲ್ಲಿ ಜೀವ ತಳೆದರೆ ಇದರ ಹಣ್ಣನ್ನು ತಿಂದು ಮಂಗ, ಅಳಿಲು, ಹಕ್ಕಿ ಇತ್ಯಾದಿಗಳು ಬೀಜ ಪ್ರಸಾರ ಮಾಡಿ ಅವೂ ಸಸ್ಯಾಭಿವೃದ್ಧಿ ಮಾಡುತ್ತವೆ. ಹಲಸು, ಬೈನೆ, ಮಾವು ಇತ್ಯಾದಿ ಗಿಡಗಳು ಬೆಳೆಯಬೇಕಾದರೆ ಹಲವು ವರ್ಷಗಳು ಬೇಕು. ಈ ಗಿಡ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅಲ್ಲ. ನೀರಿನಂಶವೂ ಇರುವುದರಿಂದ ನೀರಿನ ಕೊರತೆ ಇರುವ ಬೇಸಿಗೆಯ ದಿನಗಳಲ್ಲಿ ಆನೆಯ ಬಾಯಾರಿಕೆಯನ್ನು ತಣಿಸುತ್ತದೆ. ಹೊಟ್ಟೆ ತುಂಬಿದ ಆನೆ ಆಹಾರಕ್ಕಾಗಿ ರೈತರ ಜಮೀನಿಗೆ ಬರಲಿಕ್ಕಿಲ್ಲ. ಅಲ್ಲದೆ ಕಲ್ಲುಬಾಳೆ ನೆಲದ ತೇವಾಂಶವನ್ನು ಕಾಪಾಡುತ್ತದೆ. ಕಾಡಿನಲ್ಲಿ ಕಲ್ಲುಬಾಳೆ ಬೆಳೆಸಿದರೆೆ ನಾಡು ಉಳಿಸಿದಂತೆ ಆಗುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿ ನಿರ್ಧಾರ ಕೈಗೊಳ್ಳಬೇಕು. ಆನೆ ಹಾವಳಿ ತಪ್ಪಿಸಲು ಸರ್ಕಾರ ಕೋಟ್ಯಂತರ ದುಡ್ಡು ಖರ್ಚು ಮಾಡಿ ಕಾರಿಡಾರ್‌ ನಿರ್ಮಾಣ, ಸೌರಬೇಲಿ ಅಳವಡಿಕೆ ಇತ್ಯಾದಿ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಇದರ ಜೊತೆ ಕಾಡಿನಲ್ಲಿ ಕಲ್ಲುಬಾಳೆ ಬೀಜ ಬಿತ್ತುವ ಕೆಲಸವನ್ನೂ ಮಾಡಲಿ. 

    ಈಗ ನನ್ನ ಮನೆಯಂಗಳದ ಕಲ್ಲುಬಾಳೆ ಹೂವಿನ ದಳದಳಗಳ ನಡುವೆ ಕಾಯಿಗಳು ಮೆಲ್ಲನೆ ಇಣುಕಲು ಶುರುವಾಗಿವೆ. ಇನ್ನೇನು, ಕೆಲವೇ ದಿನಗಳಲ್ಲಿ ಕಲ್ಲುಬಾಳೆ ಗಿಡದಲ್ಲಿ ಬಾಳೆಹಣ್ಣು ಸಿಗುತ್ತದೆ. ಈ ಬಾಳೆಹಣ್ಣಿನಿಂದ ಸಿಗುವ ಬೀಜಗಳನ್ನು ನಾನು ಹಂಚುವವಳಿದ್ದೇನೆ. 

ಮುಗಿಸುವ ಮುನ್ನ…
ಕೃಷಿಕ ಮಹಿಳೆಯಾದ ನನಗೆ ವಾರವಾರ ಅಂಕಣ ಬರೆಯುವುದೊಂದು ಸವಾಲಿನ ಕೆಲಸವಾಗಿತ್ತು. ಶುಕ್ರವಾರ ಬರುವುದೇ ಗೊತ್ತಾಗುತ್ತಿರಲಿಲ್ಲ. ದಟ್ಟ ಕಾಡಿನ ನಡುವೆ ನನ್ನ ಮನೆ ಇರುವುದರಿಂದ ಇಲ್ಲಿ ಇಂಟರ್‌ನೆಟ್‌ ಸಿಗುವುದಿಲ್ಲ. ನಾನು ಲ್ಯಾಪ್‌ಟಾಪ್‌ನಲ್ಲಿ ಬರೆದು ಪೆನ್‌ಡ್ರೆ„ವ್‌ಗೆ ಹಾಕಿ ಮನೆಯಿಂದ 8 ಕಿ.ಮೀ. ದೂರವಿರುವ ಕಲ್ಲುಗುಂಡಿಗೆ ಹೋಗಿ ಇಮೈಲ್‌ ಮಾಡುತ್ತಿದ್ದೆ. ನಮ್ಮ ಊರಿನಿಂದ ಕಲ್ಲುಗುಂಡಿಗೆ ಬಸ್‌ ಸೌಕರ್ಯವಿಲ್ಲ. ಕೆಲವು ಬಾಡಿಗೆ ಜೀಪ್‌ಗ್ಳಿವೆ ಅಷ್ಟೆ. ಜೀಪು ಸಿಗದ ದಿನಗಳಲ್ಲಿ ನಡೆದುಕೊಂಡು ಕಲ್ಲುಗುಂಡಿಗೆ ಹೋಗಿ ಲೇಖನಗಳನ್ನು ಇಮೈಲ್‌ ಮಾಡಿದ್ದೂ ಇದೆ. ಅಂತೂ ನಾನು ಭೂಮಿಗೀತ ಅಂಕಣವನ್ನು ಬರೆದ ಪ್ರಕ್ರಿಯೆಯನ್ನು, ಪ್ರಕಟವಾದ ಮೇಲೆ ಅದಕ್ಕೆ ಬಂದ ಪ್ರತಿಕ್ರಿಯೆಯನ್ನು ದಾಖಲಿಸಿದರೂ ಅದು ದೀರ್ಘ‌ಲೇಖನವಾದೀತು. ನಾನು ಏನನ್ನು ಬದುಕಿದ್ದೆನೋ ಅದನ್ನೇ ಬರೆದೆ. ಈ ಅಂಕಣ ನನ್ನಲ್ಲಿ ಹೊಸ ಯೋಚನಕ್ರಮವನ್ನು ಪ್ರೇರೇಪಿಸಿದೆ. ಮತ್ತೆ ಸಿಗುವೆ ಎಲ್ಲಾದರೂ- ಇಂಥಾದ್ದೊಂದು ಅಂಕಣದ ಮೂಲಕ. 

     (ಅಂಕಣ ಮುಕ್ತಾಯ)

ಸಹನಾ ಕಾಂತಬೈಲು

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.