CONNECT WITH US  

ನಟ್ಟ ನಡುರಸ್ತೆಯಲ್ಲೇ 16 ಬಾರಿ ಗುಂಡಿಟ್ಟು ಕೊಂದ ಪೊಲೀಸ್ ಅಧಿಕಾರಿ

ಶಿಕಾಗೋ: ಕೊಲೆ ಆರೋಪಕ್ಕೆ ಗುರಿಯಾಗಿದ್ದ 17ರ ಹರೆಯದ ಕಪ್ಪು ವರ್ಣದ ವ್ಯಕ್ತಿಯನ್ನು ಶ್ವೇತ ವರ್ಣೀಯ ಪೊಲೀಸ್‌ ಅಧಿಕಾರಿಯೋರ್ವ ನಡು ರಸ್ತೆಯಲ್ಲಿ 16 ಬಾರಿ ಗುಂಡಿಕ್ಕಿ ಸಾಯಿಸಿರುವ ವಿಡಿಯೋ ಚಿತ್ರಿಕೆಯೊಂದು ಅಧಿಕಾರಿಗಳು ಬಿಡುಗಡೆ ಮಾಡಿದ್ದು ಜನಾಂಗೀಯ ದ್ವೇಷದ ಪರಾಕಾಷ್ಠೆಯನ್ನು ತೋರಿಸುವ ಈ ಘಟನೆಯು ಶಿಕಾಗೋ ಜನರನ್ನು ರೊಚ್ಚಿಗೆಬ್ಬಿಸಿದೆ.

ಈ ಅಮಾನುಷ ಘಟನೆಯಿಂದ ಕೋಪೋದ್ರಿಕ್ತರಾದ ಜನರು ಶಿಕಾಗೋ ನಗರದ ಹೃದಯ ಭಾಗದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಆದರೆ ಪೊಲೀಸರ ಬಲ ಪ್ರದರ್ಶನದ ಎದುರು ಈ ಪ್ರತಿಭಟನೆ ಶಕ್ತಿಗುಂದಿತೆಂದು ವರದಿಯಾಗಿದೆ.

17ರ ಹರೆಯದ ಕಪ್ಪು ವರ್ಣೀಯ ಯುವಕ ಮೆಕ್‌ಡೊನಾಲ್ಡ್‌ ಎಂಬಾತನನ್ನು ನಡುರಸ್ತೆಯಲ್ಲಿ ಆತನಿರುವೆಡೆಗೆ ಧಾವಿಸಿ ಬಂದ ಕ್ರೂಯಿಸರ್‌ ವಾಹನದಲ್ಲಿನ ಪೊಲೀಸ್‌ ಅಧಿಕಾರಿಯು ನಿರ್ದಯವಾಗಿ ಗುಂಡಿನ ಮಳೆ ಸುರಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ರಕ್ತದ ಮಡುವಿಗೆ ಉರುಳಿ ನೋವಿನಿಂದ ಚೀರಾಡುತ್ತಿದ್ದ ಯುವಕನು ತಾನು ಬಿದ್ದಲ್ಲಿಂದಲೇ ತಲೆ ಎತ್ತುವಾಗ ಮತ್ತೆ ಆತನ ಮೇಲೆ ಗುಂಡಿನ ನಿರಂತರ ದಾಳಿ ನಡೆದಿದೆ. ಪರಿಣಾಮವಾಗಿ ಆತ ಅಲ್ಲೇ ಕೊನೆಯುಸಿರೆಳೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಶಿಕಾಗೋ ಪೊಲೀಸ್‌ ಅಧಿಕಾರಿಯು ಕಪ್ಪು ವರ್ಣೀಯನ ಮೇಲೆ ತೋರಿರುವ ಈ ಅಮಾನುಷ ದೌರ್ಜನ್ಯದ ಘಟನೆಯು ಜನಾಂಗೀಯ ವೈಷಮ್ಯ ಇನ್ನೂ ಎಷ್ಟು ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದು ನಗರದಲ್ಲಿ ಈ ಬಗ್ಗೆ ಇನ್ನಷ್ಟು ಬಲವಾದ ಪ್ರತಿಭಟನೆಗಳು ನಡೆಯುವ ಸೂಚನೆಗಳು ಲಭಿಸಿವೆ.
 

Trending videos

Back to Top