CONNECT WITH US  

ಪಠಾಣ್‌ಕೋಟ್‌ ದಾಳಿ: ಮಾ.27ಕ್ಕೆ ಪಾಕ್‌ ತಂಡ

ಪೋಖರ (ನೇಪಾಳ): ಪಠಾಣ್‌ ಕೋಟ್‌ ವಾಯುನೆಲೆ ಮೇಲಿನ ಉಗ್ರ ದಾಳಿಗೆ ಸಂಬಂಧಿಸಿದಂತೆ ತನಿಖೆಗಾಗಿ ಪಾಕಿಸ್ತಾನದ ಜಂಟಿ ತನಿಖಾ ತಂಡ ಮಾ.27ರಂದು ಭಾರತಕ್ಕೆ ಆಗಮಿಸಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಘೋಷಿಸಿದ್ದಾರೆ. 

ಗುರುವಾರ ತಮ್ಮ ಸಹವರ್ತಿ, ಪಾಕ್‌ ಪ್ರಧಾನಿಗಳ ವಿದೇಶಾಂಗ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರೊಂದಿಗಿನ ಮಾತುಕತೆ ಬಳಿಕ ಸುಷ್ಮಾ ಈ ಘೋಷಣೆ ಮಾಡಿದ್ದಾರೆ. ಅವರ 20 ನಿಮಿಷಗಳ ಮಾತುಕತೆಯಲ್ಲಿ ಪಠಾಣ್‌ಕೋಟ್‌ ದಾಳಿ ವಿಚಾರ ಬಹುಮುಖ್ಯವಾಗಿ ಪ್ರಸ್ತಾಪವಾಗಿದೆ. 

ಪಠಾಣ್‌ಕೋಟ್‌ ತನಿಖೆಗೆ ಸಂಬಂಧಿಸಿದಂತೆ ಪಾಕ್‌ ತಂಡ ಮಾ.27ಕ್ಕೆ ಆಗಮಿಸಲಿದ್ದು, ಮಾ.28ರಂದು ತನಿಖೆ ಕಾರ್ಯ ಶುರು ಮಾಡಲಿದೆ ಎಂದು ಮಾತುಕತೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಸಾರ್ಕ್‌ ದೇಶಗಳ ಸಚಿವಾಲಯ ಮಟ್ಟದ ಸಭೆ ಬದಿಯಲ್ಲೇ ಈ ಮಾತುಕತೆ ನಡೆದಿದೆ. ಈ ವೇಳೆ ವಾಯುನೆಲೆಗೆ ಪಾಕ್‌ ತಂಡ ಭೇಟಿ ನೀಡಲಿದೆಯೇ ಎಂಬ ಪ್ರಶ್ನೆಗೆ ಈ ಬಗ್ಗೆ ಮುಂದಿನ ದಿನಗಳಲ್ಲಿ ವಿಧಾನ ಪೂರೈಸಲಾಗುವುದು ಎಂದು ಸುಷ್ಮಾ ತಿಳಿಸಿದರು.

ನವೆಂಬರ್‌ನಲ್ಲಿ ಪಾಕ್‌ಗೆ ಮೋದಿ
ನವೆಂಬರ್‌ 9-10ರಂದು ಪಾಕ್‌ನ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್‌ ದೇಶಗಳ ಸಭೆಗೆ ಪ್ರಧಾನಿ ನರೇಂದ್ರ ಮೋದಿ ತೆರಳುವುದು ಖಚಿತವಾಗಿದೆ. ಸಾರ್ಕ್‌ ಸಭೆಗೆ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರು ಪ್ರಧಾನಿ ಮೋದಿ ಅವರಿಗೆ ನೀಡಿರುವ ಆಹ್ವಾನವನ್ನು ಸಚಿವೆ ಸುಷ್ಮಾ ಅವರು ಸ್ವೀಕರಿಸಿದ್ದು, ಭೇಟಿ ನೀಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಇದರೊಂದಿಗೆ ಸಭೆಯ ದಿನಾಂಕದೊಳಗೆ ಎರಡೂ ದೇಶಗಳು ಹಲವು ವಿಚಾರಗಳನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸುವ ಆಶಾವಾದವಿದೆ ಎಂದು ಸರ್ತಾಜ್‌ ಅಜೀಜ್‌ ಹೇಳಿದ್ದಾರೆ.

Trending videos

Back to Top