CONNECT WITH US  

ಇಸ್ಲಾಂ ಹೆಸರು ಹಾಳು ಮಾಡಬೇಡಿ: ಢಾಕಾ ದಾಳಿ ಉಗ್ರರು!

ಢಾಕಾ: ಇಲ್ಲಿನ ರೆಸ್ಟೋರೆಂಟ್‌ ಒಂದರ ಮೇಲೆ ನಡೆದ ದಾಳಿಯಲ್ಲಿ ಪಾರಾದ ವ್ಯಕ್ತಿಯೊಬ್ಬರು ಆ ರಾತ್ರಿ ನಡೆದ ಘಟನೆಯನ್ನು ವಿವರಿಸಿದ್ದು, 'ಮುಸ್ಲಿಮರನ್ನು ನಾವು ಮುಟ್ಟುವುದಿಲ್ಲ. ನಮ್ಮದೇನಿದ್ದರೂ ಮುಸ್ಲಿಮೇತರರೇ ಗುರಿ' ಎಂದು ಉಗ್ರರು ಹೇಳಿದರೆಂದು ತಿಳಿಸಿದ್ದಾರೆ. 'ನೀವು ಒಳ್ಳೆಯ ಮುಸ್ಲಿಮರಾಗಿ. ಇಸ್ಲಾಂ ಹೆಸರು ಹಾಳು ಮಾಡಬೇಡಿ. ಧರ್ಮದ ಹೆಸರು ಎತ್ತಿ ಹಿಡಿಯಿರಿ' ಎಂದಷ್ಟೇ ಉಗ್ರರು ನಮಗೆ ಹೇಳಿದರು. ರಮ್ಜಾನ್‌ ಮಾಡುತ್ತೀರಾ ಎಂದು ಹೇಳಿ, ನಸುಕಿನಲ್ಲಿ ಉಪವಾಸ ಮುರಿಯಲು ತಿನಿಸುಗಳನ್ನೂ ತಂದುಕೊಟ್ಟರು ಎಂದು ಹೇಳಿದ್ದಾರೆ.

ಉಗ್ರರು ಸಿರಿವಂತರ ಮಕ್ಕಳು, ಸುಶಿಕ್ಷಿತರು!
ಢಾಕಾ:
ಇಲ್ಲಿನ ರೆಸ್ಟೋರೆಂಟ್‌ ಮೇಲೆ ದಾಳಿ ನಡೆಸಿದ ಹಂತಕರು ಶ್ರೀಮಂತ ಕುಟುಂಬಗಳಿಗೆ ಸೇರಿದವರಾಗಿದ್ದು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದರು. ಉಗ್ರರು 20ರಿಂದ 21 ವರ್ಷ ವಯಸ್ಸಿನವರಾಗಿದ್ದು, ಉತ್ತರ- ದಕ್ಷಿಣ ವಿವಿ ವಿದ್ಯಾರ್ಥಿಗಳಾಗಿದ್ದರು. ಅಲ್ಲದೆ ಸ್ಕಾಲಸ್ಟಿಕಾ ಹಾಗೂ ಟರ್ಕಿಶ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ್ದರು. ದಾಳಿ ವೇಳೆ ಬಂಗಾಳಿ ಹಾಗೂ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾಹಿತಿಯಿಂದಾಗಿ ಶ್ರೀಮಂತ ಕುಟುಂಬಗಳ ಮಕ್ಕಳು ಧರ್ಮಾಂಧರಾಗಿ ಉಗ್ರವಾದ ಅಪ್ಪಿಕೊಳ್ಳುತ್ತಿರುವುದರ ಜತೆಗೆ,  ಶಿಕ್ಷಣ ಸಂಸ್ಥೆಗಳಲ್ಲೂ ಉಗ್ರವಾದ  ಪಸರಿಸುತ್ತಿರುವುದು ವೇದ್ಯವಾಗುತ್ತದೆನ್ನಲಾಗಿದೆ.

3 ಬೇಡಿಕೆ ಇಟ್ಟಿದ್ದರು
ಢಾಕಾ:
'ಹೋಲಿ ಆರ್ಟಿಸನ್‌ ಬೇಕರಿ' ರೆಸ್ಟೋರೆಂಟ್‌ಗೆ ನುಗ್ಗಿದ್ದ ಉಗ್ರರ ಗುಂಪು 3 ಬೇಡಿಕೆ ಇಟ್ಟಿತ್ತು. 'ಜಮಾತ್‌ ಉಲ್‌ ಮುಜಾ ಹಿದೀನ್‌ ಬಾಂಗ್ಲಾ' ಉಗ್ರ ಮುಖ್ಯಸ್ಥನನ್ನು ಬಿಡುಗಡೆ ಮಾಡಬೇಕು, ಆತನ ಬಿಡುಗಡೆ ಬಳಿಕ ನಾವು ಸುರಕ್ಷಿತವಾಗಿ ತೆರಳಲು ಅವಕಾಶ ಮಾಡಿಕೊಡಬೇಕು ಮತ್ತು ಬಾಂಗ್ಲಾದೇಶವನ್ನು ಇಸ್ಲಾಮಿಕ್‌ ದೇಶ ಎಂದು ಘೋಷಿಸಿ, ದೇಶದಲ್ಲಿ ಷರಿಯಾ ಆಡಳಿತ ಜಾರಿಗೆ ತರಬೇಕು ಎಂದು ಉಗ್ರರು ಬೇಡಿಕೆ ಇಟ್ಟಿದ್ದರಂತೆ. ಈ ಬೇಡಿಕೆಯನ್ನು ಸರಕಾರ ತಿರಸ್ಕರಿಸಿದ ಬಳಿಕ  ಒತ್ತೆಯಾಳುಗಳನ್ನು ಕೊಂದರು ಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿ ಕಂಡಯರಿಯದ ರಕ್ತಪಾತ ಮಾಡಿ, ವಿದೇಶೀಯರನ್ನು ಬರ್ಬರವಾಗಿ ಕೊಂದ ಉಗ್ರರ ಮೂಲವನ್ನು ಮತ್ತು ಅವರಿಗೆ ಶಸ್ತ್ರಾಸ್ತಗಳನ್ನು ಪೂರೈಸಿದವರನ್ನು ಪತ್ತೆ ಹಚ್ಚದೆ ಬಿಡುವುದಿಲ್ಲ.
- ಶೇಖ್‌ ಹಸೀನಾ, ಬಾಂಗ್ಲಾದೇಶ ಪ್ರಧಾನಿ

Trending videos

Back to Top