CONNECT WITH US  

ಫ್ರಾನ್ಸ್‌ನಲ್ಲಿ ಈಗ ಲಾರಿ ಉಗ್ರ ದಾಳಿ! ಹೊಸ ಬಗೆ ದಾಳಿಗೆ 84 ಬಲಿ

ನೀಸ್‌ (ಫ್ರಾನ್ಸ್‌): ಫ್ರಾನ್ಸ್‌ ಮತ್ತೆ ಭಯೋತ್ಪಾದನೆಗೆ ಬೆಚ್ಚಿಬಿದ್ದಿದೆ. ರಾಷ್ಟ್ರೀಯ ರಜಾದಿನದ ನಿಮಿತ್ತ ಆಯೋಜಿಸಲಾಗಿದ್ದ ಸುಡುಮದ್ದು ಪ್ರದರ್ಶನ ವೀಕ್ಷಿಸಲು ನೆರೆದಿದ್ದ ಜನಸಮೂಹದ ಮೇಲೆ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಸಂಘಟನೆಯಿಂದ ಪ್ರಭಾವಿತನಾಗಿದ್ದ ಎನ್ನಲಾದ ಉಗ್ರನೊಬ್ಬ ಲಾರಿ ಹರಿಸಿ 84 ಮಂದಿಯನ್ನು ಕೊಂದ ಹೇಯ ಘಟನೆ ಆಗ್ನೇಯ ಫ್ರಾನ್ಸ್‌ನ ಕರಾವಳಿಯ ಪ್ರಸಿದ್ಧ ನಗರಿ ನೀಸ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ. ಈ ದುರಂತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು ಆ ಪೈಕಿ 18 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಒಂಬತ್ತು ತಿಂಗಳ ಹಿಂದೆ ಅಂದರೆ, ಕಳೆದ ನವೆಂಬರ್‌ 13ರಂದು ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ 130 ಮಂದಿಯನ್ನು ಬಲಿ ಪಡೆದ ಸರಣಿ ಭಯೋತ್ಪಾದಕ ದಾಳಿಗಳ ಕರಾಳ ಛಾಯೆಯಿಂದ ಹೊರಬರುವ ಮುನ್ನವೇ ನಡೆದಿರುವ  
"ಆ್ಯಕ್ಸಿಡೆಂಟ್‌ ಭಯೋತ್ಪಾದನೆ' ಫ್ರಾನ್ಸ್‌ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳನ್ನು ಹೊಂದಿರುವ, 18 ತಿಂಗಳಲ್ಲಿ ಮೂರು ಭಯೋತ್ಪಾದಕ ಕೃತ್ಯಗಳಿಗೆ ಸಾಕ್ಷಿಯಾಗಿರುವ ಫ್ರಾನ್ಸ್‌ಗೆ ಕಾಲಿಡಲು ವಿದೇಶಿಗರು ಹಿಂದೆ- ಮುಂದೆ ನೋಡುವಂತಹ ಪರಿಸ್ಥಿತಿ ಸೃಷ್ಟಿಸಿದೆ.

ಜನದಟ್ಟಣೆಯ ಪ್ರದೇಶದ ಮೇಲೆ ಲಾರಿ ನುಗ್ಗಿಸಿದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈತನನ್ನು ಫ್ರಾನ್ಸ್‌- ಟ್ಯುನಿಷಿಯಾ ಪ್ರಜೆಯಾದ ಮೊಹಮ್ಮದ್‌ ಲಹೌಯೇಜ್‌ ಬೌಹೆÉàಲ್‌ ಎಂದು ಗುರುತಿಸಲಾಗಿದೆ. ಘಟನೆಯ ತರುವಾಯ ಈತನ ಮಾಜಿ ಪತ್ನಿಯನ್ನು ವಶಕ್ಕೆ ತೆಗೆದು ವಿಚಾರಣೆಗೆ ಒಳಪಡಿಸಲಾಗಿದೆ.

ಯಾವ ಉಗ್ರ ಸಂಘಟನೆಗಳೂ ಈ ಕೃತ್ಯದ ಹೊಣೆ ಹೊತ್ತಿಲ್ಲ. ಆದರೆ, ಘಟನೆಯ ಬೆನ್ನಲ್ಲೇ ಐಸಿಸ್‌ಗೆ ಸಂಬಂಧಿತ ಕೆಲ ಸಾಮಾಜಿಕ ಜಾಲತಾಣದ ಖಾತೆಗಳು ವಿಜಯೋತ್ಸವ ಆಚರಣೆ ಆಚರಣೆಯ ಸಂದೇಶ ರವಾನಿಸಿವೆ. 

"ಇದೊಂದು ಭಯೋತ್ಪಾದಕ ಕೃತ್ಯ. ಉಗ್ರರನ್ನು ಹಿಮ್ಮೆಟ್ಟಿಸುತ್ತೇವೆ' ಎಂದು ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಅವರು ಘೋಷಿಸಿದ್ದಾರೆ.

2 ಕಿ.ಮೀ. ಹರಿದ ಲಾರಿ:
ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಬೇಸ್ಟಿಲ್‌ ಎಂಬ ಕೋಟೆಯಲ್ಲಿ ಫ್ರಾನ್ಸ್‌ ದೊರೆಗಳು ಕಾರಾಗೃಹ ನಿರ್ಮಿಸಿಕೊಂಡಿದ್ದರು. 1789ರ ಜು.14ರಂದು ಆ ಕೋಟೆಗೆ ನುಗ್ಗಿ, ಕೈದಿಗಳನ್ನು ಫ್ರಾನ್ಸ್‌ ನಾಗರಿಕರು ಬಿಡುಗಡೆ ಮಾಡಿಸಿದ್ದರು. ಈ ಕ್ರಾಂತಿಯ ಸ್ಮರಣಾರ್ಥ ಪ್ರತಿ ವರ್ಷ ಜು.14 ಅನ್ನು ಫ್ರಾನ್ಸ್‌ ಸರ್ಕಾರ ರಾಷ್ಟ್ರೀಯ ರಜಾ ದಿನವೆಂದು ಘೋಷಿಸಿದೆ. ಅಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಅಂತೆಯೇ ನೀಸ್‌ ಪಟ್ಟಣದಲ್ಲಿ ಗುರುವಾರ ರಾತ್ರಿ ಪಟಾಕಿ ಸುಡುವ ಪ್ರದರ್ಶನ ಆಯೋಜಿಸಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಈ ವೇಳೆ ಲಾರಿಯೊಂದು ಏಕಾಏಕಿ ಜನರ ಮೇಲೆ ಹರಿಯಿತು. ಸುಮಾರು 2 ಕಿ.ಮೀ. ಸಂಚರಿಸಿದ ಈ ಲಾರಿಯಿಂದ ಇಬ್ಬರು ಮಕ್ಕಳು ಸೇರಿ 84 ಮಂದಿ ಸಾವನ್ನಪ್ಪಿದರು. ಕೂಡಲೇ ಲಾರಿಯ ಚಾಲಕನನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದರು. ಲಾರಿಯಲ್ಲಿ ಗುರುತಿನ ಪತ್ರವೊಂದು ಪತ್ತೆಯಾಗಿದ್ದು ಅದರ ಮೂಲಕ  ಈತನನ್ನು ಈತನನ್ನು ಫ್ರಾನ್ಸ್‌- ಟ್ಯುನಿಷಿಯಾ ಪ್ರಜೆಯಾದ ಮೊಹಮ್ಮದ್‌ ಲಹೌಯೇಜ್‌ ಬೌಹೆÉàಲ್‌ ಎಂದು ಗುರುತಿಸಲಾಗಿದೆ. ಅಲ್ಲದೆ ಲಾರಿಯಲ್ಲಿ ಗನ್‌ ಹಾಗೂ ಬೃಹತ್‌ ಅಸ್ತ್ರಗಳೂ ದೊರೆತಿವೆ.

ಮೊಹಮ್ಮದ್‌ನ ಬಂಧುವೊಬ್ಬರು ಆತನ ಬಗ್ಗೆ ಪ್ರತಿಕ್ರಿಯಿಸಿ, "ಆತ ಜಿಹಾದಿ ಇರಲಿಕ್ಕಿಲ್ಲ. ಆತ ಎಂದೂ ಮಸೀದಿಗೆ ಹೋದವನೇ ಅಲ್ಲ. ಪತ್ನಿಯನ್ನು ಸದಾ ಹೊಡೆಯುತ್ತಿದ್ದ. ದಾಳಿಗೂ ಮುನ್ನ ಹಂದಿ ಮಾಂಸ, ಡ್ರಗ್ಸ್‌ ಮತ್ತು ಮದ್ಯ ಸೇವಿಸಿ ಕೃತ್ಯ ಎಸಗಿದ್ದಾನೆ' ಎಂದಿದ್ದಾರೆ.

ಭಾರತೀಯರು ಸುರಕ್ಷಿತ:
ನೀಸ್‌ ನಗರಿಯಲ್ಲಿ ನಡೆದ ಈ ಕೃತ್ಯದಲ್ಲಿ ಯಾವುದೇ ಭಾರತೀಯರಿಗೂ ತೊಂದರೆಯಾಗಿಲ್ಲ, ಪ್ಯಾರಿಸ್‌ನಲ್ಲಿರುವ ನಮ್ಮ ರಾಯಭಾರಿ ಭಾರತೀಯರ ಜತೆ ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ವಿಕಾಸ್‌ ಸ್ವರೂಪ್‌ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ಪ್ಯಾರಿಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ (33-1-40507070)ಯನ್ನು ಕೂಡ ತೆರಿದಿದೆ.

ಲಾರಿ ಹತ್ತಿಸಿ 84 ಮಂದಿಯನ್ನು ಬಲಿ ಪಡೆದ ಕೃತ್ಯವನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಖಂಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಆದಿಯಾಗಿ ಜಾಗತಿಕ ನಾಯಕರು ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ.

ಹೊಸ ರೀತಿಯ ಭಯೋತ್ಪಾದನೆ!
ಬಾಂಬ್‌ ಅಥವಾ ಸ್ಫೋಟಕ ಇಟ್ಟುಕೊಂಡರೆ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬೀಳುವ ಅಪಾಯ ಇರುತ್ತದೆ. ಆದರೆ ಈ ರೀತಿ ಯಾವುದೇ ಶಸ್ತ್ರಾಸ್ತ್ರ ಇಲ್ಲದೇ ಜನನಿಬಿಡ ಪ್ರದೇಶಗಳ ಮೇಲೆ ಲಾರಿಯಂಥ ಬೃಹತ್‌ ವಾಹನ ಹರಿಸಿ ಸಾಯಿಸುವುದು ಉಗ್ರರ ಹೊಸ ತಂತ್ರ ಎಂದು ಹೇಳಲಾಗಿದೆ.

Trending videos

Back to Top