CONNECT WITH US  

ಚೀನ-ಪಾಕ್‌ ಸ್ನೇಹದಲ್ಲಿ ಬಿರುಕು?

ಇಸ್ಲಾಮಾಬಾದ್‌: ಒಂದಲ್ಲ ಒಂದು ಕಾರಣಕ್ಕಾಗಿ ಜಾಗತಿಕ ಮುಖಭಂಗ ಅನುಭವಿಸುತ್ತಾ ಬಂದಿರುವ ಪಾಕಿಸ್ಥಾನ ಈಗ ಚೀನ ಕೆಂಗಣ್ಣಿಗೂ ಗುರಿಯಾಗಿದೆ. ಗಳಸ್ಯ ಕಂಠಸ್ಯನಂತಿದ್ದ ರಾಷ್ಟ್ರದ ಸ್ನೇಹವನ್ನೂ ಕಳೆದುಕೊಳ್ಳುವ ಆತಂಕದಲ್ಲಿದೆ. ಉಗ್ರರ ಬೆಂಬಲಕ್ಕೆ ನಿಂತಿದೆ ಎನ್ನುವ  ಕಾರಣಕ್ಕಾಗಿ ಅಮೆರಿಕದ ಆರ್ಥಿಕ ನೆರವನ್ನು ಕಳೆದು ಕೊಂಡಿರುವ ಪಾಕಿಸ್ಥಾನಕ್ಕೆ ಈಗ ಚೀನ ಭ್ರಷ್ಟಾಚಾರದ ನೆಪವೊಡ್ಡಿ ಶಾಕ್‌ ನೀಡಿದೆ.

ಚೀನ-ಪಾಕಿಸ್ಥಾನ ಸಂಪರ್ಕ ಸೇತುವಾಗಿ ನಿರ್ಮಾಣ ಹಂತದಲ್ಲಿರುವ ಬರೋಬ್ಬರಿ 50 ಶತಕೋಟಿ ಡಾಲರ್‌ ಮೊತ್ತದ ಚೀನ- ಪಾಕಿಸ್ಥಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಯೋಜನೆಗೆ ಆರ್ಥಿಕ ನೆರವು ನೀಡುವ ಒಪ್ಪಂದದಿಂದ ಸದ್ಯಕ್ಕೆ ಹಿಂದಕ್ಕೆ ಸರಿಯುವುದಾಗಿ ಚೀನ ಹೇಳಿದೆ. ಭ್ರಷ್ಟಾಚಾರ, ಅವ್ಯವಹಾರ ದೂರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಆರ್ಥಿಕ ನೆರವು ಸ್ಥಗಿತಗೊಳಿಸಲು ಚೀನ ನಿರ್ಧರಿಸಿದೆ. ಇದರಿಂದ ಪಾಕಿಸ್ಥಾನ ಅಧಿಕಾರಿಗಳು ಗಾಬರಿ ಗೊಂಡಿದ್ದಾರೆ. ಚೀನ ಅಧಿಕಾರಿಗಳ ಜತೆ ಮಾತುಕತೆಗೂ ಮುಂದಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ಥಾನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎ)ದ ಮಹತ್ವಾಕಾಂಕ್ಷೆಯ ಯೋಜನೆ ಎಂದೇ ಹೇಳಲಾಗುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿ ಆರಂಭಕ್ಕೇ ಇದೀಗ ಬ್ರೇಕ್‌ ಬೀಳುವ ಆತಂಕದ ಸ್ಥಿತಿ ಸೃಷ್ಟಿಯಾಗಿದೆ.

ಯಾಕೆ ಈ ನಿರ್ಧಾರ?
ಬೀಜಿಂಗ್‌ ಪ್ರಕರಣದ ಬಳಿಕ ಆರ್ಥಿಕ ಸಹಕಾರ ನಿಯಮಾವಳಿಯಲ್ಲಿ ಒಂದಿಷ್ಟು ತಿದ್ದುಪಡಿಗೆ ಮುಂದಾಗಿರುವುದೇ ಚೀನದ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಹೊಸ ನಿಯಮಾವಳಿ ಪ್ರಕಾರ ಪಾಕಿಸ್ಥಾನಕ್ಕೆ ಆರ್ಥಿಕ ನೆರವು ಅಸಾಧ್ಯ ಎನ್ನುವುದು ಸರಕಾರಿ ಹಿರಿಯ ಅಧಿಕಾರಿಗಳ ಲೆಕ್ಕಾಚಾರವಾಗಿದೆ ಎಂದು ಪಾಕಿಸ್ಥಾನದ ಸುದ್ದಿ ಸಂಸ್ಥೆ ಡಾನ್‌ ವರದಿ ಮಾಡಿದೆ. 

ಚೀನದ ಮಹತ್ವಾಕಾಂಕ್ಷೆಯ ಒನ್‌ ಬೆಲ್ಟ್ ಒನ್‌ ರೋಡ್‌ ಯೋಜನೆಯ ಭಾಗ ಇದಾಗಿದ್ದರಿಂದ ಪಾಕಿಸ್ಥಾನವು ಚೀನ ಜತೆ ಕೈಜೋಡಿಸಿತ್ತು. ಈ ಯೋಜನೆಯಂತೆ ಈ ಹೆದ್ದಾರಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದ ಮೂಲಕ ಹಾದು ಹೋಗಲಿದೆ. ಇದರಿಂದ ಪಾಕ್‌ನ ಬಲೂಚಿಸ್ಥಾನ ಹಾಗೂ ಚೀನದ ಕ್ಸಿನ್‌ಜಿಯಾಂಗ್‌ 
ಸಂಪರ್ಕ ಸಾಧ್ಯವಾಗಲಿದೆ.

ಪಾಕ್‌ಗೆ ಏಕೆ ಆತಂಕ ?
ಚೀನ ಜತೆ ಒಪ್ಪಂದ ಮಾಡಿಕೊಂಡಿದ್ದ ಪಾಕಿಸ್ಥಾನಕ್ಕೆ ಇದರಿಂದ ತನ್ನ ಮೂರು ಪ್ರಮುಖ ಯೋಜನೆಗಳೇ ನನೆಗುದಿಗೆ ಬೀಳುವ ಆತಂಕ ಶುರುವಾಗಿದೆ. ಅಂದಾಜು 81 ಶತಕೋಟಿ ರೂ. ಮೌಲ್ಯದ, 210 ಕಿಲೋ ಮೀಟರ್‌ ದೂರದ ದೆರಾ ಇಸೆ¾„ಲ್‌ ಖಾನ್‌-ಜೋಬ್‌ ರಸ್ತೆ, 19.76 ಶತಕೋಟಿ ರೂ. ಮೌಲ್ಯದ, 110 ಕಿಲೋ ಮೀಟರ್‌ ದೂರದ ಖುಜ್ಧರ್‌-ಬಸಿಮಾ ರಸ್ತೆ ಹಾಗೂ 8.5 ಶತ ಕೋಟಿ ರೂ. ಮೌಲ್ಯದ 136 ಕಿಲೋ ಮೀಟರ್‌ ದೂರದ ರೈಕೋಟ್‌-ಥಾಕೋಟ್‌ ಕರಕರಾಮ್‌ ಹೈವೇ ನಿರ್ಮಾಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

Trending videos

Back to Top