CONNECT WITH US  

ತೀವ್ರಗೊಂಡ ಬಿಕ್ಕಟ್ಟು; ದ್ವೀಪವಾಗಲಿದೆಯೇ ಕತಾರ್‌?

ಗಡಿಯಲ್ಲಿ ನಾಲೆ ನಿರ್ಮಿಸಲು ನಿರ್ಧರಿಸಿದ ಸೌದಿ 

ರಿಯಾದ್‌: ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿ ಈಗಾಗಲೇ ಕತಾರ್‌ ಅನ್ನು ರಾಜತಾಂತ್ರಿಕವಾಗಿ ದ್ವೀಪವಾಗಿಸಿರುವ ಗಲ್ಫ್ ರಾಷ್ಟ್ರಗಳು ಈಗ ಕತಾರನ್ನು ಅಕ್ಷರಶಃ ದ್ವೀಪವಾಗಿಸಲು ಚಿಂತನೆ ನಡೆಸಿವೆ. ಸೌದಿ ಅರೇಬಿಯಾದೊಂದಿಗೆ ಕತಾರ್‌ ಭೂಗಡಿ ಹಂಚಿಕೊಂಡಿದ್ದು, ಈ ಗಡಿ ಗುಂಟ ಬೃಹತ್‌ ನಾಲೆ ನಿರ್ಮಿಸಲು ಸೌದಿ ಅರೇಬಿಯಾ ಯೋಜನೆ ರೂಪಿಸಿದೆ. ಇದು ಪೂರ್ಣಗೊಂಡರೆ ಇಡೀ ಕತಾರ್‌ ಸಂಪೂರ್ಣವಾಗಿ ದ್ವೀಪರಾಷ್ಟ್ರವಾಗಲಿದೆ. ಇದನ್ನು ಸಾಲ್ವಾ ಐಲ್ಯಾಂಡ್‌ ಪ್ರಾಜೆಕ್ಟ್ ಎಂದು ಕರೆಯಲಾಗಿದ್ದು, ಈ ಯೋಜನೆಯನ್ನು ಪರಿಗಣಿಸುತ್ತಿರುವ ಬಗ್ಗೆ ಟ್ವಿಟರ್‌ನಲ್ಲಿ ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ಗೆ ಹಿರಿಯ ಸಲಹೆಗಾರರಾಗಿರುವ ಸೌದ್‌ ಅಲ್‌ ಖತಾನಿ ಹೇಳಿದ್ದಾರೆ.

ಟೆಂಡರ್‌ ಪ್ರಕ್ರಿಯೆಯೂ ಆರಂಭ: ಇದು 60 ಮೈಲು ಉದ್ದದ ನಾಲೆಯಾಗಿರಲಿದ್ದು, 200 ಮೀಟರ ಅಗಲ ಇರಲಿದೆ. 4 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಇದರ ಒಂದು ಭಾಗವನ್ನು ಪರಮಾಣು ತ್ಯಾಜ್ಯವನ್ನು ಸುರಿಯುವುದಕ್ಕೆಂದೇ ಮೀಸಲಿಡಲಾಗುತ್ತದೆ. ಕಳೆದ ಜೂನ್‌ನಲ್ಲೇ ಈ ಬಗ್ಗೆ ಟೆಂಡರ್‌ ಆಹ್ವಾನಿಸಲಾಗಿದ್ದು, ನಾಲೆ ನಿರ್ಮಾಣದಲ್ಲಿ ಪರಿಣಿತಿ ಇರುವ ಐದು ಕಂಪನಿಗಳನ್ನು ಆಹ್ವಾನಿಸಲಾಗಿದೆ. ಈ ಪೈಕಿ ಒಂದು ಕಂಪನಿಗೆ ಈ ತಿಂಗಳಲ್ಲೇ ಯೋಜನೆ ಅನುಮೋದಿಸಲಾಗುತ್ತದೆ. ಸದ್ಯ ಸೌದಿ ಅರೇಬಿಯಾದ ರಾಜ ಮನೆತನವಾಗಲೀ ಅಥವಾ ಕತಾರ್‌ನ ಅಧಿಕಾರಿಗಳಾಗಲೀ ಈ ಯೋಜನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏನಿದು ಬಿಕ್ಕಟ್ಟು?
ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂಬ ಆರೋಪ ಕತಾರ್‌ ಮೇಲಿದೆ. ಉಗ್ರರಿಗೆ ನೆರವು ನೀಡುವುದನ್ನು ಸ್ಥಗಿತಗೊಳಿಸುವಂತೆ ಎಷ್ಟೇ ಹೇಳಿದರೂ ಕತಾರ್‌ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಇದುವೇ ಗಲ್ಫ್ ರಾಷ್ಟ್ರಗಳ ಸಿಟ್ಟಿಗೆ ಕಾರಣ. ಹೀಗಾಗಿ ಕತಾರ್‌ ಅನ್ನು ಏಕಾಂಗಿಯಾಗಿಸುವ ನಿಟ್ಟಿನಲ್ಲಿ ಗಲ್ಫ್ ರಾಷ್ಟ್ರಗಳು ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಕಳೆದ ವರ್ಷದಿಂದ ಕತಾರ್‌ ಹಾಗೂ ಸೌದಿ ಅರೇಬಿಯಾದ ಗಡಿ ಮುಚ್ಚಲಾಗಿತ್ತು. ಕತಾರ್‌ನಿಂದ ಸೌದಿ ಅರೇಬಿಯಾಗೆ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿತ್ತು. ಅಷ್ಟೇ ಅಲ್ಲ, ಕತಾರ್‌ ವಿಮಾನಯಾನ ಕಂಪನಿಗಳು ವಿದೇಶದಲ್ಲಿ ಇಳಿಯುವಂತೆಯೂ ಇಲ್ಲ. ಕತಾರ್‌ ಏರ್‌ಲೈನ್ಸ್‌ಗೆ ಗಲ್ಫ್ ರಾಷ್ಟ್ರಗಳು ನಿಷೇಧ ಹೇರಿವೆ. ಜೊತೆಗೆ ಅಲ್ಲಿನ ನಾಗರಿಕರು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ಆಗಮಿಸುವಂತೆಯೂ ಇಲ್ಲ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಬಹೆನ್‌ ಹಾಗೂ ಈಜಿಪ್ಟ್ಗಳು ಕತಾರ್‌ ಜೊತೆಗಿನ ಎಲ್ಲ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಕಡಿದುಕೊಂಡಿವೆ. ಕೆಲವು ದಿನಗಳ ಹಿಂದೆ ಕುವೈತ್‌ ಹಾಗೂ ಅಮೆರಿಕ ಸೇರಿ ರಾಜಿ ಪ್ರಯತ್ನಗಳನ್ನು ಮಾಡಿವೆಯಾದರೂ ಈವರೆಗೂ ಯಾವುದೇ ಫ‌ಲಿತಾಂಶ ಕಂಡುಬಂದಿಲ್ಲ. ಹೀಗಾಗಿ ಬಿಕ್ಕಟ್ಟು ಇನ್ನಷ್ಟು ದೊಡ್ಡದಾಗುತ್ತಲೇ ಸಾಗಿದೆ.

ಯೋಜನೆಯ ಹೆಸರು: ಸಾಲ್ವಾ ಐಲ್ಯಾಂಡ್‌ ಪ್ರಾಜೆಕ್ಟ್
60 ಮೈಲು ನಾಲೆಯ ಉದ್ದ
200 ಮೀ. ಅಗಲ
4,000 ಕೋಟಿ ರೂ. ನಿರ್ಮಾಣಕ್ಕೆ ತಗಲುವ ವೆಚ್ಚ

Trending videos

Back to Top