ಟ್ರಂಪ್ ಅದೃಷ್ಟದ ಕಟ್ಟಡ ಧ್ವಂಸ?

ನ್ಯೂಯಾರ್ಕ್: ದಶಕಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಯಲ್ ಎಸ್ಟೇಟ್ ಭವಿಷ್ಯವನ್ನು ರೂಪಿಸಿದ್ದ 'ನ್ಯೂಯಾರ್ಕ್ ಗ್ರ್ಯಾಂಡ್ ಹ್ಯಾತ್' ಹೋಟೆಲ್ ಈಗ ನೆಲಕ್ಕುರುಳುವ ಭೀತಿ ಎದುರಿಸುತ್ತಿದೆ.
ಈ ಹೋಟೆಲ್ ಅನ್ನು ಧ್ವಂಸ ಮಾಡಿ, ಅಲ್ಲಿ ಹೊಸ ಕಟ್ಟಡ ನಿರ್ಮಿಸಲು ನ್ಯೂಯಾರ್ಕ್ನ ಡೆವಲಪರ್ ಟಿಎಫ್ ಕಾರ್ನರ್ಸ್ಟೋನ್ ಮತ್ತು ಎಂಎಸ್ಡಿ ಪಾಟ್ನರ್ರ್ಸ್ ನಿರ್ಧರಿಸಿದೆ. ಹೋಟೆಲ್ ಕಟ್ಟಡವನ್ನು ನೆಲಕ್ಕುರುಳಿಸಿ, ಅಲ್ಲಿ 1,86,000 ಚದರ ಮೀಟರ್ ವ್ಯಾಪ್ತಿಯ ಕಚೇರಿ ಮತ್ತು ರಿಟೇಲ್ ಮಳಿಗೆ ಹಾಗೂ ಹೊಸ ಲಕ್ಸುರಿ ಗ್ರ್ಯಾಂಡ್ ಹ್ಯಾತ್ ಹೋಟೆಲ್ ನಿರ್ಮಾಣ ಮಾಡುವುದು ಇವರ ಉದ್ದೇಶವಾಗಿದೆ. ಹ್ಯಾತ್ ಹೋಟೆಲ್ಸ್ ಕಾರ್ಪ್ ಸಹಯೋಗದೊಂದಿಗೇ ಈ ಮರುನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುತ್ತಿ ರುವುದಾಗಿ ಟಿಎಫ್ ಮತ್ತು ಎಂಎಸ್ಡಿ ಪಾಟ್ನರ್ರ್ಸ್ ತಿಳಿಸಿದೆ. ಮ್ಯಾನ್ಹ್ಯಾಟನ್ನಲ್ಲಿ ಟ್ರಂಪ್ ಅವರಿಗೆ ಮೊದಲ ಅದೃಷ್ಟವನ್ನು ಕಲ್ಪಿಸಿದ್ದೇ ಈ ಹೋಟೆಲ್. ನ್ಯೂಯಾರ್ಕ್ನ ಶ್ರೀಮಂತ ಡೆವಲಪರ್ ಆಗಿದ್ದ ತಂದೆಯೊಂದಿಗೆ ಟ್ರಂಪ್ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟಿದ್ದೂ ಇಲ್ಲಿಯೇ. ತದನಂತರವೇ ಅವರು ಒಬ್ಬ ಉದ್ಯಮಿಯಾಗಿ ಗುರುತಿಸಿಕೊಂಡು, ಅಮೆರಿಕದ ಅಧ್ಯಕ್ಷ ಗಾದಿಗೇರುವ ಮಟ್ಟಿಗೆ ಬಂದರು.