CONNECT WITH US  

ಕಸಪ ಭವನಕ್ಕೆ ಅನುದಾನ ಭರವಸೆ

ಸುರಪುರ: ಪಟ್ಟಣದಲ್ಲಿ ಈಚೆಗೆ ಆಯೋಜಿಸಿದ್ದ ಮೂರನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಎಲ್ಲರೂ ನೀಡಿದ ಸಹಾಯ ಸಹಕಾರ ಅವೀಸ್ಮರಣೀಯ. ಕಸಾಪ ತಾಲೂಕು ಘಟಕ ಭವನ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ನಿವೇಶನ ಕಲ್ಪಿಸಿ ಅನುದಾನ ಒದಗಿಸುವುದಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭರವಸೆ ನೀಡಿದರು. ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕ ರವಿವಾರ ಏರ್ಪಡಿಸಿದ್ದ ಸಾಹಿತ್ಯ ಸಮ್ಮೇಳನದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮ್ಮೇಳನ ಯಶಸ್ವಿನ ಹಿಂದೆ ಅನೇಕರು ಕೆಲಸ ಮಾಡಿದ್ದಾರೆ. ವಿಶೇಷವಾಗಿ ಶಿಕ್ಷಕರ ಮತ್ತು ವರ್ತಕರ ಸೇವೆ ಶ್ಲಾಘನೀಯ. ಸುರಪುರ ಉತ್ಸವ ಆಚರಣೆಗೆ ವಿಧಾನ ಮಂಡಲ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ಜಿಲ್ಲಾ ಕಸಾಪ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಸಂಸದರಿಂದ ಅನುದಾನ ಒದಗಿಸಿಕೊಡುವಲ್ಲಿ ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಸಮ್ಮೇಳ ಯಶಸ್ವಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ನೆರವು ನೀಡಿದ ಸರ್ವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಸಮ್ಮೇಳನದ ಅಧ್ಯಕ್ಷರಾಗಿದ್ದ ಮತ್ತು ಕಾರ್ಯಕ್ರಮ ಅತಿಥಿ ಆಗಿದ್ದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಡಾ| ರಂಗರಾಜ್‌ ವನದುರ್ಗ ಮಾತನಾಡಿ, ನಾಡಿನ ಐತಿಹಾಸಿಕ ಚರಿತ್ರೆಯಲ್ಲಿ ಸುರಪುರ ಸಂಸ್ಥಾನದ ಕೊಡುಗೆ ಅಪಾರವಾಗಿದೆ.250 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಸುರಪುರ ಉತ್ಸವ ಆಚರಣೆಗೆ ಸರಕಾರ ಆಸಕ್ತಿ
ತೋರದಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು. ಕಿತ್ತೂರು, ಬಾದಾಮಿ ಉತ್ಸವಗಳಂತೆ ದೇಶ ಪ್ರೇಮ, ಶೌರ್ಯ, ಸಾಹಸಗಳಿಗೆ ಹೆಸರಾಗಿರುವ ಸುರಪುರ ಸಂಸ್ಥಾನದ ಉತ್ಸವ ಆಚರಿಸಲು ಸರಕಾರ ನಿರ್ಧರಿಸಬೇಕು ಎಂದು ಆಗ್ರಹಿಸಿದರು. ಸಂಸ್ಥಾನಿ ನಾಡಿನಲ್ಲಿ ಜಿಲ್ಲಾ 3ನೇ ಕನ್ನಡ ಸಾಹಿತ್ಯಸಮ್ಮೇಳನ ವಿಜೃಂಭಣೆಯಿಂದ ಜರುಗಿ ನಾಡಿನ ಗಮನ ಸೆಳೆಯಿತು. ಅನೇಕ ಹಿರಿಯರು, ಸಾಹಿತಿಗಳು, ಅನುಭವಸ್ಥರು ನನ್ನನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಆರ್ಶೀವದಿಸಿದ್ದಾರೆ. ಸಮ್ಮೇಳನ ಯಶಸ್ವಿನ ಹಿಂದೆ ಅನೇಕರ ಪರಿಶ್ರಮವಿದೆ. ಆ ಎಲ್ಲಾ ಹೃದಯಗಳನ್ನು ಭಾವಪೂರ್ಣತೆಯಿಂದ ಅಭಿನಂದಿಸುವುದಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿ, ಜಿಲ್ಲಾ 3ನೇ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಅನೇಕರು ಹಗಲಿರುಳು ಶ್ರಮಿಸಿದ್ದಾರೆ. ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಿದ್ದಾರೆ. ಅವರೆಲ್ಲರ ಸೇವೆ ಅವಿಸ್ಮರಣೀಯ. ವಿಶೇಷವಾಗಿ ಶಾಸಕರು ಆಸಕ್ತಿ ತೋರಿ ಭಾಗಿಯಾದದ್ದು, ಇನ್ನಷ್ಟು ಸಂತಸ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಭವ್ಯ ಇತಿಹಾಸ ಹೊಂದಿರುವ ಸುರಪುರ ಸಂಸ್ಥಾನದ ಚರಿತ್ರೆ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಲು ವಿಶೇಷ ವಿಚಾರ ಸಂಕಿರಣ ಆಯೋಜಿಸುವುದಾಗಿ ತಿಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿದರು. ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಪ್ರಾಸ್ತಾವಿಕ ಮಾತನಾಡಿದರು. ಅಪೆಕ್ಸ್‌ ಬ್ಯಾಂಕ್‌ ರಾಜ್ಯ ನಿರ್ದೇಶಕ ವಿಠಲ ಯಾದವ, ಯಾದಗಿರಿ ಕಸಾಪ ಅಧ್ಯಕ್ಷ ಭೀಮರಾಯ ಲಿಂಗೇರಿ, ರಾಜಾ ಮುಕುಂದನಾಯಕ, ಸೂಲಪ್ಪ ಕಮತಗಿ ವೇದಿಕೆಯಲ್ಲಿದ್ದರು. ಜಿಲ್ಲೆಯ ಸಾಹಿತಿಗಳು, ಗಣ್ಯರು, ಅಧಿಕಾರಿಗಳು, ಸಾಹಿತ್ಯಾಸಕ್ತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು. ದೇವು ಹೆಬ್ಟಾಳ ಸ್ವಾಗತಿಸಿದರು. ಅಮರಯ್ಯಸ್ವಾಮಿ ಜಾಲಬೆಂಚಿ ನಿರೂಪಿಸಿದರು. ರಾಜಶೇಖರ ದೇಸಾಯಿ ವಂದಿಸಿದರು.

Trending videos

Back to Top