CONNECT WITH US  

ಏಡ್ಸ್‌ಗೆ ಆರು ವರ್ಷದಲ್ಲಿ 819 ಜನ ಬಲಿ

ಯಾದಗಿರಿ: ಜಿಲ್ಲೆಯಾದ್ಯಂತ ಏಪ್ರಿಲ್‌ 2011ರಿಂದ ಅಕ್ಟೂಬರ್‌ 2017ವರೆಗೆ 3,732 ಎಚ್‌ಐವಿ ಸೋಂಕಿತರಲ್ಲಿ 819 ಜನರು ಏಡ್ಸ್‌ಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 473 ಪುರಷರು, 305 ಮಹಿಳೆಯರು, 22 ಗಂಡು ಮತ್ತು 18 ಹೆಣ್ಣು ಮಕ್ಕಳು ಹಾಗೂ ನಿದೇಶಿತ ಗುಂಪು-1 ಒಟ್ಟು ಸೇರಿದಂತೆ 819 ಮರಣ ಹೊಂದಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಏಪ್ರಿಲ್‌ನಿಂದ ಅಕ್ಟೋಬರ್‌ ವರೆಗೆ ಜಿಲ್ಲೆಯಾದ್ಯಂತ ಒಟ್ಟು 17,155 ಜನರಲ್ಲಿ 6,745 ಪುರುಷರು, 10,409 ಮಹಿಳೆಯರು ಪರೀಕ್ಷೆಗೊಳಗಾಗಿದ್ದಾರೆ. ಅದರಲ್ಲಿ ಪುರುಷರು 99, ಮಹಿಳೆಯರು 104 ಸೇರಿದಂತೆ ಒಟ್ಟು 203 ಜನರು ಎಚ್‌ಐವಿ ಸೋಂಕಿತರಾಗಿದ್ದಾರೆ. 20,452 ಗರ್ಭಿಣಿಯರು ಎಚ್‌ಐವಿ ಪರೀಕ್ಷೆಗೆ ಒಳಗಾಗಿದ್ದು,
ಅದರಲ್ಲಿ 9 ಜನ ಎಚ್‌ಐವಿ ಸೋಂಕಿತರಾಗಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಶೇಕಡವಾರು ಪ್ರಮಾಣ ಇಳಿಕೆ: ಆರೋಗ್ಯ ಇಲಾಖೆ ಜಿಲ್ಲಾ ಏಡ್ಸ್‌ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕದಿಂದ ಕಳೆದ 2010ರಿಂದ ಜಿಲ್ಲೆಯ ವಿವಿಧ ತಾಲೂಕು ಮತ್ತು ಗ್ರಾಮಗಳಲ್ಲಿ ಎಚ್‌ಐವಿ ಏಡ್ಸ್‌ ಕುರಿತು ಬೀದಿ ನಾಟಕ, ಜಾನಪದ ಗೀತೆ, ಪ್ರತಿವಾರ ಜನ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರತಿ ವರ್ಷ ಎಚ್‌ಐವಿ ಪೀಡಿತರ ಸಂಖ್ಯೆ ಶೇಕಡಾವಾರು ಇಳಿಮುಖವಾಗಿದೆ. ಜಿಲ್ಲೆಯಲ್ಲಿ ಕಳೆದ 2010-11ನೇ ಸಾಲಿನಲ್ಲಿ 515 ಎಚ್‌ಐವಿ ಸೋಂಕಿತರಿದ್ದು, ಶೇ. 4.11ರಷ್ಟಿತ್ತು. 2011-12ನೇ ಸಾಲಿನಲ್ಲಿ 539 ಸೋಂಕಿತರಿದ್ದು, ಶೇ. 2.74ರಷ್ಟಿತ್ತು. 2013-14ನೇ ಸಾಲಿನಲ್ಲಿ 496 ಸೋಂಕಿತರಿದ್ದು, ಶೇ. 2.39ರಷ್ಟಿತ್ತು. 2013-14ನೇ ಸಾಲಿನಲ್ಲಿ 476 ಸೋಂಕಿತರಿದ್ದು, ಶೇ. 1.81ರಷ್ಟಿತ್ತು. 2014-15ನೇ ಸಾಲಿನಲ್ಲಿ 429 ಸೋಂಕಿತರಿದ್ದು, ಶೇ. 1.38ರಷ್ಟಿತ್ತು. 2015-16ನೇ ಸಾಲಿನಲ್ಲಿ 405 ಸೋಂಕಿತರಿದ್ದು, ಶೇ. 1.28 ರಷ್ಟಿತ್ತು. 2016-17ನೇ ಸಾಲಿನಲ್ಲಿ 320 ಸೋಂಕಿತರಿದ್ದು, ಶೇ. 1.23 ರಷ್ಟಿತ್ತು. ಪ್ರಸಕ್ತ ಸಾಲಿನಲ್ಲಿ 203 ಸೋಂಕಿತರಿದ್ದು ಶೇ. 1.18ರಷ್ಟಾಗಿದೆ. ಹೀಗಾಗಿ ಪ್ರತಿ ವರ್ಷ ಶೇಕಡವಾರು ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ.

ಜಿಲ್ಲೆಯಲ್ಲಿ ಒಟ್ಟು 21 ರೆಡ್‌ ರಿಬ್ಬನ್‌ ಕ್ಲಬ್‌ಗಳಿವೆ. ಪ್ರತಿ ಶನಿವಾರ ಐಸಿಟಿಸಿ ಮತ್ತು ಡಿಎಸ್‌ಆರ್‌ಸಿ ಆಪ್ತಸಮಾಲೋಜಕರು ವಿವಿಧ ಗ್ರಾಮಗಳಲ್ಲಿ ತೆರಳಿ ಜನಜಾಗೃತಿ ಮೂಡಿಸುತ್ತಿದ್ದು, ಪ್ರತಿ ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ಎಚ್‌ಐವಿ ಸೋಂಕಿತರ ಆಸ್ತಿ ವಿವಾದ ಸೇರಿದಂತೆ ಇತರ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಉಚಿತ ಕಾನೂನು ಸಲಹೆ ನೀಡಲಾಗುತ್ತಿದೆ.

ಜಿಲ್ಲೆಯ ಸುರಪುರ ತಾಲೂಕಿನಲ್ಲಿ 220, ಯಾದಗಿರಿ ತಾಲೂಕಿನಲ್ಲಿ 109 ಮತ್ತು ಶಹಾಪುರ ತಾಲೂಕಿನಲ್ಲಿ 134 ಮಕ್ಕಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 463 ಎಚ್‌ಐವಿ ಸೋಂಕಿತರಿದ್ದು,ಅವರಿಗೆ ಮಾಸಿಕ ಒಂದು ಸಾವಿರ ರೂ. ಧನಸಹಾಯ ನೀಡಲಾಗುತ್ತಿದ್ದು, ಜೊತೆಗೆ ಆಸಕ್ತ ಮಕ್ಕಳಿಗೆ ಬೆಂಗಳೂರಿನ ಸ್ನೇಹಧಾನ ಶಾಲೆಯಲ್ಲಿ ಉಚಿತವಾಗಿ ಶಿಕ್ಷಣಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ. ಒಟ್ಟಾರೆ ಹಿಂದುಳಿದ ಜಿಲ್ಲೆಯಲ್ಲಿ ಐಚ್‌ಐವಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ತಿಳಿದು ಬಂದಿದೆ. ಎಚ್‌ಐವಿ ಪೀಡಿತರ ಸಂಖ್ಯೆ ಇಳಿಮುಖ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎಚ್‌ ಐವಿ ಏಡ್ಸ್‌ ಕುರಿತು ಬೀದಿ ನಾಟಕ, ಜಾನಪದ ಗೀತೆ, ಪ್ರತಿವಾರ ಜನ ಜಾಗೃತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಏಡ್ಸ್‌ ರೋಗ ಕುರಿತು ಅರಿವು ಉಂಟಾಗಿರುವುದರಿಂದ ಎಚ್‌ಐವಿ
ಪೀಡಿತರ ಸಂಖ್ಯೆ ಇಳಿಮುಖವಾಗಿದ್ದು, ಒಳ್ಳೆಯ ಬೆಳವಣಿಗೆಯಾಗಿದೆ.
ಗುರುರಾಜ ಹಿರೇಗೌಡರ್‌, ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ, ಯಾದಗಿರಿ

„ರಾಜೇಶ ಪಾಟೀಲ್‌ ಯಡ್ಡಳಿ

Trending videos

Back to Top