CONNECT WITH US  

ಅರಸು ಜಯಂತಿ ಸರಳ ಆಚರಣೆ

ಯಾದಗಿರಿ: ಜಿಲ್ಲಾಡಳಿತದ ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ಸುಧಾರಣೆ ಹರಿಕಾರ ದಿ| ಡಿ. ದೇವರಾಜ ಅರಸು ಅವರ 103ನೇ ಜಯಂತಿಯನ್ನು ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ ಆ. 20ರಂದು ಸರಳವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಡಿ.ದೇವರಾಜ ಅರಸು ಜಯಂತಿ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾದಗಿರಿ, ಗುರುಮಠಕಲ್‌ ಹಾಗೂ ಸುರಪುರ ನಗರ ಪ್ರದೇಶಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಜಯಂತಿ ಸಮಾರಂಭದ ವೇದಿಕೆಯಲ್ಲಿ ಜನಪ್ರತಿನಿಧಿಗಳು ಭಾಗವಹಿಸುವಂತಿಲ್ಲ. ಚುನಾವಣೆ ನೀತಿ ಸಂಹಿತೆ ಇಲ್ಲದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನಪ್ರತಿನಿಧಿಗಳು ಭಾಗವಹಿಸಬಹುದು ಮತ್ತು ಅರಸು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಬಹುದು ಎಂದು ಹೇಳಿದರು.

ಅಂದು ಬೆಳಗ್ಗೆ 11:00ಕ್ಕೆ ಜಿಲ್ಲಾಡಳಿತದ ವತಿಯಿಂದ ಜಯಂತಿ ಕಾರ್ಯಕ್ರಮ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಲ್ಲಿಯೂ ಸಹ ಶ್ರದ್ಧಾ, ಭಕ್ತಿಯೊಂದಿಗೆ ಡಿ.ದೇವರಾಜ ಅರಸು ಅವರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಡ್ಡಾಯವಾಗಿ ಆಚರಿಸಬೇಕು ಎಂದು ಸೂಚಿಸಿದರು.

ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಆಸನ, ಅಲ್ಪ ಉಪಾಹಾರ, ಕುಡಿಯುವ ನೀರು, ಚಹಾ ವ್ಯವಸ್ಥೆ ಸೇರಿ ವಿವಿಧ ಸೌಲಭ್ಯಗಳ ವ್ಯವಸ್ಥೆ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಯಿತು. ವಡಗೇರಾ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಸುರೇಶ ತಡಬಿಡಿ ಅವರನ್ನು ಉಪನ್ಯಾಸಕರಾಗಿ ಆಯ್ಕೆ ಮಾಡಲಾಯಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಾದ ವಿಠ್ಠಲ ಮದೂರ, ಇಲಾಖೆ ಕಚೇರಿ ಮೇಲ್ವಿಚಾರಕ ಸಾಬಯ್ಯ ಎಸ್‌., ಮೋಟ್ನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಡಾ| ಗಾಳೆಪ್ಪ ಪೂಜಾರಿ, ಅಲೆಮಾರಿ-ಅರೆಅಲೆಮಾರಿ ಅಭಿವೃದ್ಧಿ ಸಂಘದ ಶಹಾಪುರ ತಾಲೂಕು ಘಟಕದ ಅಧ್ಯಕ್ಷ ಸತೀಶ ಯಾದವ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Trending videos

Back to Top