CONNECT WITH US  

ಬಿಎಸ್‌ವೈ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ

ಶಹಾಪುರ: 13 ಜಿಲ್ಲೆ ಬರಪೀಡತವೆಂದು ಘೋಷಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಲ್ಲಿ ರಾಜ್ಯ ಸರ್ಕಾರ ಸ್ಪಂದಿಸಲಿದೆ ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ತಿಳಿಸಿದರು.

 ತಾಲೂಕಿನ ಮಂಡಗಳ್ಳಿ ಗ್ರಾಮದ ಪ್ರಗತಿಪರ ರೈತ ಶರಣಪ್ಪ ಸಂಗಣ್ಣನವರ ಜಮೀನಿನಲ್ಲಿ ನಿರ್ಮಿಸಲಾದ ಕೃಷಿ ಹೊಂಡ ಮತ್ತು ಆಧುನಿಕ ಬಿತ್ತನೆ ಪದ್ಧತಿ ವೀಕ್ಷಿಸಿ ನಂತರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ನೂತನ ಕೃಷಿ ಪದ್ಧತಿಗೆ ಕೃಷಿ ಹೊಂಡ ಅವಶ್ಯಕವಾಗಿದ್ದು, ರಾಜ್ಯದಲ್ಲಿ 2 ಲಕ್ಷ ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗಿದ್ದು, ಮಳೆ ಇಲ್ಲದೆ ಸಕಾಲದಲ್ಲಿ ಅವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ ಅವರು, ಮೈಕ್ರೋ ನೀರಾವರಿ, ಕೂರಿಗಿ ಭಿತ್ತನೆ ಯೋಜನೆಗಳು ಯಶಸ್ವಿ ಕಾಣುತ್ತಿವೆ.
ಕೃಷಿ ಪದ್ಧತಿಗನುಗುಣವಾಗಿ ಕೃಷಿ ಇಲಾಖೆ ಅಡಿಯಲ್ಲಿ ಸಹಾಯ ಧನದಲ್ಲಿ ದೊರೆಯುವ ಪರಿಕರಗಳನ್ನು ನೀಡುವ ಕಾರ್ಯ ಕೈಗೊಳ್ಳಲಾಗುತ್ತದೆ. ಅಲ್ಲದೆ ಕೃಷಿ ಇಲಾಖೆಯಿಂದ ನಿರ್ಮಾಣಗೊಂಡ ಕೃಷಿ ಯಂತ್ರಗಳ ಬಾಡಿಗೆ ಕೇಂದ್ರಗಳಲ್ಲಿ ಬಾಡಿಗೆ ಪಡೆದುಕೊಂಡು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಮಗ್ರ ಕೃಷಿ ಆಧುನಿಕ ತಂತ್ರಜ್ಞಾನದಡಿ ರೈತರು ಬಾಗಿಯಾಗಿ ಹೆಚ್ಚು ಇಳುವರಿ ಪಡೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಕೃಷಿ ಇಲಾಖೆಯಿಂದ ಅಗತ್ಯ ಬೀಜ ಇತ್ಯಾದಿಗಳನ್ನು ನೀಡಲಾಗುತ್ತಿದೆ. ರೈತ ಸಮುದಾಯ ತಮ್ಮ ಬೆಳೆಯ ಪೈರು ಸಂರಕ್ಷಣೆ ಮಾಡುವುದರೊಂದಿಗೆ ಉಳಿತಾಯದ ಮಾರ್ಗ ಕಂಡುಕೊಳ್ಳಬೇಕು ಎಂದರು.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಕಾಡಾ ಅಧ್ಯಕ್ಷ ಮರಿಗೌಡ ಹುಲಕಲ್‌, ಕೃಷಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ, ಕೃಷಿ ಸಹಾಯಕ ನಿರ್ದೇಶಕ ದಾನಪ್ಪ ಕತ್ನಳ್ಳಿ, ಬಸವರಾಜ ಹೆರುಂಡಿ, ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮರಕಲ್‌, ಜಿಪಂ ಮಾಜಿ ಸದಸ್ಯ ಸಿದ್ಧಲಿಂಗರಡ್ಡಿ, ತಾಪಂ ಸದಸ್ಯ ಬಸವಂತರಡ್ಡಿ, ಮಲ್ಲಿಕಾರ್ಜುನ ಪೂಜಾರಿ, ಗೋವಿಂದರಡ್ಡಿ, ಸಿದ್ರಾಮರಡ್ಡಿ ಸೇರಿದಂತೆ ಗ್ರಾಮದ ಮುಖಂಡರು ವಿವಿಧ ಗ್ರಾಮಗಳಿಂದ ರೈತರು ಆಗಮಿಸಿದ್ದರು.

ಮಣ್ಣು ಆರೋಗ್ಯ ಕಾರ್ಡ್‌ ವಿತರಿಸಲು ಸೂಚನೆ
ಸುರಪುರ: ಪ್ರತಿಯೊಬ್ಬ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್‌ ಮುಟ್ಟಬೇಕು. ವಿಳಂಬ ಅನುಸರಿಸದೆ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿರುವ ಮಣ್ಣು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಅಲ್ಲಿಯ ಕೇಂದ್ರದ ಅಧಿಕಾರಿಗಳಿಗೆ ಮಣ್ಣು ಆರೋಗ್ಯ ಕಾರ್ಡ್‌ ವಿತರಣೆ ವಿವರ ಕೇಳಿ, ಕಾರ್ಡ್‌ ಹಂಚುವಿಕೆಯಲ್ಲಿ ವೇಗದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಮಣ್ಣು ಪರೀಕ್ಷೆ ಕಾರ್ಡ್‌ ರೈತರಿಗೆ ಅತ್ಯಗತ್ಯವಾಗಿರುತ್ತದೆ. ಕಾರಣ ಆದಷ್ಟು ಬೇಗನೆ ರೈತರ ಹೊಲಗಳ ಮಣ್ಣು ಪರೀಕ್ಷೆ ಮುಗಿಸಿ, ಮಣ್ಣು ಆರೋಗ್ಯ ಕಾರ್ಡ್‌ ವಿತರಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಸಚಿವರನ್ನು ಭೇಟಿಯಾಗಿ ಈ ಹಿಂದೆ ಮಣ್ಣು ಪರೀಕ್ಷೆ ಕಾರ್ಡ್‌ನಲ್ಲಿ ಸಾಕಷ್ಟು ಲೋಪ ದೋಷವಾಗಿವೆ. ಅಧಿ ಕಾರಿಗಳು ರೈತರ ಜಮೀನಿಗೆ ಭೇಟಿ ನೀಡದೆ ಮತ್ತು ಸರಿಯಾಗಿ ಮಣ್ಣನ್ನು ಪರೀಕ್ಷೆ ಮಾಡದೆ ಕಚೇರಿಯಲ್ಲಿ
ಕುಳಿತು ಬೋಗಸ್‌ ವರದಿ ನೀಡುತ್ತಿದ್ದಾರೆ. 

ಈ ಬಗ್ಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದ ಅವರು, ರೈತರ ಸಮಸ್ಯೆಗಳು ಸೇರಿದಂತೆ ಮೋಡ ಬಿತ್ತನೆ ಮಾಡಿ, ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಸಚಿವರನ್ನು ಕೋರಿದರು. ರೈತರ ಸಮಸ್ಯೆ ಆಲಿಸಿದ ಸಚಿವರು, ರೈತರ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಮತ್ತು ವರದಿಯಲ್ಲಿ ವಾಸ್ತವಿಕತೆ ಇರಬೇಕು. ಸುಳ್ಳು ವರದ ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ತಾಕೀತು ಮಾಡಿದರು. 

ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ತಹಶೀಲ್ದಾರ್‌ ಸುರೇಶ ಅಂಕಲಗಿ, ಯಾದಗಿರಿ ಜಿಪಂ ವಿಪ ನಾಯಕ ಮರಿಲಿಂಗಪ್ಪನಾಯಕ ಕರ್ನಾಳ, ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್‌, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ, ಡಾ| ಚೇತನಾ ಪಾಟೀಲ, ಮುಖಂಡರಾದ ದೊಡ್ಡ ದೇಸಾಯಿ ದೇವರಗೋನಾಲ ಸೇರಿದಂತೆ ಅನೇಕ ರೈತರು ಇದ್ದರು. 

ಆಧುನಿಕ ಪದ್ಧತಿ ಅಳವಡಿಸಿಕೊಳ್ಳಿ ಆಧುನಿಕ ಪದ್ಧತಿ ಅಳವಡಿಸಿಕೊಂಡು ರೈತರು ಸಮಗ್ರ ಬೆಳೆ ಇಳುವರಿ ಕಾಪಾಡಿಕೊಳ್ಳಬೇಕು. ವಿನೂತನ ಯಂತ್ರಗಳ ಬಳಕೆಯಿಂದ ಸಾಕಷ್ಟು ಉಳಿತಾಯ ಮಾಡಬಹುದು, ಬೆಳೆ ವಿಮಾ ಯೋಜನೆ ತಾರತಮ್ಯ ಆಗದಂತೆ ವಿಮಾ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗುವುದು. ಸಾಲ ಮನ್ನಾ ಕುರಿತು 15 ದಿನಗಳಲ್ಲಿ ಬ್ಯಾಂಕ್‌ ಅಧಿಕಾರಿಗಳಿಗೆ ಸರ್ಕಾರದಿಂದ ಆದೇಶ ನೀಡಲು ವ್ಯವಸ್ಥೆಗೊಳಿಸಲಾಗುತ್ತದೆ ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ತಿಳಿಸಿದರು.

ಸಕಾಲದಲ್ಲಿ ರೈತರಿಗೆ ಬೀಜ ರಸಗೊಬ್ಬರ ಪೂರೈಕೆ ಮಾಡುವುದರಿಂದ ಮುಂಗಾರು ಬಿತ್ತನೆಗೆ ಅನೂಕೂಲ ಆಗುತ್ತದೆ. ಕೃಷಿ ಇಲಾಖೆಯಿಂದ ರೈತರಿಗೆ ಆಧುನಿಕ ಯಂತ್ರಗಳನ್ನು ಸಹಾಯ ರೂಪದಲ್ಲಿ ಒದಗಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ಉತ್ತಮ ಬೆಳೆ ಬೆಳೆಯಸಲು ಸಾಧಕವಾಗುತ್ತದೆ. ಅಲ್ಲದೆ ಆದಾಯ ಕೂಡ ಹೆಚ್ಚಾಗಲಿದೆ.
 ಶರಣಬಸಪ್ಪಗೌಡ ದರ್ಶನಾಪುರ, ಶಾಸಕ

Trending videos

Back to Top