CONNECT WITH US  

ಅಭಿವೃದ್ಧಿ ಕಾಮಗಾರಿ ವಿಳಂಬ ಬೇಡ

ಯಾದಗಿರಿ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವಿಳಂಭವಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಪ್ರಾದೇಶಿಕ ಆಯುಕ್ತ, ಹೈ.ಕ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ್‌ ಯಾದವ್‌ ಕಟ್ಟುನಿಟ್ಟಾಗಿ ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುಷ್ಠಾನಗೊಳಿಸುತ್ತಿರುವ ಜಿಲ್ಲೆಯ ಮೈಕ್ರೋ ಮತ್ತು ಮ್ಯಾಕ್ರೋ ಕಾಮಗಾರಿಗಳ ಕುರಿತು ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಸಾವಿರ ಕೋಟಿ ರೂ. ಅನುದಾನವಿದ್ದು, ಅದರ ಸದ್ಬಳಕೆಗೆ ನಿಗದಿತ ಕಾಲ ಮಿತಿಯೊಳಗೆ ನಿಶ್ಚಿತ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

2013-14, 2014-15 ಮತ್ತು 2015-16, 2016-17 ಹಾಗೂ 2017-18ನೇ ಸಾಲಿನ ಮೈಕ್ರೋ ಮತ್ತು ಮ್ಯಾಕ್ರೋ ಕಾಮಗಾರಿಗಳವಾರು ಆರ್ಥಿಕ ಮತ್ತು ಭೌತಿಕ ಪ್ರಗತಿ ವರದಿ ಬಗ್ಗೆ ಮಾಹಿತಿ ಪಡೆದರು. ಹೊಸ ಕಾಮಗಾರಿಗಳಿಗಾಗಿ ಸಂಬಂಧಿಸಿದಂತೆ, ಕ್ರಿಯಾಯೋಜನೆ ತಯಾರಿಸಿ ತಕ್ಷಣ ಸಲ್ಲಿಸಬೇಕು. ಇವುಗಳಿಗೆ ಕೂಡಲೇ ಅನುಮೋದನೆ ನೀಡಲಾಗುವುದು. ಕಾಮಗಾರಿಗಳನ್ನು ಮುಗಿದ ನಂತರ ಮೂರನೇ ತಂಡದಿಂದ ಪರಿಶೀಲನೆ ಮಾಡಿ, ವರದಿ ಬಂದ ತಕ್ಷಣವೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಅಂಗನವಾಡಿ ಕಟ್ಟಡ ಎ.ಎನ್‌.ಎಂ. ಕ್ವಾಟರ್ಸ್‌, ಶಾಲೆ ಕಟ್ಟಡ, ಕುಡಿಯುವ ನೀರು, ಚರಂಡಿ, ರಸ್ತೆ ಕಾಮಗಾರಿ ಶೌಚಾಲಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.

2013-14ರಿಂದ 2017-18ನೇ ಸಾಲಿನ ವರೆಗಿನ ಮೈಕ್ರೋ ಮತ್ತು ಮ್ಯಾಕ್ರೋ ಅಭಿವೃದ್ಧಿ ಕಾಮಗಾರಿಗಳ ಮೇಲೆ ಶೇ. 53ರಿಂದ 56 ರಷ್ಟು ಮಾತ್ರ ಅನುದಾನ ಬಳಕೆಯಾಗಿದೆ ಎಂದವರು, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ನಿರ್ವಹಿಸುತ್ತಿರುವ ಕಾಮಗಾರಿಗಳ ಕುರಿತು ಅಪೂರ್ಣ ಮಾಹಿತಿ ನೀಡಿದ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಸಣ್ಣ ನೀರಾವರಿ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸೇರಿದಂತೆ ಇತರೆ ಇಲಾಖೆಗಳು ಅನುಷ್ಠಾನಗೊಳಿಸುವ ಮಂಡಳಿ ಕಾಮಗಾರಿಗಳ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು. 

ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಜಿಪಂ ಸಿಇಓ ಡಾ| ಅವಿನಾಶ ಮೆನನ್‌ ರಾಜೇಂದ್ರನ್‌, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಿಪಂ ಉಪ ಕಾರ್ಯದರ್ಶಿ ವಸಂತರಾವ್‌ ವಿ. ಕುಲಕರ್ಣಿ, ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಜಂಟಿ ನಿರ್ದೇಶಕ ಬಸವರಾಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Trending videos

Back to Top