CONNECT WITH US  

ಚರಂಡಿ ಕಾಮಗಾರಿ ಕಳಪೆ: ಆಲೂರ

ಶಹಾಪುರ: ನಗರದ ತರಕಾರಿ ಮಾರುಕಟ್ಟೆ ಯಾರ್ಡ್‌ನಲ್ಲಿ ನಡೆಯುತ್ತಿರುವ ಚರಂಡಿ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ನಗರೋತ್ಥಾನ ಯೋಜನೆ ಅನುದಾನ ಪೋಲಾಗುತ್ತಿದೆ ಎಂದು ಮಾದಿಗ ದಂಡೋರ ಸಮಿತಿ ಹೈ.ಕ ವಿಭಾಗೀಯ ಅಧ್ಯಕ್ಷ ವೆಂಕಟೇಶ ಆಲೂರ ಆರೋಪಿಸಿದ್ದಾರೆ.

ಚರಂಡಿ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಟೆಂಡರ್‌ ಅಂದಾಜು ಪತ್ರಿಕೆಯಲ್ಲಿ ಸೂಚಿಸಿರುವಂತೆ ಕಾಮಗಾರಿ ನಡೆಯುತ್ತಿಲ್ಲ. ಕಡಿಮೆ ಮಟ್ಟದ ಸ್ಟೀಲ್‌ ಬಳಕೆ ಆಗುತ್ತಿದೆ. ಸಮರ್ಪಕವಾಗಿ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ. ಕಾರಣ ಅಧಿಕಾರಿಗಳು ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು. ಅಲ್ಲದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದು, ಕಂಡರೂ ಕಾಣದಂತೆ ಮೌನವಹಿಸಿರುವುದು ನೋಡಿದರೆ, ಗುತ್ತಿಗೆದಾರರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಶಂಕೆ ಮೂಡುತ್ತಿದೆ ಎಂದು ದೂರಿದ್ದಾರೆ.

ಕಾರಣ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಂದಾಜು ಪತ್ರಿಕೆಯಲ್ಲಿ ಸೂಚಿಸಿರುವಂತೆ ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು. ಇಲ್ಲವಾದಲ್ಲಿ ಕಳಪೆ ಕಾಮಗಾರಿ ಒಂದೇ ಮಳೆಗೆ ಕಿತ್ತು ಹೋಗಲಿದೆ. ನಗರೋತ್ಥಾನ ಯೋಜನೆಯಡಿ ನಗರಕ್ಕೆ ಮೂಲ ಸೌಲಭ್ಯ ಕಲ್ಪಿಸುಲು ಅನುದಾನ ಕಲ್ಪಿಸಲಾಗಿದೆ.

ಸುಮಾರು ಒಂದು ಕೋಟಿಗೂ ಅಧಿಕ ಅನುದಾನ ಇದ್ದು, ಸಮರ್ಪಕ ಕಾಮಗಾರಿ ಕೈಗೊಂಡಲ್ಲಿ ನಗರ ಸಕಲ ಸೌಕರ್ಯಗಳನ್ನು ಹೊಂದುವ ಮೂಲಕ ನಾಗರಿಕರಿಗೆ ಉತ್ತಮ ನಗರವಾಗಿ ನಿರ್ಮಾಣವಾಗಬಲ್ಲದು. ಇಲ್ಲವಾದಲ್ಲಿ ಕೋಟ್ಯಂತರ ರೂ.ಪೋಲಾಗಲಿದೆ. ಕೆಲಸ ಮಾತ್ರ ಅಚ್ಚುಕಟ್ಟು ಆಗದೆ, ಕಳಪೆಮಟ್ಟದ ಕಾಮಗಾರಿ ಕೆಲವೇ ದಿನಗಳಲ್ಲಿ ಕಣ್ಮರೆಯಾಗುವ ಮೂಲಕ ಮತ್ತದೆ ಚರಂಡಿ ಅವ್ಯವಸ್ಥೆ ಕಾಣಬೇಕಾಗುತ್ತದೆ. ಕಾರಣ ಈಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು
ಆಗ್ರಹಿಸಿದ್ದಾರೆ.

Trending videos

Back to Top