CONNECT WITH US  

ಸಂಗೀತ ವಿದ್ಯಾಲಯದಲ್ಲಿ ಪ್ರತಿಭೆಗಳು ಉದಯಿಸಲಿ: ರಾಜುಗೌಡ

ಸುರಪುರ: ಜಾತಿ, ಮತ, ಪಂಥ, ವರ್ಗ, ವರ್ಣಗಳನ್ನು ಮೀರಿ ಯಾರಿಗೂ ಊಹಿಸಲಾಗದ, ಮನುಷ್ಯನ ಮನಸ್ಸನ್ನು
ಕೇಂದ್ರಿಸಬಲ್ಲ ಅದ್ಭುತ್‌ ಶಕ್ತಿ ಸಂಗೀತಕ್ಕಿದೆ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಹೇಳಿದರು.

ಇಲ್ಲಿಯ ಜೈರಾಮ ಕಟ್ಟಿಮನಿ ನಿವಾಸದ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿವಶರಣರ ರೇಣುಕಾ ಜ್ಞಾನ ಸಿಂಚನ ಪ್ರಶಸ್ತಿ-2018, ಗ್ರಂಥ ಬಿಡುಗಡೆ ಹಾಗೂ ಶಿವಶರಣೆ ರೇಣುಕಾ ಮಾತೆ ಸಂಗೀತ ವಿದ್ಯಾಲಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು.

ಸಂಗೀತ ಕೆಲಸ ದೇವರ ಕೆಲಸ. ಅರಮನೆ, ಆಶ್ರಮ, ಮಠ, ಮಂದಿರ, ಶಾಲೆ ಸೇರಿ ಎಲ್ಲಾ ಕಡೆಗಳಲ್ಲಿಯೂ ಪ್ರಾರಂಭಕ್ಕೂ ಮತ್ತು ಅಂತ್ಯಕ್ಕೂ ಸಂಗೀತ ಬೇಕು. ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿ ಪ್ರೀತಿಸದಿದ್ದರೆ ಮನುಷ್ಯ ಸಮಾಜದಲ್ಲಿ ಸಾಮರಸ್ಯ ಕಾಣಲು ಸಾಧ್ಯವಿಲ್ಲ. ಸಜ್ಜನ್‌, ಪ್ರಾಮಾಣಿಕತೆಯ ಕಟ್ಟಿಮನಿ ಕುಟಂಬ ಇಲ್ಲಿ ಸಂಗೀತ ವಿದ್ಯಾಲಯ ಸ್ಥಾಪಿಸಿರುವುದು ಶ್ಲಾಘನೀಯ ಎಂದರು.
 
ಶಾಸಕ ರಾಜುಗೌಡ ಮಾತನಾಡಿ, ಜ್ಞಾನ ಸಿಂಚನ ಪ್ರಶಸ್ತಿ ಪ್ರದಾನ, ಸಂಗೀತ ವಿದ್ಯಾಲಯ ಉದ್ಘಾಟನೆ ಇದೊಂದು ಹೃದಯಸ್ಪರ್ಶಿ ಸಮಾರಂಭ. ಹೆಣ್ಣು ಮನೆ ಬೆಳಗುವ ಜ್ಯೋತಿ. ಮಹಿಳೆಯ ಸೇವೆ, ಪ್ರೀತಿ, ತಾಳ್ಮೆ ಶಕ್ತಿ ವರ್ಣನಾತೀತ. ಮಗಳ ಸವಿ ನೆನಪಿಗಾಗಿ ದೇವಸ್ಥಾನ ಕಟ್ಟಿಸಿ, ಪ್ರಶಸ್ತಿ ಪ್ರದಾನ, ಸಂಗೀತ ಕಾಲೇಜು ಆರಂಭಿಸುತ್ತಿರುವುದು ಪ್ರಶಂಸನೀಯ. 

ಜೈರಾಮ ಕಟ್ಟಮನಿ ಅವರಿಗೆ ಮಗಳ ಮೇಲಿದ್ದ ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು. ಸಂಗೀತ ವಿದ್ಯಾಲಯದಲ್ಲಿ ಪ್ರತಿಭೆಗಳು ಉದಯಿಸಲಿ ಎಂದ ಅವರು, ಸಂಗೀತಕ್ಕೆ ಮಾನಸಿಕ ನೆಮ್ಮದಿ ಕೊಡುವ ಶಕ್ತಿಯಿದೆ ಎಂದರು.
 
ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ಸಂಗೀತ, ಸಾಹಿತ್ಯ ಉಸಿರಾಡಿದ ನೆಲ ಇದು. ಸಂಗೀತ ದೊಡ್ಡ ತಪಸ್ಸು, ಸಂಗೀತ ಪ್ರೀತಿಸುವ ಅನೇಕರು ಇಂದಿಗೂ ಇದ್ದಾರೆ. ಇಲ್ಲಿ ಸಂಗೀತ ಶಾಲೆಯ ಅವಶ್ಯಕತೆ ಇತ್ತು. ರೇಣುಕಾ  ಮಾತೆ ಸಂಗೀತ ವಿದ್ಯಾಲಯದಿಂದ ಒಳ್ಳೆಯ ಪ್ರತಿಭೆಗಳು ಹೊರ ಹೊಮ್ಮಲಿ ಎಂದರು. 

ಶ್ರೀಪ್ರಭು ಪದವಿ ಕಾಲೇಜಿನ ಉಪ ಪ್ರಾಚಾರ್ಯ ವೇಣುಗೋಪಾಲ ಜೇವರ್ಗಿ ಮಾತನಾಡಿದರು. ಹಿರಿಯ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರು ಶ್ರೀರೇಣುಕಾ ಕಾವ್ಯ ಮಂಜರಿ, ತಾಲಾ ತರಂಗ ಗ್ರಂಥಗಳನ್ನು ಜನಾರ್ಪಣೆ ಮಾಡಿ
ಮಾತನಾಡಿದರು. ಅಂಬಣ್ಣ ಜಮಾದಾರ್‌ ಉಪನ್ಯಾಸ ನೀಡಿದರು. ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದ ಪ್ರಭುಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ (ತಾತಾ), ತಾಳಿಕೋಟೆ ಖಾಸಗತ ಶಿವಯೋಗಿಗಳ ಮಠದ ಸಿದ್ದಲಿಂಗ ದೇವರು, ಜೈರಾಮ ಕಟ್ಟಿಮನಿ, ನಗರಸಭೆ ಸದಸ್ಯ ಪಾರಪ್ಪ ಗುತ್ತೇದಾರ್‌ ವೇದಿಕೆಯಲ್ಲಿದ್ದರು.

ಇದೇ ವೇಳೆ ಶ್ರೀರೇಣುಕಾ ಕಾವ್ಯ ಮಂಜರಿ, ತಾಲಾ ತರಂಗ ಕೃತಿಗಳ ಬಿಡುಗಡೆ ಜರುಗಿತು. ಡಾ| ಎ.ಎಲ್‌. ದೇಸಾಯಿ ಅವರಿಗೆ ಶಿವಶರಣೆ ಶ್ರೀರೇಣುಕಾಮಾತೆ ಜ್ಞಾನ ಸಿಂಚನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿಗಳು, ಸಂಗೀತ ಕಲಾ ಪ್ರೇಮಿಗಳು ಇದ್ದರು. ನಾಡಿನ ಹೆಸರಾಂತ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಅಹೋರಾತ್ರಿ ಜರುಗಿತು. ಧಾರವಾಡದ ಸಹನಾ ತಮನಕರ್‌ ಸ್ವಾಗತಿಸಿದರು. ಡಾ| ಮಲ್ಲಿಕಾರ್ಜುನ ಕಮತಗಿ ನಿರೂಪಿಸಿ, ವಂದಿಸಿದರು.


Trending videos

Back to Top