CONNECT WITH US  

ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ

ಸೈದಾಪುರ: ನಿಸ್ವಾರ್ಥತೆ ವ್ಯಕ್ತಿತ್ವಕ್ಕೆ ಮೂಲ ಆಧಾರವಾಗಿದೆ. ಇದು ಉತ್ತಮ ನಾಗರಿಕರನ್ನಾಗಿ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ದಿಸೆಯಲ್ಲಿ ನಾವು ಸಾಗಬೇಕೆಂದು ಬೆಂಗಳೂರಿನ ಹಲಸೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ತತ್ವರೂಪಾನಂದ ಸಲಹೆ ನೀಡಿದರು.

ಪಟ್ಟಣದ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಬೆಂಗಳೂರಿನ ಹಲಸೂರು ಶ್ರೀ ರಾಮಕೃಷ್ಣಮಠದ ವತಿಯಿಂದ ಜರುಗಿದ ಜ್ಞಾನ ಯಾತ್ರೆ ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ನಾವು ಮಾನಸಿಕವಾಗಿ ಸದೃಢರಾಗಲು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಇದಕ್ಕಾಗಿ ನಮ್ಮದೆಯಾದ ವೇಳಾ ಪಟ್ಟಿಯೊಂದಿಗೆ ಜೀವನ ಕ್ರಮ ರೂಡಿಸಿಕೊಳ್ಳಬೇಕು. ಈ ಉದ್ದೇಶದೊಂದಿಗೆ ಜ್ಞಾನ ಯಾತ್ರೆ ಸೇವೆಯನ್ನು ಹಮ್ಮಿಕೊಂಡು ಗ್ರಾಮಾಂತರ ಹಾಗೂ ಪಟ್ಟಣದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಗ್ರಾಮೀಣ ಜನರಲ್ಲಿ ಸ್ವಾಸ್ಥ್ಯ ಮತ್ತು ಭಾವೈಕ್ಯತೆಯನ್ನು ಜಾಗ್ರತೆಗೊಳಿಸುವುದು ಯಾತ್ರೆ ಉದ್ದೇಶವಾಗಿದೆ ಎಂದು ಹೇಳಿದರು. 

ಸಂಸ್ಥೆಯ ಕಾರ್ಯದರ್ಶಿ ಮಹಿಪಾಲರಡ್ಡಿ ದುಪ್ಪಲ್ಲಿ ಮಾತನಾಡಿ, ನೈತಿಕತೆ, ಮೌಲ್ಯ ಶಿಕ್ಷಣ, ಸಾಂಸ್ಕೃತಿಕ,
ರಾಷ್ಟ್ರೀಯ ಸದ್ಭಾವನಾ ಹಾಗೂ ಆಧ್ಯಾತ್ಮಿಕ ಪ್ರಚಾರ ಯುವಕರಿಗೆ ಅತಿ ಮುಖ್ಯವಾಗಿದ್ದು, ಇದನ್ನು ಹಲಸೂರು
ಶ್ರೀ ರಾಮಕೃಷ್ಣ ಮಠದವರು ಸೇವಾ ಮನೋಭಾವನೆಯೊಂದಿಗೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ದೂರದ ಬೆಂಗಳೂರಿನಿಂದ ಗಡಿ ಭಾಗದ ಪ್ರದೇಶಗಳಿಗೆ ಬಂದು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು  ತುಂಬುತ್ತಿರುವುದು ಶ್ಲಾಘನೀಯ, ಅವರ ಒಳ್ಳೆಯ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಇದಕ್ಕೆ ಮಹತ್ವ ಬರುತ್ತದೆ. ಈ ದಿಸೆಯಲ್ಲಿ ನಾವು ಸಾಗೋಣ ಎಂದು ಕಿವಿ ಮಾತು ಹೇಳಿದರು.

ಯಾದಗಿರಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕ ವೇಣುಗೋಪಾಲ, ಬೆಂಗಳೂರು ರಾಮಕೃಷ್ಣ ಆಶ್ರಮದ ಸಂಚಾಲಕ ನಾಗರಾಜ, ಮುಖ್ಯಗುರು ಲಿಂಗಾರಡ್ಡಿ ನಾಯಕ, ಸಿ.ಆರ್‌.ಪಿ. ಲಿಂಗಣ್ಣಗೌಡ, ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಗೂಳಪ್ಪ ಎಸ್‌. ಮಲ್ಹಾರ, ಕಾಶಿನಾಥ, ವಿಶ್ವನಾಥರಡ್ಡಿ ಪಾಟೀಲ ಕಣೇಕಲ್‌, ಸ್ವಾಮಿ ವಿವೇಕಾನಂದ ತರುಣ ಸಂಘದ ಅಧ್ಯಕ್ಷ ಭೀಮಣ್ಣ ವಡವಟ್‌ ಸೇರಿದಂತೆ ಶಿಕ್ಷಕರು, ಉಪನ್ಯಾಸಕರು ಇದ್ದರು.


Trending videos

Back to Top