CONNECT WITH US  

ಶಹಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ

ಕೆಂಭಾವಿ: ಜನತೆಯ ಸಂಪೂರ್ಣ ಆಶೀರ್ವಾದದಿಂದ ನಾನು ಈ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಶಹಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದ ಮುಂಭಾಗದ ಕೋಣೆಯಲ್ಲಿ ಸೋಮವಾರ ಶಾಸಕರ ಅಧಿಕೃತ ಕಚೇರಿ ಆರಂಭಿಸಿ ಮಾತನಾಡಿದ ಅವರು, ನನ್ನ ಮತ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಪುರಸಭೆಯ ಕೇಂದ್ರ ಸ್ಥಾನವಾದ ಕೆಂಭಾವಿ ಪಟ್ಟಣ ಸೇರಿದಂತೆ ವಲಯದ ಹಲವು ಗ್ರಾಮಸ್ಥರ ಕುಂದು ಕೊರತೆ ಆಲಿಸಲು ಈ ಕಚೇರಿ ಆರಂಭಿಸಲಾಗಿದ್ದು, ಮುಂಬರುವ ಪ್ರತಿ ಸೋಮವಾರ ಕಚೇರಿಗೆ ಆಗಮಿಸಿ ಜನತೆಯ ಮನವಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ನಗರೋತ್ಥಾನ ಯೋಜನೆಯಡಿ ಪಟ್ಟಣದ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗಳನ್ನು ಉದ್ಘಾಟಿಸಿ ಒಂದು ವಾರ ಕಳೆದರೂ ಇನ್ನೂ ಕಾಮಗಾರಿ ಪ್ರಾರಂಭವಾಗದೆ ಇರುವುದು ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಶೀಘ್ರದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ತ್ವರಿತ ಗತಿಯಲ್ಲಿ ಆರಂಭಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರಿಗೌಡ ಹುಲಕಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲಿಂಗನಗೌಡ ಮಾಲಿಪಾಟೀಲ,
ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್‌ ಪಾಟೀಲ, ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ, ವಾಮನರಾವ್‌
ದೇಶಪಾಂಡೆ, ಬಸನಗೌಡ ಹೊಸಮನಿ, ರಾಮನಗೌಡ ಹದನೂರ, ನಂದರೆಡ್ಡಿ ಪರಸನಹಳ್ಳಿ, ಅಯ್ಯಪ್ಪಗೌಡ
ವಂದಗನೂರ, ಬಸವರಾಜಪ್ಪಗೌಡ ಬೊಮ್ಮನಹಳ್ಳಿ, ಶಿವರಾಜ ಬೂದೂರ, ಲಾಲಪ್ಪ ಆಲ್ಹಾಳ ಸೇರಿದಂತೆ
ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಇದ್ದರು. ಸೋಮವಾರ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ
ಕಲ್ಯಾಣ ಮಂಟಪದ ಕೋಣೆಯಲ್ಲಿ ಉದ್ಘಾಟನೆಯಾದ ಶಾಸಕರ ಕಚೇರಿಗೆ ಜೆಡಿಎಸ್‌ ಮುಖಂಡ ಅಮೀನರೆಡ್ಡಿ
ಪಾಟೀಲ ಯಾಳಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ದೂರವಾಣಿಯಲ್ಲಿ ಪತ್ರಿಕೆಗೆ ಪ್ರತಿಕ್ರಿಯಿಸಿರುವ
ಅವರು, ಇದು ಖಾಸಗಿ ಕಲ್ಯಾಣ ಮಂಟಪವಾಗಿದ್ದು, ಒಂದು ಸಮಾಜದ ಸ್ವತ್ತಾಗಿದೆ. ಇಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳು ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುವ ಸಾಧ್ಯತೆ ಇದ್ದು, ಕಾರಣ ಈ ಕಚೇರಿಯನ್ನು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಕಲ್ಯಾಣ ಮಂಟಪದ ಆಡಳಿತ ವರ್ಗಕ್ಕೆ ಅವರು ಕೋರಿದ್ದಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ 
ಕೆಂಭಾವಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೋಮವಾರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಕಾಲೇಜಿನ ಸ್ಥಿತಿಗತಿ ಬಗ್ಗೆ ಖುದ್ದು ಅವಲೋಕಿಸಿದರು. ಸುಮಾರು ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿರುವ ಈ ಕಾಲೇಜು ಸಂಪೂರ್ಣ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಬಗ್ಗೆ ಹಲವು ಬಾರಿ ಪತ್ರಿಕೆಗಳು ವರದಿ ಮಾಡಿದ್ದರ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದರು. 

ಸರಿಯಾದ ಪ್ರಯೋಗಾಲಯದ ವ್ಯವಸ್ಥೆ ಇಲ್ಲದಿರುವುದು, ತರಗತಿ ಕೋಣೆಯಲ್ಲಿನ ಕಿಟಕಿ ಬಾಗಿಲುಗಳು ಸರಿಯಾದ
ರೀತಿಯಲ್ಲಿ ಇಲ್ಲದಿರುವುದು, ಕಟ್ಟಡ ಪ್ರಾರಂಭವಾಗಿ ಸುಮಾರು ವರ್ಷ ಗತಿಸಿದರೂ ಅರ್ಧಕ್ಕೆ ನಿಂತಿರುವ ತರಗತಿ ಕೋಣೆಗಳು, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯವಿಲ್ಲದೆ ಇರುವುದನ್ನು
ಕಂಡು ಅಧಿಕಾರಿಗಳಿಗೆ ಸರಿಪಡಿಸಲು ದೂರವಾಣಿ ಮೂಲಕ ಸೂಚಿಸಿದರು. ಈ ಸಂದರ್ಭದಲ್ಲಿ ಮರಿಗೌಡ ಹುಲಕಲ್‌, ಪುರಸಭೆ ಸದಸ್ಯ ರಾಘವೇಂದ್ರ ದೇಶಪಾಂಡೆ, ಲಕ್ಷ್ಮಣ ಯಲಗೋಡ, ರಂಗಪ್ಪ ವಡ್ಡರ್‌ ಇದ್ದರು.


Trending videos

Back to Top