CONNECT WITH US  

ಮಗುವಿನ ಶೈಕ್ಷಣಿಕ ಪ್ರಗತಿಗೆ ಕ್ರೀಡೆ ಪೂರಕ

ಸೈದಾಪುರ: ಮಗು ದೈಹಿಕವಾಗಿ ಸದೃಢನಾಗಿರುವ ಜತೆಗೆ ಆರೋಗ್ಯವಂತನಾಗಿದ್ದಾಗ ಮಾತ್ರ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಬಳಿಚಕ್ರ ಜಿಪಂ ಸದಸ್ಯ ಭೀಮರಡ್ಡಿಗೌಡ ಹೊಸಗೌಡರ ಕೂಡಲೂರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮೀಪದ ಲಿಂಗೇರಿ ಸ್ಟೇಷನ್‌ ಮೊರಾರ್ಜಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸೈದಾಪುರ ಹಾಗೂ ಬಳಿಚಕ್ರ ಹೋಬಳಿ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಇದ್ದಾರೆ. ಅವರುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಅಂದಾಗ ಮಾತ್ರ ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು
ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಾಜಿ ಎಪಿಎಂಸಿ ಅಧ್ಯಕ್ಷ ಭೀಮಣ್ಣಗೌಡ ಪಾಟೀಲ ಕ್ಯಾತನಾಳ ಮಾತನಾಡಿ, ನಿರ್ಣಾಯಕರ ನಿರ್ಣಯಗಳಿಗೆ ಬದ್ಧರಾಗಿ ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ವಿವಿಧ ಶಾಲೆಗಳ ಮಕ್ಕಳು ಇದರಲ್ಲಿ  ಭಾಗವಹಿಸುವುದರಿಂದ ಕೆಲ ಮೌಲ್ಯಗಳನ್ನು ಕಂಡು ಕೊಳ್ಳಲು ಸಾಧ್ಯವಿದೆ. ಈ ದಿಸೆಯಲ್ಲಿ ಉತ್ತಮ ಸ್ಪರ್ಧಾ
ಮನೋಭಾವದೊಂದಿಗೆ ಕ್ರೀಡೆಗಳು ನಡೆದಾಗ ಮಾತ್ರ ಇದರ ಮಹತ್ವ ಹೆಚ್ಚಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ವಸತಿ ಶಾಲೆಯ ಪ್ರಾಂಶುಪಾಲ ಶಾಂತಾ ಸಜ್ಜನ, ಗ್ರಾಪಂ ಉಪಾಧ್ಯಕ್ಷ ಬನ್ನಪ್ಪ ಶೆಟಗೇರಾ, ಗ್ರಾಪಂ ಸದಸ್ಯ ಶರಣಪ್ಪ
ಕುಂಟಿಮರಿ, ಸಿಆರ್‌ಪಿಗಳಾದ ಲಿಂಗಣ್ಣಗೌಡ, ಸೈಯ್ಯದ್‌ ಶೇರಅಲಿ, ಕ್ರೀಡಾ ಕಾರಿ ಮದುಕರ ಜೋಷಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಹೊಸಮನಿ, ಸಿಆರ್‌ ಪಿಗಳಾದ ಲಿಂಗಣ್ಣಗೌಡ, ಸೈಯ್ಯದ ಶೇರಅಲಿ ಇದ್ದರು.


Trending videos

Back to Top